ಭಾಗ 256
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೫೭ ಮಹಾಭಾರತ
ಪಾಕ ಶಾಲೆಯಲ್ಲಿ ಭೀಮನಿಗೆ ಪರಮ ಸೌಖ್ಯಪ್ರದ ರಾತ್ರಿ. ಕೃಷಿಕನಿಗೆ ಉತ್ತಮ ಫಸಲು ಬಂದರೆ ಸಮೃದ್ಧಿ, ಕಲಾವಿದನಿಗೆ ಕಲಾಕೃತಿ, ಪ್ರದರ್ಶನ ಯಶಸ್ವಿಯಾದರೆ ಸಂತೃಪ್ತಿ, ಶಿಲ್ಪಿಗೆ ಶಿಲ್ಪ ಸುಂದರವಾದರೆ ಸಾರ್ಥಕ್ಯತೆ, ಅಂತೆಯೆ ವಿಕ್ರಮಿಗೆ ಅತಿಬಲನ ಗೆದ್ದರೆ ಮಹದಾನಂದ. ಇಂದು ಭೀಮನಿಗೂ ಅತುಲ ವೀರ ಕೀಚಕನ ಕೆಡಹಿ ಕಳೆದ ಸಂತೋಷದ ಸಮಯ. ಆ ಯುದ್ದ ಕ್ಷಣ ಕ್ಷಣಗಳನ್ನು ನೆನಪಿಸುತ್ತಾ, ಆಸ್ವಾದಿಸುತ್ತಾ ಮಲಗಿಕೊಂಡಿದ್ದಾನೆ.
ಇತ್ತ ಸೈರಂಧ್ರಿಯ ಘೋಷಣೆ ” ಗಂಧರ್ವರಾದ ನನ್ನ ಪತಿಗಳು ಕೀಚಕನನ್ನು ನಾಟ್ಯಶಾಲೆಯಲ್ಲಿ ಶಿಕ್ಷಿಸುತ್ತಿದ್ದಾರೆ” ಈ ಮಾತು ಕೇಳಿ ಪಂಜುಗಳನ್ನಿಡಿದು ಓಡಿ ನಾಟ್ಯಶಾಲೆಯತ್ತ ಹೋದ ಕಾವಲು ಭಟರು, ಕೀಚಕನ ಸೋದರರು ಬಂದು ನೋಡುವುದೇನು? ಗಾಣಕ್ಕೆ ಕೊಟ್ಟ ಕಬ್ಬು ಹಿಂಡಿ ಹಿಪ್ಪೆಯಾಗಿ ರಸ ಕಾರಿದಂತೆ, ರಕ್ತ ಕಾರಿ ಸಿಪ್ಪೆಯಾಗಿ ಬಿದ್ದಿದ್ದಾನೆ ಕೀಚಕ. ಬದುಕಿರುವಾಗ ಕೀಚಕನ ಕ್ರೌರ್ಯಕ್ಕೆ ಹೆದರಿ ನೋಡಲು ಭಯಪಡುತ್ತಿದ್ದ ಜನ, ಈಗ ತಲೆಯೆಲ್ಲಿ, ಕಾಲು ಕೈಗಳಲೆಲ್ಲಿ ಎಂದು ಗೊತ್ತಾಗದ ರೀತಿ ಉಂಡೆಯಾಗಿ ಮುರಿದು ಮಡಚಿ ಬಿದ್ದ ಭಯಾನಕವಾದ ಕಳೇಬರವನ್ನು ನೋಡಿ ಹೌಹಾರಿ ಹೋಗಿದ್ದಾರೆ.
ಇಷ್ಟಾಗುತ್ತಿರುವಾಗ ದ್ರೌಪದಿಯೂ ಒಮ್ಮೆ ತನ್ನ ಪತಿಯ ಕೈ ಕಸುವಿನಿಂದ ದುರುಳ ಕೀಚಕನ ಸ್ಥಿತಿ ಹೇಗಾಗಿದೆ ಎಂದು ನೋಡುವ ಕುತೂಹಲ ಉಂಟಾಗಿ, ಅತ್ತ ಬಂದು ನಾಟ್ಯ ಮಂದಿರದ ಒಂದು ಕಂಬಕ್ಕೆ ಒರಗಿ ನಿಂತು ದೂರದಿಂದ ನೋಡ ತೊಡಗಿದಳು.
ಕೀಚಕನ ಸೋದರರು ದುಃಖ ತಪ್ತರಾಗಿ ತಮ್ಮ ಅಣ್ಣನ ಶವ ಸಂಸ್ಕಾರ ಮಾಡಲು ಮೂಳೆ ಮಾಂಸದ ರಾಶಿಯನ್ನು ಒಟ್ಟು ಸೇರಿಸಿ ಹೊತ್ತೊಯ್ಯುತ್ತಿದ್ದಾರೆ. ಆ ಸಂಧರ್ಭ ಓರ್ವ ಉಪ ಕೀಚಕ ತಿರುಗಿ ದ್ರೌಪದಿಯನ್ನು ನೋಡಿ, “ನಮ್ಮಣ್ಣ ಹತನಾಗಲು ಕಾರಣ ಈ ಕುಲಟೆ. ಈಕೆಯನ್ನೀಗಲೆ ಕೊಂದು ಬಿಡಿ” ಎಂದು ಆರ್ಭಟಿಸಿದ. “ಅಣ್ಣ ಬಯಸಿದ ಈಕೆಯನ್ನು ಕೊಂದು ಒಟ್ಟಿಗೆ ಸುಟ್ಟು ಬಿಡುವ” ಎಂದು ಇನ್ನೊಬ್ಬ ಬೊಬ್ಬಿರಿದನು. ಉಳಿದ ಉಪ ಕೀಚಕರಲ್ಲಿ ಹಿರಿಯವನೊಬ್ಬ “ಅಹುದು, ಈ ದುಷ್ಟೆಯನ್ನು ಸುಡಬೇಕು. ಆದರೆ ಈಗ ಕೊಲ್ಲುವುದು ಬೇಡ. ಹಿಡಿದುಕೊಳ್ಳಿ, ಎತ್ತಿಕೊಂಡು ಹೋಗೋಣ, ಅಣ್ಣನ ಚಿತೆಗೆಸೆದು ಜೀವಂತ ಸುಟ್ಟು ಬಿಡೋಣ. ಹಾಗೆ ಮಾಡಿದರೆ ಆತನಿಗೂ ಮನಶಾಂತಿಯಾದೀತು” ಎಂದನು.
ಕೀಚಕನ ಮರಣವಾರ್ತೆ ಕೇಳಿ ರಾಜ ವಿರಾಟನೂ ಅಲ್ಲಿಗೆ ಧಾವಿಸಿ ಬಂದನು. ವಿರಾಟನನ್ನು ಕಂಡ ಕೀಚಕ ಸೋದರರು, “ಮಹಾರಾಜ, ಈಕೆಯ ಕಾರಣದಿಂದ ನಮ್ಮಣ್ಣ ಹತನಾಗಿದ್ದಾನೆ. ಯಾರೋ ಈಕೆಯ ಗಂಧರ್ವ ಪತಿಯರಂತೆ ಅಣ್ಣನನ್ನು ಕೊಂದಿದ್ದಾರೆ. ಇನ್ನು ಈ ಪಾತಕಿ ಸ್ತ್ರೀ ಬದುಕಿರಬಾರದು. ಇವಳನ್ನು ಹೊತ್ತೊಯ್ದು ಮಸಣದಲ್ಲಿ ಅಣ್ಣನ ಚಿತೆಗೆಸೆದು ಸುಡುತ್ತೇವೆ. ನಿಮ್ಮ ಅಪ್ಪಣೆ ಬೇಕು” ಎಂದರು.
ವಿರಾಟನೋ ಮೊದಲೇ ಈ ಕೀಚಕ ಸೋದರರ ಬಲದೆದುರು ಅಬಲನಾಗಿ ಹೆದರಿರುವಾತ. ಇಲ್ಲ ಎನ್ನಲು ಸ್ಥೈರ್ಯವಿದೆಯೇ? ಹೌದು ಎಂದನೊ! ಆಗದು ಎಂದಿದ್ದಾನೋ! ಅಂತೂ ತಲೆಯಾಡಿಸಿದ್ದನ್ನು ಸಮ್ಮತಿ ಎಂದೆಣಿಸಿದ್ದಾರೆ ಕೀಚಕನ ಅನುಜರು.
ಕೂಡಲೆ ಕೀಚಕ ಸೋದರರು ದ್ರೌಪದಿಯನ್ನು ಬೆನ್ನಟ್ಟಿ ಹಿಡಿದೆಳೆದು, ಕೈಕಾಲು ಬಿಗಿದು ಕಟ್ಟಿ ಹೊತ್ತುಕೊಂಡು ಸ್ಮಶಾನಾಭಿಮುಖರಾಗಿ ನಡೆದರು. ಹಗಲು ಹೊತ್ತಿನವರೆಗೆ ಹೆಣ ಇಟ್ಟು ಅಣ್ಣನ ದುರಂತ ಸಾವು ಪ್ರಜಾಜನರು ನೋಡುವಂತಾಗದಿರಲಿ ಎಂಬ ಅವಸರ ಅವರದ್ದು.
ಹೊತ್ತೊಯ್ಯುವಾಗ ದುಃಖ, ಭಯ ತಡೆಯಲಾರದೆ ಆರ್ತಳಾಗಿ ದ್ರೌಪದಿ “ಜಯ, ಜಯಂತ, ವಿಜಯ, ಜಯತ್ಸೇನ, ಜಯದ್ಬಲರೇ (ಪಾಂಡವರಿಗೆ ಅಜ್ಞಾತವಾಸದ ಮೊದಲು ಇಟ್ಟುಕೊಂಡ ಗುಪ್ತನಾಮ) ನನ್ನನ್ನು ರಕ್ಷಿಸಿ. ವೇಗಗಾಮಿಗಳೂ, ಕೀರ್ತಿಶಾಲಿಗಳೂ ಆದ ಗಂಧರ್ವರೇ ನಿಮ್ಮ ರಣ ಭಯಂಕರ ಸ್ವರೂಪ ಈ ಉಪಕೀಚಕರೂ ನೋಡುವಂತಾಗಲಿ” ಎಂದು ಅತ್ತು ಗೋಗರೆಯುತ್ತಾ ಕೂಗಿ ಹೇಳಿದಳು.
ಭೀಮನಿಗೆ ದ್ರೌಪದಿಯ ರೋದನಾಮಯ ಧ್ವನಿ ಕೇಳಿಸಿತು. ಕೂಡಲೆ ಎದ್ದು ನಿಂತು ಆಪತ್ತು ಒದಗಿರುವುದನ್ನು ಅರ್ಥಮಾಡಿಕೊಂಡನು. ತನ್ನ ಗುರುತು ಪತ್ತೆಯಾಗದಂತೆ ವೇಷ ಬದಲಿಸಿ ಕೊಂಡನು. ಮುಖ ಕಾಣದಂತೆ ಶಿರಕವಚವೇನನ್ನೋ ಧರಿಸಿಕೊಂಡನು. ಪಾಕಶಾಲೆಯ ಪ್ರಾಕಾರವೇರಿ ಹಾರಿ ಸ್ಮಶಾನದ ಹಾದಿ ಹಿಡಿದು ಅತ್ತ ಓಡತೊಡಗಿದನು. ದಾರಿಯಲ್ಲಿ ಸಿಕ್ಕ ಗಟ್ಟಿ ಮರವೊಂದನ್ನು ಸೆಳೆದು ಕಿತ್ತು ಕೈಯಾಯುಧವಾಗಿ ಹಿಡಿದೆತ್ತಿಕೊಂಡು ಓಡಿ ಬಂದನು. ಹೆಣ ಹೊತ್ತು ಸಾಗುತ್ತಿದ್ದ, ಹಿಂದಿನಿಂದ ದ್ರೌಪದಿಯನ್ನೂ ಹೊತ್ತೊಯ್ಯುತ್ತಿರುವ ಉಪ ಕೀಚಕರನ್ನು ನೋಡಿದನು. “ಕೌರವರಂತೆ ಇವರೂ ಶತಾಧಿಕರು. ಕೀಚಕನೋರ್ವ ಮಾತ್ರ ಹತನಾಗಿರುವುದು. ಇವತ್ತೇ ಇವರಿಗೂ ಸುದಿನ ಬಂದಿದೆ – ಒಂದೇ ದಿನ ಎಲ್ಲರೂ ಸಾಯುವ ಹಣೆಬರಹ ಈ ದುಷ್ಟರದ್ದಾದರೆ ನಾನೇನು ಮಾಡಲು ಸಾಧ್ಯ?” ಎಂದು ಹತ್ತು ಮಾರುದ್ದದ ಮರವನ್ನೆತ್ತಿ ಕೀಚಕನ ಹೆಣ ಹೊತ್ತು ಸಾಗುತ್ತಿದ್ದ ಉಪಕೀಚಕರ ಮೇಲೆ ಅಪ್ಪಳಿಸಿದನು. ಒಂದೇ ಹೊಡೆತಕ್ಕೆ ಹತ್ತಾರು ಮಂದಿ ಅಪ್ಪಚ್ಚಿಯಾದರೆ, ಇನ್ನೆಷ್ಟೋ ಮಂದಿ ಅಂಗಾಗ ಛೇದನಕ್ಕೊಳಗಾಗಿ ಬಿದ್ದರು. ಉಳಿದವರು ಬೊಬ್ಬೆ ಹಾಕಿದರು “ಇವಳ ಗಂಧರ್ವ ಪತಿ ಬಂದು ಆಕ್ರಮಿಸುತ್ತಿದ್ದಾನೆ. ಅವಳನ್ನು ಬಿಟ್ಟು ನಗರದತ್ತ ಓಡಿ ಹೋಗೋಣ”. ಎಲ್ಲಿದೆ ಅವಕಾಶ? ದ್ರೌಪದಿಯನ್ನು ಅವರು ಎಸೆದದ್ದೇ ತಡ ಬಿತ್ತು ಬರಸಿಡಿಲಿನಂತೆ ಮರ. ದಡ ಬಡನೆ ಬಿದ್ದೇಟಿಗೆ ಅರ್ಧಕ್ಕಿಂತಲೂ ಅಧಿಕ ಉಪಕೀಚಕರು ಸತ್ತೇ ಹೋದರು, ಉಳಿದವರು ಕೈಕಾಲು ಮುರಿದು ಬಿದ್ದಿದ್ದಾರೆ. ತಪ್ಪಿಕೊಂಡ ಉಳಿದವರು ಓಡುತ್ತಿದ್ದಾರೆ. ಮಾರುತ ನಂದನ ಹಾರಿ ಬೆನ್ನಟ್ಟಿ ಒಬ್ಬೊಬ್ಬರನ್ನು ಹುಡುಕಿ ಕೊಂದು ಹೆಣ ರಾಶಿ ಹಾಕಿದ. ಕೈಕಾಲು ಮುರಿದವರೋ! , ಸತ್ತವರೋ! ಒಂದೂ ನೋಡದೆ ಭೀಮನ ರೌದ್ರಾವತಾರದ ಅಬ್ಬರಕ್ಕೆ ನೂರು ಹೆಣಗಳು ಚೆಲ್ಲಾಪಿಲ್ಲಿ ಬಿದ್ದು ಬಿಟ್ಟವು.
ಭೀಮ ಮರದ ಹಿಂದೆ ಇದ್ದುದನ್ನು ಆ ಕತ್ತಲೆಯಲ್ಲಿ ಯಾರೂ ನೋಡಿರಲಿಲ್ಲ. ಹೆಮ್ಮರ ಬಂದು ಅಪ್ಪಳಿಸುವುದಷ್ಟೇ ನೋಡಲು ಸಾಧ್ಯವಾಗಿತ್ತು. ಕೆಲಸ ಮುಗಿಸಿದ ಭೀಮ ಬಂದ ಕತ್ತಲೆಯ ದಾರಿ ಅನುಸರಿಸಿ ಹಿಂದಕ್ಕೆ ಓಡಿ ಪಾಕಶಾಲೆ ಸೇರಿದನು.
ಇತ್ತ ವಿರಾಟ ಹೆದರಿ ನಡುಗುವ ಭಯಂಕರ ಸ್ಥಿತಿ ನಿರ್ಮಾಣವಾಗಿದೆ. ತನ್ನ ಸತಿ ಸುದೇಷ್ಣೆಯನ್ನು ಕರೆದು ಹೇಳತೊಡಗಿದ “ಈ ವರೆಗೆ ನಮಗೆ ಕೀಚಕರ ಭಯವಿತ್ತು. ಈಗ ನಿನ್ನ ಸೈರಂಧ್ರಿಯ ಗಂಧರ್ವ ಪತಿಗಳಿಂದಾಗಿ ಮತ್ಸ್ಯ ದೇಶವೇ ಆಪತ್ತಿನಲ್ಲಿದೆ. ಹೆಣಗಳ ರಾಶಿ ಬಿದ್ದಿದೆ. ಹೀಗೆಯೆ ಇಲ್ಲಿ ಆಕೆ ಮುಂದುವರಿದರೆ, ಅತಿ ಸುಂದರಿಯಾದ ಆಕೆಯನ್ನು ನೋಡಿ ಕಾಮ ಬಯಸುವ ಪುರುಷರಿಂದ ಮತ್ತೆ ಎಡವಟ್ಟಾಗಿ, ಗಂಧರ್ವರಿಂದ ಕೊಲ್ಲಲ್ಪಡುತ್ತಾರೆ. ನಮ್ಮ ರಾಜ ಪರಿವಾರವೆ ನಾಶವಾದೀತು. ನಾಳೆ ಬೆಳಗಾದೊಡನೆ ಈ ಪುರ ತೊರೆದು ಆಕೆ ಬಯಸಿದಲ್ಲಿಗೆ ಹೋಗಲು ಹೇಳು” ಎಂದು ಆಜ್ಞೆ ಮಾಡಿದನು.
ಇತ್ತ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಉಪಕೀಚಕರಿಂದ ಎಸೆಯಲ್ಪಟ್ಟು ಬಿದ್ದಿದ್ದ ದ್ರೌಪದಿ ಹೇಗೋ ಹೆಣಗಾಡಿ ಕಟ್ಟು ಬಿಡಿಸಿಕೊಂಡು ರಾತ್ರಿಯ ಕತ್ತಲೆಯಲ್ಲಿ ಸ್ಮಶಾನದಿಂದ ಎದ್ದು ಬರುತ್ತಿದ್ದಾಳೆ.
ಮುಂದುವರಿಯುವುದು…