ಭಾಗ 260
ಭರತೇಶ ಶೆಟ್ಟಿ, ಎಕ್ಕಾರ್

ಗೋಪಾಲಕರು ತಂದಿತ್ತ ದೂರು “ನಮ್ಮ ರಾಜ್ಯದ ಮೇಲೆ ಆಕ್ರಮಣವಾಗಿದೆ. ಗೋವುಗಳ ಅಪಹರಣವಾಗಿದೆ”. ರಾಜ ವಿರಾಟ ವಯೋ ವೃದ್ಧನಾಗಿದ್ದಾನೆ. ಸುದ್ಧಿ ಕೇಳಿ ಕೀಚಕನೂ ಇಲ್ಲದ ಈ ಹೊತ್ತು ಆತನ ಜಂಘಾಬಲವೆ ಹುದುಗಿ ಹೋದಂತಾಯಿತು. ಬಳಿಯಲ್ಲಿ ಕುಳಿತಿದ್ದ ಕಂಕ ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದನು. ಆತನಿಗೆ ಇದರಲ್ಲೇನೊ ತಂತ್ರವಿದೆ, ಕೌರವನ ಮೈತ್ರಿಯ ಪರಿಣಾಮ, ದಕ್ಷಿಣ ದಿಕ್ಕಿನಲ್ಲಿರುವ ತ್ರಿಗರ್ತರು ಮತ್ಸ್ಯ ದೇಶದ ಮೇಲೆ ಆಕ್ರಮಣ ಮಾಡಿರಬಹುದು. ಉದ್ದೇಶ ಸುಶರ್ಮನಿಗೆ ಮತ್ಸ್ಯ ದೇಶದ ಮೇಲಿನ ಸೇಡು ತೀರಿಸಿಕೊಳ್ಳುವ ಅವಕಾಶ, ಇತ್ತ ಕೌರವರಿಗೆ ಪಾಂಡವರಾದ ನಮ್ಮ ಪತ್ತೆದಾರಿಕೆಯ ವಿಚಾರವಾಗಿ ಅವರ ಪ್ರಯತ್ನದ ಹೆಜ್ಜೆಯಾಗಿ ಇರಬಹುದೆಂದು ಗ್ರಹಿಸಿದನು.
ವಿರಾಟನನ್ನು ಉದ್ದೇಶಿಸಿ,
” ಮಹಾರಾಜಾ, ಕ್ಷತ್ರಿಯರಾದವರಿಗೆ ಧರ್ಮವೆಂದರೆ ಗೋ, ಬ್ರಾಹ್ಮಣ, ಸ್ತ್ರೀಯರಿಗೆ ಆಪತ್ತು ಬಂದಾಗ ತಕ್ಷಣ ರಕ್ಷಣೆ ಒದಗಿಸುವುದು. ಇಂತಹ ಸಮಯದಲ್ಲಿ ನೀನು ಖಿನ್ನತೆಗೊಳಗಾಗುವುದು ಸರಿಯಲ್ಲ. ನಮ್ಮ ಮತ್ಸ್ಯ ದೇಶದಲ್ಲಿ ಸಮರ್ಥ ಸೇನೆಯಿದೆ. ಬೇಕಿದ್ದರೆ ಜೊತೆಗೆ ನಮ್ಮ ಆಳುಗಳನ್ನೂ ಸೇನೆಗೆ ಜೊತೆಯಾಗಿಸೋಣ. ಅಡುಗೆಯ ವಲಲ ಮಲ್ಲಯುದ್ಧದ ಪ್ರಾವಿಣ್ಯತೆ ತೋರಿದ್ದಾನಲ್ಲವೆ? ಹಾಗೆಯೆ ನಮ್ಮ ಗೋಪಾಲಕನಾದ ಗ್ರಂಥಿಯೂ ಏನೋ ಯುದ್ದ ನೈಪುಣ್ಯ ಅರಿತವನಂತೆ ಎಂದು ಕೇಳಿ ಬಲ್ಲೆ. ಅವನೂ ಜೊತೆಯಾಗಲಿ. ನಿಮ್ಮ ಸೇವೆಗೆ ನಾನೂ ಜೊತೆಯಾಗಿ ಬರುವೆ. ಆಶ್ರಯದಾತರಾದ ನಿಮ್ಮ ಅನ್ನ ತಿಂದ ಋಣಕ್ಕೆ ಇದಾದರೂ ಒಂದು ಅವಕಾಶ ಎಂದು ತಿಳಿಯುವೆ. ಚಿಂತೆಗೊಳಗಾದವರಿಗೆ ಧೈರ್ಯ ತುಂಬುವುದೂ ಧರ್ಮ. ಆ ಮಾರ್ಗದಿಂದ ನಡೆದರೆ ಜಯ ಶತ ಸಿದ್ದ. ಹಾಗಾಗಿ ಅಂಜಿ ಹಿಂದುಳಿಯುವುದು ಬೇಡ. ಅಕಾರಣವಾಗಿ ಬಂದ ವೈರಿಗಳು ಗೋ ಅಪಹರಣವನ್ನು ಕಾರಣವಾಗಿಸಿರಬಹುದು. ಮೊದಲು ನಮ್ಮ ಗೋವುಗಳನ್ನು ಬಿಡಿಸಿಕೊಳ್ಳೋಣ ನಂತರ ಅವರ ಉದ್ದೇಶ ತಿಳಿದೀತು” ಎಂದು ಧೈರ್ಯ ತುಂಬಿದನು.
ಅಂತೆಯೆ ವಿರಾಟನೂ ಅನ್ಯ ಮಾರ್ಗವಿಲ್ಲದೆ ತಾನು ಯುದ್ದ ಸನ್ನದ್ಧನಾಗಿ ಸೇನೆಗೂ ಆದೇಶ ಹೊರಡಿಸಿದ. ಇತ್ತ ತನ್ನ ಸಹೋದರರೂ ವೀರರೂ ಆದ ಶತಾನಿಕ, ಮದಿರಾಶ್ವರನ್ನೂ ಕರೆಸಿಕೊಂಡನು. ಆ ಕಡೆ ವಲಲನೂ, ಗ್ರಂಥಿಯೂ ಉತ್ಸಾಹದಿಂದ ಜತೆಗೂಡಿದರು. ಕಂಕನೂ ಯುದ್ಧ ಕವಚ ಧರಿಸಿ ರಥಾರೂಢನಾಗಿ ಹೊರಟನು. ಮತ್ಸ್ಯದೇಶದ ಸೇನೆ ವಿರಾಟನ ನೇತೃತ್ವದಲ್ಲಿ ದಕ್ಷಿಣದ ಹುಲ್ಲುಗಾವಲಿಗೆ ಮುನ್ನುಗ್ಗಿತು.
ಉಭಯ ಸೇನೆಗಳೂ ಮುಖಾಮುಖಿಯಾದವು. ರಣಕಹಳೆ ಊದಿ ಎಚ್ಚರಿಸಿದರು. ಸಾಮದಿಂದ ಗೋವುಗಳನ್ನು ಬಿಟ್ಟು ಬಿಡಲು ವಿರಾಟನ ಕಡೆಯಿಂದ ಆದೇಶ ನೀಡಿದರು. ಸಮರ್ಥರಾದರೆ ಬಿಡಿಸಿಕೊಳ್ಳಿ ಎಂಬ ಉತ್ತರ ಬಂದಾಗ ಯುದ್ದ ಆರಂಭವಾಯಿತು. ವಿರಾಟನೂ ಯುದ್ದೋತ್ಸಾಹದಿಂದ ಹೋರಾಡುತ್ತಿದ್ದಾನೆ. ವಲಲ ಒಂದೆಡೆಯಿಂದ ಸೈನ್ಯ ನಾಶಗೈಯುತ್ತಿದ್ದಾನೆ. ಇತ್ತ ಗ್ರಂಥಿಯೂ ಮತ್ಸ್ಯ ದೇಶದ ಸೇನೆಗೆ ಸೇನಾನಿಯಂತೆ ಖಡ್ಗಧಾರಿಯಾಗಿ ತ್ರಿಗರ್ತದ ಸೇನೆಯನ್ನು ಮನಬಂದಂತೆ ಕತ್ತರಿಸುತ್ತಿದ್ದಾನೆ. ಸುದೀರ್ಘವಾಗಿ ಯುದ್ದ ಸಾಗುತ್ತಾ ಮುಸ್ಸಂಜೆಯಾಗಿ ಕತ್ತಲಾದ ಕಾರಣ ಯುದ್ದ ನಿಂತಿತು. ಹಸಿರಾಗಿದ್ದ ಹುಲ್ಲುಗಾವಲು ರುಧಿರದೋಕುಳಿ ಹರಿಯುತ್ತಾ ಕೆಸರಾಗಿದೆ.
ಅತ್ತ ತ್ರಿಗರ್ತ ದೇಶದ ದೊರೆ ಸುಶರ್ಮ ‘ಗಳಿಗೆ ನಷ್ಟವಾದರೆ ಕೆಲಸ ಕೆಟ್ಟಿತು’ ಎಂದು ಅಪರಾತ್ರಿಯಲ್ಲಿ ಮತ್ತೆ ಯುದ್ದ ಆರಂಭಿಸಿದ. ವಿರಮಿಸಿದ್ದ ವಿರಾಟನ ಸೇನೆಯ ಮೇಲೆ ರಣ ನೀತಿ ಮೀರಿ ದಾಳಿ ಮಾಡಿದ. ಅಷ್ಟಮಿಯ ರಾತ್ರಿ, ಮಧ್ಯರಾತ್ರಿಯ ಹೊತ್ತು ಅರ್ಧ ಚಂದ್ರನ ಬೆಳದಿಂಗಳ ಬೆಳಕು ಸೂಸುತ್ತಿದೆ. ಮಂದ ಬೆಳಕಲ್ಲಿ ಎದುರಾಳಿಗಳನ್ನು ಕಂಡು, ತಕ್ಷಣ ಸೆಟೆದು ನಿಂತಿತು ಮತ್ಸ್ಯ ದೇಶದ ಸೇನೆ. ಪ್ರತಿರೋಧ ನೀಡಿ ಯುದ್ದ ಮಾಡಲಾರಂಭಿಸಿತು. ತ್ರಿಗರ್ತಾಧಿಪ ಸುಶರ್ಮ ಯೋಜನೆಯಂತೆ ಮುನ್ನುಗ್ಗುತ್ತಾ ಬಂದು ವಿರಾಟನನ್ನು ಗುರಿಯಾಗಿಸಿ ಯುದ್ದ ಮಾಡತೊಡಗಿದ. ವೃದ್ಧ ವಿರಾಟನಿಗೆ ರಾತ್ರಿಯ ಹೊತ್ತು ಒಂದೆಡೆ, ದಣಿವು ಇನ್ನೊಂದೆಡೆ, ವೃದ್ದಾಪ್ಯದ ದೌರ್ಬಲ್ಯವೂ ಸೇರಿ ಕೈ ಸೋತನು. ಬಂಧಿಯಾದ ಆತನನ್ನೆಳೆದು ಸುಶರ್ಮ ತನ್ನ ರಥಕ್ಕೇರಿಸಿದ. ಸೇನೆಯ ಮಧ್ಯ ಭಾಗಕ್ಕೊಯ್ದು ಬಂಧನದಲ್ಲಿಟ್ಟ. ಆ ಕೂಡಲೇ ಗೆದ್ದೆವೆಂಬಂತೆ ವಿಜಯನಾದವನ್ನೂ ಮೊಳಗಿಸಿದರು.
ಇತ್ತ ಕಂಕನಿಗೆ ವಿರಾಟ ಬಂಧಿತನಾದ ವಿಚಾರ ಅರಿವಾಗಿ, ವಲಲ – ಗ್ರಂಥಿ ಇಬ್ಬರಿಗೂ ತ್ರಿಗರ್ತದ ಸೇನೆಯೊಳಗೆ ನುಗ್ಗಿ ವಿರಾಟನನ್ನು ಬಿಡಿಸಿ ತರಲು ಸನ್ನೆ ಮಾಡಿದ. (ಅಣ್ಣನ) ಆಜ್ಞಾಪಾಲಕರಾದ ವಲಲ (ಭೀಮ) ಗ್ರಂಥಿ (ಸಹದೇವ) ತಕ್ಷಣ ಸೇನೆಯನ್ನು ಸೀಳುತ್ತಾ ಮಧ್ಯ ಭಾಗ ಪ್ರವೇಶಿಸಿ ಸುಶರ್ಮನ ಮೇಲೆ ಆಕ್ರಮಣ ಮಾಡಿದರು. ಗ್ರಂಥಿ ತಿರುಗಿ ವಲಲನಿಗೆ ಅಂಗರಕ್ಷಕನಾದ, ವಲಲ ಸುಶರ್ಮನನ್ನು ರಥದಿಂದ ಕೆಡಹಿ ತುಳಿದು ಎದ್ದೇಳದಂತೆ ಘಾತಿಸಿ ಬಿಟ್ಟನು. ಆ ಕೂಡಲೆ ವಲಲ ಸುಶರ್ಮನ ರಥವೇರಿದನು. ಅದೇ ರಥದಲ್ಲಿ ವಿರಾಟನನ್ನು ಎತ್ತಿ ಕುಳ್ಳಿರಿಸಿದನು. ಬಂಧನದಿಂದ ಮುಕ್ತಗೊಳಿಸಿ ರಥ ಓಡಿಸುತ್ತಾ ಮತ್ಸ್ಯದೇಶದ ಸೇನೆಯ ಮಧ್ಯ ಭಾಗಕ್ಕೆ ತಲುಪಿಸಿ ಸುರಕ್ಷಿತಗೊಳಿಸಿದನು. ಕಂಕನು ಬಂದು ಮತ್ತೆ ಎಡವಟ್ಟಾಗಬಾರದು ಎಂದು ವಿರಾಟನ ರಕ್ಷಣೆಗಾಗಿ ನಿಂತನು. ವಲಲ ತಿರುಗಿ ಮತ್ಸ್ಯ ದೇಶದ ಸೇನೆಯೊಡನೆ ಸೇರಿ ಯುದ್ದ ಮುಂದುವರೆಸಿದ. ಸುಶರ್ಮನ ಸೇನೆಯನ್ನು ಹಿಮ್ಮೆಟ್ಟಿಸುತ್ತಾ ಉಗ್ರ ಪ್ರತಿದಾಳಿ ಮಾಡತೊಡಗಿದರು. ಗೋವುಗಳನ್ನು ಬಿಟ್ಟು ತ್ರಿಗರ್ತದ ಸೇನೆ ಯುದ್ಧಭೂಮಿಯಿಂದ ಓಡಿ ಹೋಯಿತು. ಬಂಧನದಿಂದ ಮುಕ್ತವಾದ ಗೋವುಗಳನ್ನು ಒಟ್ಟು ಸೇರಿಸಿ ಗ್ರಂಥಿಯೂ ಮತ್ಸ್ಯ ದೇಶದ ಸೈನಿಕರೂ ತಮ್ಮ ದೇಶದತ್ತ ಬರತೊಡಗಿದರು. ಯುದ್ದ ಗೆದ್ದ ವಿಜಯ ಕಹಳೆ ಮೊಳಗಿತು.
ವಿರಾಟನಿಗೆ ಮಹದಾನಂದವಾಗುತ್ತಿದೆ. ತುಸು ವಿಶ್ರಾಂತಿ ಮಾಡಿ ಎದ್ದಾಗ ಬೆಳಗಾಯಿತು. ನೋಡಿದರೆ ತ್ರಿಗರ್ತದ ಸೇನೆಯಿಲ್ಲ. ಗೋಪಾಲಕರನ್ನು ಕರೆಸಿದರು. ಕಂಕ ಮುಂದೆ ಬಂದು ಗೋ ಪೂಜೆಗೈದು ಗೋವುಗಳನ್ನು ಗೋಪಾಲಕರ ವಶಕ್ಕೊಪ್ಪಿಸಿದನು. ಯುದ್ದ ಗೆದ್ದ ಸಂತಸದಲ್ಲಿ ಸೇನೆಗೆ ಸಂತಸದ ವಿಹಾರ ಕೂಟವಾಗಿ ಜಲಕೇಳಿ, ವಿಹಾರ, ಬೇಟೆ ಹೀಗೆ ಆನಂದಿಸಲು ವಿರಾಟ ರಾಯ ಅಪ್ಪಣೆ ನೀಡಿದನು.
ಕಂಕನ ಜೊತೆ ಕುಳಿತು ವಿರಾಟ, ವಲಲ ಹಾಗೂ ಗ್ರಂಥಿಯ ಚಾಣಾಕ್ಷತೆ, ರಣ ಕೌಶಲವನ್ನು ಮೆಚ್ಚಿ ಹೊಗಳತೊಡಗಿದನು. ಇಂದಿನ ವಿಜಯದ ನಿಜ ರೂವಾರಿಗಳು ಇವರಿಬ್ಬರು ಎಂದು ಕೊಂಡಾಡಿದನು. ನಮ್ಮ ಸೇನೆಗೆ ಇನ್ನು ಇವರಿಬ್ಬರು ಸಮರ್ಥ ನೇತಾರರು ಎಂದು ಘೋಷಿಸುವಲ್ಲಿವರೆಗೆ ಆನಂದ ತುಂದಿಲನಾದನು.
ಬೆಳಗಾಗಿ ಹೊತ್ತು ತುಸು ಏರುತ್ತಿದ್ದಂತೆ ಕೌರವರ ಸೇನೆ ಸಾಗರದೋಪಾದಿಯಲ್ಲಿ ಉತ್ತರ ದಿಕ್ಕಿನಿಂದ ಮತ್ಸ್ಯ ದೇಶದತ್ತ ಬರುತ್ತಿದೆ. ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮ, ಕರ್ಣ, ದುರ್ಯೋಧನ, ದುಶ್ಯಾಸನಾದಿಗಳು ಮಹಾರಥಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಉತ್ತರದ ಸಮೃದ್ಧ ಬಯಲಿನಲ್ಲಿ ಲಕ್ಷಕ್ಕೂ ಅಧಿಕ ಗೋವುಗಳು ಮೇಯುತ್ತಿದ್ದವು. ಗೋಪಾಲಕರು ಹಾಡು ಹೇಳುತ್ತಾ ಮೇಯಿಸುತ್ತಿದ್ದರು.
ದುರ್ಯೋಧನನ ಅಪ್ಪಣೆಯಂತೆ ಕೆಲವು ಸೈನಿಕರು ಮುಂದೊತ್ತಿ ಬಂದು ಗೋಪಾಲಕರನ್ನು ಹೊಡೆದೋಡಿಸಿ ಗೋವುಗಳೆಲ್ಲವನ್ನೂ ಸುತ್ತುವರಿದು ಅಟ್ಟಿಕೊಂಡು ಬಂದು ಸೈನ್ಯದ ಮಧ್ಯ ಭಾಗ ಸೇರಿಸಿದರು. ಸುತ್ತಲೂ ಸೈನ್ಯ ಆವರಣದಂತೆ ಆವೃತವಾಗಿದೆ. ಓಡುತ್ತಿದ್ದ ಗೋಪಾಲಕರನ್ನು ಹಿಡಿದು ಬಂಧಿಸಿ ತಂದರು ಸೈನಿಕರು. ಮತ್ತೆ ಅವರಿಗೆ ಒಂದೆರಡೇಟು ಹೊಡೆಸಿ, ಅವರ ಕೈಗಳನ್ನು ಹಿಂದಕ್ಕೆ ಕಟ್ಟಿಸಿ, ಸುಣ್ಣದ ನಾಮ ಎಳೆದರು. “ಹೋಗಿ ನಿಮ್ಮ ರಾಜನಿಗೆ ಹಸ್ತಿನೆಯ ಸೇನೆ ಬಂದಿದೆ. ಗೋವುಗಳನ್ನು ಬಂಧಿಸಿದ್ದಾರೆ. ಬಲವುಳ್ಳವನು ಹೌದಾದರೆ ಬಿಡಿಸಿಕೊಳ್ಳಲು ಬರಬೇಕಂತೆ” ಎಂದು ಹೇಳಿ ಕಳುಹಿಸಿದರು.
ವಿರಾಟನ ಅರಮನೆಗೆ ದಕ್ಷಿಣ ದಿಕ್ಕಿನಿಂದ ಯುದ್ದ ಗೆದ್ದ ಓಲೆ ಬಂದು ಮುಟ್ಟಿದೆಯಷ್ಟೇ! ಉತ್ತರ ದಿಕ್ಕಿನಿಂದ
ಅಳುತ್ತಾ ಗೋಪಾಲಕರು ಓಡಿ ಬಂದರು. ಅರಮನೆಗೆ ಬಂದಾಗ ಅಲ್ಲಿ ರಾಜ ವಿರಾಟನಿಲ್ಲ. ದಕ್ಷಿಣ ಗೋಗ್ರಹಣದ ವಿಜಯೋತ್ಸವದಲ್ಲಿ ನಿರತನಾಗಿ ಉಳಿದಿದ್ದಾನೆ. ಸೇನೆಯೂ ಅಲ್ಲಿಯೆ ವಿಹರಿಸುತ್ತಿದೆ.
ಮುಂದುವರಿಯುವುದು