ಭಾಗ 267
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೬೮ ಮಹಾಭಾರತ
ಅರ್ಜುನನಿಗೆ ಎದುರಾದ ಕರ್ಣ ರೋಷಾವೇಶದಿಂದ ಅಬ್ಬರಿಸುತ್ತ “ನನ್ನ ತಮ್ಮನಾದ ಸಂಗ್ರಾಮಜಿತನ ಮರಣದಿಂದ ದುಃಖಿತನಾಗಿ ಮನಸ್ಸು ವಿಚಲಿತವಾಗಿದ್ದ ಸಮಯ ನೋಡಿ ಆರಂಭದಲ್ಲಿ ನನ್ನನ್ನು ಘಾಸಿಗೊಳಿಸಿದ ಹೇ ಅರ್ಜುನಾ! ಈಗ ಮಹಾಕಲಿ ಕರ್ಣ ನಿನಗೆದುರಾಗಿದ್ದಾನೆ. ಸಾಕ್ಷಾತ್ ಇಂದ್ರನೆ ನಿನ್ನ ರಕ್ಷಣೆಗೆ ಬಂದರೂ ಎದುರಿಸಿ ಕಾದಾಡಬಲ್ಲ ಸ್ಥೈರ್ಯ ಹೊಂದಿಯೆ ಬಂದಿದ್ದೇನೆ. ಈ ವರೆಗೆ ನೀನು ಎದುರಿಸಿದ್ದು ನಿನ್ನ ಪ್ರೀತಿಪಾತ್ರರಾದ ಗುರುಗಳನ್ನು ಮತ್ತು ಗುರು ಪುತ್ರರನ್ನು. ಕೇವಲ ಯುದ್ದ ಪ್ರದರ್ಶನ ನೀಡಿ ಹಿಂದೆ ಸರಿದರೆ ಹೊರತು ನಿನ್ನನ್ನು ಸೋಲಿಸುವ ಉದ್ದೇಶ ಅವರದ್ದಾಗಿರಲಿಲ್ಲ. ಈಗ ನಿನಗೆದುರಾಗಿರುವ ಕರ್ಣ ನಿನ್ನ ವಧೆಗಾಗಿಯೆ ಬಂದಿದ್ದಾನೆ. ಧೈರ್ಯವಿದ್ದರೆ ಮುಂದಾಗು” ಎಂದು ಆರ್ಭಟಿಸಿದನು.
ಅರ್ಜುನನಿಗೆ ಕರ್ಣನ ಮಾತು ಕೇಳಿ ಉತ್ತಮ ಹಾಸ್ಯದಂತೆ ಭಾಸವಾಯಿತು “ಕರ್ಣಾ! ಈ ವರೆಗೆ ನಿನಗೆ ನನ್ನ ಸಮರ ಕೌಶಲದ ಪೂರ್ಣ ಅನುಭವ ಆಗಿಲ್ಲ. ದ್ಯೂತ ಭವನದಲ್ಲಿ ನೀನು ಪತಿವ್ರತೆ ದ್ರೌಪದಿಯ ಬಗ್ಗೆ ಆಡಿದ ದುರ್ವಚನ ನನ್ನನ್ನು ಈಗಲೂ ಕಾಡುತ್ತಿದೆ. ಇಂದಿನ ಈ ಕ್ಷಣ ಆ ನಿನ್ನ ಮಾತುಗಳಿಗೆ ಶಿಕ್ಷೆ ನೀಡುವ ಅವಕಾಶ ಕಲ್ಪಿಸಿದೆ. ಇಂದ್ರನ ಬಗ್ಗೆ ಯೋಚನೆ ಬಿಡು ಮೊದಲು ನನ್ನೆದುರು ನಿಲ್ಲಲಾದೀತೊ ನೋಡಿಕೋ” ಎಂದನು.
ಬುದ್ಧಿಯ ಜಾಗದಲ್ಲಿ ಪ್ರತಿಕಾರ – ಪ್ರತಿಷ್ಟೆಯೆ ತುಂಬಿ ಹೋಗಿದ್ದ ಕರ್ಣ ಶರವರ್ಷವನ್ನು ಅರ್ಜುನನತ್ತ ಸುರಿಸಿದನು. ಒಂದೊಂದಂಬುಗಳನ್ನು ಛೇದಿಸಿದ ಪಾರ್ಥನತ್ತ ದಿವ್ಯ ಶರಗಳನ್ನೂ ಪ್ರಯೋಗಿಸಿದನು. ಧನಂಜಯನ ಬಳಿ ಪ್ರತ್ಯಸ್ತ್ರಗಳ ಕೊರತೆಯೆ? ಅವುಗಳೂ ಪಥ ಮಧ್ಯದಲ್ಲಿ ಕತ್ತರಿಸಲ್ಪಟ್ಟವು. ಏನಾದರೂ ಸರಿ ಇಂದು ಅರ್ಜುನನಿಗೊಂದು ಗತಿ ಕಾಣಿಸಿಯೆ ಸಿದ್ದನೆಂದು ಕ್ರೋಧಾವೇಶದಿಂದ ಬಗೆ ಬಗೆಯ ಯುದ್ಧ ವಿಕ್ರಮಗಳನ್ನು ಕರ್ಣ ತೋರಿದರೂ ಪಾರ್ಥನನ್ನು ಕಂಗೆಡಿಸಲಾಗಲಿಲ್ಲ. ಉಗ್ರನಾಗಿ ಹೋರಾಡತೊಡಗಿದ ಕಿರೀಟಿಯೆದುರು ಕರ್ಣನ ಕೈ ಸಾಗಲಿಲ್ಲ. ಧನುಸ್ಸು ಮುರಿಯಲ್ಪಟ್ಟಿತು, ಆನೆ ಕಟ್ಟುವ ಬಲಿಷ್ಟ ಸರಪಳಿಯ ಚಿಹ್ನೆಯ ಕರ್ಣನ ಧ್ವಜವೂ ಹರಿದು ಚಿಂದಿಯಾಯಿತು. ಅತ್ಯುಗ್ರನಾದ ಕರ್ಣ ಮಂತ್ರಾಸ್ತ್ರದಿಂದ ಪಾರ್ಥನ ಧನುವನ್ನು ಹಿಡಿದ ಮುಷ್ಟಿಗೆ ಗುರಿಯಾಗಿಸಿ ಹೊಡೆದನು. ಶೀಘ್ರ ಪ್ರತಿಕ್ರಿಯೆ ನೀಡಿ ತಪ್ಪಿಸುವಾಗ ಮುಷ್ಟಿ ಸಡಿಲವಾಯಿತು. ಸವ್ಯಸಾಚಿಗೆ ಎಡ – ಬಲಗಳ ವ್ಯತ್ಯಾಸವಿಲ್ಲ. ಎರಡೂ ಕೈಗಳಲ್ಲೂ ಸಮಾನ ಕ್ಷಮತೆಯಿಂದ ಬಾಣ ಪ್ರಯೋಗಿಸಬಲ್ಲ ಚಾಣಾಕ್ಷ. ಪ್ರಜ್ವಲಿಸುವ ತೀಕ್ಷ್ಣ ಶರಗಳಿಂದ ಮತ್ತೊಮ್ಮೆ ಕರ್ಣನ ಬಲ – ಎಡ ತೋಳು, ತೊಡೆಗಳಿಗೆ ಹೊಕ್ಕು ಬೆಂಗಡೆಯಿಂದ ನುಸುಳುವಂತೆ ಶರ ಪ್ರಯೋಗಿಸಿದನು. ವಜ್ರ ಶರವನ್ನು ಕರ್ಣನ ಎದೆಗೆ ಗುರಿಯಾಗಿಸಿ ಗಾಂಡೀವದ ನಾರನ್ನು ಕಿವಿಯವರೆಗೆಳೆದು ಪ್ರಯೋಗಿಸಿದನು. ಎದೆಯ ಲೋಹ ಕವಚವನ್ನೂ ಸೀಳಿ ಹೊಕ್ಕಿತು. ರಥದ ಕುದುರೆಗಳನ್ನು ಬಿಗಿದ ನೊಗ ಸರಪಳಿಗಳನ್ನು ಕತ್ತರಿಸಿದ, ರಥ ಚಕ್ರಗಳನ್ನೂ, ಕಡೆಗೆ ರಥವನ್ನೂ ಪುಡಿಗಟ್ಟಿ ಕರ್ಣನನ್ನು ನೆಲಕ್ಕುರುಳಿಸಿದನು. ಎದ್ದು ಓಡಲೂ ಆಗದೆ, ಅರೆ ಮೂರ್ಛಿತನೂ ಆಗಿ, ಮಾನಹರಣಕ್ಕೊಳದಾಗ ಕರ್ಣನನ್ನು ಆತನ ರಥ ರಕ್ಷಾ ಪಡೆಯ ಅಂಗರಕ್ಷಕರು ಹೊತ್ತೊಯ್ಯಲು ಬಿಟ್ಟು ಬಿಟ್ಟನು ಧನುರ್ಧರ ಪಾರ್ಥ.
ಧೃತರಾಷ್ಟ್ರ ಪುತ್ರರಿಗೆ ರಕ್ಷಣೆ ನೀಡುತ್ತಾ ಕಣ್ಗಾವಲಾಗಿ ನಿಂತಿದ್ದರು ಅಜ್ಜ ಭೀಷ್ಮಾಚಾರ್ಯ. ಪಾರ್ಥನೀಗ ದುಶ್ಯಾಸನ, ವಿಕರ್ಣ, ದುಸ್ಸಹ, ವಿವಿಶಂತಿ ಮೊದಲಾದ ಕೌರವ ಸೋದರರನ್ನು ಕ್ಷಣಾರ್ಧದಲ್ಲಿ ಮನಬಂದಂತೆ ದಂಡಿಸತೊಡಗಿದನು. ಕುರು ಸೇನೆಯೂ ತನ್ನ ಮೇಲೆರಗಿ ಸಾಗರದ ಅಲೆಗಳಂತೆ ಬಂದಾಗ, ರುದ್ರನ ತಾಂಡವದಂತೆ ಪ್ರಳಯಾಂತಕನಂತಾದನು ಕೌಂತೇಯ. ಕುರು ಸೈನ್ಯವನ್ನೂ ಸಮಗ್ರವಾಗಿ ನಾಶಗೊಳಿಸತೊಡಗಿದನು. ಕೌರವ ಸೋದರರು ದಾರಿ ಕಂಡ ಕಡೆ ಓಡಿಯೊ, ತೆವಲಿಕೊಂಡೊ ಹೋಗಿ ಪ್ರಾಣವನ್ನು ಉಳಿಸಿಕೊಂಡರು. ಸೋದರರ ಪರಾಭವ ಕಂಡು ಅಜ್ಜ ಭೀಷ್ಮಾಚಾರ್ಯರ ಬಳಿಯಿಂದ ಧಾವಿಸಿ ಬಂದ ದುರ್ಯೋಧನನ ಗ್ರಹಗತಿಯೂ ದುರ್ಗತಿಯನ್ನೆ ಸಮೀಕರಣಗೊಳಿಸಿದ್ದವೊ ಏನೋ! ಅರ್ಜುನನ ಆಕ್ರಮಣ ಯಾವ ಮಟ್ಟಕ್ಕಿತ್ತೆಂದರೆ ಅಣ್ಣ ಭೀಮನ ಶಪಥ ಪೂರೈಕೆಗಾಗಿ ಕೌರವನ ಜೀವ ಒಂದನ್ನು ಉಳಿಸಿ ಮತ್ತೇನು ಮಾಡಲು ಸಾಧ್ಯವೊ ಆ ಎಲ್ಲಾ ದಂಡನೆಗಳನ್ನೂ ದುರ್ಯೋಧನನಿಗೆ ವಿಧಿಸಿ ತನ್ನ ಮನಶಾಂತಿಗೊಳಿಸಿದನು. ಇಷ್ಟಾಗುತ್ತಿರುವಾಗ ಸೇನೆಯ ಹಿಂಭಾಗದಲ್ಲಿದ್ದ ಪಿತಾಮಹ ಭೀಷ್ಮಾಚಾರ್ಯರು ಸರ್ವನಾಶವನ್ನು ತಡೆಯಲೆಂಬಂತೆ ಮುಂದೊತ್ತಿ ಬಂದರು. ಮತ್ಸ್ಯ ದೇಶದ ಹಸುರಿನ ಉತ್ತರದ ಹುಲ್ಲುಗಾವಲು ಇಂದು ರುಧಿರದ ಹೊಳೆ ಹರಿದು ಕೆಂಪೇರಿದೆ. ಶವ, ಆಯುಧ, ಮುರಿದು ಬಿದ್ದ ರಥ, ಗಾಯಗೊಂಡ ಕುದುರೆ, ಗಜಗಳಿಂದ ತುಂಬಿ ಹೋಗಿದೆ. ಅಜ್ಜ ಭೀಷ್ಮರಿಗೂ – ಮೊಮ್ಮಗ ಮಧ್ಯಮ ಪಾಂಡವನಿಗೂ ಕದನ ಆರಂಭವಾಯಿತು. ಹಿಂದೆ ಸ್ವರ್ಗದಲ್ಲಿ ಬಲಿಗೂ ಇಂದ್ರನಿಗೂ ಆದ ಮಹಾಸಂಗ್ರಾಮದಂತೆ ಕದನ ಸಾಗುತ್ತಿದೆ. ಪಿತಾಮಹನನ್ನು ಗೆಲ್ಲಬಲ್ಲ ಗಂಡಸು ಇಲ್ಲ. ಹಾಗೆಂದು ಅರ್ಜುನನೂ ಅಜೇಯನು! ಅಂಬರಪಥದಲ್ಲಿರುವ ಅತಿಮಾನುಷರೆಲ್ಲರ ಹುಬ್ಬುಗಂಟಿಕ್ಕಿದೆ. ಏನಾಗಲಿದೆ! ಯಾರೂ ಯಾರನ್ನು ಹೊಡೆಯಬಲ್ಲರು? ಕಲ್ಪನಾತೀತವಾದ ಸನ್ನಿವೇಶ! ಎಂಬಂತಾಗಿದೆ ಅವರ ಸ್ಥಿತಿ. ಇಂದ್ರಾದಿ ದೇವತೆಗಳಿಗೆ ಈ ಯುದ್ದ ವಿಕ್ರಮ ನೋಡುವಾಗ ಒಮ್ಮೆ ಅರ್ಜುನ ಮೇಳೈಸಿದರೆ’ ಅರೆಕ್ಷಣದಲ್ಲಿ ಗಂಗಾಪುತ್ರ ಮಿಗಿಲಾಗುತ್ತಿದ್ದಾರೆ. ಇವರಿಬ್ಬರ ಯುದ್ದ ವೈಖರಿಯ ಉತ್ಕರ್ಷೆ ಯಾವ ರೀತಿ ಇತ್ತೆಂದರೆ ಇಕ್ಕೆಲಗಳಲ್ಲೂ ಇಬ್ಬರಿಂದಲೂ ಪರಸ್ಪರ ಕತ್ತರಿಸಲ್ಪಟ್ಟ ಶರಗಳು ರಾಶಿ ರಾಶಿಯಾಗಿ ಮಳೆಯಂತೆ ಬೀಳುತ್ತಿವೆ. ಯಾರೊಬ್ಬರಿಗೂ ಸಾಧಾರಣ ಸಮೀಪದಲ್ಲಿ ನಿಲ್ಲಲೂ ಆಗುತ್ತಿಲ್ಲ. ಧನುರ್ವೇದದ ಯಾವೆಲ್ಲಾ ಪರಿಕ್ರಮಗಳಿವೆಯೊ, ಸಂಧಾನಗಳಿವೆಯೋ ಎಲ್ಲ ಕೌತುಕಗಳೂ ಕಾಣಸಿಕ್ಕವು.
ಇನ್ನೂ ಮುಂದುವರಿದರೆ ಮುಗಿಯುವ ಯುದ್ದವಲ್ಲ ಎಂದು ಮನಗಂಡ ಪಾರ್ಥ ಸಮ್ಮೋಹನಾಸ್ತ್ರವನ್ನು ಎತ್ತಿ ಇಡಿ ಸೇನೆಯನ್ನು ಗುರಿಯಾಗಿಸಿ ಪ್ರಯೋಗಿಸಿದನು. ನೋಡುತ್ತಿದ್ದಂತೆಯೆ ಕುರುಸೇನೆ ಸುರಪಾನದ ಮತ್ತೇರಿ ಬಿದ್ದವರಂತೆ ಬಿದ್ದು ಬಿಟ್ಟರು. ಪಿತಾಮಹರೂ ಅಲ್ಲೇ ಒರಗಿದರು. ಸಮ್ಮೋಹನಾಸ್ತ್ರದ ಪ್ರಭಾವ ಎಲ್ಲರೂ ಎದುರಾಳಿಯ ವಶರಾಗಿ ಬೀಳುವಂತೆ ಮಾಡಿತ್ತು.
ಪಾರ್ಥ ತನ್ನ ರಥ ಸಾರಥಿ ಉತ್ತರನನ್ನು ಕರೆದು ” ರಾಜಕುಮಾರಾ! ನೀನು ಯುದ್ದಕ್ಕೆ ಹೊರಡುವಾಗ ನಿನ್ನ ತಂಗಿ ಅಪೇಕ್ಷೆ ಪಟ್ಟಿದ್ದಳಲ್ಲವೇ? ಕೌರವರೆಲ್ಲರೂ ಮೈಮರೆತು ಬಿದ್ದಿದ್ದಾರೆ. ನಮ್ಮ ರಥ ಅವರೆಲ್ಲರ ಮಧ್ಯದಿಂದಲೆ ಸಾಗಲಿ. ದ್ರೋಣ – ಕೃಪಾಚಾರ್ಯರ ಬಿಳಿಯ ನಿರ್ಮಲ ವಸ್ತ್ರ, ದುರ್ಯೋಧನನ ನೀಲಿ ಉತ್ತರೀಯ, ಉಳಿದವರ ಕನಕ, ರತ್ನ, ವಜ್ರ ಮಣಿ ಖಚಿತ ಆಭರಣಗಳನ್ನು ಆಯ್ದುಕೊಂಡು ಬಾ. ತಪ್ಪಿಯೂ ಅಜ್ಜ ಭೀಷ್ಮಾಚಾರ್ಯರ ಬಳಿ ಹೋಗಬೇಡ. ಅಖಂಡ ಬ್ರಹ್ಮಚರ್ಯ ವೃತ ಪಾಲಕರಾದ ಅವರನ್ನು ನಾನು ಪ್ರಯೋಗಿಸಿದ ಸಮ್ಮೋಹನಾಸ್ತ್ರ ಏನೂ ಮಾಡಿರದು. ಪಾಂಡವರಾದ ನಮ್ಮ ಮೇಲಿನ ಮೋಹ ಪಾಶದಿಂದ ಬೇಕೆಂದು ಒರಗಿ ಕುಳಿತಿರ ಬಹುದಷ್ಟೆ” ಎಂದು ಎಚ್ಚರಿಸಿ ಕಳುಹಿಸಿದನು. ಹಾಗೆಯೆ ಉತ್ತರನು ಉತ್ತಮವಾಗಿ ಕಂಡವುಗಳನ್ನೆಲ್ಲಾ ಆಯ್ದುಕೊಂಡು ರಥದತ್ತ ಬರುವಾಗ ಭೀಷ್ಮರಿಗೇಕೆ ಮನಸ್ಸಾಯಿತೊ! ಒರಗಿ ಕುಳಿತಲ್ಲಿಂದಲೆ ಗೊತ್ತಾಗದಂತೆ ಉತ್ತರನನ್ನು ಗುರಿಯಾಗಿಸಿ ಒಂದು ಶರ ಪ್ರಯೋಗ ಮಾಡಿಬಿಟ್ಟರು.
ಮುಂದುವರಿಯುವುದು…