27.4 C
Udupi
Friday, August 1, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 259

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೬೦ ಮಹಾಭಾರತ

ಹೀಗೆ ತನ್ನ ಅಭಿಪ್ರಾಯ ಮಂಡಿಸಿದ ತ್ರಿಗರ್ತ ದೇಶದ ಸುಶರ್ಮ, ಇನ್ನೂ ಆಳವಾಗಿ ಅವಲೋಕನ ಮಾಡುತ್ತಾ ಹೇಳತೊಡಗಿದನು “ಈಗಿನ ವಾಸ್ತವ ಪರಿಸ್ಥಿತಿ ಎಲ್ಲ ದೇಶಗಳಲ್ಲೂ ಜಲಕ್ಷಾಮ ತಲೆದೋರಿದೆ. ಗೋವುಗಳಿಗೆ ಮೇವು ಇಲ್ಲ, ಕೃಷಿಕರೂ ಕಂಗಾಲಾಗಿದ್ದಾರೆ. ನಳನಳಿಸುವ ಹಸಿರು ಬಾಡುತ್ತಿದೆ. ಆದರೆ ಮತ್ಸ್ಯದೇಶದಲ್ಲಿ ಸಮೃದ್ಧಿ ಮೈದಳೆದಿದೆ. ಜಲಕ್ಷಾಮವೂ ಇಲ್ಲ. ಗೋ ಸಂಪತ್ತು, ಅಶ್ವ ಸಂಪತ್ತಿಗೆ ಆರ್ಯಾವರ್ತದಲ್ಲಿ ಕೀರ್ತಿ ಪಡೆಯುತ್ತಿದೆ. ಮೇಲಾಗಿ ಯಾಗ, ಯಜ್ಞ, ದಾನಾದಿ ಸತ್ಕರ್ಮಗಳು ನಿರಂತರವಾಗಿ ಸಾಗುತ್ತಲೆ ಇದೆ. ಈ ಸ್ಥಿತಿಯನ್ನು ಗಮನಿಸಿ, ಅನ್ಯದೇಶಗಳಿಗೆ ಹೋಲಿಸಿದರೆ ವ್ಯತಿರಿಕ್ತ ಸ್ಥಿತಿ ಅಲ್ಲಿ ಕಾಣುತ್ತಿದೆ. ಗುರು ದ್ರೋಣಾಚಾರ್ಯರು, ಭೀಷ್ಮಾಚಾರ್ಯರು ಅಭಿಪ್ರಾಯಪಟ್ಟಂತೆ ಪಾಂಡವರು ಧರ್ಮಿಷ್ಟರು. ಅವರೆಲ್ಲಿರುತ್ತಾರೊ ಅಲ್ಲಿ ಸಮೃದ್ಧಿ, ಸಂಪತ್ತು, ಕ್ಷೇಮ, ಶಾಂತಿ ನಿಕ್ಷೇಪಿಸಲ್ಪಡುತ್ತದೆ ಎಂಬುವುದು ಸತ್ಯವೇ ಹೌದಾದರೆ, ಸಾಕ್ಷಿ ಎಂಬಂತೆ ವಿರಾಟ ನಗರಿ ಗೋಚರಿಸುತ್ತಿದೆ. ಮತ್ಸ್ಯದೇಶದಲ್ಲಿ ಇಂತಹ ದಿವ್ಯತೆಗಳು ವಿಶೇಷವಾಗಿ ಕಾಣಸಿಗುತ್ತಿದೆ. ಮೇಲಾಗಿ ಕೀಚಕನಂತಹ ವಿಕ್ರಮಿಯ ಸಂಹಾರ ಸಾಮಾನ್ಯರಿಗೆ ಅಸಾಧ್ಯ ಎಂದು ಹೇಳಬಹುದು. ಅಲ್ಲಿನ ಸೈರಂಧ್ರಿಯ ಗಂಧರ್ವ ಪತಿಯಿಂದ ಹತನಾದ ಎಂಬ ವದಂತಿಯ ಸತ್ಯಾಸತ್ಯತೆ ಭೇದಿಸಿದರೆ ನಿಜ ತಿಳಿಯಬಹುದು. ಹಾಗಾಗಿ ನಾವು ಕಾರಣ ರೂಪಿಸಿ ಮತ್ಸ್ಯದೇಶದ ಮೇಲೆ ಆಕ್ರಮಣ ಮಾಡಿದರೆ ಸಂದೇಹ ಪರಿಹರಿಸಬಹುದು. ಕೀಚಕನೂ ಇಲ್ಲದ ಈ ಹೊತ್ತು ವೃದ್ಧ ರಾಜ, ಸಮರ್ಥ ಸೇನಾನಾಯಕನೂ ಇಲ್ಲದೆ ಸೈನ್ಯ ದುರ್ಬಲವೇ ಆಗಿದೆ. ನಮ್ಮ ಕಲ್ಪನೆಯಂತೆ ಅಲ್ಲಿ ಪಾಂಡವರು ಆಶ್ರಯಿತರಾಗಿದ್ದರೆ, ಪುರದ ರಕ್ಷಣೆಗಾಗಿ ಖಂಡಿತಾ ಬಂದೇ ಬರುತ್ತಾರೆ. ಹಾಗೆ ರಣಮುಖದಲ್ಲಿ ಇದಿರಾಗುವ ಪಾಂಡವರು ಜ್ಞಾತರಾಗುತ್ತಾರೆ. ಒಂದು ವೇಳೆ ಹಾಗೆಯೆ ಆದರೆ, ಒಪ್ಪಂದದಂತೆ ಮತ್ತೆ ವನವಾಸ – ಅಜ್ಞಾತವಾಸಕ್ಕೆ ಹೋಗಬೇಕಾದ ಆವರ್ತನ ಪುನರಾರಂಭವಾಗಿ ಹದಿಮೂರು ವರ್ಷ ನಿರಾತಂಕವಾಗಿ ಆಳ್ವಿಕೆ ನಡೆಸುವ ಅವಕಾಶ ಹಸ್ತಿನೆಯಲ್ಲಿ ನಿಮಗೆ ಒದಗಿ ಬರುತ್ತದೆ. ಬಹುಧಾನ್ಯ ಭರಿತ ಖಜಾನೆ, ರತ್ನ ಕೋಶ, ವಿವಿಧ ಸಂಪತ್ತನ್ನು ವಶಪಡಿಸಿಕೊಳ್ಳಲು ಅಥವಾ ಆತನ ಪುರದ ಮೇಲೆ ಆಕ್ರಮಣ ಮಾಡಿ ಬಹು ಸಹಸ್ರ ಸಂಖ್ಯೆಯ ಉತ್ಕೃಷ್ಟ ಗೋವುಗಳನ್ನು ಅಪಹರಿಸುವ ಕಾರ್ಯಕ್ಕೆ ಮುಂದಾದರೆ ನಮ್ಮ ಕಾರ್ಯ ಸಾಧನೆ ಆಗುವುದು. ಹೀಗೆ ಮಾಡುವುದರಿಂದ ಹೇರಳ ಸಂಪತ್ತೂ ವಶವಾಗುವುದು. ದುರ್ಬಲ ರಾಜನ ರಾಜ್ಯವೂ ಸೇರಿ ವಿಶಾಲ ವಿಸ್ತೃತ ಸಾಮ್ರಾಜ್ಯ ಸ್ಥಾಪನೆಗೂ ಹಾದಿಯಾಗುವುದು” ಎಂದನು.

ಈ ಸಲಹೆ ಕೇಳಿದ ಕರ್ಣ “ದುರ್ಯೋಧನಾ! ತ್ರಿಗರ್ತಾಧಿಪ ಸುಶರ್ಮನ ತರ್ಕ ಸರಿಯಾಗಿ ಇದೆ. ಈ ಕೂಡಲೆ ಸೈನ್ಯ ಸಿದ್ಧಗೊಳಿಸಿ ಮುಂದುವರಿಯೋಣ. ಕುರುಕುಲ ಪಿತಾಮಹ ಭೀಷ್ಮಾಚಾರ್ಯರು ಹಾಗು ಗುರು ದ್ರೋಣಾಚಾರ್ಯ, ಶಾರದ್ವತ ಕೃಪಾಚಾರ್ಯರು ಈ ಯುದ್ದಕ್ಕೆ ಯೋಜನೆ ರೂಪಿಸಲಿ. ಅವರ ನಿರ್ದೇಶನದಂತೆ ನಾವು ತೊಡಗಿಕೊಳ್ಳೋಣ” ಎಂದು ತನ್ನ ಸಹಮತ ಸೂಚಿಸಿದನು.

ಸುಯೋಧನ ಅಂತೆಯೆ ಸಮಾಲೋಚನ ಸಭೆ ನಡೆಸಿ ಯೋಜನೆ ರೂಪಿಸಲು ಹಿರಿಯರ ಸಲಹೆ ಕೇಳಿದ. ಭೀಷ್ಮ -ದ್ರೋಣಾಚಾರ್ಯರಿಗೆ ಈ ನಡೆ ಸಮಂಜಸ ಎನಿಸಲಿಲ್ಲ. ಗೋ ಅಪಹರಣಕ್ಕೆ ಕೌರವ ಸೇನೆಯೊಡನೆ ಹೋಗುವುದೊ ಬೇಡವೊ ಎಂಬ ದ್ವಂದ್ವ ಉತ್ಪನ್ನವಾಯಿತು. ಹಾಗೆಯೆ ಅವರು ತಮ್ಮ ಅಸಮಾಧಾನ ಪ್ರಕಟಿಸಿದಾಗ, “ಮನಸ್ಸಿಲ್ಲದವರು ಬರಬೇಕಾಗಿಲ್ಲ” ಎಂಬ ಉದ್ದಟತನದ ಆದೇಶ ಕೌರವ ಮಾಡಿದನು.

ಇದನ್ನು ಕೇಳಿದ ದ್ರೋಣ, ಭೀಷ್ಮಾಚಾರ್ಯರು ತಮ್ಮೊಳಗೆ ಸಮಾಲೋಚನೆ ಮಾಡತೊಡಗಿದರು. “ಒಂದೊಮ್ಮೆಗೆ ಮತ್ಸ್ಯ ದೇಶದಲ್ಲಿ ಇವರ ಸಂಶಯದಂತೆ ಪಾಂಡವರು ಇದ್ದರೆ, ಯುದ್ದವಾದರೆ ಅತಿರೇಕದ ಸ್ಥಿತಿ ಖಂಡಿತಾ ನಿರ್ಮಾಣವಾದೀತು. ಅತಿಬಲರೂ – ಅಸದಳ ಪರಾಕ್ರಮಿಯೂ ಆದ ಭೀಮಾರ್ಜುನರ ಮುಂದೆ ನಮ್ಮ ದುರ್ಯೋಧನನ ಸೇನೆ ಅರೆಕ್ಷಣದಲ್ಲಿ ಧೂಳೀಪಟವಾಗಿ ಸರ್ವನಾಶವಾಗಿ ಹೋದೀತು. ಹೀಗಿರಲು ನಾವು ಜೊತೆಯಾಗಿ ಹೋಗಿ ಯಾವುದೇ ರೀತಿಯ ಅನಾಹುತವಾಗದಂತೆ ನೋಡಿಕೊಳ್ಳಲೇಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ” ಎಂದು ತೀರ್ಮಾನಿಸಿ ಜೊತೆಯಾಗಿ ಹೋಗಲು ಒಪ್ಪಿಕೊಂಡರು.

ಕೌರವನ ಯೋಜನೆಯಂತೆ ಸೈನ್ಯ ಎರಡು ಭಾಗಗಳಾಗಿ ಹಂಚಿಕೊಂಡರು. ಕೃಷ್ಣ ಪಕ್ಷದ ಸಪ್ತಮಿಯಂದು ಬಲಾಢ್ಯ ಸೈನ್ಯದೊಂದಿಗೆ ಸುಶರ್ಮನ ನಾಯಕತ್ವದಲ್ಲಿ ಮತ್ಸ್ಯ ದೇಶದ ದಕ್ಷಿಣ ಭಾಗದಿಂದ ಆಕ್ರಮಣ ಮಾಡುವುದು. ಮರುದಿನ ಅಷ್ಟಮಿ – ಉತ್ತರ ದಿಕ್ಕಿನಿಂದ ಹಸ್ತಿನೆಯ ಅತಿರಥ ಮಹಾರಥರ ಸೇನೆ ದಾಳಿ ನಡೆಸುವುದು ಎಂಬ ಯೋಜನೆ ರೂಪುಗೊಂಡಿತು.

ಅಂತೆಯೆ ಸುಶರ್ಮ ತನ್ನ ತ್ರಿಗರ್ತ ದೇಶದ ಸೇನೆಯ ಜೊತೆ ಕೂಡಿಕೊಂಡು, ದಕ್ಷಿಣ ಭಾಗದಿಂದ ಆಕ್ರಮಣ ಮಾಡಿದನು. ಗೋಪಾಲಕರನ್ನೂ, ದಕ್ಷಿಣದ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಸಹಸ್ರ ಸಹಸ್ರ ದಿವ್ಯ ಗೋವುಗಳನ್ನು ಬಂಧಿಸಿದನು.

ತಪ್ಪಿಸಿಕೊಂಡು ಓಡಿಬಂದ ಗೋಪಾಲಕರು ವಿರಾಟನ ಅರಮನೆಗೆ ಬಂದು ವಿಷಯ ತಿಳಿಸಿ ರಕ್ಷಣೆ ಬೇಡಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page