24.5 C
Udupi
Tuesday, July 22, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 257

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೫೮ ಮಹಾಭಾರತ

ಇತ್ತ ವಿರಾಟ ಮಹಾರಾಜ ವಿಚಲಿತನಾಗಿದ್ದಾನೆ. ಕೀಚಕರು ಮಹಾಬಲರು, ಸತ್ತು ಬಿದ್ದ ಹೆಣಗಳ ರಾಶಿಯಾಗಿ ಮಸಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಆ ಶವಗಳ ಅಂತ್ಯಕ್ರಿಯೆಯಾಗಬೇಕು. ತನ್ನ ಸೇವಕರನ್ನು ಕರೆದು ಆ ಕಾರ್ಯ ಪೂರೈಸಿ ಬರಲು ಆಜ್ಞೆ ಮಾಡಿದ್ದಾನೆ. ರಾತ್ರೋ ರಾತ್ರಿ ನೂರೈದು ಮಂದಿ ಕೀಚಕರ ಅಂತ್ಯಕ್ರಿಯೆ ನೆರವೇರಿತು. ರತ್ನ ಗಂಧ ಸಹಿತವಾಗಿ ಬೃಹತ್ತಾದ ಒಂದೇ ಚಿತಾಗ್ನಿಯಲ್ಲಿ ದಹಿಸಿ ಕೆಲಸ ಮಾಡಿ ಮುಗಿಸಲಾಯಿತು.

ದ್ರೌಪದಿ ರಾಜ ಭವನದತ್ತ ಬರುವಾಗ, ತನ್ನ ಶರೀರ, ವಸ್ತ್ರವನ್ನು ಶುಚಿಗೊಳಿಸಿ ಮುನ್ನಡೆಯುತ್ತಿದ್ದಾಳೆ. ಸೇವಕರು ಮತ್ತು ಸೇರಿದ್ದ ಜನರು ದ್ರೌಪದಿಯನ್ನು ಕಂಡು ಗಂಧರ್ವರ ಪತ್ನಿ ಎಂಬ ಕಾರಣದಿಂದ ಹೆದರಿ ದಶದಿಕ್ಕುಗಳಿಗೂ ಚದುರಿ ಪ್ರಾಣಭಯದಿಂದ ಓಡಿ ಹೋಗುತ್ತಿದ್ದಾರೆ. ದ್ರೌಪದಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಳೆ. ನಗರದಲ್ಲಾದ ಕೋಲಾಹಲದಿಂದ ಎಲ್ಲರೂ ರಾತ್ರಿಯ ನಿದ್ರಾಭಂಗವಾಗಿ ಎಚ್ಚೆತ್ತಿದ್ದಾರೆ. ಇತ್ತ ಬ್ರಹನ್ನಳೆಯೂ ಹೊರಬಂದು ನೋಡುವಂತಾಗಿದೆ ವಾಸ್ತವ ಸ್ಥಿತಿ.

ಪಾಕಶಾಲೆಯ ಬಳಿ ಬಂದಾಗ ದ್ರೌಪದಿ “ತನ್ನನ್ನು ಕಾಪಾಡಿದ ಗಂಧರ್ವ ಪತಿಗೆ ಕೃತಜ್ಞತೆಗಳು ಎಂದು ಪರೋಕ್ಷವಾಗಿ ಭೀಮನಿಗೆ ಅಭಿನಂದನೆ ಸಲ್ಲಿಸಿದಳು.

ಇದನ್ನೆಲ್ಲಾ ನೋಡುತ್ತಿದ್ದ ಬ್ರಹನ್ನಳೆಯ (ಅರ್ಜುನನ) ಕೌತುಕ ಸಹಜವಾಗಿ ಹೆಚ್ಚಾಯಿತು. ಮೇಲ್ನೋಟದಿಂದ ಅರ್ಥವೂ ಆಯಿತು. ದ್ರೌಪದಿಗೆ ಒದಗಿದ ಕೀಚಕರ ಆಪತ್ತು ಭೀಮಸೇನನಿಂದ ಪರಿಹಾರವಾಗಿದೆ. ಆಗ ಬ್ರಹನ್ನಳೆಯ ಜೊತೆಗಿದ್ದ ಕನ್ಯೆಯರು ದ್ರೌಪದಿಯನ್ನು ಸಮೀಪಿಸಿ “ಸೈರಂಧ್ರೀ, ನೀನು ಅದೃಷ್ಟವಶಾತ್ ಕೀಚಕರ ಬಾಧೆಯಿಂದ ಮುಕ್ತಳಾದೆ. ನಿರಪರಾಧಿನಿಯಾದ ನಿನಗೆ ಉಪಟಳ ನೀಡಿದ ಕೀಚಕರು ಹತರಾದರು” ಎಂದು ಹೇಳ ತೊಡಗಿದರು.

ಹತ್ತಿರ ಬಂದಿದ್ದ ಬ್ರಹನ್ನಳೆ “ಸೈರಂಧ್ರಿ, ನೀನು ಬಿಡುಗಡೆಗೊಂಡದ್ದು ಹೇಗೆ? ಆ ಪಾಪಿ ಕೀಚಕರು ಹತರಾದುದು ಹೇಗೆ? ಈ ಸೂಕ್ಷ್ಮ ಸತ್ಯವನ್ನು ನಿನ್ನಿಂದಲೆ ಕೇಳ ಬಯಸುವೆ” ಎಂದು ಕೇಳಿಕೊಂಡನು.

ಆಗ ದ್ರೌಪದಿ “ಅಯ್ಯಾ ಬ್ರಹನ್ನಳೆಯೆ, ನನ್ನ ಜೀವನದ ಕಷ್ಟ ನಿನಗೆ ತಿಳಿಯಲೆ ಇಲ್ಲ. ನಿನಗೀಗ ತಿಳಿಯಪಡಿಸಿ ಆಗಬೇಕಾದುದು ಏನೂ ಉಳಿದಿಲ್ಲ. ನೀನು ಕ್ಷೇಮವಾಗಿರುವೆಯಲ್ಲ? ನಿನಗ್ಯಾಕೆ ಅನ್ಯರ ಚಿಂತೆ?” ಎಂದು ತನ್ನ ಕಷ್ಟಕಾಲಕ್ಕೆ ಒದಗಿ ಬರಲಾಗದ ಅರ್ಜುನನ್ನು ಕೆಣಕುವಂತೆ ನುಡಿದಳು.

ಇದನ್ನು ಕೇಳಿ ದುಃಖಿತನಾದ ಪಾರ್ಥ “ಹೇ ಸೈರಂಧ್ರಿ! ನೀನು ತಪ್ಪಾಗಿ ತಿಳಿದಿರುವೆ. ನಾನಿಲ್ಲಿ ಅಸದಳ ವೇದನಾಮಯವಾದ ಬದುಕನ್ನು ಬದುಕುತ್ತಿರುವೆ. ನನಗೆ ಪ್ರಿಯವಲ್ಲದ ಬದುಕು ನನ್ನದಾಗಿದೆ. ಪ್ರಾಣಿಗಿಂತ ಕಡೆಯಾದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿರುವೆ. ನೀನಂದುಕೊಂಡಂತೆ ಸುಖ ಜೀವನ ನನ್ನದಾಗಿಲ್ಲ” ಎಂದು ವಿವರಿಸಿದನು.

ದ್ರೌಪದಿ ಆತನಿಗೆ ಉತ್ತರ ನೀಡಲಿಲ್ಲ. ನೇರವಾಗಿ ಅರಮನೆಗೆ ಬಂದಳು. ಸುದೇಷ್ಣೆಯ ಬಳಿ ಸಾಗಿ “ರಾಣೀ, ಮೊದಲೇ ನನ್ನ ವಿಚಾರ ಹೇಳಿದ್ದೆ. ನೀನು ಉಪೇಕ್ಷಿಸಿದೆ, ಕೀಚಕಾದಿಗಳು ಈಗ ಸತ್ಯ ಅರಿತುಕೊಳ್ಳುವಂತಾಯಿತು” ಎಂದಳು.

ಸುದೇಷ್ಣೆ ಮೊದಲೆ ಭಯಗೊಂಡಿದ್ದಾಳೆ. ವಿರಾಟನ ಆಜ್ಞೆಯಂತೆ, “ಸೈರಂಧ್ರಿ, ಈವರೆಗೆ ನಿನಗೆ ಉದ್ಯೋಗ, ಆಶ್ರಯ ನಾವು ನೀಡಿದ್ದೆವು. ಈಗ ಮಹಾರಾಜನೆ ನಿನ್ನ ಗಂಧರ್ವ ಪತಿಗಳ ಕಾರಣದಿಂದ ಚಿಂತೆಗೀಡಾಗಿದ್ದಾರೆ. ಇನ್ನು ತೊಂದರೆ ಮೈಮೇಲೆ ಎಳೆದುಕೊಳ್ಳಲು ಅವರೂ ಸಿದ್ಧರಿಲ್ಲ. ಹಾಗಾಗಿ ನಿನಗಿಷ್ಟ ಬಂದ ಕಡೆ ನೀನಿನ್ನು ಹೋಗಬಹುದು” ಎಂದು ನಿಷ್ಠುರವಾಗಿ ನುಡಿದಳು.

ಸೈರಂಧ್ರಿ ಮಾಲಿನಿ ನಸುನಗುತ್ತಾ “ರಾಣೀ, ನಿಮ್ಮ ಮನದ ಭಾವ ನನಗರ್ಥವಾಗಿದೆ. ಏನಾಗಿದೆಯೊ ಅದು ಒಳ್ಳೆಯದಕ್ಕೇ ಆಗಿದೆ. ಚಿಂತೆ ಮಾಡದಿರಿ. ಇನ್ನು ನಾನಿಲ್ಲಿ ಇದ್ದರೂ ಕೆಲದಿನಗಳವರೆಗೆ ಮಾತ್ರ ಇರುತ್ತೇನೆ. ನನ್ನನ್ನು ಪತಿಗಳು ಕರೆದೊಯ್ಯುವ ಸಮಯ ಹತ್ತಿರವಾಗುತ್ತಿದೆ. ಮಾತ್ರವಲ್ಲ ನನ್ನ ಪತಿವರ್ಯರು ಆಶ್ರಯದಾತರಾದ ನಿಮಗೆ ಒಳಿತನ್ನು ಮಾಡುವವರಿದ್ದಾರೆ. ರಾಜ ವಿರಾಟನೂ ಶ್ರೇಯಸ್ಸನ್ನು ಗಳಿಸಲಿದ್ದಾನೆ. ಹಾಗಾಗಿ ಅವಸರ ಮಾಡಬೇಡಿ” ಎಂದಳು.

ವಿರಾಟ ರಾಜನಿಗೆ ಕೀಚಕನ ಗುಣ – ಬುದ್ದಿ ಗೊತ್ತಿತ್ತು. ಪರಸ್ತ್ರೀ ಕಾಮುಕ, ಬಯಸಿದ್ದನ್ನು ಹಠದಿಂದ ಪರಪೀಡಕನಾಗಿ ಪ್ರಜೆಗಳಿಗೆ ತೊಂದರೆಯಾದರೂ ಬಲವಂತದಿಂದ ತನ್ನಾಸೆ ಪೂರೈಸಿಕೊಳ್ಳುತ್ತಿದ್ದವನು. ಆದರೂ ಕೀಚಕನ ಇರುವಿಕೆಯಿಂದಾಗಿ ಮತ್ಸ್ಯ ದೇಶದ ಸೇನೆ ಸುಭದ್ರವೂ ಬಲಯುತವೂ ಆಗಿತ್ತು. ಕಾರಣ ಕೀಚಕನಿಗೆ ಹೆದರಿ ಯಾರೂ ಮತ್ಸ್ಯ ದೇಶದ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ. ಈಗ ಅಂತಹ ಸೇನಾನಾಯಕನೆ ಮೃತನಾಗಿದ್ದಾನೆ. ಮುಂದೆ ದೇಶದ ರಕ್ಷಣೆ ಹೇಗೆ ಎಂಬ ವ್ಯಥೆ ಆತನನ್ನು ಆವರಿಸಿದೆ.

ಮತ್ಸ್ಯದೇಶದ ಸ್ಥಿತಿ ಹೀಗಿರಲು ಮಹತ್ತರವಾದ ವಿದ್ಯಮಾನಕ್ಕೆ ಒಂದು ಬೆಳವಣಿಗೆ ಕಾರಣವಾಗುತ್ತಿತ್ತು. ಅದೇನೆಂದರೆ ಪಾಂಡವರು ಎಲ್ಲಿದ್ದಾರೆ ಎಂಬ ಪತ್ತೆದಾರಿ ಕೆಲಸಕ್ಕೆ ನಿಯುಕ್ತರಾಗಿದ್ದ ಗುಪ್ತಚಾರರು ತಮ್ಮ ಕಾರ್ಯ ಸಾಧಿಸುವಲ್ಲಿ ನಿಷ್ಫಲರಾಗಿ ಮರಳಿ ಹಸ್ತಿನೆ ಸೇರಿದ್ದರು. ಈ ಮೊದಲು ಮತ್ಸ್ಯದೇಶದ‌ ನೆರೆಯ ರಾಜ್ಯ ತ್ರಿಗರ್ತದ ಸುಶರ್ಮನನ್ನು ಕೀಚಕರು ಸೋಲಿಸಿದ್ದರು. ಆತ ಪ್ರತಿಕಾರ ತೀರಿಸಲು ಕೌರವರೊಡನೆ ಮೈತ್ರಿ ಮಾಡಿಕೊಂಡಿದ್ದನು. ಹೀಗಿರಲು ಸವಾಲಾಗಿದ್ದ ಅಭೇದ್ಯ ಮತ್ಸ್ಯ ದೇಶದ ಸೇನಾಪತಿ ಕೀಚಕನ ಮರಣ ಸುದ್ದಿ ಹಸ್ತಿನೆಗೂ ತಲುಪಿತು.

ದುರ್ಯೋಧನ ತನ್ನ ಆಪ್ತರನ್ನೆಲ್ಲಾ ಸೇರಿಸಿ ಸಮಾಲೋಚನೆ ಮಾಡತೊಡಗಿದ. “ಇನ್ನು ಕೆಲವೆ ಕೆಲವು ಬೆರಳೆಣಿಕೆಯ ದಿನಗಳನ್ನು ಕಳೆದರೆ ಪಾಂಡವರ ಅಜ್ಞಾತವಾಸ ಸಮಾಪನಗೊಳ್ಳಲಿದೆ. ಅಷ್ಟರೊಳಗೆ ನಾವು ಅವರನ್ನು ಪತ್ತೆ ಹಚ್ಚ ಬೇಕು” ಎಂದು ತನ್ನ ಅಭಿಪ್ರಾಯ ಪ್ರಕಟಿಸಿದ. ತಕ್ಷಣ ಪಾಂಡವರ ಪತ್ತೆಗಾಗಿ ಋಷ್ಯಾಶ್ರಮ, ಅವರ ಮಿತ್ರ ರಾಷ್ಟ್ರಗಳೊಳಗೆ ಹುಡುಕಾಟ ನಡೆಸಬೇಕಾಗಿದೆ” ಎಂದನು. ಆಗ ದುಶ್ಯಾಸನ “ಅಣ್ಣಾ, ನಮ್ಮ ಬೇಹಿನಚರರು ಹೇಳುವಂತೆ ಪಾಂಡವರು ವನವಾಸ ಮುಕ್ತಾಯ ಕಾಲದಲ್ಲಿ ನಾಪತ್ತೆಯಾಗಿದ್ದಾರೆ ಎಂದರೆ ಘೋರ ಮೃಗಗಳು ಅವರನ್ನು ಕೊಂದು ತಿಂದಿರಬಹುದು. ಇಲ್ಲಾ ಯಾರಾದರೂ ಘೋರಾರಣ್ಯದ ಒಳಗಿರುವ ಮಾಯಾವಿಗಳಿಂದ ಹತರಾಗಿರುವ ಸಾಧ್ಯತೆಯೂ ಇದೆ. ಈ ಮಾತು ಹೇಳಲು ಕಾರಣ, ಬದುಕಿದ್ದರೆ ಎಲ್ಲಿದ್ದರೂ ಈವರೆಗೆ ಅವರ ಸುಳಿವು ಸಿಕ್ಕಿರುತ್ತಿತ್ತು” ಎಂದನು.

ಆಗ ಮಹಾಮತಿ, ತಂತ್ರ ಚತುರ ಶಕುನಿ ಕೆಲವು ಸೂಕ್ಷ್ಮಗಳನ್ನು ವಿಶ್ಲೇಷಿಸಿದನು, ” ಎಲ್ಲೆಡೆ ಈಗ ಬರಗಾಲ ಪೀಡಿತವಾಗಿದೆ. ಈ ಸಮಯ ಮತ್ಸ್ಯ ದೇಶ ಮಾತ್ರ ಸಮೃದ್ಧವಾಗಿದೆ. ಗೋ, ಕ್ಷೀರ, ಕೃಷಿ, ಆಡಳಿತ ನೀರಾವರಿ ಹೀಗೆ ಸಮಗ್ರ ವಿಚಾರದಲ್ಲೂ ಮತ್ಸ್ಯ ದೇಶ ಸಂಪತ್ಭರಿತವಾಗಿದೆ. ಧರ್ಮರಾಯ ಇರುವಲ್ಲಿ ಮಾತ್ರ ಈ ತೆರನಾದ ಸಮೃದ್ಧಿ ಇರಲು ಸಾಧ್ಯವಿದೆ. ಅಂದರೆ ನನ್ನ ಊಹೆಯಂತೆ ಪಾಂಡವರು ಮತ್ಸ್ಯ ದೇಶದಲ್ಲಿ ಇದ್ದಾರೆ. ಮೇಲಾಗಿ ಅಲ್ಲಿ ಕೀಚಕರ ವಧೆಯಾಗಿದೆ. ಭೀಮನಲ್ಲದೆ ಅನ್ಯರಿಂದ ಕೀಚಕವಧೆ ಸುಲಭ ಸಾಧ್ಯವಲ್ಲ. ನನ್ನ ಸಂದೇಹ ಅವರು ಮತ್ಸ್ಯ ದೇಶದಲ್ಲಿ ಇರುವ ಸಾಧ್ಯತೆ ಹೆಚ್ಚಿರುವಂತೆ ತರ್ಕಿಸುತ್ತಿದೆ” ಎಂದು ಸಂದೇಹ ಪ್ರಕಟಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page