ಭಾಗ – 273
ಭರತೇಶ್ ಶೆಟ್ಟಿ, ಎಕ್ಕಾರ್

ಶ್ರೀ ಕೃಷ್ಣ ಪರಮಾತ್ಮನು ಏನು ಯೋಚಿಸಿದ್ದನೋ ಬಲ್ಲವರಾರು. ಇಂದಿನ ದಿನ ಮಧ್ಯಾಹ್ನ ಭೋಜನ ನಂತರ ಮಲಗಿ ನಿದ್ರಿಸಿದ್ದಾನೆ. ದುರ್ಯೋಧನ ಶ್ರೀ ಕೃಷ್ಣನನ್ನು ಕಾಣಲೆಂದು ಬಂದವನು ನೋಡಿದರೆ ಗಾಢ ನಿದ್ರೆಯಲ್ಲಿದ್ದಾನೆ. ಭಾವನೆಂಬ ಸಂಬಂಧದಿಂದ ನೇರ ಶಯನಾಗ್ರಹ ಪ್ರವೇಶ ಆತನಿಗೆ ಸಾಧ್ಯವಾಗಿತ್ತು. ಅಲ್ಲಿ ನೋಡಿದರೆ ಶಯನಾಗೃಹದಲ್ಲಿ ಕುಳಿತುಕೊಳ್ಳಲು ಉಚಿತ ಆಸನಗಳಿಲ್ಲ. ಕೃಷ್ಣ ಪರಮಾತ್ಮ ಪವಡಿಸಿದ ತಲ್ಪದಲ್ಲಿ ನೋಡಿದರೆ ಇಕ್ಕೆಲಗಳಲ್ಲಿ ಜಾಗವಿದೆ. ಶಿರದ ಮೇಲ್ಭಾಗದಲ್ಲಿ ಮತ್ತು ಚಾಚಿದ ಪಾದದ ಕೆಳಭಾಗದಲ್ಲಿ ಕುಳಿತುಕೊಳ್ಳುವಷ್ಟು ಸ್ಥಳವಿದೆ. ವೈಷ್ಣವ ಯಾಗ ವಿರಚಿಸಿ ತಾನೂ ಚಕ್ರವರ್ತಿಯೆಂದು ಅಭಿಷಿಕ್ತಗೊಂಡವನು. ತನ್ನ ಕೀರ್ತಿಗೆ ಚ್ಯುತಿ ಬರಬಾರದೆಂದು ಅಚ್ಯುತನ ಸನ್ನಿಧಾನದಲ್ಲಿ ಯೋಚಿಸಿ ಶಿರಾಗ್ರ ಭಾಗದಲ್ಲಿದ್ದ ಪೀಠವೊಂದರಲ್ಲಿ ಮಂಡಿತನಾಗಿ ಕೃಷ್ಣ ಎಚ್ಚರಗೊಳ್ಳಲು ದುರ್ಯೋಧನ ಕಾಯತೊಡಗಿದನು.
ತುಸು ಹೊತ್ತಿನಲ್ಲಿ ಅಲ್ಲಿಗೆ ಅರ್ಜುನನೂ ಆಗಮಿಸಿ ನೋಡಿದರೆ ಕೃಷ್ಣ ಶಯನಾವಸ್ಥೆಯಲ್ಲಿ ಇದ್ದಾನೆ. ದುರ್ಯೋಧನ ಮೊದಲೆ ಬಂದು ಆಸೀನನಾಗಿದ್ದಾನೆ. ಮಲಗಿರುವ ಕೃಷ್ಣನ ನಿದ್ರಾಭಂಗವಾಗ ಬಾರದೆಂದು ಮಾತನಾಡಲಿಲ್ಲವೊ? ಇಲ್ಲ ದಾಯಾದ್ಯ ಕಲಹ ಊರ್ಜಿತದಲ್ಲಿದೆ ತೀರ್ಮಾನವಾಗಲಿಲ್ಲ ಈ ಕಾಲದಲ್ಲಿ ದುರ್ಯೋಧನನಲ್ಲಿ ಕುಶಲೋಪರಿಯ ಮಾತೇಕೆ? ಎಂದು ಸುಮ್ಮನಾದನೊ! ಅಂತೂ ತಾನೂ ಸುಮ್ಮನಾಗಿದ್ದು ಅತ್ತಿತ್ತ ನೋಡಿ ಕೃಷ್ಣನಿಗೆ ಮನಸಾ ನಮಿಸಿ ಪಾದಮೂಲದಲ್ಲಿ ನಿಂತುಕೊಂಡನು ಪಾರ್ಥ.
ಸಮಯ ಕಳೆದು, ಎಚ್ಚರಗೊಂಡ ಕೃಷ್ಣ ಕಣ್ತೆರೆದು ಮೊದಲು – ಅರ್ಜುನನ್ನು ನೋಡಿದನು. ಎದುರಾಗಿ ಇದ್ದು, ತೆರೆಯಲ್ಪಟ್ಟ ಕಣ್ಣುಗಳಿಗೆ ಆದಿಯಲ್ಲಿ ಕಾಣಿಸಿದ್ದು ಕಾಲಬುಡದಲ್ಲಿ ನಿಂತಿದ್ದ ಅರ್ಜುನ. “ಅಯ್ಯೋ ಭಾವಾ! ಯಾವಾಗ ಬಂದೆ ನೀನು? ನಿಂತುಕೊಂಡೆ ಇರುವೆಯಲ್ಲ? ಕುಳಿತು ಕೊಳ್ಳಬಹುದಿತ್ತಲ್ಲ ಎಂದು ಆದರಿಸಿ ಒಲವಿನಿಂದ ಕರೆದನು. ಅರ್ಜುನ ಪ್ರಣಾಮಗಳನ್ನು ಸಲ್ಲಿಸಿದನು. ದುರ್ಯೋಧನ ಕುಳಿತಲ್ಲಿಂದಲೆ ಅಲುಗಿ ಮಾಡಿದ ಸದ್ದಿನಿಂದ ಗಮನ ಸೆಳೆಯಲ್ಪಟ್ಟು ಅತ್ತ ತಿರುಗಿ ನೋಡಿದರೆ ದುರ್ಯೋಧನ ಕುಳಿತಿದ್ದಾನೆ. ಆತನನ್ನೂ ಕ್ರಮವಾಗಿ ಗೌರವದಿಂದ ಸ್ವಾಗತಿಸಿದ ಪರಮಾತ್ಮ. ಚಕಿತನಾಗಿ “ಅರೆ ಏನಾಶ್ಚರ್ಯವಿದು? ತಿಳಿಸದೆ ಇಬ್ಬರೂ ಬಂದು ನನ್ನ ಪ್ರತೀಕ್ಷೆಯಲ್ಲಿರುವಂತಿದೆ. ಕಾರಣವೇನೆಂದು ತಿಳಿಯಲಾಗದೆ ನನಗೆ ಪರೀಕ್ಷೆ ಎದುರಾಗಿದೆ! ದಯ ಮಾಡಿ ಕಾರಣ ತಿಳಿಯಪಡಿಸಬಹುದೆ?” ಎಂದು ಕೇಳಿದನು.
ಆಗ ದುರ್ಯೋಧನನು ಮೊದಲಾಗಿ ಮಾತಿಗಾರಂಭಿಸಿ, “ಯಾದವ ಸಾಮ್ರಾಟಾ! ನೀನು ನಮಗೆ ಬಂಧುವಾಗಿರುವೆ. ಆ ಬಂಧುತ್ವದ ಸಂಬಂಧದಿಂದ ನಾನು ನಿನ್ನ ಬಳಿ ಬಂದಿರುವೆ. ನಿನ್ನ ಮಗನಾದ ಸಾಂಬನಿಗೆ ನನ್ನ ಮಗಳು ಲಕ್ಷಣೆಯ ಜೊತೆ ವಿವಾಹವಾದ ಬಳಿಕ ಬೀಗರೂ ಆಗಿ ನಾವಿನ್ನೂ ನಿಕಟ ಸಂಬಂಧವನ್ನು ಬೆಳೆಸಿದ್ದೇವೆ. ಇಂದು ನಾನು ಬಂದಿರುವುದು ರಾಜಕಾರಣ ಉದ್ದೇಶದಿಂದ. ವಿಷಯಗಳೆಲ್ಲಾ ನಿನಗೆ ತಿಳಿದಿರಬಹುದು. ಹಸ್ತಿನಾವತಿಯ ವರ್ತಮಾನ, ಸೋದರರಲ್ಲಿ ಹಿರಿಯವನು ಆಗಿರುವ ಧೃತರಾಷ್ಟ್ರನ ಪುತ್ರ ನಾನು. ಮೇಲಾಗಿ ಅಭಿಷಿಕ್ತ ಉತ್ತರಾಧಿಕಾರಿಯೂ ಆಗಿದ್ದೇನೆ. ಹಸ್ತಿನೆಯ ಮುಂದಣ ಆಳ್ವಿಕೆ ವಂಶ ಪಾರಂಪರ್ಯವಾಗಿ ಮಹಾರಾಜನಿಂದ ಮಗನಾದ ನನಗೆ ಸಲ್ಲಬೇಕು. ನನ್ನ ಚಿಕ್ಕಪ್ಪ ಪಾಂಡು ಚಕ್ರವರ್ತಿಯ ಪುತ್ರರಾದ ಪಾಂಡವರು ಈಗ ಮರಳಿ ಬಂದು ಸಾಮ್ರಾಜ್ಯ – ಅಧಿಕಾರ ಕೇಳುತ್ತಿದ್ದಾರೆ. ಹಾಗೆ ರಾಜ್ಯ ವಿಭಜಿಸಿ ನೀಡಲಾದೀತೆ? ಸಾಧ್ಯವಾದರೆ ಹಿರಿಯರು ಕಟ್ಟಿ ಆಳಿದ ಸಾಮ್ರಾಜ್ಯದ ವೃದ್ಧಿಗೆ ಶ್ರಮಿಸಬೇಕು ಹೊರತು, ನಾನು ತುಂಡರಿಸಿ ಕಿರಿದುಗೊಳಿಸಬಾರದು. ನಾಳೆ ಇನ್ನೋರ್ವ ಚಿಕ್ಕಪ್ಪ ವಿದುರನೊ ಅವನ ವಂಶಜರೊ ಬಂದು ನಮಗೂ ರಾಜ್ಯ ಬೇಕು, ನಾವೂ ಆಳ್ವಿಕೆ ನಡೆಸಬೇಕೆಂದರೆ ಹಾಗೆ ವ್ಯವಹರಿಸಲಾದೀತೆ? ಈ ಪಾಂಡವರು ಸಮರ್ಥರಾದರೆ ಯುದ್ದ ಮುಖೇನ ಗೆದ್ದು ಪಡೆಯಲಿ, ನನಗೂ ಅದು ಸಮ್ಮತ. ಹಾಗೇನಾದರೂ ಯುದ್ದವಾಗುವುದಾದರೆ ನನ್ನವನಾದ ನೀನು, ಮತ್ತು ಯಾದವ ವೀರರು ನಮ್ಮ ಪಕ್ಷದಲ್ಲಿದ್ದು ಸಹಕರಿಸಬೇಕೆಂದು ವಿನಂತಿಸಲು ಇಲ್ಲಿಗೆ ಮೊದಲಾಗಿ ಬಂದಿರುವೆ.” ಎಂದು ವಿವರಿಸಿದನು.
ಕೃಷ್ಣ ಅರ್ಜುನನತ್ತ ನೋಡಿದಾಗ “ಪರಮಾತ್ಮ ಸಂಬಂಧದಲ್ಲಿ ಅತ್ತೆಯ ಮಗ ನಾನು, ಭಾವ ನೀನು. ಆದರೆ ಅದಕ್ಕೂ ಮಿಗಿಲಾದ ಸ್ಥಾನದಲ್ಲಿದ್ದು ನಮಗೆ ಮನದಲ್ಲಿ ದೇವನೇ ಆಗಿ ಪೂಜನೀಯನಾಗಿರುವೆ. ಪಾಂಡು ಚಕ್ರವರ್ತಿಗಳು ಅಭಿಷಿಕ್ತರಾಗಿ ಹಸ್ತಿನೆಯ ಮಹಾರಾಜನಾಗಿ ಚಕ್ರವರ್ತಿಯಾದವರು. ಕಾರಣಾಂತರದಿಂದ ನಂತರದ ಬೆಳವಣಿಗೆಯಲ್ಲಿ ದೊಡ್ಡಪ್ಪ ಧೃತರಾಷ್ಟ್ರರು ಕಾರ್ಯಕಾರಿಣಿ ರಾಜರಾಗಿ, ಹಸ್ತಿನೆಗೆ ಅರಾಜಕತೆ ಬರಬಾರದೆಂದು ರಾಜ ಪ್ರತಿನಿಧಿಯಾದವರು. ಕಾಲಾಂತರದಲ್ಲಿ ನಾವು ಹಸ್ತಿನೆಗೆ ಬಂದಾಗ ಜೇಷ್ಠನೂ, ಶ್ರೇಷ್ಟನೂ ಸರ್ವ ಸಮರ್ಥ ಉತ್ತರಾಧಿಕಾರಿಯೂ ಆದ ಅಣ್ಣ ಯುಧಿಷ್ಠಿರ ಯುವರಾಜನಾಗಿ ಅಭಿಷಿಕ್ತನಾದನು. ಆ ಬಳಿಕ ಈ ಕೌರವರಿಂದ ನಡೆದ ಹತ್ಯಾ ಯತ್ನವಾದ ಅರಗಿನ ಮನೆಯ ಪ್ರಕರಣವೊ, ನಂತರದ ರಾಜಕೀಯ ಕಪಟ ದ್ಯೂತದ ಪರಿಣಾಮ ವನವಾಸ ಅಜ್ಞಾತವಾಸವು ನಮಗೊದಗಿ, ಅದನ್ನೂ ಪೂರೈಸಿ ಬಂದಿದ್ದೇವೆ. ಎಲ್ಲೂ ನಮ್ಮಣ್ಣ ಧರ್ಮ ಮೀರದೆ ತಾಳ್ಮೆಯಿಂದ ಸಹಿಸಿಕೊಂಡು ಬಂದಿದ್ದಾನೆ. ರಾಜಸೂಯಾಧ್ವರ ಅಭಿಷಿಕ್ತ ಚಕ್ರವರ್ತಿಯಾದ ನಮ್ಮಣ್ಣ ಈಗ ಪಣ ಪೂರೈಸಿ ಬಂದಿರುವಾಗ ಪಣ ನಿರ್ಣಯದಂತೆ ನಮ್ಮದ್ದಾದ ಸಾಮ್ರಾಜ್ಯ – ಸರ್ವಸಂಪದ ಮರಳಿ ನೀಡಬೇಕಾದದ್ದು ಕೌರವರಿಗೆ ಕರ್ತವ್ಯವಾಗಿತ್ತು. ಆದರೆ ಅದಕ್ಕೊಪ್ಪದೆ ಅವರು ದಿಟ್ಟತನ ತೋರಬಹುದಾದ ಈ ಕಾಲದಲ್ಲಿ ಕ್ಷಾತ್ರಗುಣ ಧರ್ಮಕ್ಕನುಸಾರವಾಗಿ ಸರಿ ಪಡಿಸಬೇಕಾದರೆ ಸಂಧಾನ ಅಥವಾ ಸಮರ ನಡೆಯಬೇಕು. ಒಂದೊಮ್ಮೆಗೆ ಸಮರ ನಿರ್ಣಯವಾದರೆ ನಿನ್ನ ಪೂರ್ಣಾನುಗ್ರಹ ನಮಗೆ ಬೇಕೆಂದು ಭಾವದಿಂದ ಭಕ್ತನಾಗಿ ಬಯಸಿ ಬಂದವನಿದ್ದೇನೆ” ಎಂದನು ಅರ್ಜುನ.
ಇಬ್ಬರ ವಾದವನ್ನೂ ಆಲಿಸಿದ ಕೃಷ್ಣ, “ನೀವಿಬ್ಬರೂ ನನಗೆ ಸಮಾನ ಬಂಧುಗಳು. ತಾರತಮ್ಯ ಮಾಡಲಾಗದು. ಮೊದಲು ಬಂದವನು ನೀನು ಎಂದಿರುವೆ ದುರ್ಯೋಧನಾ, ನನಗೆ ಆ ಸಮಯದಲ್ಲಿ ಆವರಿಸಿದ ನಿದ್ರೆಯ ಕಾರಣ ಮಲಗಿದ್ದೆ. ನಂತರ ಎಚ್ಚೆತ್ತು ಮೊದಲಾಗಿ ನಾನು ನೋಡಿದ್ದು ಪಾರ್ಥನನ್ನು. ಹೀಗಿರಲು ನನಗೀಗ ದ್ವಂದ್ವ ಉಂಟಾಗಿದೆ. ನೀವಿಬ್ಬರಿಗೂ ಸಮಾನ ನ್ಯಾಯ ನೀಡಬೇಕಾದ ಜವಾಬ್ದಾರಿ ನನ್ನ ಪಾಲಿಗೆ ವಿಹಿತವಾಗಿದೆ. ನಾನು ನನ್ನ ಮುಕ್ತ ಮನಸ್ಸಿನ ಅಭಿಪ್ರಾಯ ತಿಳಿಯಪಡಿಸುವೆ ಕೇಳು. ನಾವು ಯಾದವರು. ಈ ಹಿಂದೆ ಗೋಪಾಲನೆ ಮಾಡುತ್ತಾ ಬದುಕಿದವರು ನಮ್ಮ ಹಿರಿಯರು. ಇನ್ನೂ ಕೆಲವರು ಕೃಷಿಕರಾಗಿಯೂ ಬದುಕಿದ್ದಾರೆ. ಶೌರ್ಯವುಳ್ಳ ವೀರರು ಮಥುರೆಯ ಸೈನ್ಯದಲ್ಲಿ ಸೈನಿಕರಾಗಿಯೂ ಸೇವೆ ಸಲ್ಲಿಸಿದವರಿದ್ದಾರೆ. ಅಂತಹ ವಿಕೇಂದ್ರೀಕೃತ ಯಾದವ ಕುಲವನ್ನು ಒಗ್ಗೂಡಿಸಿ ಹೇಗೋ ಕಷ್ಟದಿಂದ ದ್ವಾರಕೆಯಲ್ಲಿ ನಮ್ಮದೇ ಆದ ಸಾಮ್ರಾಜ್ಯ ಕಟ್ಟಿ ಬೆಳೆಸಿದೆವು. ಇದನ್ನು ಕಂಡು ಸಹಿಸಲಾರದ ರಕ್ಕಸ ಸ್ವಭಾವದವರು ಬಾಧೆ ನೀಡಿ ಅಳಿದು ಹೋಗಿದ್ದಾರೆ. ನಿರಂತರ ಆಕ್ರಮಣ, ಪೀಡನೆ ನಮಗೊದಗುತ್ತಿದ್ದ ಸಂದರ್ಭದಲ್ಲಿ ಯಾವ ರಾಜ ಮಹಾರಾಜರೂ ನಮ್ಮ ಈ ಯಾದವ ಕುಲದ ನೆರವಿಗೆ ಬರಲಿಲ್ಲ. ನಾವಾಗಿಯೆ ನಮ್ಮ ರಕ್ಷಣೆಯ ವ್ಯವಸ್ಥೆ ಮಾಡಿಕೊಂಡೆವು. ಈಗ ತುಸು ನೆಮ್ಮದಿಯ ಬದುಕು ನಮ್ಮದಾಗಿದೆ. ಹಸ್ತಿನೆಯ ಜೊತೆಗೂ ಬಾಂಧವ್ಯವಿದೆ. ನಮ್ಮ ಸಹೋದರಿ ಸುಭದ್ರೆ ಈ ಅರ್ಜುನನ ಮಡದಿ. ನಿನ್ನ ಮಗಳು ನನ್ನ ಸೊಸೆ. ಹೀಗೆ ಸಮಾನ ಬಂಧುಗಳಾದ ನಿಮ್ಮ ಕುಟುಂಬ ಕಲಹ ಕಾರಣದಿಂದ ನಮ್ಮ ಯಾದವ ವೀರರು ನಿಮಗಿಬ್ಬರಿಗೂ ಸಮಾನರೆಂದು ಹಂಚಲ್ಪಟ್ಟು ಯುದ್ದದಲ್ಲಿ ತೊಡಗಿದರೆ – ನಾವು ನಾವೇ ಯಾದವರು ಹೊಡೆದಾಡಿ ಸಾಯಬೇಕಾದೀತು. ಕೊನೆಗೆ ಒಂದು ಪಕ್ಷ ಗೆಲ್ಲುತ್ತದೆ. ಆಗ ಕೆಲವರಷ್ಟೇ ನಮ್ಮವರು ಉಳಿದು, ಅಳಿದವರಿಗಾಗಿ ದುಃಖಿತರಾಗುತ್ತೇವೆ. ಈ ಸ್ವಯಂ ಬಂಧುನಾಶ ನಿಮ್ಮನ್ನೂ ಬಿಡದು. ಹಾಗಾಗಿ ಬಂಧು ಹತ್ಯೆಗೆ ಕಾರಣವಾಗುವ ಈ ಯುದ್ದ ಅನಗತ್ಯ. ನಿಮ್ಮೊಳಗೆ ಸೌಹಾರ್ದತೆ ಬೆಳೆಸಿ, ಕುಟುಂಬದೊಳಗೆ ಹಿರಿಯರ ಸಮಾಲೋಚನೆಯಲ್ಲಿ ಇತ್ಯರ್ಥಗೊಳಿಸಿ ಸಂಧಿಗ್ದತೆ ಉಪಶಮನವಾದರೆ ಲೋಕಕ್ಕೆ ಕ್ಷೇಮಕರ. ಇಲ್ಲವಾದರೆ ಮೈತ್ರಿಯಲ್ಲಿ ಇಬ್ಭಾಗವಾಗುವ ಇಡಿ ಆರ್ಯಾವರ್ತದ ದೇಶಗಳು, ವೀರರು, ಸೇನೆ ಹೊಡೆದಾಡಿ ಸರ್ವನಾಶವಾಗಲು ಕಾರಣವಾದೀತು. ಕೌರವ – ಪಾಂಡವ ಇತ್ತಂಡಗಳೂ ಮಹಾಕಲಿಗಳಾದ ವೀರರನ್ನು ಹೊಂದಿದೆ. ಈ ಬಲಾಢ್ಯರು ಪರಸ್ಪರ ಕಾದಾಡುವಂತಹ ಮಹಾ ದುರಂತಕ್ಕೆ ದಾರಿ ಮಾಡಿಕೊಡದೆ, ಸೋದರರಾದ ನೀವು ರಾಜಿಯ ರಾಜಕಾರಣಕ್ಕೆ ಮುಂದಾಗಿ ಒಮ್ಮತದ ನಿರ್ಧಾರ ಕೈಗೊಂಡರೆ ಒಳಿತು. ಮಹಾ ಪ್ರಳಯ ಸದೃಶ ಯುದ್ದ ತಪ್ಪಿ ಹೋಗಿ ಜಗದಲ್ಲಿ ಶಾಂತಿ ನೆಲೆಯಾದೀತು ಎಂಬುವುದು ನನ್ನ ಅಭಿಮತ” ಎಂದು ಬುದ್ಧಿಮಾತು ಹೇಳಿದನು.
ದುರ್ಯೋಧನನಿಗೆ ಈ ಮಾತು ಪಥ್ಯವಾಗಲಿಲ್ಲ. ಈ ಕೃಷ್ಣ ಪಾಂಡವರ ಪಕ್ಷ ಸೇರುವುದನ್ನು ತಪ್ಪಿಸಲು ಬಂದರೆ ಇಲ್ಲೂ ಇವನ ಹಿತೋಪದೇಶ? ಯಾರಿಗೆ ಬೇಕು ಈ ನಿರರ್ಥಕ ಬೋಧನೆ? ಎಂದು ಸಿಡಿಮಿಡಿಗೊಂಡ ಕೌರವ “ಹೇ! ಕೃಷ್ಣಾ! ನಿನ್ನ ಮಾತಿನ ಅಂತರಾರ್ಥವೇನು? ತಟಸ್ಥನಾಗಿ ಉಳಿಯುವೆಯೆಂದೊ? ನಮ್ಮ ಬಂಧು ಎಂದು ಸಹಾಯ ಕೇಳುವುದು ಯುಕ್ತ ಧರ್ಮ ಎಂದು ಬಂದಿದ್ದೇನೆ. ಈಗ ನೀನು ತೊಡಗಿರುವ ನೀತಿ ಬೋಧನೆ ನಮಗೆ ಈ ಹಿಂದೆ ಸಾಕಾಷ್ಟಾಗಿದೆ. ಅದರಂತೆ ನಾವು ಸರ್ವಸ್ವವನ್ನು ಪಾಂಡವರಿಗೆ ಬಿಟ್ಟುಕೊಡಬೇಕೆ? ಅಲ್ಲಾ ಬಾಲ್ಯದಲ್ಲೂ ನಾವೂ ಕಾಡಾಡಿಗಳಾಗಿ ಬೆಳೆದಿದ್ದೆವು. ನಂತರ ಮಧ್ಯಂತರದಲ್ಲೂ ಹಾಗೆಯೆ ಗಿರಿ ಶಿಖರ ಅಲೆದು ಬದುಕಿ, ಆಹ್ವಾನಿತ ರಾಜದ್ಯೂತದ ನಂತರವೂ ಕಾಡು ನಮಗೆ ವಾಸಸ್ಥಾನವಾಗಿತ್ತೆಂದು ಈ ಪಾಂಡವರು ನಮಗೇನೂ ಬೇಡವೆಂದು ಮತ್ತೆ ಕಾಡು ಸೇರಬೇಕೊ? ಏನು ನಿನ್ನ ಮಾತಿನ ಉದ್ದೇಶ? ಎರಡೂ ಪಕ್ಷವೂ ಬಲಯುತವಾಗಿದೆ. ಹೊಡೆದಾಡಿ ಸೋಲುವವರು ಸರ್ವನಾಶವಾಗುತ್ತಾರೆ. ಹಾಗೆಂದು ಗೆಲ್ಲುವವರು ಪೂರ್ಣ ನಾಶವಾಗದೆ ಅಳಿದುಳಿದ ಕೆಲಮಂದಿಗಳು ಬದುಕುಳಿಯುತ್ತಾರೆ. ಹೀಗೆ ದುರ್ಬಲರಾಗಿ ಉಳಿಯುವ ವಿಜಯಿಗಳನ್ನು ದ್ವಾರಕೆಯವರಾದ ನೀವು ಸೈನ್ಯ ಸಂಚಯಗೊಳಿಸಿ ಸಿದ್ಧರಾಗಿದ್ದು, ಯುದ್ದಕ್ಕೆ ಆಹ್ವಾನಿಸಿ ಸುಲಭದಲ್ಲಿ ಗೆದ್ದು ಮಹಾ ಸಾಮ್ರಾಟರಾಗುವ ಉದ್ದೇಶವೊ ನಿನ್ನದು? ನೋಡು ಕೃಷ್ಣಾ! ಸಹಾಯ ಕೇಳಲು ಬಂದಿದ್ದೇನೆ ಅಂದ ಮಾತ್ರಕ್ಕೆ ನಾನು ಶರಣಾಗತನಲ್ಲ. ಮನಸ್ಸಿದ್ದರೆ ಮೈತ್ರಿಯಿಂದ ಸೇರಬಹುದು. ಅದು ಅಸಾಧ್ಯವಾದರೆ ನಾವೂ ಕ್ಷತ್ರಿಯರು. ಇಟ್ಟ ಹೆಜ್ಜೆ ಹಿಂದಿಡಲಾರೆವು. ಯುದ್ದವೇ ನಮ್ಮ ಕಲಹಕ್ಕೆ ಪರಿಹಾರ ಹೊರತು ಸಂಧಾನ ಅಸಂಭವ. ಕೇವಲ ಸಾಮ್ರಾಜ್ಯದಾಸೆಗೆ ಈ ಯುದ್ದವಲ್ಲ,
ಬಾಲ್ಯದಿಂದಲೆ ಬೀಜ ಮಾಪನವಾಗಿ ಬೆಳೆದು ಹೆಮ್ಮರವಾದ ಘೋರ ವೈರತ್ವ ಕೌರವ ಪಾಂಡವರ ಮಧ್ಯೆಯಿದೆ. ಅದು ನೀನು ಹೇಳುವ ಒಮ್ಮತದಿಂದ ಪರಿಹೃತವಾಗುವಂತದ್ದಲ್ಲ. ಅಳಿವು ಉಳಿವಿನಂದಲೆ ನಿರ್ಣಯವಾಗಬೇಕಾದದ್ದು. ಹಾಗಾಗಿ ಯುದ್ದವೊಂದೆ ಪರಿಹಾರ ಹೊರತು ಅನ್ಯ ಮಾರ್ಗವೇ ಇಲ್ಲ. ನೀನು ನಮ್ಮ ಬಂಧುವಾಗಿ ಬರುತ್ತೀಯೊ ನಿನಗೆ ಈ ದುರ್ಯೋಧನನ ಆತ್ಮೀಯ ಸ್ವಾಗತ. ಏನು ನಿನ್ನ ನಿರ್ಣಯ ತಿಳಿಸು?” ಎಂದು ಕಟುವಾಗಿ ಭೇದೋಪಾಯದಿಂದ ಉತ್ತರ ನೀಡುವಂತೆ ಮಾತನಾಡಿದನು.
ಕೃಷ್ಣ ನಸುನಗುತ್ತಾ ತನ್ನ ನಿರ್ಣಯ ಪ್ರಕಟಿಸತೊಡಗಿದ…
ಮುಂದುವರಿಯುವುದು…