ಭಾಗ -258
ಭರತೇಶ ಶೆಟ್ಟಿ, ಎಕ್ಕಾರ್

ಶಕುನಿಯ ಊಹೆ ಹಾಗಿದ್ದರೂ, ಕರ್ಣ ಮಾತ್ರ ಅವಸರದಲ್ಲಿದ್ದ. ಸುಯೋಧನಾ! ಇನ್ನು ಕಾಲಹರಣ ಮಾಡಲು ಸಮಯವಿಲ್ಲ. ಹೇರಳ ದ್ರವ್ಯ, ಧನ ಕನಕ ನೀಡಲ್ಪಡುವ ಘೋಷಣೆಯೊಂದಿಗೆ ಚತುರರಾಗಿರುವ ಗುಪ್ತಚಾರಕರನ್ನು ಈಗಲೆ ಎಲ್ಲ ದೇಶಗಳಿಗೂ ಕಳುಹಿಸಬೇಕು. ಪಾಂಡವರ ಬಗ್ಗೆ ಸುಳಿವು ಸಿಕ್ಕರೆ ಮತ್ತೆ ಅವರನ್ನು ಹದಿಮೂರು ವರ್ಷ ಕಾಲ ಹಸ್ತಿನೆಯಿಂದ ಹೊರಗಿಡಬಹುದು” ಎಂದನು.
ದುಶ್ಯಾಸನ ಮಾತ್ರ “ಅಣ್ಣಾ, ಆ ಪಾಂಡವರಿಗೆ ಅವರು ವಿಕ್ರಮಿಗಳು ಎಂಬ ಅಹಂಭಾವ ಇತ್ತು. ಎಲ್ಲಾದರು ಕಾಡದಾರಿಯಲ್ಲಿ ಅಹಂಕಾರದಿಂದ ಸಾಗುವಾಗ ಯಾವುದೊ ಭೀಕರ ಪ್ರಾಣಿ ಇವರನ್ನು ಭಕ್ಷಿಸಿರಬಹುದು. ಖಂಡಿತವಾಗಿಯೂ ಅವರು ಬದುಕಿ ಉಳಿದಿಲ್ಲ.” ಎಂದನು
ಹೀಗೆ ಅವರವರ ಚರ್ಚೆ ಸಾಗುತ್ತಿರಬೇಕಾದರೆ ಅಲ್ಲಿ ಗುರು ದ್ರೋಣ, ಭೀಷ್ಮ, ಕೃಪಾಚಾರ್ಯರು, ವಿದುರಾದಿಗಳೆಲ್ಲ ಆಸ್ಥಾನದಲ್ಲಿದ್ದಾರೆ. ದ್ರೋಣಾಚಾರ್ಯರು ” ಕೌರವಾ, ಧರ್ಮರಾಯ ನೀತಿ, ಧರ್ಮ ಮೀರಿ ವ್ಯವಹರಿಸಲಾರನು. ಆತನ ಸಹೋದರರು ಅತುಲ ವಿಕ್ರಮಿಗಳು. ಧರ್ಮವೂ – ಶಕ್ತಿಯೂ ಜತೆಯಾಗಿರುವ ಕಾರಣ ಪಾಂಡವರ ಅಂತ್ಯ ನಿಮ್ಮ ಭ್ರಮೆಯಷ್ಟೆ.” ಎಂದು ಎಚ್ಚರಿಸಿದರು.
ದುರ್ಯೋಧನ ಕೃಪಾಚಾರ್ಯರತ್ತ ನೋಡಿದಾಗ, “ದುರ್ಯೋಧನಾ! ಈವರೆಗೆ ಏನೆಲ್ಲಾ ಆಗಿದೆಯೊ ಅದು ಆಗಿ ಹೋಗಿದೆ. ಆದರೆ ಮುಂದೆ ಏನಾಗಬೇಕೊ ಅದು ನಮ್ಮ ನಿಯಂತ್ರಣದಲ್ಲಿದೆ. ಒಂದು ಧರ್ಮ ಸೂಕ್ಷ್ಮ ಹೇಳುವೆ, ದೈವಾನುಗ್ರಹಿತರು, ಸತ್ಯಸಂಧರು, ಧರ್ಮಪಾಲಕರಾದ ಪಾಂಡವರನ್ನು ಯಾವ ಬಲಯುತ ಸೈನ್ಯವೆ ಆಗಿರಲಿ, ಏನೇನೂ ಮಾಡಲಾಗದು. ಹಾಗಾಗಿ ಧರ್ಮಾತ್ಮರಾದ ಪಾಂಡವರ ಜೊತೆ ಸಖ್ಯವೇ ಅತ್ಯುತ್ತಮ ಮಾರ್ಗ” ಎಂದರು.
ವಿದುರನು “ಪಾಂಡವರು ಧರ್ಮ ಸಹಿಷ್ಣುಗಳು. ತಮಗೆ ಎದುರಿಸುವ ಸಾಮರ್ಥ್ಯವಿದ್ದರೂ, ಸಹಿಸಿಕೊಂಡು ವನವಾಸ, ಅಜ್ಞಾತವಾಸಕ್ಕೆ ತೆರಳಿ ನಿಷ್ಠೆಯಿಂದ ಆಚರಿಸುತ್ತಿದ್ದಾರೆ. ಅಂತಹ ಧರ್ಮಾಚಾರಿಗಳನ್ನು ಸೋಲಿಸಲು ಈ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಸಖ್ಯವಂತೂ ಅಪ್ರಸ್ತುತ ಪ್ರಸ್ತಾಪ. ಆದರೂ ಧರ್ಮದ ಮೂರ್ತಿ ಧರ್ಮರಾಯನ ಎದುರು ಒಂದೊಮ್ಮೆ ಒಪ್ಪಂದಕ್ಕೆ ಮುಂದಾದರೆ ಹಿರಿಯರಿಗೆ ಗೌರವ ಸೂಚಕವಾಗಿ ಖಂಡಿತಾ ಉತ್ತಮ ನ್ಯಾಯ ಒದಗಿಸಿದರೆ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಆದರೆ ನಿಮ್ಮ ಮನಪರಿವರ್ತನೆ ಮತ್ತು ಒಪ್ಪಿಗೆ ಸುಲಭ ಸಾಧ್ಯವಲ್ಲ” ಎಂದನು.
ಅಂತಿಮವಾಗಿ ಭೀಷ್ಮಾಚಾರ್ಯ ರಲ್ಲಿ ಅಭಿಪ್ರಾಯ ಕೇಳಿದಾಗ ” ಎಲ್ಲಿ ಪಾಂಡವರಿದ್ದಾರೊ ಅಲ್ಲಿ ಸತ್ಯ, ಧರ್ಮ, ನ್ಯಾಯ ಪಾಲಿಸಲ್ಪಡುತ್ತದೆ. ಸಮೃದ್ಧಿಯ ಪ್ರತೀಕವಾದ ಗೋ ಸಂಪತ್ತು ವಿಪುಲವಾಗಿ ಬೆಳೆಯುತ್ತದೆ. ಜಲಾಶಯ ಬತ್ತುವುದಿಲ್ಲ, ಕಾಲಕಾಲಕ್ಕೆ ಮಳೆಯೂ ಆಗುತ್ತದೆ. ಹಾಗಾಗಿ ಯಾವ ದೇಶ ನೆಮ್ಮದಿಯಿಂದ ಇದೆಯೊ ಅಲ್ಲಿ ನಮ್ಮ ಪಾಂಡವರು ಇರುವ ಸಾಧ್ಯತೆಯಿದೆ. ಪಾಂಡವರಿಗೆ ಸೈನ್ಯದ ಅಗತ್ಯವಿಲ್ಲ. ಎದುರಾಳಿ ಸೈನ್ಯವೆಷ್ಟೇ ಬಲಯುತವಾಗಿದ್ದರೂ ಪಾರ್ಥನ ಧನುರ್ವೇದ ಪಾಂಡಿತ್ಯದೆದುರು ಏನೇನು ಸಾಲದು. ಪಾಂಡವರಿರುವ ದೇಶದ ವಿರುದ್ದ ಆಕ್ರಮಣ ಮಾಡುವ ಮೊದಲು ಒಂದು ಮಾತು ನೆನಪಿಟ್ಟುಕೊಳ್ಳಿ, ಪಾಂಡವ ಸೋದರರನ್ನು ಗೆಲ್ಲುವ ಸಾಮರ್ಥ್ಯ ಸಿದ್ದತೆ ಬಗ್ಗೆ ಮೊದಲು ಪರಿಶೀಲಿಸಬೇಕು. ಭೀಮಾರ್ಜುನರನ್ನು ಸೋಲಿಸುವ ಶಕ್ತಿವಂತರು ನಮ್ಮ ಪಾಳಯದಲ್ಲಿ ಯಾರಿದ್ದಾರೆ ಎಂಬ ಸೂಕ್ಣ್ಮವನ್ನು ಅರ್ಥೈಸಿಕೊಳ್ಳಬೇಕು” ಎಂದರು.
ಹೀಗೆಲ್ಲಾ ಚರ್ಚೆ ಸಾಗುತ್ತಿರುವಾಗ, ತ್ರಿಗರ್ತ ದೇಶದ ರಾಜ ಸುಶರ್ಮನೂ ಹಸ್ತಿನೆಯ ಆಸ್ಥಾನದಲ್ಲಿದ್ದನು. “ಈ ಹಿಂದೆ ಮತ್ಸ್ಯ ದೇಶದ ಸೇನೆಯಿಂದ ಬಹಳಷ್ಟು ಉಪಟಳ ನನ್ನ ತ್ರಿಗರ್ತ ದೇಶಕ್ಕಾಗಿದೆ. ಆದರೆ ಆ ಸಮಯದಲ್ಲಿ ಮತ್ಸ್ಯ ದೇಶದ ಸೇನಾಪತಿ ಕೀಚಕನಾಗಿದ್ದ. ಇತ್ತೀಚೆಗೆ ಯಾರೊ ಒಬ್ಬಳು ಸೈರಂಧ್ರಿಯ ವಿಚಾರದಲ್ಲಿ ಮುಂದುವರಿದ ಕೀಚಕ ಗಂಧರ್ವರಿಂದ ಹತನಾಗಿದ್ದಾನಂತೆ. ನಾನು ಕಿಚಕನ ಎದುರಾಗಿ ಸಮರ ಕಾದಿದವನೆ. ಆದರೆ ಆ ಕೀಚಕನ ವಧೆ ಸಾಮಾನ್ಯ ಯಾರಿಗೂ ಸಾಧ್ಯ ಇಲ್ಲ. ಹೀಗಿರಲು ನಮ್ಮ ಸಂದೇಹ ಪರಿಹಾರವಾಗಬೇಕಾದರೆ ಮತ್ಸ್ಯ ದೇಶವನ್ನು ಕೆಣಕಬೇಕು. ಯುದ್ದ ಮಾಡಲು ಅವರ ಬಳಿ ಕೀಚಕನಿಲ್ಲ. ಇಂತಹ ಸಮಯ ಬಳಸಿ ಗೋವುಗಳ ಅಪಹರಣ, ಬ್ರಾಹ್ಮಣರಿಗೆ ಪೀಡೆ, ಸ್ತ್ರೀಯರಿಗೆ ಉಪಟಳ ಇಂತಹ ಯಾವುದಾದರೂ ತೊಂದರೆ ನೀಡಿದರೆ ಯುದ್ದವಾಗುತ್ತದೆ. ಈಗ ಕೀಚಕ ಇಲ್ಲದ ಸಮಯ, ವಿರಾಟ ಮುದುಕ, ಮತ್ತೆ ಯುದ್ದಕ್ಕೆ ಯಾರು ಬರಬಹುದು? ಪಾಂಡವರು ಇದ್ದರೆ ಯುದ್ದಕ್ಕೆ ಬರುತ್ತಾರೆ. ಬಂದರೆ ಜ್ಞಾತರಾಗಿ ಪತ್ತೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅಂತಹ ಒಂದು ಪ್ರಯತ್ನ ಮಾಡಬಹುದು. ಎಂದು ಸಲಹೆ ನೀಡಿದನು.
ದುರ್ಯೋಧನನಿಗೂ ಅನುಮಾನ ಪರಿಹಾರಕ್ಕೆ ಅವಕಾಶ ಇರದ ಈ ಸಮಯ ಯುದ್ದಕ್ಕೆ ಕಾರಣವಾಗುವ ಉಪಟಳ ಸೃಜಿಸಬೇಕು. ಪಾಂಡವರು ಮತ್ಸ್ಯದೇಶದಲ್ಲಿ ಎಲ್ಲಿದ್ದರೂ ಯುದ್ದವಾದಾಗ ಹುಡುಕಿಸಲು ಸುಲಭ ದಾರಿ ಹೌದು” ಎಂದು ತರ್ಕಿಸಿದನು.
ಮುಂದುವರಿಯುವುದು…..