ಭಾಗ 254
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೫೫ ಮಹಾಭಾರತ
ರಾತ್ರಿ ಬೆಳಗಾಯಿತು ದ್ರೌಪದಿ ಪ್ರಸನ್ನವದನೆಯಾಗಿದ್ದಾಳೆ. ತನಗೆಷ್ಟು ಕಷ್ಟಗಳು ಬೆಂಬತ್ತಿ ಬಂದಿದ್ದರೂ ಇಂದೇಕೊ ಉಲ್ಲಾಸ ಮನ ಮಾಡಿದೆ. ಹೆಣ್ಣಾದ ತನಗಷ್ಟೆ ಕಷ್ಟ ಒದಗಿರುವುದಲ್ಲ. ಈ ಹಿಂದೆ ಮಹಾರಾಜ ಶರ್ಯಾತಿಯ ಮಗಳು ಸುಕನ್ಯೆ ಋಷಿ ಚ್ಯವನರನ್ನು ಮದುವೆಯಾಗಿ ರಾಣಿಯಾದರೂ ಆಶ್ರಮವಾಸಿಯಾಗಿ ಬದುಕಿದ್ದಾಳೆ. ಅತಿರೂಪವತಿ ನಾಡಾಯಣ ವಂಶದ ಇಂದ್ರಸೇನೆ ವೃದ್ಧ ಪತಿಯನ್ನು ವರಿಸಿ ನಿಷ್ಠಳಾಗಿಯೆ ಇದ್ದು ಖ್ಯಾತಳಾಗಿದ್ದಾಳೆ. ಜನಕ ಮಹಾರಾಜನ ಕುವರಿ ಸೀತೆ ಶ್ರೀ ರಾಮನ ಕರಗ್ರಹಣ ಮಾಡಿ ವನವಾಸ, ರಾವಣನಿಂದ ಅಪಹರಣ, ಅಶೋಕ ವನ ವಾಸ, ಬಹುವಿಧ ಕಷ್ಟ, ತುಂಬು ಗರ್ಭಿಣಿಯಾದ ಸಂಕಷ್ಟ ಸಮಯದಲ್ಲಿ ಪತಿಯಿಂದ ಪರಿತ್ಯಾಗ ಹೊಂದಿ ಮತ್ತೆ ಕಾಡು ಸೇರಲ್ಪಟ್ಟು ಋಷ್ಯಾಶ್ರಮದಲ್ಲಿ ಬದುಕಿ ಕಷ್ಟ ಸಹಿಸಿ ಬಾಳಿದ್ದರಿಂದ ಪ್ರಾತಃ ಸ್ಮರಣೀಯಳೂ, ಪೂಜನೀಯಳೂ ಆಗಿದ್ದಾಳೆ. ರೂಪ ಯೌವನ ಸಂಪನ್ನೆಯಾದ ಲೋಪಾಮುದ್ರೆ ಎಲ್ಲ ಸುಖ ತೊರೆದು ಮಹರ್ಷಿ ಅಗಸ್ತ್ಯರನ್ನು ವರಿಸಿ ಬದುಕಿರುವುದು ಆದರ್ಶವೇ ಹೌದು. ನನ್ನ ಬದುಕಿನಲ್ಲಿ ಕಷ್ಟಗಳೆಷ್ಟೆ ಬರಲಿ, ಇವರೆಲ್ಲರ ದಿವ್ಯ ಚರಿತ್ರೆ ನೆನೆದಾಗ ಧೈರ್ಯವೂ, ಸ್ಥೈರ್ಯವೂ ನನ್ನದಾಗುತ್ತಿದೆ. ಹೀಗೆ ಸ್ವಗತದಲ್ಲಿ ಮನದೊಳಗೆ ಯೋಚಿಸಿ ಮನಸ್ಸನ್ನು ಭಯಮುಕ್ತಗೊಳಿಸಿದಳು. ಅರಮನೆಯ ಹೊರಭಾಗಕ್ಕೆ ಬಂದು ದಶ ದಿಕ್ಕು – ಭೂಮ್ಯಾಕಾಶ ನೋಡುತ್ತಾ ಮನಸ್ಸನ್ನು ಪ್ರಶಾಂತಗೊಳಿಸುತ್ತಿರುವ ಹೊತ್ತಿನಲ್ಲಿ ಕೀಚಕ ಅತ್ತ ಬರತೊಡಗಿದನು.
ದ್ರೌಪದಿಯನ್ನು ಕಂಡೊಡನೆ ಕೀಚಕನ ಅಂತರಾಳದ ಆಸೆ ಗರಿಗೆದರಿತು. ತನ್ನ ಮನದಾಸೆ ತಣಿಸದೆ ಬಿಡಲಾರೆನೆಂದು ಧೃಡ ಸಂಕಲ್ಪ ಮಾಡಿಕೊಂಡು ಬಂದು “ಹೇ, ದಾಸಿಯೇ, ರಾಜನ ಆಸ್ಥಾನದಲ್ಲಿ ನಿನ್ನನ್ನು ಒದ್ದು ಬೀಳಿಸಿದರೂ ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಅಂದರೆ ನಿನಗೆ ಕೇಳುವವರಿಲ್ಲ, ನನ್ನನ್ನು ಪ್ರಶ್ನಿಸುವವರಿಲ್ಲ. ಈ ಮತ್ಸ್ಯದೇಶದಲ್ಲಿ ನಾನು ಸರ್ವತಂತ್ರ ಸ್ವತಂತ್ರ. ವಿರಾಟ ಕೇವಲ ಹೆಸರಿಗೆ ಮಾತ್ರ ರಾಜ. ಆಳ್ವಿಕೆ ಮಾಡುವುದು ಪರೋಕ್ಷವಾಗಿ ನಾನು ಎನ್ನುವುದು ನಿನಗೆ ಅರ್ಥವಾಗಿರಬೇಕು. ಈಗಲೂ ಕಾಲ ಮಿಂಚಿಲ್ಲ, ನೀನಾಗಿ ಒಲಿದು ಬಂದರೆ ಇಲ್ಲಿನ ಸರ್ವಾಧಿಕಾರಿಯಾದ ನಾನು ನಿನಗೆ ದಾಸನಾಗುತ್ತೇನೆ. ನೂರು ದಾಸಿಯರನ್ನು ನಿನ್ನ ಸೇವೆಗೆ ನೇಮಿಸುವೆ. ನಿನ್ನ ಒಡತಿಯಾದ ನನ್ನ ಸೋದರಿ ಸುದೇಷ್ಣೆ ನಿನಗೆ ನಮಸ್ಕರಿಸುವಂತೆ ಮಾಡುತ್ತೇನೆ. ನಿನ್ನದ್ದಾಗಿರುವ ಭಾಗ್ಯವನ್ನು ತೊರೆದು ಹಠ ಮುಂದುವರಿಸಿದರೆ ತಿನ್ನ ಬಯಸಿದ ಮೀನನ್ನು ಬಲೆಯಲ್ಲಿ ಹಿಡಿದಂತೆ, ಮೃಗವನ್ನು ಬೇಟೆಯಾಡಿದಂತೆ ನಿನ್ನನ್ನೂ ಬಲಾತ್ಕಾರದಿಂದ ನನ್ನವಳನ್ನಾಗಿಸುವೆ. ನಾನಿಲ್ಲಿ ಪ್ರಶ್ನಾತೀತ ದೊರೆ, ನೆನಪಿರಲಿ” ಎಂದು ಅಬ್ಬರಿಸಿದನು.
ಆಗ ಕೀಚಕನನ್ನು ನೋಡಿ ಮುಗುಳ್ನಗುತ್ತಾ.. ಸಾಯುವ ಕಾಲಕ್ಕೆ ನಿನಗೆ ಬಂದ ಬುದ್ಧಿಯಿದು ಎಂದು ಅಪಹಾಸ್ಯ ಸೂಚಕವಾಗಿ ನಕ್ಕಳು. ಕೀಚಕನಿಗೆ ಅದು ಅತಿ ಮೋಹಕವಾಗಿ ಕಂಡಿತು. ಕೀಚಕನನ್ನು ಉದ್ದೇಶಿಸಿ “ಅಯ್ಯಾ ಕೀಚಕಾ! ನನ್ನದೊಂದು ನಿಬಂಧನೆಯಿದೆ. ನೀನು ನಡೆಸಿ ಕೊಡುವೆಯಾದರೆ, ಆ ಬಳಿಕ ನಾನು ನಿನ್ನನ್ನು ನೋಡಲು ಬರುವೆ” ಎಂದಳು.
“ಅದೇನೆಂದು ಹೇಳು ನಡೆಸಿಕೊಡುವೆ” ಎಂದು ಆತುರದಿಂದ ಕೀಚಕ ಕೇಳಿದಾಗ “ನಾನು ನಿನ್ನ ಬಳಿ ಬರಲು ಒಪ್ಪಿರುವ ವಿಚಾರ ನಿನ್ನ ಆತ್ಮೀಯರು, ಸೋದರರು, ಮಿತ್ರರಾದಿ ಯಾರೊಬ್ಬರಿಗೂ ತಿಳಿಸಬಾರದು. ಮಾತ್ರವಲ್ಲ ನನ್ನ ಪತಿಯಂದಿರಿಗೆ ತಿಳಿದರೆ ಆಪತ್ತನ್ನು ಆಹ್ವಾನಿಸಿಕೊಂಡಂತೆ” ಎಂದು ಹೇಳಿದಳು.
ಇದಕ್ಕೆ ಒಪ್ಪಿಕೊಂಡ ಕೀಚಕ, “ಸರಿ! ನಾನು ತಡರಾತ್ರಿ ಯಾರೂ ಇಲ್ಲದ ಹೊತ್ತು ನಿನ್ನ ಶಯನಾಗೃಹಕ್ಕೆ ಬರುವೆ” ಎಂದು ಹೇಳಿದನು.
“ಅಯ್ಯೋ! ಹಾಗೆ ತಪ್ಪಿಯೂ ಮಾಡಬೇಡ. ಅನಾಹುತವಾದೀತು. ನಮ್ಮ ಅರಮನೆಯ ಹೊರಭಾಗ ಪ್ರಶಾಂತ ಉದ್ಯಾನದ ಮಧ್ಯದಲ್ಲಿ ನೃತ್ಯ ಮಂದಿರವಿದೆ. ಸೂರ್ಯೋದಯ ಕಾಲದಿಂದ ಸೂರ್ಯಾಸ್ತದವರೆಗೆ ಅಲ್ಲಿ ಸಾಂಸ್ಕೃತಿಕ ಕಾರ್ಯ ಕಲಾಪಗಳು ನಡೆದರೂ ರಾತ್ರಿಯ ಹೊತ್ತು ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಮಲಗುವ ಹೊತ್ತಾದ ಬಳಿಕ ಅಲ್ಲಿಗೆ ಬಾ, ನಿನಗೆ ಇನ್ನೆಂದೂ ಆಸೆಯಾಗಲು ಉಳಿಯದಷ್ಟು ಅನುಭವಿಸಿ ಬಿಡು” ಎಂದು ಹೇಳಿ ನೆಲ ನೋಡಿ ನಕ್ಕಳು. ಆಕೆಯ ನುಡಿಯೊಳಗಿನ ಒಗಟು ನಿಚ ಕೀಚಕನಿಗೆ ಅರ್ಥವಾಗಲಿಲ್ಲ.
ಕೀಚಕನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಸಂತೋಷ. ಮತ್ತೊಮ್ಮೆ ಸೈರಂಧ್ರಿಯನ್ನು ಕಣ್ತುಂಬ ನೋಡಿ ಆಕೆಯ ಉಪಾಯವನ್ನು ಒಪ್ಪಿ ತನ್ನ ನಿವಾಸಕ್ಕೆ ತೆರಳಿದನು. ಅಂದಿನ ದಿನ ಪೂರ್ತಿ ತನ್ನ ಕಾಯಕ್ಕೆ ವಿಧ ವಿಧ ತೈಲಭ್ಯಂಗ ಸ್ನಾನ, ಗಂಧ ಸುಗಂಧ ಲೇಪನ, ವಿಶೇಷ ಆಭರಣ, ಮಾಲೆ, ಅತ್ಯುತ್ಕೃಷ್ಟ ಉತ್ತರೀಯ ಹೀಗೆ ತಯಾರಿಯಲ್ಲಿ ಕಳೆಯತೊಡಗಿದನು. ಕೊನೆಯ ಕಾಲಕ್ಕೆ ಮೃತ್ಯು ದೇವತೆಯನ್ನು ನೋಡಿ ಬಂದು ಬಲಿಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ದೀಪವಾರುವ ಮುನ್ನ ಒಮ್ಮೆ ಜ್ವಾಜಾಲ್ಯಮಾನವಾಗಿ ಪ್ರಜ್ವಲಿಸುವಂತೆ ಇಂದು ಏನೇನೊ ಕಲ್ಪನೆ, ಆಸೆ, ಅದಕ್ಕೆ ಪೂರಕ ಸಿದ್ಧತೆ ಮಾಡುತ್ತಾ ಅತಿ ಚಟುವಟಿಕೆ, ಉಲ್ಲಾಸ, ಉದ್ವೇಗ, ಆತುರ ಹೀಗೆ ಜಿಗಿಯುತ್ತಿದ್ದಾನೆ. ದಿನ ಕಳೆದದ್ದೇ ಗೊತ್ತಾಗಲಿಲ್ಲ, ಕತ್ತಲೆಯಾಗಿ – ರಾತ್ರಿಯೂ ಆಯಿತು.
ದ್ರೌಪದಿ ಮೆಲ್ಲ ಹೊರಟು ಪಾಕಶಾಲೆಗೆ ಬಂದು ಭೀಮನನ್ನು ಕಂಡು ತಮ್ಮ ಯೋಜನೆಯಂತೆ ನಡೆದುಕೊಂಡಿರುವ ವೃತ್ತಾಂತ ವಿವರಿಸಿದಳು. “ಪತಿದೇವಾ, ನನ್ನನ್ನು ನೀನೇ ಕಾಯಬೇಕು. ಏನಾದರೂ ವ್ಯತ್ಯಾಸವಾದರೆ ನಾನು ಕೀಚಕನ ವಶವಾಗುವ ಮೊದಲು ವಿಷ ಕುಡಿದು ಪ್ರಾಣ ತ್ಯಾಗ ಮಾಡುವೆ” ಎಂದಳು. ದುಃಖಿಸುವ ಪಾಂಚಾಲೆಯ ಕೈ ಹಿಡಿದೆತ್ತಿದ ಭೀಮ. ಸುಕೋಮಲ – ಕೆಂದಾವರೆಯ ವರ್ಣದ ಆಕೆಯ ಹಸ್ತ – ಒರಟಾಗಿದೆ. ತೆರೆದು ನೋಡಿದರೆ ದಡ್ಡು ಕಟ್ಟಿ ಚರ್ಮ ಕಿತ್ತುಬಂದಿದೆ. ನೋಡುತ್ತಿದ್ದಂತೆ ಭೀಮನ ಕಂಗಳಿಂದ ಕಣ್ಣೀರಿಳಿದು ದ್ರೌಪದಿಯ ಅಂಗೈಗೆ ಬಿತ್ತು. “ಯಾಕೆ ದೇವಾ, ಕಣ್ಣೀರು?” ಎಂದು ಭಯ ಆತಂಕಕ್ಕೊಳಗಾಗಿ ಕೇಳಿದಳು.
ಆಗ ಭೀಮ ಹೇಳತೊಡಗಿದ “ದೇವಿಯೆ, ನಾವೈವರು ನಿನಗೆ ಪತಿಯಂದಿರು . ಚಕ್ರವರ್ತಿ ಯುಧಿಷ್ಠಿರ ಈಗಲೂ ಕೈಯಲ್ಲಿ ದಾಳ ಹಿಡಿದು ಕುಳಿತಿದ್ದಾನೆ. ಅರ್ಜುನ ಮಹಾಧನುರ್ಧರನೇ ಹೌದು, ಈಗ ಜಡೆ ಬಿಟ್ಟು ಲಂಗ ದಾವಣಿ ಹಾಕಿ ಹೆಂಗಳೆಯರ ಕೂಟದಲ್ಲಿ ನೀರೊಳಗಿನ ಬೆಂಕಿಯಂತೆ ತಣ್ಣಗಾಗಿ ಇದ್ದರೂ ಇಲ್ಲದಂತೆಯೆ ಆಗಿದ್ದಾನೆ. ಯಮಳರಾದ ನಕುಲ ಸಹದೇವ – ಮನುಷ್ಯರ ಸಹವಾಸ ಬಿಟ್ಟು ಅಶ್ವ – ಗೋವುಗಳ ಜೊತೆ ಬದುಕುತ್ತಿದ್ದಾರೆ. ನಿನ್ನ ಸಹಾಯಕ್ಕೆ ಇವರ್ಯಾರು ಒದಗಲಾರರು. ಇಂದು ನಿನ್ನ ಕಣ್ಣೀರು ಕೃಷ್ಣ ವರ್ಣದವಳು ನೀನಾದರೂ ಅದ್ಭುತವಾಗಿ ಹೊಳೆಯುತ್ತಿದೆ. ವನವಾಸ ಕಾಲದಲ್ಲಿ ಕಷ್ಟವಿದ್ದರೂ ನಿನ್ನ ಮುಖ ಕಾಂತಿ ಪ್ರಭೆಯಿಂದ ಕೂಡಿತ್ತು. ಆದರೆ ಈಗ ನಿಜ ದಾಸಿಯಾಗಿ ಔಷಧ ಗಿಡಗಳನ್ನು ಅರೆದು, ಗಂಧ ತೇಯುತ್ತಾ, ಎಣ್ಣೆ , ರಸಗಳನ್ನು ಸುದೇಷ್ಣೆಯ ಕೇಶ ಪೋಷಣೆಗಾಗಿ ತಯಾರಿಸುವ ನಿನ್ನ ಕೈಗಳು ಒರಟಾಗಿ ಗುಳ್ಳೆಗಳೆದ್ದು ಹೋಗಿವೆ. ನಿನ್ನ ಈ ಸ್ಥಿತಿ ನೋಡುವಾಗ ರುಧಿರ ಮುಖಿ ಗದೆ, ಗಾಂಡೀವ ದಿವ್ಯ ಧನುವುಳ್ಳ ಪತಿಯಂದಿರಾದ ಭೀಮಾರ್ಜುನರಿದ್ದೂ ಜೀವಂತ ಶವಗಳಾದೆವು ಎಂಬ ತಾಪಕ್ಕೆ ಆವಿಯಾದ ಶರೀರದ್ರವ ಮನೋಮಂಡಲದಲ್ಲಿ ಮೇಘವಾಗಿ ಕವಿದು, ಘರ್ಷಿಸಿ ಸುರಿದ ವರ್ಷಾಧಾರೆ ಈ ಕಣ್ಣೀರು ಭಾರ್ಯೇ! ಆಗಲಿ, ಆಗಿರುವುದನ್ನು ಮರೆತು ಬಿಡು, ಇನ್ನೊಂದು ಮಾಸ ಕಳೆದರೆ ಆ ಕೌರವ ದುಷ್ಟಕೂಟದ ಒಬ್ಬೊಬ್ಬರನ್ನು ಹಿಡಿದು ಚಚ್ಚಿ ಕೊಂದು ನಿನ್ನನ್ನು ಮತ್ತೆ ರಾಣಿಯನ್ನಾಗಿಸುವೆ. ಇಂದಿನ ಈ ರಾತ್ರಿ ನನಗೆ ಸಂತೋಷ ಆಗುತ್ತಿದೆ. ಬಕ, ಹಿಡಿಂಬ, ಕಿಮ್ಮೀರ, ಜರಾಸಂಧ, ಜಟಾಸುರರನ್ನು ಸಿಗಿದೆಸೆದ ಬಗೆಯಲ್ಲಿ ಇಂದು ಕೀಚಕನನ್ನು ಕೊಂದು ಕಳೆಯುವೆ, ನಿಶ್ಚಿಂತಳಾಗು” ಎಂದು ಅಭಯ ನೀಡಿದನು.
ಯೋಜನೆಯಂತೆ ದ್ರೌಪದಿ ಭೀಮನನ್ನು ಹೆಣ್ಣಿನಂತೆ ಅಲಂಕರಿಸಿಕೊಳ್ಳಲು ಸಹಕಾರಿಯಾದಳು. ಸೀರೆಯುಟ್ಟು ಸಿದ್ಧಳಾದ ದಢೂತಿ ಸುಂದರಿ ಯಾರೂ ಕಾಣದಂತೆ ನಾಟ್ಯ ಮಂದಿರ ಸೇರಿ ಗಟ್ಟಿಯಾದ ನರ್ತನ ಮಂಚದ ಮೇಲೆ ಮಲಗಿದನು. ಸಿಂಹ ಬೇಟೆಗೆ ಕಾಯುವಂತೆ ಕೀಚಕನ ನಿರೀಕ್ಷೆಯಲ್ಲಿ ಪ್ರತೀಕ್ಷೆಯಿಂದ ಪವಡಿಸಿದ್ದಾನೆ.
ಮುಂದುವರಿಯುವುದು.






















































