24.5 C
Udupi
Friday, August 15, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 261

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೯೨ ಮಹಾಭಾರತ

ವಿದುರ ಉಚಿತಾಸನದ ಮೇಲೆ ರತ್ನಗಂಬಳಿ ಹಾಸಿ ಶ್ರೀ ಕೃಷ್ಣನನ್ನು ಕುಳಿತುಕೊಳ್ಳುವಂತೆ ಪ್ರಾರ್ಥಿಸಿದನು. “ಕೃಷ್ಣಾ! ಮಾನವನಾಗಿ ನಾನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಂಚಯಿಸಿಕೊಳ್ಳಬೇಕಾದವನು. ಅದಕ್ಕಾಗಿ ಬದುಕಿ ಜೀವನ ಸಾಗಿಸಬೇಕಾದವನು. ಇಂತಹ ಹುಲು ಮನುಜನ ಮನೆ ಬಾಗಿಲಿಗೆ ನೀನಾಗಿ ಬಂದಿರುವೆ ಎಂದರೆ ನನಗಿಂತ ಭಾಗ್ಯಶಾಲಿ ಯಾರಿದ್ದಾರೆ ಈ ಜಗದಲ್ಲಿ? ನಿನ್ನ ದರ್ಶನಕ್ಕಾಗಿ ಸುದೀರ್ಘ ತಪಸ್ಸನ್ನಾಚರಿಸಿದರೂ ಕಾಣುವುದು ಸುಲಭ ಸಾಧ್ಯವಲ್ಲ. ಹಾಗಿರಲು ಪಾಮರನಾದ ನನ್ನ ಮನ ಮನೆ ಎರಡನ್ನೂ ಪಾವನಗೊಳಿಸಿದೆ. ಪ್ರಭೋ ಸರ್ವ ಶಕ್ತನೂ, ಲೀಲಾತಿಶಯಗಳನ್ನು ಬಾಲ್ಯದಿಂದಲೆ ತೋರುತ್ತಾ ಬಂದಿರುವೆ. ನಿನ್ನ ಪಾದ ಪೂಜೆ ಮಾಡುವ ಸೌಭಾಗ್ಯ ನನಗೊದಗಿದೆ. ವಾಸುದೇವಾ! ಯಮುನಾ ತೀರದಲ್ಲಿ ಕಾಳಿಂಗನ ಹೆಡೆಯ ಮೇಲೆ ನಲಿದು ಕುಣಿದ ಪಾದಗಳಿವು. ಶಕಟ ಧೇನುಕಾದಿ ರಕ್ಕಸರನ್ನು ಕುಟ್ಟಿ ಕೆಡಹಿದ ಚರಣಗಳಲ್ಲವೆ ಇದು. ಮಹಾಕಾವ್ಯ ಕಥನದಿಂದ ನಿನ್ನ ಲೀಲೆಗಳನ್ನು ತಿಳಿದಿದ್ದೇನೆ. ನಾರಾಯಣಾ! ಮುನಿಸತಿಗೆ ಸ್ಪರ್ಶ ಮಾತ್ರದಿಂದ ಶಾಪ ವಿಮೋಚನೆಯಿತ್ತ ದಿವ್ಯ ಪಾದ ಪದ್ಮಗಳಲ್ಲವೆ ಇದು. ಆದಿ ಅಂತ್ಯ ರಹಿತನೆ ನಿನ್ನ ಮಹಿಮಾತಿಶಯಗಳನ್ನು ಬಣ್ಣಿಸಿ ಹೇಳಲು ನನ್ನಿಂದ ಸಾಧ್ಯವೇ ಹೇಳು ದೇವಾ? ಅಂತಹ ದಿವ್ಯ ಮೃದು ಪಾದಗಳನ್ನು ತೊಳೆದು ನನ್ನ ಕರ್ಮಗಳು ಶುದ್ದವಾದಂತೆ ಆಗುತ್ತಿದೆ. ಧನ್ಯನಾದೆ! ಪರಮಾತ್ಮಾ.. ಧನ್ಯನಾದೆ!. ಕರುಣೆ ತೋರಿದೆಯಲ್ಲಾ ಈ ವಿದುರನ ಮೇಲೆ, ಹೇಗೆ ಕೃತಜ್ಞತೆ ಸಲ್ಲಿಸಲಿ ದೇವಾ? ತನ್ನ ಸತಿ ಪಾರಸವಿಯನ್ನು ಬಳಿ ಕರೆದನು ವಿದುರ. ಸತಿ ಪತಿಗಳು ಜೊತೆಯಾಗಿ ಪಾದ ಪೂಜೆಗೈದು ದಿವ್ಯೋದಕವನ್ನು ಪುಣ್ಯ ತೀರ್ಥವಾಗಿ ಸೇವಿಸಿದರು. ತನುವಿಗೂ ಪ್ರೋಕ್ಷಿಸಿಕೊಂಡು ತನು ಮನ ಶುದ್ಧಿಗೊಳಿಸೆದೆವೆಂದು ಕೊಂಡರು. ತನ್ನ ಉತ್ತರೀಯದಿಂದ ಕೃಷ್ಣನ ಪಾದದ ಒದ್ದೆಯನ್ನು ಒರೆಸಿದನು. ಗಂಧ ಪುಷ್ಪಾಕ್ಷತೆಗಳನ್ನಿಟ್ಟು ಅರ್ಚಿಸಿ, ದೀಪ ಧೂಪಗಳನ್ನೆತ್ತಿ ಪೂಜಿಸಿದನು. ಸತಿ ಪಾರಸವಿಯತ್ತ ತಿರುಗಿ ನಿತ್ಯ ಪೂಜೆಯ ಹೊತ್ತು ದೇವರಿಗೆ ಕ್ಷೀರ ಸಮರ್ಪಿಸುವ ಪಾತ್ರೆಯಲ್ಲಿ ಹಿತೋಷ್ಣವೂ, ಸವಿಯೂ ಆದ ಗೋವಿನ ಹಾಲು ತರಲು ಹೇಳಿ ಭಗವಂತನಿಗಿತ್ತನು. “ಭಗವಂತಾ! ಜಗದ ಪಾಲಕ ನೀನು, ಈಗ ಗೋಪಾಲಕನಾಗಿ ಜನ್ಮವೆತ್ತಿ ಬಂದಿರುವೆ. ಗೋಮಾತೆಯ ಶ್ರೇಷ್ಟತೆಯನ್ನು ನಾನು ಹೇಳಿ ನಿನಗೆ ತಿಳಿಯಬೇಕಾಗಿಲ್ಲ. ಅಮೃತ ಸದೃಶವಾದ ಈ ಕ್ಷೀರವನ್ನು ಮಹಾ ನೈವೇದ್ಯವಾಗಿ ಸ್ವೀಕರಿಸಬೇಕು. ದೇವಾ! ಹಸ್ತಿನೆಯ ಮಂತ್ರಿಯಾಗಿ ಪುರದ ಔನ್ನತ್ಯ ಬಯಸಿ ಮಂತ್ರಾಲೋಚನೆಯಿಂದ ಹಿತ ಕಾಯುವ ಮಹಾಮಂತ್ರಿ ಸ್ಥಾನ ನನ್ನದು. ಯಾವ ದಿನ ನಡೆಯಬಾರದ ಘೋರ ಅಪರಾಧ ಹಸ್ತಿನೆಯಲ್ಲಿ, ಅದೂ ನನ್ನ ಉಪಸ್ಥಿತಿಯಲ್ಲಿ ನಡೆಯಿತೋ, ಕುಲವಧು ಪಾಂಚಾಲೆಯ ಸೆರಗಿಗೆ ಕೈಯಿಕ್ಕುವ ಅಕ್ಷಮ್ಯ ಅನ್ಯಾಯ, ಅಧರ್ಮ ಕೃತ್ಯ ನಡೆಯಿತೋ ಆ ಕಹಿ ಘಟನೆಯ ಕ್ಷಣದಿಂದ ಸಿಹಿಯಾಗಲಿ ಸವಿಯಾಗಲಿ ನಮ್ಮ ಬದುಕಿನಿಂದ ಮರೆಯಾಗಿದೆ. ತಿನ್ನುವ ಆಹಾರ್ಯದಲ್ಲಿ ಆ ರುಚಿ ಕಳೆದುಕೊಂಡಿದ್ದೇವೆ. ಉಪಾಂಶು ವೃತಸ್ಥನಾಗಿ, ಪಾಪ ಕೃತ್ಯಕ್ಕೆ ಸಾಕ್ಷಿಯಾಗಿ ತಡೆಯಲಾಗದ ಅಸಹಾಯಕತೆಗೆ ಹೀಗೆಯೆ ಬದುಕುತ್ತಿದ್ದೇವೆ. ದೇವರೆ ನೀನು ನಮ್ಮ ಮನೆಗೆ ಬರುವ ಪುಣ್ಯ ಪರ್ವ ಕ್ಷಣ ನನ್ನ ಬದುಕಿನಲ್ಲಿದೆ ಎಂದು ಕನಸು ಮನಸಿನಲ್ಲಿ ಕನಿಷ್ಟ ಕಲ್ಪನೆಯನ್ನೂ ಮಾಡಿರಲಿಲ್ಲ. ಈ ಕ್ಷೀರದಲ್ಲಿ ಶುದ್ಧಾಂತಕರಣದ ಭಕ್ತಿಯನ್ನು ತುಂಬಿ ಸಮರ್ಪಿಸುತ್ತಿದ್ದೇವೆ. ಪ್ರೀತಿಯಿಂದ ಸ್ವೀಕರಿಸಿ ಸಂತುಷ್ಟನಾಗಬೇಕು” ಎಂದು ಸಂಪ್ರಾರ್ಥಿಸಿ ಅರ್ಪಣಾಭಾವದಿಂದ ನೀಡಿದನು. ಕೃಷ್ಣನೂ ಅಷ್ಟೇ ಸಂಪ್ರೀತಿಯಿಂದ ಸ್ವೀಕರಿಸಿ ಉಂಡದ್ದಕ್ಕೆ ಸಾಕ್ಷಿ ಎಂಬಂತೆ ಸಂತೃಪ್ತಿಯ ತೇಗೊಂದನ್ನು ಹೊರ ಹಾಕಿದನು. “ವಿದುರಾ, ನಿನ್ನ ಒಲವಿನಿಂದ ನನ್ನ ಉದರ ತುಂಬಿತು ನೋಡು” ಎಂದು ಕಿರು ನಗೆ ಬೀರಿ, ಎದ್ದು ಬಿಗಿದಪ್ಪಿ ಓಲೈಸಿದನು. ವಿದುರನ ಗಂಟಲು ನಿರ್ಬಂಧಿತವಾಗಿದೆ – ಗದ್ಗದಿತವಾಗಿದೆ. ಮಾತುಗಳು ಹೊರ ಬಾರದಷ್ಟು ಕಂಪಿಸುತ್ತಿದೆ. ತಡವರಿಸುತ್ತಾ “ದೇವಾ! ನಿನ್ನ ಕರುಣಾ ಲೀಲೆಯಿಂದ ಕೃತಾರ್ಥನಾದೆ. ಇನ್ನೇನು ಹೇಳಲು ಉಳಿದಿದೆ ಎನಗೆ” ಎಂದು ತೊದಲುತ್ತಾ ನುಡಿದನು.

ಹಾಗೆಯೆ ಕೆಲ ಹೊತ್ತು ಮಾತನಾಡುತ್ತಾ ಕುಳಿತರು. ಬಹಳಷ್ಟು ವಿಷಯ ಚರ್ಚಿಸಿದರು. ತನ್ನ ಅತ್ತೆಯ ನೆನಪಾಗಿ ಶ್ರೀ ಕೃಷ್ಣ ಪಾಂಡವರ ಮಾತೆ ಕುಂತಿದೇವಿಯ ಬಳಿಗೆ ಹೋಗಿ ನಮಸ್ಕರಿಸಿದನು. ಕುಂತಿ ಪ್ರೀತ್ಯಾದರಗಳಿಂದ ಸತ್ಕರಿಸಿದಳು. ಕ್ಷಣ ಕಾಲ ಮೈಮರೆತು ಏನೂ ಮಾತನಾಡಲಾಗದೆ ಹಾಗೆಯೆ ಉಳಿದು ಹೋದಳು. ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಸ್ವಯಂ ಸಂತೈಸುತ್ತಾ, ಒತ್ತಿ ಅಡರಿ ಬಂದ ಕಣ್ಣೀರನ್ನು ಒರೆಸಿಕೊಂಡಳು. “ರಾಜಸೂಯ ಯಾಗದ ಸಮಯ ನಿನ್ನನ್ನು ನೋಡಿದ್ದೆ ಕೃಷ್ಣಾ, ಮತ್ತೆ ಕಾಣುವ ಅವಕಾಶ ಒದಗಿರಲಿಲ್ಲ. ದ್ವಾರಕೆಯಲ್ಲಿ ಎಲ್ಲರೂ ಕ್ಷೇಮ ತಾನೆ? ವಸುದೇವ ದೇವಕಿಯರು ಹೇಗಿದ್ದಾರೆ? ನಿನ್ನವರೆಲ್ಲಾ ಹೇಗಿರುವರು? ಎಂದು ಒಂದೆ ಉಸಿರಿನಲ್ಲಿ ಪ್ರಶ್ನಿಸಿದಳು. ” ಅತ್ತೆ, ಎಲ್ಲರೂ ಕ್ಷೇಮವಾಗಿದ್ದಾರೆ. ನಿನ್ನ ಮಕ್ಕಳು ಪಾಂಡವರು, ದ್ರೌಪದಿಯೂ ಸುಖವಾಗಿದ್ದಾರೆ. ಈಗ ಮತ್ಸ್ಯದೇಶದ ಪ್ರಾಂತ ಉಪಪ್ಲಾವ್ಯದಲ್ಲಿದ್ದಾರೆ. ನಿನ್ನ ಮಕ್ಕಳು ಅವರ ಸೌಖ್ಯ ವಿಚಾರ ತಿಳಿಸಿ, ನಿನ್ನನ್ನು ಕೇಳಿದ್ದೇವೆಂದು ತಿಳಿಸಲು ಹೇಳಿದ್ದಾರೆ” ಎಂದನು. ಈ ಮಾತು ಕೇಳುತ್ತಿದ್ದಂತೆ ಕುಂತಿಗೆ ತಡೆದುಕೊಳ್ಳಲಾಗಲಿಲ್ಲ. ಅತ್ತೆ ಅತ್ತು ಬಿಟ್ಟಳು. ಕೃಷ್ಣನೂ ಸುಮ್ಮನಿದ್ದು ಒಮ್ಮೆ ಮನದ ದುಗುಡ ಕಣ್ಣೀರಾಗಿ ಹರಿದು ಹೋಗಲಿ ಎಂದು ಏನೂ ಮಾತನಾಡದೆ ನಿಂತನು. “ಕೃಷ್ಣಾ! ನನ್ನ ಮಕ್ಕಳಿಗೆ ಕಷ್ಟ ಬಹಳಷ್ಟು ಬಂದಿರಬಹುದು, ಆದರೆ ಧರ್ಮಮಾರ್ಗ ಅನುಸರಿಸಿ ಬದುಕಿರುವರಲ್ಲಾ?” ಎಂದು ಕೇಳಿದಳು.

ಇಂತಹ ಮಾತೆಯ ಮಕ್ಕಳು ಧರ್ಮ ತಪ್ಪಿ ನಡೆಯಲು ಸಾಧ್ಯವೆ? ಮಕ್ಕಳಿಗೆ ಕಷ್ಟ ಬರಬಾರದು ಎಂದು ಬಯಸುವುದು ಜಗದ ಎಲ್ಲಾ ತಾಯಂದಿರ ಸಾಮಾನ್ಯ ಅಪೇಕ್ಷೆ. ಆದರೆ ಕುಂತಿಯಂತೆ, ತನ್ನ ಮಕ್ಕಳಿಗೆ ಎಷ್ಟು ಕಷ್ಟ ಬರಲಿ, ಧರ್ಮವನ್ನು ಬಿಡಲಿಲ್ಲವಲ್ಲ ಎಂದು ಕೇಳುವ ಧರ್ಮಾತ್ಮಳು ಸಿಗುವುದು ಕಷ್ಟ ಸಾಧ್ಯವೆ ಹೌದು. ಹೀಗೆ ತರ್ಕಿಸುತ್ತಾ ಕೃಷ್ಣನ ಮನದಾಳದಿಂದ ನಿಜ ಸಂತುಷ್ಟತತೆಯ ನಗು ಉಕ್ಕೇರಿ, ತುಟಿಯಂಚಲ್ಲಿ ಮಿಂಚಿತು. “ಅತ್ತೆ, ನಿನ್ನ ಮಕ್ಕಳು ಜೀವವನ್ನಾದರೂ ಬಿಟ್ಟಾರು, ಆದರೆ ಧರ್ಮ ಬಿಡಲಾರರು. ಆ ಬಗ್ಗೆ ಚಿಂತಿಸಬೇಡ. ವನವಾಸ – ಅಜ್ಞಾತವಾಸ ನಿನ್ನ ಮಕ್ಕಳಿಗೆ ಶಿಕ್ಷೆಯಾಗಲಿಲ್ಲ. ಸಾಧನೆಯ ಶಿಖರವೇರಿ ಬಹಳಷ್ಟು ಸಂಪಾದಿಸಿ ಅಜೇಯರಾಗಿ ಬಂದಿದ್ದಾರೆ. ವನವಾಸ ಕಾಲದಲ್ಲಿ ತಪೋ ನಿಧಿಗಳು, ಮಹಿಮಾನ್ವಿತರೂ ಆದ ಮಹರ್ಷಿಗಳ ಸಾಂಗತ್ಯದಲ್ಲಿ ಕಾಲ ಕಳೆದರು. ಊಟೋಪಚಾರಕ್ಕಾಗಿ ಸೂರ್ಯ ನಾರಾಯಣ ದೇವರ ಪ್ರಸಾದವಾಗಿ ಅಕ್ಷಯ ಪಾತ್ರೆ ಒದಗಿತ್ತು. ಅರ್ಜುನನೂ ಅಧಮ್ಯ ಸಾಧನೆಯನ್ನು ಮಾಡಿದ್ದಾನೆ. ಪರಶಿವನನ್ನು ಮೆಚ್ಚಿಸಿ ಪಾಶುಪತವನ್ನು ಪಡೆದಿದ್ದಾನೆ. ಗೌರಿ, ಗಣೇಶ, ಕಾರ್ತಿಕೇಯ ಸಹಿತ ಶಿವಗಣಗಳಿಂದಲೂ ಅನುಗ್ರಹಿತನಾಗಿ ದಿವ್ಯಾಸ್ತ್ರಗಳನ್ನು ಪಡೆದುಕೊಂಡಿದ್ದಾನೆ. ಸಶರೀರಿಯಾಗಿ ದೇವಲೋಕ ಏರಿ ಕಾಲಕೇಯ ನಿವಾತ ಕವಚಾದಿ ರಾಕ್ಷಸರನ್ನು ನಿಗ್ರಹಿಸಿ ಇಂದ್ರನಿಗೆ ಸಹಾಯಿಯಾಗಿ ಕಿರೀಟಿ ಎಂದು ಸನ್ಮಾನಿತನಾಗಿದ್ದಾನೆ. ಅಷ್ಟ ದಿಕ್ಪಾಲಕರ ದಿವ್ಯಾಸ್ತ್ರಗಳು ಸಂಚಯವಾಗಿದೆ. ಭೀಮನದ್ದೂ ಪ್ರತ್ಯೇಕ ಸಾಧನೆಯಿದೆ – ರಾಮದಾಸ ಹನುಮನನ್ನು ಒಲಿಸಿ ಅರ್ಜುನನ ರಥದ ಧ್ವಜದಲ್ಲಿ ಸಾನಿಧ್ಯಗೊಳ್ಳಲು ಬೇಡಿ ಒಲಿಸಿಕೊಂಡಿದ್ದಾನೆ. ಈ ಮಧ್ಯೆ ಭೀಮ ಹಲವು ರಕ್ಕಸರನ್ನು ವಧಿಸಿದ್ದಾನೆ. ಧರ್ಮರಾಯನ ಅದ್ಬುತ ಧರ್ಮಜ್ಞಾನದಿಂದ ಯಮದೇವನ ಜೊತೆ ಧರ್ಮ ಜಿಜ್ಞಾಸೆಯಲ್ಲಿ ತೊಡಗಿ ಸದುತ್ತರಗಳನ್ನು ನೀಡಿ ವರಬಲಾನ್ವಿತನಾಗಿದ್ದಾನೆ. ಇದಕ್ಕೂ ಮೊದಲು ಶಾಪಗ್ರಸ್ಥ ನಹುಷೇಂದ್ರನಿಗೆ ಧರ್ಮ ಜಿಜ್ಞಾಸೆಯಿಂದ ವಿಮೋಚನೆಯಿತ್ತು ಇಂದ್ರಪದವಿಗೆ ಸಮತುಲ್ಯ ಯೋಗ್ಯತೆ ಯುಧಿಷ್ಟಿರ ತೋರಿದ್ದಾನೆ. ಘೋಷ ಯಾತ್ರೆಯ ನೆಪದಲ್ಲಿ ವನವಾಸದಲ್ಲಿದ್ದ ಪಾಂಡವರೆಡೆ ಸಂಪತ್ತಿನ ಪ್ರದರ್ಶನಗೈಯಲು ಹೋಗಿ ಗಂಧರ್ವರ ಕೈಯಲ್ಲಿ ಸಿಲುಕಿದ ಕೌರವನನ್ನು ನಿನ್ನ ಮಕ್ಕಳಾದ ಭೀಮಾರ್ಜುನರು ಬಿಡಿಸಿ ಪ್ರಾಣ ದಾನ ಒದಗಿಸಿದ ವಿಚಾರ ನಿನಗೆ ತಿಳಿದಿರಬಹುದು. ಅಜ್ಞಾತವಾಸದಲ್ಲಿ ಭೀಮ ಕೀಚಕಾದಿಗಳನ್ನು ಕೊಂದು ಕೆಡಹಿ ಸಾಹಸ ಮೆರೆದಿದ್ದಾನೆ. ಗೋಗ್ರಹಣದ ನೆಪದಲ್ಲಿ ಹೋದ ಪೂರ್ಣ ಪ್ರಮಾಣದ ಕುರು ಸೇನೆಗೆ ಏಕಾಂಗಿ ಅರ್ಜುನನಿಂದ ಒದಗಿದ ಸ್ಥಿತಿ ನಿನಗೆ ತಿಳಿದಿದೆ ತಾನೆ? ಇದೆಲ್ಲಾ ಕಳೆದು ಮತ್ಸ್ಯದೇಶದ ವಿರಾಟನ ಪುತ್ರಿ ಉತ್ತರೆಗೂ ನಿನ್ನ ಮೊಮ್ಮಗ ಅಭಿಮನ್ಯುವಿಗೂ ಉಪಪ್ಲಾವ್ಯದಲ್ಲಿ ವಿವಾಹವಾಯಿತು. ಅಸಹಾಯಕ ಸ್ಥಿತಿಯಲ್ಲಿ ನಿನ್ನನ್ನು ಕರೆಸಲಾಗದೆ ನಿನ್ನ ಪುತ್ರರು ಬಹಳಷ್ಟು ನೊಂದಿದ್ದರು. ಈಗ ದ್ರುಪದ ವಿರಾಟಾದಿಗಳ ಸಖ್ಯದಲ್ಲಿ ಏಳು ಅಕ್ಷೋಹಿಣಿ ಸೇನೆ ನಿನ್ನ ಮಕ್ಕಳ ಪಕ್ಷದಲ್ಲಿದೆ. ಸಕಲ ಸಮರ ಸಿದ್ದತೆಗಳು ನಡೆಯುತ್ತಿವೆ. ನಾನು ಅರ್ಜುನನಿಗೆ ಸಾರಥ್ಯ ವಹಿಸಲು ಒಪ್ಪಿದ್ದೇನೆ. ಯುದ್ದವಾದರೆ ಧರ್ಮದ ಪಕ್ಷದಲ್ಲಿರುವ ನಿನ್ನ ಮಕ್ಕಳನ್ನು ಧರ್ಮವೇ ರಕ್ಷಿಸಿ ಗೆಲುವನ್ನು ಒದಗಿಸುತ್ತದೆ. ಲೋಕ ಅಪವಾದ ಬರಬಾರದು ಎಂಬ ಕಾರಣದಿಂದ ಸಂಧಾನ ಪ್ರಕ್ರಿಯೆಗಳು ನಡೆದಿವೆ. ಕೊನೆಯ ಪ್ರಯತ್ನವಾಗಿ ನಾನೀಗ ರಾಯಭಾರಿಯಾಗಿ ಬಂದಿದ್ದೇನೆ. ಸಂಧಿಗಾಗಿ ಪ್ರಯತ್ನಿಸುವುದು ಧರ್ಮ. ಆದರೆ ಈ ಕೌರವರು ಸಾಮವನ್ನು ಒಪ್ಪುವವರಲ್ಲ, ಪರಿಣಾಮದಲ್ಲಿ ಸಂಗ್ರಾಮ ನಡೆಯಲಿದೆ. ಹಾಗಾದಾಗ ಸಮರ ಗೆದ್ದು ನಿನ್ನ ಮಕ್ಕಳು ಸಾಮ್ರಾಟರಾಗುತ್ತಾರೆ” ಎಂದು ಭೂತ – ವರ್ತಮಾನ – ಭವಿಷ್ಯತ್ತಿನ ಸಮಗ್ರ ಕಥನವನ್ನು ಕೃಷ್ಣ ಪರಮಾತ್ಮ ಹೇಳಿದನು.

“ಧರ್ಮ ಗೆಲ್ಲಲಿ ಕೃಷ್ಣಾ” ಎಂದು ನುಡಿದು ಸ್ವಾರಸ್ಯವು ಶ್ರೇಷ್ಟವೂ ಆದ ಕಥೆಯೊಂದನ್ನು ಕುಂತಿ ಹೇಳಲಾರಂಭಿಸಿದಳು.

ಮುಂದುವರಿಯುವುದು…

spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page