24.7 C
Udupi
Tuesday, August 12, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 262

ಭರತೇಶ್ ಶೆಟ್ಟಿ, ಎಕ್ಕಾರ್

ಅರ್ಜುನನಿಗೆ ಉತ್ತರಕುಮಾರನ ಗುಣ, ಬುದ್ಧಿ, ಚಪಲತೆ ಗೊತ್ತಿದ್ದರೂ, ತನ್ನ ಮಗ ಅಭಿಮನ್ಯುವಿನ ಪ್ರಾಯದವನಾದ, ಈ ಕುಮಾರನ ಚೇಷ್ಟೆಗಳನ್ನು ಆನಂದಿಸುತ್ತಿದ್ದನು. ಮಾತ್ರವಲ್ಲ ಈ ರಾಜ ಕುಮಾರನಲ್ಲಿ ವಿದ್ಯೆ ಕಲಿತು ಕರಗತಗೊಳಿಸುವ ಸೂಕ್ಷ್ಮ ಗ್ರಹಣ ಶಕ್ತಿ, ಚತುರತೆಯನ್ನು ಗುರುತಿಸಿದ್ದನು. ಸಮರ್ಥ ಗುರು ನಿರ್ದೇಶನ ನೀಡಿ ಧೈರ್ಯ ತುಂಬಿ ಅವಕಾಶ ನೀಡಿದರೆ ಓರ್ವ ವೀರನಾಗಬಲ್ಲ ಲಕ್ಷಣವನ್ನೂ ಮನಗಂಡಿದ್ದನು. ಈಗ ಅಷ್ಟು ಕಾಲಾವಕಾಶ ಇರದ ಕಾರಣ ಸೈರಂಧ್ರಿಯಾಗಿದ್ದ ದ್ರೌಪದಿಯನ್ನು ಕರೆದು – “ಬ್ರಹನ್ನಳೆ ಸಾರಥ್ಯ ಬಲ್ಲವಳು. ಹಿಂದೆ ಖಾಂಡವ ದಹನ ಸಮಯದಲ್ಲಿ ಅರ್ಜುನನಿಗೆ ಸಾರಥಿಯಾಗಿ ಯಶಸ್ಸು ಕಂಡ ಕೀರ್ತಿಯಿದೆ. ಅವಳಲ್ಲಿ ಒಮ್ಮೆ ಕೇಳಿ ನೋಡು, ಎಂದು ಉತ್ತರೆಗೆ ಹೇಳು” ಎಂದು ತಾನೇ ಮಾರ್ಗದರ್ಶನ ಮಾಡಿ ಕಳುಹಿಸಿದನು.

ಅಂತೆಯೆ ವಿಚಾರ ತಿಳಿದ ಉತ್ತರೆ, ತನ್ನಣ್ಣನಿಗೂ ತಿಳಿಸಿ, ಆತನ ಅಪ್ಪಣೆ ಪಡೆದು ನಾಟ್ಯಾಚಾರ್ಯರಾದ ಬ್ರಹನ್ನಳೆಯ ಬಳಿ ಬಂದಳು. “ಗುರುಗಳೇ, ನಮ್ಮ ದೇಶಕ್ಕೆ ಹಸ್ತಿನೆಯ ಕೌರವರಿಂದಾಗಿರುವ ತೊಂದರೆ, ಗೋವುಗಳ ಅಪಹರಣದ ವಿಚಾರ ನೀವೂ ತಿಳಿದಿರಬಹುದು. ಆದರೆ ನನ್ನಣ್ಣನಿಗೆ ಸಾರಥಿ ಇಲ್ಲದ ಕಾರಣ ಗೋವುಗಳನ್ನು ಬಂಧ ಮುಕ್ತ ಗೊಳಿಸಲು ಹೋಗುವಲ್ಲಿ ತೊಡಕಾಗಿದೆ. ನೀವು ಸಾರಥ್ಯ ಬಲ್ಲವರೆಂದು ಕೇಳಿ ತಿಳಿದೆ. ಅದು ಸತ್ಯವೇ ಹೌದಾದರೆ, ತಾವು ಒಪ್ಪಿ ಸಾರಥಿಯಾಗಿ ಬಂದರೆ ನನ್ನ ಅಣ್ಣ ಉತ್ತರ ಕುಮಾರನಿಗೆ ಸಹಾಯವಾದೀತು” ಎಂದು ವಿನಯದಿಂದ ಕೇಳಿಕೊಂಡಳು. ಬ್ರಹನ್ನಳೆಯೂ ಅದಕ್ಕೆ ಒಪ್ಪಿ ಆಯಿತೆಂದು ಜೊತೆಗೆ ಬಂದಳು.

ಉತ್ತರಕುಮಾರ ಬ್ರಹನ್ನಳೆಯನ್ನು ನೋಡಿ “ನನ್ನ ಸೋದರಿಯ ನಾಟ್ಯ ಗುರುಗಳೇ! ನಿಮಗೆ‌ ಸಾರಥ್ಯ ವಿದ್ಯೆಯೂ ಗೊತ್ತಿದೆಯೆ?” ಎಂದು ಕೇಳಿದ.

ಆಗ ಬ್ರಹನ್ನಳೆ “ಹಿಂದೆ ಹಲವರಿಗೆ ಸಾರಥಿಯಾಗಿ ಸಹಕರಿಸಿದ್ದೇನೆ. ಪ್ರಮುಖವಾಗಿ ಅರ್ಜುನನ ಸಾರಥಿಯಾದ ಅನುಭವ ಸ್ಮರಣೀಯ ಕ್ಷಣವಾಗಿ ಉಳಿದಿದೆ. ಆದರೆ ಅದು ಬಹಳ ಹಿಂದೆ, ನಾಟ್ಯ ಗುರುವಾದ ಬಳಿಕ ಕೆಲವು ವರ್ಷಗಳು ಆಗಿ ಹೋದವು. ಈಗ ಅಭ್ಯಾಸವಿಲ್ಲದ ಕಾರಣ ಹೇಗಾಗುವುದೊ ಗೊತ್ತಿಲ್ಲ” ಎಂದಳು ಬ್ರಹನ್ನಳೆ.

ಕೇಳಿಸಿಕೊಂಡ ಉತ್ತರಕುಮಾರ “ನನಗೆ ಅತ್ಯುತ್ತಮ ಸಾರಥಿ ಏನೂ ಬೇಕಾಗಿಲ್ಲ, ರಥ ಓಡಿಸಬಲ್ಲ ಒಂದು ಜನ ಸಾಕು. ನಾನೊಬ್ಬನೆ ಆ ಕುರು ಸೇನೆಯನ್ನು ಕಂಗೆಡಿಸಬಲ್ಲೆ” ಎಂದನು.

“ಸ್ವಾಮೀ, ಸಮಯೋಚಿತವೂ – ವೀರೋಚಿತವೂ ಆದ ಮಾತುಗಳನ್ನು ಆಡುತ್ತಿದ್ದೀರಿ. ನಿಮ್ಮಂತಹ ಅಸಾಮಾನ್ಯ ವೀರಾಗ್ರಣಿಯ ಸಾರಥ್ಯ ಮಾಡುವುದು ನನ್ನ ಬದುಕಿಗೆ ಮಹಾ ಸೌಭಾಗ್ಯ. ನೀವೇನು ಸಾಮಾನ್ಯರೆ? ಅಸಹಾಯ ಶೂರ. ರಣ ಚಾಣಾಕ್ಷತೆ ನಿಮ್ಮ ಮುಖದ ತೇಜಸ್ಸಿನಲ್ಲಿ ಕಾಣುತ್ತಿದೆ. ವಿಕ್ರಮದ ಪ್ರತೀಕವಾದ ನಿಮ್ಮ ಬಾಹುಗಳು, ವೀರಾವೇಶದ ಕಂಗಳು, ಅತಿಬಲ ಸೂಚಕವಾದ ವಿಶಾಲ ವಕ್ಷಸ್ಥಳ. ಒಬ್ಬ ಅಧಮ್ಯ ಪರಾಕ್ರಮಿ ಹೇಗಿರಬೇಕೋ ಎಲ್ಲವೂ ನಿಮ್ಮಲ್ಲಿ ಅಡಕವಾಗಿರುವಾಗ ನನಗೇಕೆ ಅಂಜಿಕೆ. ನಾನು ನಿಮ್ಮ ಸೇವೆಗೆ ಸಿದ್ಧ” ಎಂದು ಬ್ರಹನ್ನಳೆ ಹೊಗಳಿ, ಏರಿಸಿಬಿಟ್ಟಳು.

“ಅಯ್ಯೋ! ಯಾಕಾದರೂ ಈ ಸ್ಥಿತಿ ಬಂತು. ಹೋಗಿ ನಾನೇನು ಮಾಡಲಿ ಎಂದು ತೋಚುತ್ತಿಲ್ಲ ಎಂಬ ಹಾಗೆ ಅಂತರಂಗ ಹೇಳುತ್ತಿದೆ. ಸಾಕ್ಷಿಯಾಗಿ ಎದೆ ಬಡಿತವೂ ವೇಗ ಪಡೆದು ಬಾರಿಸುತ್ತಿದೆ. ಆದರೂ ತೋರಗೊಡದೆ, ತಪ್ಪಿಸಿಕೊಳ್ಳುವ ಎಲ್ಲಾ ದಾರಿಗಳನ್ನು ತಾನೇ ತನ್ನ ಮಾತಿನಿಂದಲೆ ಮುಚ್ಚಿ ಬಿಟ್ಟಿದ್ದ ಉತ್ತರಕುಮಾರ! ಈಗ ವಿಧಿ ಇಲ್ಲದೆ ರಣರಂಗಕ್ಕೆ ಹೊರಡಲು ಶಿರಸ್ತ್ರಾಣ, ಎದೆಗವಚ, ಕೈಕಟ್ಟುಗಳನ್ನೆಲ್ಲಾ ಬಿಗಿದು ಕಟ್ಟಿಸಿಕೊಂಡು ಸಿದ್ಧನಾಗತೊಡಗಿದ. ಬ್ರಹನ್ನಳೆಗೂ ಎದೆಗವಚ, ಶಿರಸ್ತ್ರಾಣಗಳನ್ನು ನೀಡಿದ. ಆದರೆ (ಅರ್ಜುನ) ಆ ಕವಚವನ್ನು ಹಿಂದು ಮುಂದಾಗಿ ಧರಿಸಿಕೊಂಡನು. ಆಗ ಅಲ್ಲಿ ನೆರೆದಿದ್ದ ನಾರೀಮಣಿಯರು ಇದೇನು ಹೀಗೆ ಎಂದು ವಿಸ್ಮಯಕ್ಕೊಳಗಾದರು. ಉತ್ತರನೇ ಬಂದು ” ಅಯ್ಯೋ ಎದೆಗವಚ ಹೀಗಲ್ಲ ಧರಿಸುವುದು!” ಎಂದು ತಾನೇ ಬ್ರಹನ್ನಳೆಗೆ ತೊಡಿಸಿದ. ಒಬ್ಬ ಮಹಾರಥಿ ತನಗೆ ತಾನೇ ಕವಚ ಧರಿಸಿಕೊಳ್ಳುವ ಕ್ರಮವಿಲ್ಲ. ಸೇವಕರು ಆತನಿಗೆ ತೊಡಿಸಬೇಕಾದದ್ದು ನಿಯಮ. ಇಲ್ಲಿ ಬ್ರಹನ್ನಳೆ ಹಾಗೆ ಮಾಡಿಸುವ ಅಧಿಕಾರ ಇಲ್ಲದ ಕಾರಣ, ಪರೋಕ್ಷವಾಗಿ ಆ ಕೆಲಸ ಮಾಡಿಸಿಕೊಳ್ಳಲು ಈ ರೀತಿ ವ್ಯವಹರಿಸಿದ್ದನು.

ಬ್ರಹನ್ನಳೆ, ಉತ್ತರಕುಮಾರನ ಉತ್ತಮ ರಥಕ್ಕೆ ವಿರಾಟನ ಅಶ್ವಲಾಯದ ಶ್ರೇಷ್ಟ ಕುದುರೆಗಳನ್ನು ಆರಿಸಿ ತಂದು, ಬಿಗಿದು ಕಟ್ಟಿ ತಯಾರಾದನು. ಕ್ರಮದಂತೆ ಬೇಕಾಗುವ ಎಲ್ಲಾ ಆಯುಧಗಳು ರಥದಲ್ಲಿ ತುಂಬಿಸಲ್ಪಟ್ಟವು. ಉತ್ತರಕುಮಾರ ಬಂದು ನಿಂತನು – ಕೋಮಲೆಯರು ಆರತಿ ಬೆಳಗಿದರು. ಸೋದರಿ ಉತ್ತರೆ ವಿಜಯ ತಿಲಕವಿಟ್ಟು, ಅಕ್ಷತೆ ಹಾಕಿ ಹಾರೈಸಿದಳು. ರಾಜಕುಮಾರ ಗಾಂಭೀರ್ಯದಿಂದ ಬತ್ತಳಿಕೆ ಬಿಗಿದು, ಧನುಸ್ಸನ್ನು ಹೆಗಲೇರಿಸಿ, ಕಠಾರಿಯನ್ನು ಸೊಂಟದಲ್ಲಿ ಇಳಿ ಬಿಟ್ಟು, ಕೈಯಲ್ಲೊಂದು ಖಡ್ಗವನ್ನೂ ಹಿಡಿದುಕೊಂಡು ರಥ ಪ್ರದಕ್ಷಿಣೆ, ಅಶ್ವ ವಂದನೆ, ಸಾರಥಿಗೆ ನಮಸ್ಕಾರ ಇತ್ಯಾದಿ ಯುದ್ದಗಮನ ವಿಧಿ ವಿಧಾನ ಪೂರೈಸಿದನು. ಮನೆದೇವರನ್ನು ನೆನೆದು ಸ್ಮರಿಸಿ ರಥವೇರಿದನು. ಉತ್ತರೆ ಅಣ್ಣನ ಬಳಿ ಬಂದು “ವೀರಾ, ಹಸ್ತಿನೆಯವರು ಅಲಂಕಾರ ಪ್ರಿಯರಂತೆ ಎಂದು ಕೇಳಿ ಬಲ್ಲೆ. ನೀನು ಗೆದ್ದ ಬಳಿಕ ಅಲ್ಲಿನ ವೀರರು ರಾಜ ಪರಿವಾರ ತೊಟ್ಟಿರುವ ಉತ್ತಮ ಉತ್ತರೀಯ, ಕೆಲವು ಆಭರಣಗಳನ್ನು ಈ ನಿನ್ನ ತಂಗಿಯ ಸಂಗ್ರಹಕ್ಕೆ ಅಣ್ಣನ ವಿಕ್ರಮದ ಸವಿನೆನಪಾಗಿ ತರಬೇಕು. ನಾಟ್ಯ ಗುರುಗಳೇ, ಗೆದ್ದ ಸಂಭ್ರಮದಲ್ಲಿ ನನ್ನಣ್ಣ ಮರೆತರೂ, ನೀವು ಜ್ಞಾಪಿಸಿ ನನಗಾಗಿ ತರುವಂತೆ ನೋಡಿಕೊಳ್ಳಬೇಕು” ಎಂದು ಆಸೆಯಿಂದ ಬೇಡಿಕೆಯಿಟ್ಟಳು.

ರಣ ವಾದ್ಯ ಘೋಷದೊಂದಿಗೆ ಬ್ರಹನ್ನಳೆಯ ಸಾರಥ್ಯದಲ್ಲಿ ರಥ ಅರಮನೆಯ ಪ್ರಾಂಗಣ, ರಾಜಬೀದಿ, ಉದ್ಯಾನವನ, ಗೋಪುರ, ರಾಜದ್ವಾರ, ಕೋಟೆ ದಾಟಿ ಕ್ಷಣಾರ್ಧದಲ್ಲಿ ಉತ್ತರ ದಿಕ್ಕಿನತ್ತ ಹಾರಿ ಹೋಯಿತು. ರಥಿಕನಾಗಿ ಕುಳಿತ ಉತ್ತರನಿಗೆ ರಥ ಸಾಗುವ ವೇಗಕ್ಕೆ ಉಸಿರೆಳೆದು ಬಿಡಲೂ, ಕಣ್ತೆರೆದು ನೋಡಲೂ ಆಗುತ್ತಿಲ್ಲ. ರಥ ನಿಧಾನವಾದಾಗ ಕಣ್ಣು ಬಿಟ್ಟರೆ ನೋಡುವುದೇನು? ದೂರದಲ್ಲಿ ಸಾಗರದಂತೆ ಹಬ್ಬಿದೆ ಕೌರವರ ಸೇನೆ. ಸೈನಿಕರ ವೀರತ್ವ ಹೂಂಕಾರಗಳು, ಆಯುಧಗಳ ಠಣಕಾರ ಧ್ವನಿಗಳು, ಆನೆ, ಕುದುರೆ, ರಥಗಳು ಸೇರಿ ನೋಡಿ ಮುಗಿಯದಷ್ಟು ದೂರಕ್ಕೆ ಇರುವೆಗಳಂತೆ ಕಾಣುತ್ತಿದೆ. ತೆರೆದ ಕಣ್ಣುಗಳು ಹೆದರಿ ಮುಚ್ಚಿಕೊಂಡವು. ಗಡಗಡನೆ ನಡುಗತೊಡಗಿದ ಉತ್ತರ ಕುಮಾರ “ಹೇ! ಸಾರಥಿ, ನೀನು ದಾರಿ ತಪ್ಪಿ ಎಲ್ಲೆಲ್ಲಿಗೊ ಕರೆ ತಂದಿರುವೆ. ಹೇಗೆ ಬಂದೆಯೊ ಅದೇ ವೇಗದಲ್ಲಿ ರಥ ಹಿಂದೆ ಹೋಗಲಿ. ” ಎಂದು ಗದ್ಗದಿತನಾಗಿ ಹೇಳಿದನು.

ಉತ್ತರಕುಮಾರನ ಕಂಪಿಸುವ ಸ್ವರ ಕೇಳಿದೊಡನೆ ಅರ್ಜುನನಿಗೆ ವಿಷಯ ಅರ್ಥವಾಯಿತು. “ಕುಮಾರಾ! ಸರಿಯಾದ ದಾರಿಯಲ್ಲಿಯೆ ನಮ್ಮ ಉತ್ತರದ ಹುಲ್ಲುಗಾವಲಿನತ್ತಲೆ ರಥ ಬಂದಿದೆ. ತುಸು ದೂರ ಸಾಗಿದರೆ ಹಸ್ತಿನೆಯ ಸೇನೆ ಸ್ಪಷ್ಟವಾಗಿ ಕಾಣಲಿದೆ. ಇನ್ನೇನು ಸ್ವಲ್ಪ ದೂರವಷ್ಟೇ ಇದೆ. ಹಸ್ತಿನೆಯ ಪಟು ಭಟರು ಅಟ್ಟಹಾಸಗೈಯುತ್ತಿರುವುದು ಕೇಳಿಬರುತ್ತಿದೆಯಲ್ಲಾ? ನಾವಲ್ಲಿ ಹೋದ ಕೂಡಲೆ ನಿನ್ನ ರಣ ಕೌಶಲದಿಂದ ಅವರೆಲ್ಲರ ಸೊಕ್ಕಡಗಿಸಿಬಿಡು. ನಮ್ಮ ಗೋವುಗಳನ್ನು ಬಿಡಿಸಿಕೊಂಡು ಹೋಗೋಣ” ಎಂದನು.

ಈಗ ಉತ್ತರಕುಮಾರ ತನ್ನ ಜಂಭವನ್ನೆಲ್ಲಾ ಬಿಟ್ಟು, ವಾಸ್ತವ ಸತ್ಯ ಅರಿತು “ಹೇ! ಬ್ರಹನ್ನಳಾ! ಏನಿದು ಮರುಳಾಟವೆ? ಸಾಗರದಂತಿರುವ ಈ ಸೇನೆ ಹೊಡೆಯುವ ಬಾಣಗಳನ್ನು ನಾನು ಏಕಾಂಗಿಯಾಗಿ ತಡೆದು ನಿಲ್ಲಲಾದೀತೇ? ಕ್ಷಣಾರ್ಧದಲ್ಲಿ ಆ ಕಡೆಯಿಂದ ಬರುವ ಶರಗಳ ಸುರಿಮಳೆಗೆ ನಾವು ಚುಚ್ಚಿಸಿಕೊಂಡು ಕೊಚ್ಚಿ ಹೋದೇವು. ನಮ್ಮಿಂದಾಗಬಹುದಾದ ಸಾಹಸವಲ್ಲ ಇದು. ನಮಗೆ ಗೋವುಗಳೂ ಬೇಡ. ಅವರು ಒಯ್ಯುವವರಾದರೆ ಒಯ್ಯಲಿ, ಸದ್ಯಕ್ಕೆ ಬದುಕಿದರಷ್ಟೆ ನಮಗೆ ಸಾಕು. ಒಮ್ಮೆ ಅರಮನೆ ಸೇರೋಣ, ನಡೆ ಹಿಂದಕ್ಕೆ” ಎಂದು ಆರ್ತನಾಗಿ ಬೇಡಿಕೊಳ್ಳತೊಡಗಿದನು. “ಹೇ! ವೀರ ಕುಮಾರಾ! ಕ್ಷತ್ರಿಯನಾದವ ಗೆದ್ದರೆ ಸಾಮ್ರಾಜ್ಯ ಆಳಬಹುದು. ರಣಧಾರುಣಿಯಲ್ಲಿ ಸತ್ತರೆ, ಪರಮೋಚ್ಚ ವೀರಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಇವೆರಡೂ ಉತ್ಕೃಷ್ಟವಾದುದು. ಹೆದರಿ ಹೇಡಿಯಾಗಿ ಓಡಿದರೆ ಕಡುನರಕ ಪ್ರಾಪ್ತವಾಗುತ್ತದೆ. ಕ್ಷತ್ರಿಯನಿಗೆ ಶೌರ್ಯದ ಹೋರಾಟವೆ ಭೂಷಣ – ಕೀರ್ತಿಪ್ರದವೂ ಆಗಿದೆ. ಹೆದರದಿರು” ಎನ್ನುತ್ತಾ ಬ್ರಹನ್ನಳೆ ರಥ ಮುಂದಕ್ಕೆ ಓಡಿಸತೊಡಗಿದನು. ಉತ್ತರಕುಮಾರ ಹೆದರಿ, ಇನ್ನು ನಿಂತರೆ ಸಾವೇ ಗತಿ. ಈ ಬ್ರಹನ್ನಳೆ ಯಾರೋ ನನ್ನ ಪೂರ್ವ ಜನ್ಮದ ವೈರಿಯಾಗಿರಬೇಕು. ಬಲಿಕೊಡಲು ನನ್ನನ್ನು ಎಳೆದೊಯ್ಯವಂತೆ ಭಾಸವಾಗುತ್ತಿದೆ. ಬದುಕಬೇಕಾದರೆ ನಾನೇ ದಾರಿ ಹುಡುಕಬೇಕೆಂದು, ರಥದಿಂದ ಹಾರಿ ಹಿಂದಕ್ಕೆ ಓಡತೊಡಗಿದ. ಕೂಡಲೆ ರಥ ನಿಲ್ಲಿಸಿದ ಬ್ರಹನ್ನಳೆ, ಹಾರಿ ಓಡುತ್ತಿದ್ದ ಉತ್ತರಕುಮಾರನ್ನು ಹಿಡಿದು ಬಿಟ್ಟಳು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page