27.7 C
Udupi
Thursday, July 31, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 261

ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೨೬೨ ಮಹಾಭಾರತ

ಗೋಪಾಲಕರು ಬಂದು ದೂರಿತ್ತಾಗ ಅರಮನೆಯಲ್ಲಿ ವಿರಾಟರಾಯನ ಪುತ್ರ ಉತ್ತರ ಕುಮಾರನಿದ್ದನು. ಈತ ಎಳೆಯ ಪ್ರಾಯದ, ಚಿಗುರು ಮೀಸೆ ತಿರುವುತ್ತಾ, ತರುಣಾವಸ್ಥೆಗೆ ಬರುತ್ತಿರುವ ರಾಜ ಕುವರ. ಸ್ವಭಾವತಃ ಜಂಭಕೋರನೂ ಹೌದು. ಗುರುಕುಲದಲ್ಲಿ ಯುದ್ಧ ವಿದ್ಯೆ, ರಥ ಸಾರಥ್ಯ, ಬೇಟೆಯ ಕೌಶಲ್ಯಗಳನ್ನು ಕಲಿತಿದ್ದಾನೆ. ಆದರೆ ಈ ವರೆಗೆ ಕಲಿತ ವಿದ್ಯೆಯ ಪ್ರಯೋಗ ಮಾಡಿ ಸಾಮರ್ಥ್ಯ ಪರೀಕ್ಷಿಸುವ ಅವಕಾಶ ಒದಗಿ ಬಂದಿರಲಿಲ್ಲ. ಕಾರಣ ಮತ್ಸ್ಯ ದೇಶದಲ್ಲಿ ಕೀಚಕನಿರುವವರೆಗೆ ಅಂತಹ ಸನ್ನಿವೇಶಗಳು ಸೃಷ್ಟಿಯಾಗಿರಲಿಲ್ಲ. ಸೌಂದರ್ಯ ಪ್ರಿಯನೂ, ತಂಗಿಯ ಜೊತೆಗಿರುವ ಸ್ತ್ರೀಯರ ಒಡನಾಡಿಯೂ ಆಗಿ ಬೆಳೆಯುತ್ತಿದ್ದವನು. ಹಾಗಾಗಿ ಸದಾ ಶೃಂಗಾರ, ಅಲಂಕಾರಾದಿಗಳಲ್ಲಿ ವ್ಯಸ್ಥನಾಗಿರುತ್ತಿದ್ದ. ಹೆತ್ತವರ ಅತಿ ಮುದ್ದಿನ ಪೋಷಣೆಯೂ ಇದಕ್ಕೆ ಪೂರಕವಾಗಿತ್ತು. ಮಾವ ಕೀಚಕ ಹಾಗು ತಂದೆ ವಿರಾಟ ಇದ್ದ ಕಾರಣ ಜವಾಬ್ದಾರಿಯ ಯಾವ ಹೊಣೆಗಾರಿಕೆಯೂ ಈತನ ಬಳಿ ಸುಳಿದಿರಲಿಲ್ಲ.

ಈ ಉತ್ತರಕುಮಾರ ಹುಟ್ಟುವ ಮೊದಲು ಕೀಚಕ ಮತ್ಸ್ಯ ದೇಶದ ಸೇನಾಪತಿಯಾಗಿದ್ದನು. ಬಾಲಕ ಭೂಮಿಂಜಯ (ಉತ್ತರಕುಮಾರನ ನಿಜ ಹೆಸರು) ಬೆಳೆಯುತ್ತಿರುವಾಗ ಕೀಚಕ ಸುತ್ತಮುತ್ತಲ ದೇಶಗಳಲ್ಲಿ ದಿಗ್ವಿಜಯಗೈದು, ಗೆದ್ದ ದೇಶಗಳ ಸುಂದರಿ ಕನ್ಯೆಯರನ್ನು ತಂದು ವಿರಾಟ ನಗರಿಯಲ್ಲಿ ಸಂಗ್ರಹಿಸುತ್ತಿದ್ದನು. ಉತ್ತರಕುಮಾರ ಬೆಳೆಯುತ್ತಿದ್ದಂತೆ ಈ ಕನ್ಯಾಮಣಿಗಳು ಆತನ ಸುತ್ತುಮುತ್ತಲಿದ್ದು ಸ್ನೇಹಿತೆ ಸಖಿಯರಾಗಿದ್ದರು. ರಾಜಕುಮಾರನಲ್ಲವೇ, ಈತನನ್ನು ಹೊಗಳುವುದು ಅವರಿಗೆ ಬೇಕಾದದ್ದನ್ನು ಪಡೆಯುವ ಸುಲಭ ಉಪಾಯವಾಗಿತ್ತು. ಪ್ರಾಯದಲ್ಲಿ ಹಿರಿಯರಾದ ಈ ಹೆಂಗಳೆಯರ ಸಲುಗೆ ಹದಿ ಹರೆಯ ಏರಿ ಬೆಳೆಯುತ್ತಿದ್ದ ಕುಮಾರನಲ್ಲಿ ಏನೇನೊ ಆಸೆಗಳನ್ನು ಮೂಡಿಸಿದರೂ, ಹೆದರಿಕೆ ಅನ್ನುವುದಕ್ಕಿಂತಲೂ ಧೈರ್ಯ ಸ್ವಲ್ಪ ಕಡಿಮೆ ಇದ್ದ ಕಾರಣ ಅನರ್ಥ ಕಾರ್ಯಗಳೇನೂ ಆತನಿಂದ ಆಗಿರಲಿಲ್ಲ. ಆದರೆ ಆ ಗುಣ ಲಕ್ಷಣಗಳೆಲ್ಲಾ ಉತ್ತರಕುಮಾರನಲ್ಲಿ ಎದ್ದು ಕಾಣಿಸುತ್ತಿತ್ತು. ಹೆಂಗಳೆಯರ ಹೊಗಳಿಕೆಯ ಅಭಿಮಾನಿಯಾಗಿ ಹೋಗಿದ್ದ ಕುಮಾರ ಚೇಷ್ಟೆ ಮಾಡುವುದರಲ್ಲಿ ಸುಖ ಪಡುತ್ತಿದ್ದನು. ಕಷ್ಟ ಎಂದರೇನು? ಶ್ರಮ ಹೇಗೆ ಎಂದು ತಿಳಿಯದ ಬಾಲಕನಿಗೆ, ಬೆವರು ಹೇಗೆ ಬರುತ್ತದೆ? ಎಂದು ಗೊತ್ತಾಗದಂತೆ ಆರೈಕೆ ಮಾಡುವಷ್ಟು ಸಖಿಯರು ಆವರಿಸಿದ್ದರು. ಬ್ರಹನ್ನಳೆ ಮತ್ಸ್ಯ ದೇಶಕ್ಕೆ ಬಂದ ಮೇಲಂತೂ, ಹುಡುಗಿಯರ ಕುಣಿತ ನೋಡಿ ಆನಂದಿಸುವುದು ಈತನಿಗೆ ದೊಡ್ಡ ಕೆಲಸವಾಗಿ ಹೋಗಿದೆ.

ಹೀಗೆ ಬೆಳೆದಿರುವ ಉತ್ತರಕುಮಾರ, ಇಂದು ಕೂಡ ಚೆನ್ನಾಗಿ ಅಲಂಕಾರ ಮಾಡಿಕೊಂಡು, ಎಂದಿನಂತೆ ಹೊಗಳಿಕೆಯಿಂದ ಉಬ್ಬಿಹೋಗಲು ಕುಳಿತಿರುವಾಗ – ಗೋಪಾಲಕರ ದೂರು ಬಂದಿದೆ. ಕೈಕಾಲುಗಳನ್ನು ಕಟ್ಟಿ, ನಾಮ ಎಳೆದು ಅವಮಾನಿತರಾದ ಸ್ಥಿತಿಯಲ್ಲಿ ಬಂದವರನ್ನು ಕಂಡು ಉತ್ತರಕುಮಾರನಿಗೆ ಅಸಹನೆ ಮೂಡಿತು. ಕಾರಣ ಸ್ತ್ರೀಯರ ಜೊತೆ ಸರಸ ಸಲ್ಲಾಪದಲ್ಲಿ ರಂಜಿಸುವ ಸುಮಧುರ ಕ್ಷಣದ ರಸನಿಮಿಷಗಳಿಗೆ ತೊಡಕಾಗಿಸಿದೆ ಈ ಗೋಪಾಲಕರ ಆಗಮನ. ಆದರೆ ಪುರುಷರು ಯಾರೂ ಆಸ್ಥಾನದಲ್ಲಿ ಇಲ್ಲದ ಕಾರಣ ಉತ್ತರ ಕುಮಾರ ವಿಚಾರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಏದುಸಿರು ಬಿಡುತ್ತಾ, ಬೆವರಿ ಒದ್ದೆಯಾಗಿ, ಗಂಟಲಿನ ಪಸೆ ಆರಿ, ಬಾಯಾರಿ, ಬಸವಳಿದು ಬಂದ ಅವರನ್ನು ಕಂಡು ಕಣ್ಸನ್ನೆಯಲ್ಲಿ ಆಸಕ್ತಿಹೀನನಾಗಿ ಏನೆಂದು ಕೇಳುವಂತೆ ಅಸಡ್ಡೆಯ ದೃಷ್ಟಿಯಿಂದ ವಿಚಾರಿಸಿದ. ಆಗ ಆ ಸೇವಕ “ಸ್ವಾಮೀ… ಉತ್ತರದ ಹುಲ್ಲುಗಾವಲಿನಲ್ಲಿ ದನ ಮೇಯಿಸುತ್ತಿದ್ದೆವು. ಆಗ ಕೌರವರ ಸೇನೆ ಬಂದು ನಮ್ಮೆಲ್ಲರನ್ನೂ ಹೊಡೆದೋಡಿಸಿ ದನಗಳನ್ನೆಲ್ಲಾ ಬಂಧಿಸಿದ್ದಾರೆ. ನೀವು ನಮ್ಮನ್ನು ರಕ್ಷಿಸಬೇಕು. ವೀರ ರಾಜ ನಾವು ಶರಣು ಬಂದಿದ್ದೇವೆ” ಎಂದು ತೊದಲುತ್ತಾ.. ಉಸಿರು ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಬೇಡಿಕೊಂಡರು.

ಈ ಮಾತು ಕೇಳಿ ಉತ್ತರಕುಮಾರನಿಗೆ ಅಭಿಮಾನ ಹೆಚ್ಚಾಗಿ ಬಿಟ್ಟಿತು. ಗೋಪಾಲಕರು ನನ್ನನ್ನು ರಾಜಾ ಎಂದು ಕರೆದಿದ್ದಾರೆ. ತನ್ನನ್ನು ವೀರನು ಹೌದೆಂದು ತಿಳಿದ ಅವರ ಬಗ್ಗೆ ಸಂತೋಷ ಆಯಿತು. ಬಂದ ಕೌರವರ ಸೇನೆಯನ್ನು ಗೆದ್ದೇ ಬಿಟ್ಟೆ ಎಂಬ ಭ್ರಮೆಯೂ ಆಯಿತು. ತನ್ನ ಸುತ್ತ ಇರುವ ಹೆಂಗಳೆಯರನ್ನು ನೋಡಿದರೆ ಅವರ ಮುಖದಲ್ಲಿ ಭಯ ಗೋಚರಿಸಿತು. ವಿರಾಟನೂ ಇಲ್ಲ, ಕೀಚಕನೂ ಸತ್ತಿದ್ದಾನೆ. ಗೋವುಗಳ ಬಳಿಕ ನಾವು ಸ್ತ್ರೀಯರಾದ ನಮ್ಮ ಕಥೆಯೇನು? ಎಂಬ ಭಯ ಅವರ ಮನ ಮಾಡಿದಂತಿತ್ತು. ಉತ್ತರಕುಮಾರ ಅವರನ್ನುದ್ದೇಶಿಸಿ ” ಎಂತಹ ನೀಚರು ಈ ಕೌರವರು? ಪಾಪ ಗೋಪಾಲಕರನ್ನು ಹೊಡೆದು, ಮುಗ್ದ ಗೋವುಗಳನ್ನು ಬಂಧಿಸಿದ ಕೂಡಲೆ ಗೆದ್ದೆವೆಂದು ತಿಳಿದರೊ ಹೇಗೆ? ನಾನು ಭೂಮಿಂಜಯ ಇದ್ದೇನೆ ಎಂಬ ಭಯ ಬೇಡವೆ ಅವರಿಗೆ? ಸಿಂಹ ಸದೃಶನಾದ ನನ್ನನ್ನು ಕೆಣಕಿ ಅವರ ಪಾಲಿಗೆ ಆಪತ್ತನ್ನು ಎಳೆದುಕೊಂಡ ದಡ್ಡರಂತೆ ವರ್ತಿಸುತ್ತಿದ್ದಾರೆ. ಆ ದುರ್ಯೋಧನ ನನ್ನ ಹೂಂಕಾರ ಮಾತ್ರದಿಂದ ಅಹಂಕಾರ ಕಳೆದು ಕುಸಿದು ಬಿದ್ದಾನು. ನನ್ನ ಕದನ ಕರ್ಕಶತೆಗೆ ಅವರ ಹಸ್ತಿನೆಯ ಸಮಗ್ರ ಸೇನೆ ತತ್ತರಿಸಿ ಹೋದೀತು. ದುರ್ಬಲರನ್ನು ಓಡಿಸಿ, ಗೋವು ಕಳ್ಳರಂತೆ ಬಂದ ಅವರ ಕುಕೃತ್ಯ ನಾನು ಸಹಿಸುವವನೆ?” ಒರೆಯಲ್ಲಿದ್ದ ಕಠಾರಿ ಸರ್ರನೆ ಎಳೆದು ಝಳಪಿಸಿದ “ನಾನು ಖಡ್ಗ ಬೀಸುತ್ತಾ ಮುನ್ನುಗ್ಗಿದರೆ… ಅವರ ರುಂಡ ಮುಂಡದಲ್ಲಿ ಉಳಿಯುವುದಕ್ಕುಂಟೆ? ದೊಡ್ಡ ಸೈನ್ಯದೊಂದಿಗೆ ಬಂದಿದ್ದಾರಂತೆ ! ಎಷ್ಟು ದೊಡ್ಡದು ಲಕ್ಷವೊ? ಸಾವಿರವೊ? ನೂರೋ ? ಹತ್ತೋ? ನನಗೆ ನಗಣ್ಯ. ನನ್ನ ಎಡಗೈಯಲ್ಲಿ ಬಿಲ್ಲಿನ ಹೆಡೆಯನ್ನು ಹಿಡಿದು ಬಗ್ಗಿಸಿ, ಹೆದೆಯನ್ನು ಬಿಗಿದು, ನಾಣನ್ನು ಮೀಟಿ ಟಂಕಾರವನ್ನು ಎಬ್ಬಿಸಿದರೆ ಅಷ್ಟೆ ಸಾಕು. ಅವರ ಕಿವಿ ಕಿವುಡಾಗಿ, ಬುದ್ದಿ ಮಂಕಾಗಿ ದಿಕ್ಕು ದೆಸೆ ನೋಡದೆ ಓಡಿ ಬದುಕುವ ದಾರಿ ಹುಡುಕಿಯಾರು. ಸ್ವಲ್ಪ ಧೈರ್ಯದಿಂದ ನಿಂತು ಯುದ್ದ ಮಾಡುವ ಮನಸ್ಸು ಮಾಡುವ ಆ ಅಜ್ಜ ಭೀಷ್ಮ, ಮುದಿ ದ್ರೋಣ, ಕುನ್ನಿ ಕರ್ಣಾದಿಗಳು ಯುದ್ದ ಮಾಡಿದರೂ ನಾನು ಹೊಸದಾಗಿ ಮಸೆದ, ಉಕ್ಕಿನ ಅಲಗಿನ, ಬಂಗಾರದ ಹಿಡಿಕೆಯ ನನ್ನ ಹತ್ತಾರು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದು ಹೆದೆಯೇರಿಸಿ ಅನುಸಂಧಾನ ಮಾಡಿ, ಕಿವಿಯವರೆಗೆ ಎಳೆದು ಗುರಿಯಿಟ್ಟು ಪ್ರಯೋಗಿಸಿದರೆ ನಿಲ್ಲಲಾದೀತೆ? ಸತ್ತು, ಬಿದ್ದು ಮಣ್ಣಿನ ವಾಸನೆ ನೋಡಬೇಕಾದೀತು. ಆ ಧೃತರಾಷ್ಟ್ರನಿಗೆ ಕಣ್ಣು ಕಾಣದೆ ಕುರುಡು, ಅವನ ಮಗ ದುರ್ಯೋಧನನಿಗೆ ನನ್ನ ಬಗ್ಗೆ ತಿಳಿಯದೆ ಬುದ್ಧಿಯ ಕುರುಡು. ಒಳ್ಳೆಯದಾಯಿತು ಈ ಹೊತ್ತಿನಲ್ಲಿ ಅವರು ಬಂದಿರುವುದು. ಅಪ್ಪ ವಿರಾಟರಾಯ ಇರುವಾಗ ಬಂದಿದ್ದರೆ ಅವರನ್ನು ಓಡಿಸಿ ಬಿಡುತ್ತಿದ್ದರೊ ಏನೋ? ನಾನು ಬಿಡುವ ಬಾಣದ ಹತಿಗಳಿಗೆ ಅವರೆಲ್ಲರೂ ಹತ ಪ್ರಾಣರಾದ ಬಳಿಕ ಹಸ್ತಿನಾವತಿಗೆ ಹೋಗಿ ಸಿಂಹಾಸನ ಏರುವೆ. ನೀವೆಲ್ಲರೂ ನನ್ನ ಪೌರುಷ ಹೊಗಳಿ ಹೊಗಳಿ ಸೋತು ಹೋಗುತ್ತೀರಿ ನೋಡಿ” ಎಂದು ಒಂದೆ ಸವನೆ ಮಾತಿನಲ್ಲಿ ಮಂಟಪ ಕಟ್ಟ ತೊಡಗಿದನು.

ಆಗ ಹೆಂಗಳೆಯರು ಮತ್ತಷ್ಟು ಹೊಗಳಿ ಅಟ್ಟಕ್ಕೇರಿಸತೊಡಗಿದರು. “ವೀರಾಧಿವೀರ, ಜಗದೇಕ ವೀರ, ಕಲಿ ಮಾರ್ತಾಂಡತೇಜ, ಕದನ ಕೌಶಲ ವಿಕ್ರಮ, ಧೀರ, ಶೂರ, ರಣ ಗಂಭೀರ, ಪುರುಷ ಸಿಂಹ, ಭಯಂಕರ, ಭೀಭತ್ಸ, ಭಯಾನಕ, ರೌದ್ರ ರೂಪ, ಪ್ರಚಂಡ ಪ್ರಕೋಪಿ, ಪ್ರಳಯ ಸ್ವರೂಪಿ…” ಹೀಗೆ ಘೋಷಣೆ ಮಾಡುತ್ತಾ… ಆರತಿ ತಂದು ಯುದ್ದಕ್ಕೆ ಹೊರಡಿಸಲು ಸಿದ್ಧರಾದರು.

ಅವರ ತಯಾರಿಗಳನ್ನು ನೋಡಿ, ಯುದ್ದಕ್ಕೆ ಹೋಗುವ ಮನಸ್ಸಿಲ್ಲದ ಉತ್ತರ ಕುಮಾರ “ಛೇ, ಮೋಸವಾಗಿ ಹೋಯಿತು! ನಿನ್ನೆಯ ದಿನ ಅಪ್ಪ ಇದ್ದ ಸೇನೆ ಎಲ್ಲಾ ಸೇರಿಸಿ ದಕ್ಷಿಣಕ್ಕೆ ಯುದ್ದಕ್ಕಾಗಿ ಹೋಗಿದ್ದಾರೆ. ನನಗೆ ಸೈನ್ಯವೇನೂ ಬೇಕಾಗಿ ಇಲ್ಲ. ನಾನೊಬ್ಬನೆ ಸಾಕು, ಸೇನೆ ಯಾಕೆ? ಕನಿಷ್ಟ ಒಬ್ಬ ಸಾರಥಿಯನ್ನಾದರು ಬಿಟ್ಟು ಹೋಗ ಬಾರದಿತ್ತೇ? ಆ ಕೌರವನಿಗೆ ಇನ್ನೂ ಕೆಲ ದಿನದ ಆಯಸ್ಸು ಇದೆ ಕಾಣುತ್ತದೆ. ಒಬ್ಬ ಸೂತನಿದ್ದರೆ ಇಂದಿನ ದಿನ ಉತ್ತರದ ಬಯಲಿನಲಿ ಉತ್ತರಕುಮಾರನಿಗೆ ಉತ್ತರ ಕೊಡಲಾಗದೆ ನಿರುತ್ತರನಾಗಿ ಆ ಕೌರವ ತತ್ತರ ತತ್ತರಿಸಿ ಸತ್ತೇ ಹೋಗುತ್ತಿದ್ದನು. ಏನು ಮಾಡೋಣ ಹೇಳಿ? ಒಬ್ಬ ರಥ ಓಡಿಸುವವ ಇದ್ದರೆ ! ಛೇ….ಕನಿಷ್ಟ ಆ ಅಡಿಗೆ ಭಟ್ಟನಾದರೂ ಈ ಹೊತ್ತು ಇಲ್ಲಿರಬಾರದಿತ್ತೆ? ಅವನನ್ನೂ ಕರಕೊಂಡು ಹೋಗಿದ್ದಾರಲ್ಲಾ! ಏನು ಮಾಡಲಿ ನಾನೀಗಾ? ” ಎಂದು ಮುಷ್ಟಿಗಟ್ಟಿ ತನ್ನ ಅಂಗೈ ಗುದ್ದಿ ಸಿಂಹಾಸನದಲ್ಲಿ ಬೆವರಿ ಕುಳಿತನು.

ಹೀಗೆಲ್ಲಾ ಬೆಳವಣಿಗೆ ಆಗುತ್ತಿರುವಾಗ ಬ್ರಹನ್ನಳೆ ಮಾತ್ರ, ನಿನ್ನೆಯ ದಿನದಿಂದಲೆ ಜಾಗೃತನಾಗಿದ್ದನು. ತ್ರಿಗರ್ತದ ಸೇನೆ ದಾಳಿ ಮಾಡಿದ ಕ್ಷಣದಿಂದಲೆ ಕಣ್ಣವೆ ಮುಚ್ಚದ ರೀತಿ, ಕ್ಷಣ ಕ್ಷಣದ ಸುದ್ದಿ ಸಂಗ್ರಹಿಸುತ್ತಿದ್ದನು. ಇದ್ದವರಲ್ಲಿ ಏನಾಯಿತಂತೆ ಎಂದು ಕೇಳುತ್ತಿದ್ದನು. ಅಂತೆಯೆ ಬಾಹ್ಯ ಗಡಿಯಲ್ಲಿನ ಚಲನ ವಲನ, ಕಂಕ, ವಲಲ, ಗ್ರಂಥಿಕನ ವೀರಾವೇಶ, ಜಾಣ್ಮೆಯ ಹೋರಾಟದ ಸಮಾಚಾರ ಪಡೆಯುತ್ತಿದ್ದನು. ಗೆಲುವಿನ ಸುದ್ದಿ ದಕ್ಷಿಣದಿಂದ ಬಂದಾಗ, ಇದರ ಮುಂದುವರಿದ ಭಾಗ ಇದ್ದೇ ಇದೆ! ಎಂಬ ತರ್ಕ ಬ್ರಹನ್ನಳೆ ತನ್ನದಾಗಿಸಿದ್ದನು. ಅದಕ್ಕೆ ಸರಿಯಾಗಿಯೆ ಈಗ ಗೋಪಾಲಕರು ಉತ್ತರಕುಮಾರನಲ್ಲಿ ದೂರನ್ನು ಕೊಟ್ಟು, ರಕ್ಷಣೆ ಬೇಡಿಕೊಂಡ ವಿದ್ಯಮಾನವೂ ನಡೆಯುತ್ತಿದೆ. ಉತ್ತರ ಕುಮಾರ ಪರ್ವತ ಸದೃಶ ವಾಗ್ಜರಿ ಹರಿಸಿ, ಪೌರುಷ ಮೆರೆದು, ಗಾಳಿ ಹೋದ ಚೆಂಡಿನಂತೆ ಠುಸ್ಸೆಂದು ಜಿಗಿಯಲಾಗದೆ ಕುಳಿತು, ಸಾರಥಿ ಇಲ್ಲ ಎಂಬ ಪೊಳ್ಳು ನೆಪ ನೀಡುವ ತನಕ ಬೆಳವಣಿಗೆ ಮುಂದುವರಿಯಿತು.

ಮುಂದುವರಿಯುವುದು…..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page