24.8 C
Udupi
Thursday, July 31, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 263

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೬೪ ಮಹಾಭಾರತ

ಓಡಿಹೋಗುತ್ತಿದ್ದ ಉತ್ತರಕುಮಾರನನ್ನು ಕೊರಳಲ್ಲಿ ಹಿಡಿದೆತ್ತಿ ನಿಲ್ಲಿಸಿದನು. “ಓಡುವುದೆಲ್ಲಿಗೆ ರಣ ಹೇಡಿ? ಕ್ಷತ್ರಿಯ ಕುಲಕ್ಕೇ ಕಳಂಕ ಸದೃಶನಾಗಿ ವ್ಯವಹರಿಸಲು ನಾಚಿಗೆಯಾಗುವುದಿಲ್ಲವೆ ನಿನಗೆ?” ಎಂದು ಗದರಿದ.

“ಅಯ್ಯಾ! ಬ್ರಹನ್ನಳೆ, ಮುಂದೊತ್ತಿ ಹೋದರೆ ಹೀನಾಯ ಕುರು ಸೇನೆಯ ಕೈಯಿಂದ ಮರಣ ನಿಶ್ಚಿತ. ಚಿತ್ರಹಿಂಸೆಯ ಆ ಹೀನಾಯ ಸ್ಥಿತಿಯನ್ನು ಗ್ರಹಿಸುವ ಶಕ್ತಿಯೂ ನನಗಿಲ್ಲ. ಒಂದೊ ನನ್ನನ್ನು ನಿನ್ನ ಮಗನೆಂದು ತಿಳಿದು ಅರಮನೆಗೆ ಕರೆದೊಯ್ದು ರಕ್ಷಿಸು. ಅದು ಇಷ್ಟವಿಲ್ಲದಿದ್ದರೆ ಇದೊ ನನ್ನ ಕಠಾರಿ, ಒಂದೇ ಏಟಿಗೆ ನನ್ನ ಶಿರಚ್ಛೇದನ ಮಾಡಿ ಕೊಂದು ಬಿಡು” ಎಂದು ಪಾದಗಳನ್ನು ಹಿಡಿದು ಬೊಬ್ಬಿರಿದು ಅಳುತ್ತಾ ಬೇಡತೊಡಗಿದನು ವಿರಾಟ ಪುತ್ರ.

ಅರ್ಜುನನ ಮನ ಕರಗಿತು, ತನ್ನ ಸುತನ ಪ್ರಾಯದ ಬಾಲಕನನ್ನು ಹಿಡಿದೆತ್ತಿ ನಿಲ್ಲಿಸಿ ಬಿಗಿದಪ್ಪಿದನಿ. “ಭಯಪಡಬೇಡ ಕಂದಾ! ನಾನೇ ಯುದ್ದ ಮಾಡಿ ಶತ್ರುಗಳ ಸಂಹಾರ ಮಾಡುವೆ. ನೀನು ನನಗೆ ಸಾರಥಿಯಾಗಿ ಸಹಕರಿಸಿದರೆ ಸಾಕು” ಎಂದನು. ಉತ್ತರನಿಗೆ ಸಾರಥ್ಯದ ಪೀಠವೇರಲೂ ಮನಸ್ಸಿಲ್ಲ. ಅರ್ಜುನ ಬಲಾತ್ಕರಿಸಿ ಒತ್ತಾಯಿಸಿ ಗದರಿದಾಗ ಅನ್ಯಥಾ ಮಾರ್ಗವಿಲ್ಲದೆ ಒಪ್ಪಿಕೊಂಡು ರಥವೇರಿದನು. ಬ್ರಹನ್ನಳೆಯ ಸೂಚನೆಯಂತೆ ರಥ ನಡೆಸಿ ಹುಲ್ಲುಗಾವಲಿನ ಪಾರ್ಶ್ವದಲ್ಲಿದ್ದ ಸ್ಮಶಾನದತ್ತ ರಥ ತಂದು ಒಂದು ಶಮೀ ವೃಕ್ಷದ ಬುಡದಲ್ಲಿ ನಿಲ್ಲಿಸಿದನು.

ಬ್ರಹನ್ನಳಾ ರೂಪದಲ್ಲಿದ್ದ ಅರ್ಜುನ, “ಕುಮಾರಾ! ಈ ಮರದ ಕೊಂಬೆಯಲ್ಲಿ ಒಂದು ಶವದಾಕೃತಿ ಕಾಣುತ್ತಿದ್ದೆಯೇ? ಅದು ಆಯುಧಗಳ ಕಟ್ಟು. ಮರವೇರಿ ಅದನ್ನು ಬಿಚ್ಚಿ, ಅದರಿಂದ ಒಂದು ದಿವ್ಯ ಧನುಸ್ಸನ್ನೂ, ಬತ್ತಳಿಕೆಯನ್ನು ತೆಗೆದು ಕೊಡು. ಮತ್ತೆ ಉಳಿದ ಆಯುಧಗಳನ್ನು ಹಾಗೆಯೇ ಕಟ್ಟಿ ಅಲ್ಲೇ ಇಡು” ಎಂದನು. ಉತ್ತರ ಕುಮಾರ ಮರವೇರಲೂ ಸಿದ್ಧನಿಲ್ಲ, ಅಳುತ್ತಾ, ಹೆದರಿ ಮತ್ತೆ ಬೊಬ್ಬಿಡತೊಡಗಿದನು. ಅರ್ಜುನ ಅವನನ್ನು ಬಿಡದೆ ಮರವೇರಿಸಿದ. ಆಯುಧದ ಕಟ್ಟು ಬಿಚ್ಚಿ ಆಯುಧ ತೆಗೆಯಲೆಂದು ಮುಟ್ಟಿದಾಗ ಅಗ್ನಿ ಜ್ವಾಲೆಯಾಗಿ ಧಗ್ಗನೆ ಹತ್ತಿಕೊಂಡಿತು. ಉತ್ತರಕುಮಾರ ಹೆದರಿ ಹೌಹಾರಿದ. ಇದನ್ನು ಕಂಡ ಅರ್ಜುನ, “ಕಂದಾ! ಅಂಜದಿರು, ಮಧ್ಯಮ ಪಾಂಡವ ಅರ್ಜುನನ ದಶನಾಮಗಳಾದ ಕಿರೀಟಿ, ಗುಡಾಕೇಶ, (ಗುಡಾಕ ಎಂದರೆ ನಿದ್ರೆ. ಈಶ = ಯಜಮಾನ. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನೆಂದರ್ಥ.) ಜಿಷ್ಣು, ಧನಂಜಯ, ಪಾರ್ಥ, ಫಾಲ್ಗುಣ, ವಿಜಯ, ಭೀಭತ್ಸು, ಸವ್ಯಸಾಚಿ (ಯಾರು ತಮ್ಮ ಎರಡೂ ಕೈಗಳಿಂದ ಅದಲು ಬದಲಾಗಿ – ಧನುರ್ಭಾಣಗಳನ್ನು ಹಿಡಿದು ಸಮಾನ ಕ್ಷಮತೆಯಿಂದ ಪ್ರಯೋಗಿಸಬಲ್ಲರೋ ಅವರು ಸವ್ಯಸಾಚಿ) ಈ ನಾಮಗಳನ್ನು ಉಚ್ಚರಿಸುತ್ತಾ ಕಟ್ಟು ಬಿಚ್ಚಿ ನೋಡು. ಆಗ ಅಗ್ನಿ ಶಾಂತನಾಗುತ್ತಾನೆ” ಎಂದು ಮಾರ್ಗದರ್ಶನ ಮಾಡಿದ. ಅಂತೆಯೆ ಉತ್ತರ ಕುಮಾರ ಕೊಂಬೆಯಲ್ಲಿ ಕುಳಿತು ಕಟ್ಟನ್ನು ಬಿಚ್ಚಿ ಎತ್ತಲು ನೋಡಿದರೆ ಅಯ್ಯೋ ಏನಿದು ಭೂಮಿ ತೂಕವಿದೆ. ಎತ್ತುವುದು ಬಿಡಿ, ಅಲುಗಾಡಿಸಲೂ ಆಗುತ್ತಿಲ್ಲ. “ಉತ್ತರ ಕುಮಾರಾ! ಪಂಚ ಪಾಂಡವರಾದ ಧರ್ಮರಾಯ, ಭೀಮ, ಅರ್ಜುನ, ನಕುಲ ಸಹದೇವ ನವರ ಹೆಸರು ಹೇಳಿ ಪ್ರಾರ್ಥಿಸು. ಮತ್ತೆ ಎತ್ತಿ ನೋಡು” ಎಂದನು. ಹಾಗೆಯೆ ಮಾಡಿದಾಗ ಹೂವಿನಂತೆ ಹಗುರವಾಯಿತು ಆಯುಧದ ಕಟ್ಟು. ಬಿಚ್ಚಿ ನೋಡಿದರೆ ಪಳಪಳನೆ ಹೊಳೆಯುವ ರತ್ನ ಮಣಿ ಖಚಿತವಾದ ದಿವ್ಯಾಯುಧಗಳು. ನೋಡುವಾಗಲೆ ಇದ್ಯಾವುದೋ ದೇವತೆಗಳ ಆಯುಧಗಳಂತೆ ಕಾಣುತ್ತಿತ್ತು. ಹಂತ ಹಂತವಾಗಿ ಅರ್ಜುನನ ನಿರ್ದೇಶನದಂತೆ ಮಾಡುತ್ತಾ ಗಾಂಡೀವ, ಬತ್ತಳಿಕೆ, ಕಪಿಧ್ವಜವನ್ನು ಹೊರತೆಗೆದು ಅರ್ಜುನನ ಕೈಗಿತ್ತನು. ದಿಗ್ಭ್ರಮೆಗೊಂಡಿದ್ದ ಉತ್ತರ ಕುಮಾರನನ್ನು ಮರದಿಂದಿಳಿಸಿ ಮೈದಡವಿದ ಅರ್ಜುನ.

ಎಚ್ಚೆತ್ತುಕೊಂಡ ಉತ್ತರಕುಮಾರ, ಕನಸು ಕಂಡವನಂತೆ ಕಳವಳಗೊಂಡಿದ್ದಾನೆ. ಮನದಲ್ಲಿ ಸಾವಿರ ಸಂದೇಹಗಳು ಕಾಡತೊಡಗಿದವು. ಕೈ ಮುಗಿದು ಮಂಡಿಯೂರಿ ಕುಳಿತ “ಹೇ ಬ್ರಹನ್ನಳೇ! ನೀನು ನಿಜವಾಗಿಯೂ ಒಬ್ಬ ನಾಟ್ಯಗುರು ಮಾತ್ರ ಆಗಿರಲು ಸಾಧ್ಯವಿಲ್ಲ. ಈ ಆಯುಧಗಳ ಚೀಲದ ಕಟ್ಟನ್ನು ಮುಟ್ಟಲು ಹೋದರೆ ಅಗ್ನಿ ಪ್ರಜ್ವಲಿಸುತ್ತಾ ಜ್ವಾಲಾಕೃತಿಯಲ್ಲಿ ಹಬ್ಬಿತು. ಅರ್ಜುನನ ನಾಮಸ್ಮರಣೆ ಮಾತ್ರದಿಂದ ಶಾಂತವಾಯಿತು. ದಯಮಾಡಿ ನನ್ನ ಮನದ ಸಂದೇಹ ಪರಿಹರಿಸು, ನೀನು ಯಾರು? ಈ ಆಯುಧಗಳು ಯಾರಿಗೆ ಸೇರಿದ್ದು?”

ಬ್ರಹನ್ನಳೆ “ಕುಮಾರಾ! ಈ ಆಯುಧಗಳು ಚಂದ್ರವಂಶೀಯರಾದ ಪಾಂಡವರದ್ದು. ಅರ್ಜುನನ ಅಪ್ಪಣೆಯಿಲ್ಲದೆ ಇವುಗಳನ್ನು ಯಾರೂ ಮುಟ್ಟಲಾಗದು. ಪಾಂಡವರಲ್ಲಿ ಅಗ್ರಜನಾದ ಧರ್ಮರಾಯ ವನವಾಸ ಮುಗಿಸಿ, ಅಜ್ಞಾತವಾಸಿಗಳಾಗುವ ಸಮಯದಲ್ಲಿ, ಆಯುಧಗಳನ್ನಿಲ್ಲಿ ಮರದಲ್ಲಿ ಕಟ್ಟಿಟ್ಟು, ದೇವತೆಗಳಲ್ಲಿ ಪ್ರಾರ್ಥಿಸಿ ರಕ್ಷಣೆ ಬೇಡಿದುದೇ ಹಾಗೆ. ಅರ್ಜುನನ ಅನುಮತಿ ಇಲ್ಲದೆ ಯಾರೂ ನಮ್ಮ ಆಯುಧಗಳನ್ನು ಮುಟ್ಟಕೂಡದು – ಮುಟ್ಟಲಾಗದು. ಅಂತೆಯೆ ಪ್ರಾರ್ಥನೆಯನ್ನು ಮನ್ನಿಸಿರುವ ದೇವತೆಗಳು ರಕ್ಷಕರಾಗಿದ್ದರು. ನೀನು ಮುಟ್ಟಿದಾಗ ಆವೃತವಾಗಿ ಅಗ್ನಿ ಪ್ರಕಟನಾದನು. ಮಧ್ಯಮ ಪಾಂಡವನಾದ ನನ್ನ ದಶನಾಮಗಳ ಪ್ರಾರ್ಥನೆಯಿಂದ ಶಾಂತನಾಗಿ ಅವಕಾಶ ನೀಡಿದ. ಈಗ ಬಂದಿರುವ ಕೌರವ ಸೇನೆ ಕೇವಲ ಗೋವುಗಳನ್ನಷ್ಟೆ ಅಪಹರಿಸುವುದಕ್ಕಾಗಿ ಬಂದಿರುವುದಲ್ಲ. ಪಾಂಡವರು ಇಲ್ಲಿ ಇರಬಹುದೆಂದು ತರ್ಕಿಸಿ, ಅವರನ್ನು ಪತ್ತೆಹಚ್ಚುವುದಕ್ಕಾಗಿ ಬಂದಿದ್ದಾರೆ. ಅದೇ ಕಾರಣದಿಂದ ನಿನ್ನೆ ದಕ್ಷಿಣ, ಇಂದು ಉತ್ತರ ಗೋಗ್ರಹಣವಾಗಿದೆ.” ಎಂದನು.

ವಿರಾಟ ಕುಮಾರನಿಗೆ ಈಗ ಸಂಪೂರ್ಣ ಗೊಂದಲ “ಪಾಂಡವರೇ? ಅವರನ್ನು ಹುಡುಕಲು ನಮ್ಮ ಗೋವುಗಳನ್ನೇಕೆ ಅಪಹರಿಸಬೇಕು? ಪಾಂಡವರು ಮತ್ಸ್ಯದೇಶದಲ್ಲಿದ್ದಾರೆಯೇ? ಇದ್ದರೆ ಎಲ್ಲಿದ್ದಾರೆ?” ಎಂದು ಗಲಿಬಿಲಿಗೊಂಡು ಪ್ರಶ್ನಿಸತೊಡಗಿದನು.

“ವತ್ಸಾ! ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ತಿ ಪಾಂಡವರು ಮತ್ಸ್ಯ ದೇಶದಲ್ಲಿ ಅಜ್ಞಾತರಾಗಿದ್ದರು. ನಿನ್ನ ಪಿತಾಶ್ರೀ ವಿರಾಟರಾಯನ ಸಭಾಸ್ತರನಾಗಿ, ದ್ಯೂತ ಸ್ನೇಹಿತನಾಗಿರುವ ಕಂಕನೇ ಚಕ್ರವರ್ತಿ ಧರ್ಮರಾಯ. ಪಾಕಶಾಲೆಯ ವಲಲನಾಗಿ ಕೀಚಕನನ್ನು ಕೊಂದವ, ಜಗಜಟ್ಟಿಗಳಾದ ಜಿಮೂತಾದಿ ಜಟ್ಟಿಗಳನ್ನು ಮರ್ದಿಸಿದವನು ಭೀಮಸೇನ. ಅಶ್ವ, ಗೋವುಗಳ ಪಾಲಕರಾದ ದಾಮಗ್ರಂಥಿ, ತಂತ್ರಿಪಾಲರೇ ನಕುಲ ಸಹದೇವರು. ರಾಣಿ ಸುದೇಷ್ಣೆಯ ಅಂತಃಪುರದಲ್ಲಿ ಸೈರಂಧ್ರಿ ವೃತ್ತಿಯಲ್ಲಿರುವ ಮಾಲಿನಿಯೇ ದ್ರೌಪದಿ, ಅವಳನ್ನು ಬಯಸಿದ ಕೀಚಕ ತನ್ನ ಸಾವನ್ನು ತಂದುಕೊಂಡನು. ನಾನು ಅರ್ಜುನ. ಹಸ್ತಿನೆಯಲ್ಲಿ ನಡೆದ ರಾಜಕೀಯದ ಕಪಟ ನಾಟಕದ ದ್ಯೂತದಿಂದ ವಿವಶರಾಗಿ, ಕೌರವರ ಮೋಸಕ್ಕೆ ಬಲಿಯಾಗಿ ಸೋತ ನಾವು ಹನ್ನೆರಡು ವರ್ಷ ವನವಾಸ ಕಳೆದು, ಇಂದಿಗೆ ಒಂದು ವರ್ಷ ಅಜ್ಞಾತವಾಸವನ್ನೂ ಪೂರ್ತಿಗೊಳಿಸಿದ್ದೇವೆ. ಇನ್ನು ಪಾಂಡವರಾದ ನಾವು ನಿಜರೂಪದಿಂದ ಪ್ರಕಟರಾದರೂ, ಅವಧಿ ಪೂರೈಸಿದ ಕಾರಣ ತೊಂದರೆ ಏನೂ ಆಗದು. ಹೆದರುವ ಅಗತ್ಯವೀಗ ಇಲ್ಲ” ಎಂದನು.

ಈ ಕಥನವನ್ನು ಕೇಳುತ್ತಿದ್ದಂತೆ ವಿವೇಕಿಯಾದ ಉತ್ತರಕುಮಾರ. “ಅಯ್ಯೋ! ನಮ್ಮಿಂದ ಎಂತಹ ಅಕ್ಷಮ್ಯ ಅಪರಾಧ ಎಸಗಲ್ಪಟ್ಟಿತು. ಲೋಕವಂದ್ಯರೂ, ಧರ್ಮಾತ್ಮರೂ, ಪೂಜನೀಯರೂ ಆದ ಪಾಂಡವರನ್ನು ಸೇವಕರಾಗಿ ಹೇಗೇಗೋ ನಡೆಸಿಕೊಂಡೆವು. ಸ್ವಾಮಿ ಅರ್ಜುನ ದೇವಾ! ನಮ್ಮಿಂದ ಅರಿಯದೆ ಅಪರಾಧವಾಗಿದ್ದರೆ ಸರ್ವಥಾ ಕ್ಷಮಾಪ್ರಾರ್ಥಿಯಾಗಿದ್ದೇನೆ. ಮನ್ನಿಸಿ ನಮ್ಮನ್ನು ಕ್ಷಮಿಸಬೇಕು.” ಎಂದು ಸಾಷ್ಟಾಂಗ ನಮಸ್ಕರಿಸಿ ಪಾದದ್ವಯಗಳನ್ನು ತನ್ನ ಉಭಯ ಕರಕಮಲಗಳಲ್ಲಿ ಹಿಡಿದು ಪ್ರಾರ್ಥಿಸಿ ಬೇಡಿಕೊಳ್ಳತೊಡಗಿದನು.

ಅರ್ಜುನ ಅವನನ್ನು ಹಿಡಿದೆತ್ತಿ, ತನ್ನ ಅಜಾನು ಬಾಹುಗಳಲ್ಲಿ ತಳುಕಿ ಬಿಗಿದಪ್ಪಿ ಬೆನ್ನು ತಟ್ಟಿದ ” ಕಂದಾ! ನಿಮ್ಮಿಂದ ನಮಗೆ ಮಹದುಪಕಾರವಾಗಿದೆ. ಆಶ್ರಯ, ಉದ್ಯೋಗ, ಅನ್ನದಾತರಾಗಿ ನಮ್ಮನ್ನು ಕಷ್ಟಕಾಲದಲ್ಲಿ ಸಲಹಿದ ನಿಮಗೆ ಕೃತಜ್ಞರಾಗಿದ್ದೇವೆ. ಪ್ರಭುಗಳಾಗದ ನಿಮ್ಮ ಬಳಿ ಬಂದು, ದೇಹಿ ಎಂದು ಆಶ್ರಯ ಕೇಳಿದ ನಾವು ನಿಮ್ಮ ಸೇವೆ ಮಾಡಬೇಕಾದದ್ದು ಧರ್ಮವಾಗಿತ್ತು. ಇದ್ಯಾವ ರೀತಿಯಲ್ಲೂ ಅಪರಾಧ – ಅಪಚಾರ ಎಂದಾಗದು. ಮೇಲಾಗಿ ಈ ವ್ಯವಹಾರದಲ್ಲಿ ನಮಗೆ ಗೌರವ – ಮಾನ ಹಾನಿ ಎನ್ನುವ ವಿಚಾರ ಉದ್ಭವಿಸದು. ಈಗ ಚಿಂತಿಸಬೇಡ, ನನಗೆ ನಿನ್ನನ್ನು ಪರಾಕ್ರಮಿ ವೀರನಾಗಿ ಕಾಣಬೇಕೆಂಬ ಮಹದಾಸೆಯಿದೆ. ಧೈರ್ಯಸ್ಥನಾಗಿ ಹೊರಡು, ಹೋರಾಡಿ ಶತ್ರುಗಳನ್ನು ಜಯಿಸಿ ನಮ್ಮ ಗೋವುಗಳನ್ನು ಬಂಧಮುಕ್ತಗೊಳಿಸಿ ಮತ್ಸ್ಯದೇಶದ ಮಾನ ಕಾಪಾಡುವ ಕಾರ್ಯವಾಗಬೇಕಾಗಿದೆ” ಎಂದು ಸವಿವರವಾಗಿ ಸತ್ಯಸಂಗತಿ ಹೇಳಿ ಹುರಿದುಂಬಿಸಿದನು.

ನವೋಲ್ಲಾಸ, ಅತುಲ ಸ್ಥೈರ್ಯಶಾಲಿಯಾಗಿ ಚೈತನ್ಯ ತುಂಬಿಕೊಂಡ ಕುಮಾರ ಭೂಮಿಂಜಯ “ಧನುರ್ಧರ ಧನಂಜಯ ನೀವಿರುವಾಗ ನನ್ನ ತನು ಮನಗಳು ಉಲ್ಲಸಿತವಾಗಿವೆ. ಈಗ ಭಯವಿಲ್ಲ, ಅಭಯಪ್ರದನಾದ ನಿಮ್ಮ ಸಾರಥಿಯಾಗುವ ಭಾಗ್ಯ ನನ್ನದ್ದಾಗಿದೆ. ಜೀವನ ಸಾರ್ಥಕ್ಯ ಅನುಭವದಲ್ಲಿ ಗೋಚರಿಸುತ್ತಿದೆ, ನಾನು ಸಿದ್ಧನಾಗಿದ್ದೇನೆ” ಎಂದು ಮತ್ತೊಮ್ಮೆ ಅರ್ಜುನನಿಗೆ ನಮಿಸಿದ.

ರಥಮುಕುಟಕ್ಕೆ ವಾನರ ಧ್ವಜ ಬಿಗಿಯಲ್ಪಟ್ಟಿತು. ಉತ್ತರಕುಮಾರ ಸಾರಥಿಯಾದ, ಮಹಾರಥಿ ಅರ್ಜುನ ರಥಿಕನಾದ. ಪಾರ್ಥ ಗಾಂಡೀವದ ಹೆದೆಯೇರಿಸಿ ಬಿಗಿದು ಮಿಡಿದು ಟಂಕಾರ ಎಬ್ಬಿಸಿದ. ಉತ್ತರಕುಮಾರನಿಗೆ ಒಮ್ಮೆ ಬರ ಸಿಡಿಲು ಅಪ್ಪಳಿಸಿದಂತಾಯ್ತು. ತನ್ನ ಕಿವಿಗಳೆರಡನ್ನೂ, ಕಣ್ಣನ್ನೂ ಮುಚ್ಚಿಕೊಂಡ. ಸುಧಾರಿಸಿಕೊಂಡು ರಥ ತುರಗದ ವಾಘೆಗಳನ್ನು ಹಿಡಿದು ಕುಳಿತ. ರಥರೋಹಿಯಾಗಿ, ಗಾಂಡೀವಧನ್ವ ಕಿರೀಟಿ ರಥ ಸಾಗಲು ಅನುಮತಿ ನೀಡಿದ. ಉತ್ತರನ ಸಾರಥ್ಯದಲ್ಲಿ ರಥ ಉತ್ತರದ ಬಯಲಿನತ್ತ ಕೌರವ ಸೇನೆಯ ಎದುರಾಗಲು ಹಾರಿತು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page