ಭಾಗ 255
ಭರತೇಶ ಶೆಟ್ಟಿ, ಎಕ್ಕಾರ್

ಅರ್ಜುನ ವೀರಾಗ್ರಣಿ, ಏಕ ಮೇವ ಧನುರ್ಧರನೆನೆಸಿಕೊಂಡವ ಹೆಣ್ಣಿಗನಾಗಿದ್ದಾನೆ. ಆದರೆ ಭೀಮ ಸೇನ ಈಗಲೂ ಪುರುಷ ಶ್ರೇಷ್ಠನಾಗಿಯೆ ಇದ್ದಾನೆ. ಇಂದು ಒದಗಿದ ಪರಿಸ್ಥಿತಿ ಆತನೂ ಬಳೆತೊಟ್ಟು, ಸೀರೆಯುಟ್ಟು ಹೆಣ್ಣಂತೆ ವೇಷಧಾರಿಯಾಗಿ ಮಲಗಿದ್ದಾನೆ. ಭೀಮಾರ್ಜುನರು ವೀರಪುರುಷ ವರ್ಗಕ್ಕೆ ಆದರ್ಶಪ್ರಾಯರು. ಇಂದಿನಿರುಳಲ್ಲಿ ಇಬ್ಬರೂ ಹೆಣ್ಣಿನ ರೂಪದಲ್ಲಿರುವುದು ಅಜ್ಞಾತವಾಸದ ಕಾಕತಾಳೀಯ.
ನೃತ್ಯ ಮಂಚದಲ್ಲಿ ಮಲಗಿರುವುದಯ ಭೀಮ. ದೋಷರಹಿತೆಯೂ, ಅಲಭ್ಯಳೂ ಆದ ದ್ರೌಪದಿಯನ್ನು ನೀಚ ಕೀಚಕ ಬಯಸಿ ಬರುತ್ತಿದ್ದಾನೆ. ಆತ ಬರುತ್ತಿರುವುದು ದ್ರೌಪದಿಗೆ ಬದಲಾಗಿ ಮೃತ್ಯುದೇವತೆಯನ್ನು ಅಪ್ಪಿ ಮುದ್ದಾಡುವುದಕ್ಕೆ ಎನ್ನುವುದು ವಿಪರ್ಯಾಸ. ಬರಲಿ ಎಂದು ಸಾಯುವವನ್ನುಬ ಕಾಯುತ್ತಾ ಭೀಮ ಮಲಗಿ ಎಚ್ಚರದಲ್ಲಿದ್ದಾನೆ.
ಇತ್ತ ಕೀಚಕ ಅಂತಿಮ ಯಾತ್ರೆಗೆ ಸಿದ್ಧನಾಗುವಂತೆ ತನ್ನಾಸೆಯ ಉತ್ಕೃಷ್ಟ ವಸನ, ಭೂಷಣ, ಸುಗಂಧ ದ್ರವ್ಯಾದಿಗಳನ್ನು ತನುವಲ್ಲಿ ಹೊತ್ತು, ಮನದಲ್ಲಿ ಅತುಲ ಆಸೆಗಳನ್ನಿರಿಸಿ ಹೊರಟಿದ್ದಾನೆ. ಸೂರಜನ ಬೆಳಕು ಮಾಸಿದಾಗ, ಮತ್ಸ್ಯ ದೇಶ ದೀಪಗಳಿಂದ ಬೆಳಗಿತ್ತು. ಜನರು ನಿದ್ದೆಯನ್ನು ಬಯಸಿದ ಹೊತ್ತು ದೀಪಗಳೂ ವಿರಮಿಸಿ ಕತ್ತಲಾಗಿದೆ. ಈ ಕೀಚಕನ ಬದುಕೂ ತಿಮಿರಾಂಧತೆಯ ಒಳ ಸೇರಲು ಬಯಸಿ ಬರುತ್ತಿದೆ.
ಕಾಮ ಮೋಹಿತನಾದ ಕೀಚಕ ಕತ್ತಲೆಯಲಲ್ಲಿ ಮಲಗಿದ್ದ ಹೆಣ್ಣನ್ನು ಕಂಡು ಉದ್ರೇಕಕ್ಕೊಳಗಾಗಿ ಸಮೀಪಿಸಿ, ಹರ್ಷದಿಂದ ಮನಸ್ಸು ಕುಣಿದಾಡಿ ನಸುನಗುತ್ತಾ ಹೇಳತೊಡಗಿದ ” ಹೇ ದಾಸಿಯೇ ಇನ್ನು ನೀನು ಸೌಭಾಗ್ಯವತಿ. ಅರಮನೆಯ ಹೆಂಗಳೆಯರು ಸದಾ ಸುವಸ್ತ್ರ ಭೂಷಿತನೂ, ಸುಂದರನೂ ಆದ ನಿನ್ನಂತಹ ಪುರುಷ್ಯಾರೂ ಇಲ್ಲ ಎಂದು ಹೊಗಳುತ್ತಿರುತ್ತಾರೆ. ಅಂತಹ ಪುರುಷೋತ್ತಮ ನಿನ್ನನ್ನು ಬಯಸಿ ಅನಂತ ಐಶ್ವರ್ಯ ನಿನಗಾಗಿ ಹೊತ್ತು ತಂದಿದ್ದಾನೆ. ಈಗ ನಿಜಾರ್ಥದಲ್ಲಿ ನೀನೂ ಭಾಗ್ಯವತಿಯಾದೆ” ಎನ್ನುತ್ತಾ ಬಳಿ ಬಂದನು.
ಹೆಣ್ಣಿನ ಧನಿಯಲ್ಲಿ ಭೀಮ ಹೇಳತೊಡಗಿದ “ನಿನ್ನನ್ನು ನೀನೇ ಹೊಗಳಿಕೊಂಡು ಸಂತೋಷ ಪಡುತ್ತಿರುವೆ. ಇನ್ನು ನಾನು ನಿನ್ನನ್ನು ಸ್ಪರ್ಶಿಸಿ ನಿನಗೆ ನೀಡುವ ಅನುಭವವನ್ನು ಆನಂದಿಸು. ಹಿಂದೆಂದೂ ನೀನು ಕಂಡು ಕೇಳರಿಯದ ರೀತಿ ನಿನಗೆ ಮನಸಾ ಇಚ್ಚೆ ನಾನು ನೀಡುವ ಈ ಸುಖ ನಿನಗೆಂದೂ ಸಿಕ್ಕಿರದು” ಎಂದನು.
ಕೀಚಕನಿಗೆ ಏನೋ ವ್ಯತ್ಯಾಸ ಭಾಸವಾಗಿ ನಿನ್ನ ಸ್ವರಕ್ಕೇನಾಯಿತು ಕೋಮಲೆ ಎಂದು ಮೈ ಮುಟ್ಟಿದಾಗ, ಮಲ್ಲ ಪ್ರವೀಣ ಭೀಮ ಆತನ ತೋಳನ್ನಾವರಿಸಿ ಹಿಡಿದೆತ್ತಿ, ನೆಲಕ್ಕಪ್ಪಳಿಸಿ – ಕೊರಳನ್ನೊತ್ತಿ ಹಿಡಿದನು. ಬಲಶಾಲಿಯಾದ ಕೀಚಕ ತತ್ತರಿಸಿ ಹೆಣಗಾಡಿ ಭೀಮನ ಹಿಡಿತದ ಪಟ್ಟನ್ನು ಕಳಚಿ ಎದ್ದು ಆಕ್ರಮಣಕ್ಕೆ ಸಿದ್ಧನಾದನು. ಜಗ ಮೆಚ್ಚುವ ಜಗಜಟ್ಟಿ ಕಾಳಗ ನೋಡಲು ಯಾರೂ ಇಲ್ಲ. ಮದಗಜಗಳು ಕಾದಾಡುವಂತೆ, ಬೃಹತ್ ಮೋಡಗಳು ಘರ್ಷಿಸುವಂತೆ ಘಾತ – ಪ್ರತಿಘಾತಗಳು ಅಪ್ಪಳಿಸತೊಡಗಿದವು.ಒಮ್ಮೆ ಕೀಚಕನ ಹಿಡಿತದಲ್ಲಿ ಭೀಮ, ನುಸುಳಿ ಮತ್ತೆ ಭೀಮನ ಸೆರೆಯಲ್ಲಿ ಕೀಚಕ. ಇಬ್ಬರ ಹೊಡೆತಗಳ ಬಲಕ್ಕೆ ರಂಗ ಮಂದಿರದ ನೆಲ ಕುಸಿಯಿತು. ಗೋಡೆಗಳು ಬಿರುಕು ಬಿಟ್ಟವು. ಕೀಚಕನೇನು ಸಾಮಾನ್ಯನೆ? ಆತನೂ ಸಾವಿರ ಹೆಣ್ಣಾಣೆಯ ಬಲುಹುಳ್ಳವನೆಂದು ವರ್ಣಿಸಲ್ಪಟ್ಟ ವೀರನು ಹೌದು. ಇದಿರಾಗಿರುವ ಭೀಮ ಸಾವಿರ ಗಂಡಾಣೆಯ ಭುಜಬಲ ಉಳ್ಳವನು. ಭೀಮನ ಹೊರತು ಕೀಚಕನ ವಧೆ ಅನ್ಯರಾರಿಂದಲೂ ಅಸಾಧ್ಯ ಎಂದು ಭಾವಿಸಬಹುದು. ಭೀಮನ ವಜ್ರಮುಷ್ಠಿಯ ಗುದ್ದು ಕೀಚಕನ ಎದೆಗೆ ಬಿತ್ತು. ಆತನಿಗೇನೂ ಆಗಲಿಲ್ಲ ಎದ್ದು ಕೀಚಕ ಭೀಮನನ್ನು ಎತ್ತಿ ಎಸೆದನು. ಕೋಲ್ಮಿಂಚಿನಂತೆ ಚಿಮ್ಮಿ ಹಾರಿ ಕೀಚಕನ ಮೇಲರಿಗಿ ಬಂದ ಭೀಮಸೇನ. ಸಮದಂಡಿಗಳ ಕದನ ಸಾಗಿತು. ಬಹು ಹೊತ್ತು ಸಾಗುತ್ತಿದ್ದಂತೆ ಕೀಚಕನಿಗೆ ಭೀಮನ ಹೊಡೆತಗಳನ್ನು ತಡೆಯಲಾರದೆ ನಿಸ್ತೇಜನಾಗತೊಡಗಿದನು. ಇದಿರಾಳಿ ಕುಗ್ಗುತ್ತಿದ್ದಂತೆ ಭೀಮನ ವೇಗ ಓಘ ಏರತೊಡಗಿತು. ಮಾರುತಿಯ ಮುಷ್ಟಿಯೆ ರುಧಿರ ಮುಖಿ ಗದೆಯಂತಾಯಿತು. ಮುಖ ಮೂತಿ, ಎದೆ ಬೆನ್ನು, ಹೊಟ್ಟೆ ರಟ್ಟೆ ಎಲ್ಲೆಂದರಲ್ಲಿ ಸಿಕ್ಕ ಸಿಕ್ಕಲ್ಲಿಗೆ ಗುದ್ದುಗಳ ಮೇಲೆ ಗುದ್ದುಗಳು. ಕಣ್ಣವೆ ಮುಚ್ಚಿ ತೆರೆಯುವುದರೊಳಗೆ ಆದ್ರೆಯ ಮಳೆಯಂತೆ ಅಬ್ಬರಿಸಿ ಅಪ್ಪಳಿಸುತ್ತಿವೆ. ಕಣ್ಣು ಮಂಜಾಯಿತು. ಘರ್ಜಿಸಲೂ ಆಗದೆ ಕೀಚಕ ನಿತ್ರಾಣನಾದ. ಬಾಯಲ್ಲಿ ಕಾರುತ್ತಿದೆ ರಕ್ತ. ನೆಲದಲ್ಲಿ ಕವಚಿ ಬಿದ್ದ ಕೀಚಕನ ಬೆನ್ನಿನ ಮೇಲೆ ಕಾಲಿಟ್ಟು, ದ್ರೌಪದಿಯನ್ನು ಹಿಡಿದ ಕೀಚಕನ ಎಡಗೈ, ಕೇಶವನ್ನೆಳೆದ ಬಲಗೈ- ಹೀಗೆರಡನ್ನೂ ಹಿಡಿದೆತ್ತಿ, ಕಾಲಿಂದ ಬೆನ್ನನ್ನೊತ್ತಿ ಜಗ್ಗಿ ಮುರಿದು ಬಿಟ್ಟನು. ತಿರುಗಿ ಎರಡೂ ಕಾಲ್ಗಳನ್ನು ಹಿಡಿದು ಸೊಂಟದ ಮೇಲೆ ನಿಂತು ದ್ರೌಪದಿಯನ್ನು ರಾಜ್ಯಸಭೆಯಲ್ಲಿ ಒದ್ದ ಕಾಲುಗಳನ್ನು ರಭಸದಿಂದ ಎಳೆದು ಕಟಿ ಭಾಗದಿಂದಲೆ ತುಂಡರಿಸಿ ಬಿಟ್ಟನು. ಕೀಚಕನೀಗ ಮಡಚಿಟ್ಟ ವಸ್ತ್ರದಂತೆ ಬಿದ್ದು ಕೊಂಡಿದ್ದಾನೆ. ಕಣ್ಣು ಬಾಯಿ, ಕಿವಿ ಮೂಗುಗಳು ರಕ್ತ ಕಾರಂಜಿಗಳಾಗಿ ಚಿಲುಮೆಯಂತೆ ಚಿಮ್ಮುತಿದೆ. ಮನಬಂದಂತೆ ಗುದ್ದಿ, ಒದ್ದು ಪ್ರತಿಸ್ಪಂದಿಸದ ಕೀಚಕನನ್ನು ನೋಡಿದರೆ! ಸತ್ತೇ ಹೋಗಿದ್ದಾನೆ. ಮಾಂಸದ ಮುದ್ದೆಯಂತೆ ರಾಶಿಯುಂಡೆಯಾಗಿ ಬಿದ್ದಿದ್ದಾನೆ ದುರುಳ ಕೀಚಕ.
ದ್ರೌಪದಿಯನ್ನು ಕರೆದು ಕೀಚಕನ ವಧೆಯ ಸಂಗತಿ ತಿಳಿಸಿದನು. ಆಕೆಗೂ ಆಪತ್ತು ನಿವಾರಣೆಯಾದ ಅಮಿತಾನಂದವಾಯಿತು. ಭೀಮಸೇನ ಮಿಂದು ಶುಚಿರ್ಭೂತನಾದನು. ವಿರಾಟನ ಪಾಕಶಾಲೆಯ ಬಾಣಸಿಗನಾಗಿ ಕಟ್ಟಿಗೆಯ ರಾಶಿಯ ಮಂಚದಲ್ಲಿ ಮಲಗಿ ನಿದ್ರಿಸಿ ಬಿಟ್ಟನು.
ಭೀಮ ಸೇನ ಹೋದ ಬಳಿಕ ಪಾಂಚಾಲಿ ಓಡುತ್ತಾ ಹೊರಬಂದು ಕೂಗಿ ಹೇಳತೊಡಗಿದಳು, ನನ್ನನ್ನು ಬಲಾತ್ಕರಿಸಲು ಬಂದ ಕೀಚಕನನ್ನು ನಾಟ್ಯಶಾಲೆಯಲ್ಲಿ ಗಂಧರ್ವರಾದ ನನ್ನ ಪತಿಗಳು ಶಿಕ್ಷಿಸುತ್ತಿದ್ದಾರೆ. ಆಕೆಯ ಮಾತುಗಳನ್ನು ಕೇಳಿಸಿಕೊಂಡು, ರಾತ್ರಿ ನಿದ್ದೆಯ ಮಂಪರಿನಲ್ಲಿದ್ದ ಕಾವಲು ಭಟರು ಎದ್ದೋಡಿ ಬಂದರು. ಕೀಚಕನ ನೂರು ಮಂದಿ ಸೋದರರಿಗೂ ಸುದ್ದಿ ತಿಳಿದು ಅವರೂ ನಾಟ್ಯ ಶಾಲೆಯತ್ತ ಧಾವಿಸಿದರು.
ಮುಂದುವರಿಯುವುದು…