ಭಾಗ – 249
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೫೦ ಮಹಾಭಾರತ
ಕೀಚಕನು ಕಂಡು ಕೇಳರಿಯದ ನೈಸರ್ಗಿಕ ಚೆಲುವನ್ನು ನೋಡಿ ಸಕಲವನ್ನೂ ಮರೆತವನಂತಾಗಿ ಹೋದನು. ಈ ಚೆಲುವೆಯೋರ್ವಳು ತನಗೆ ಸಿಕ್ಕಿದರೆ ಸಾಕು ಎಂಬಷ್ಟರ ಮಟ್ಟಿಗೆ ಪರವಶನಾದನು.
ನೇರವಾಗಿ ದ್ರೌಪದಿಯ ಬಳಿಗೆ ಬಂದು ತನ್ನ ಪರಿಚಯ ಹೇಳುತ್ತಾ, ಮನದಾಸೆಯನ್ನು ಪ್ರಕಟಿಸತೊಡಗಿದನು “ಸುಂದರಾಂಗನೆಯೆ, ನೀನ್ಯಾರು ಸ್ವರ್ಗದ ಅಪ್ಸರೆಯೊ? ಇಲ್ಲಾ ದೇವತೆಯೊ? ಮನುಷ್ಯ ಜಾತಿಯ ಸ್ತ್ರೀ ಕುಲದಲ್ಲಿ ಕಾಣ ಸಿಗದ ಚೆಲುವೆಲ್ಲಾ ನಿನ್ನ ಮೈಸಿರಿಯಲ್ಲಿ ತುಂಬಿ ಕೊಂಡಿದೆ. ಹೆಣ್ಣನ್ನು ಕಾಣದವನಲ್ಲ ಈ ಕೀಚಕ. ಈ ದೇಶದ ಸೇನಾಧ್ಯಕ್ಷನೂ ಅರಮನೆಯ ವೈಭೋಗದ ಜೀವನ ಅನುಭವಿಸುತ್ತಿರುವ ಸುಖಿ ನಾನಾಗಿದ್ದೇನೆ. ಸುತ್ತ ಮುತ್ತಲ ದೇಶಗಳು ನನ್ನ ಹೆಸರು ಕೇಳಿದೊಡನೆ ಭಯದಿಂದ ಕಂಪಿಸುವಷ್ಟು ಪರಾಕ್ರಮ ನನ್ನದಾಗಿದೆ. ಅದ್ವಿತೀಯ ಸೌಂದರ್ಯದ ಗಣಿಯಾದ ನೀನು ನಿನ್ನ ಯೌವ್ವನವನ್ನು ಕೇವಲ ದಾಸಿಯಾಗಿ ಕಳೆದರೆ ಪುರಷಸಿಂಹನಾದ ನನಗೆ ಅಪಮಾನ. ನೀನು ಒಪ್ಪಿದರೆ ನನ್ನ ರಾಣಿಯರನ್ನು ನಿನ್ನ ದಾಸಿಯರನ್ನಾಗಿಸಿ ಸದಾ ನಿನ್ನ ಜೊತೆಗಿರುವೆ. ನಿನ್ನ ಆಶೋತ್ತರಗಳಿಗೆ ಪ್ರಥಮ ಆದ್ಯತೆ ನೀಡಿ ಪೂರೈಸುವ ವಚನವನ್ನೂ ನೀಡುತ್ತೇನೆ. ನಿನಗೇನು ಬೇಕು ಕೇಳು. ಈ ದಾಸ್ಯದ ಜೀವನದಿಂದ ಮುಕ್ತಳನ್ನಾಗಿಸಿ ರಾಣಿಯಾಗಿ ವೈಭವದ ಜೀವನ ನಿನ್ನದಾಗಿಸುವೆ” ಎಂದನು.
ದ್ರೌಪದಿಗೆ ಆಘಾತವಾಯಿತು. ಕೀಚಕನ ಮಾತಿನ ಒಂದೊಂದು ಧ್ವನಿಗಳೂ ಕಾದ ಸೀಸವನ್ನು ಕಿವಿಯೊಳಗೆ ಸುರಿದಂತೆ ವೇದನೆಯಾಯಿತು. “ಅಯ್ಯಾ! ನೀನಗೀಗಾಲೇ ಪತ್ನಿಯರಿದ್ದಾರೆ ಎಂದಿರುವೆ. ಪತ್ನಿಯರನ್ನು ಪ್ರೀತಿಯಿಂದ ರಕ್ಷಿಸುವುದು ಧರ್ಮ. ಮೇಲಾಗಿ ನಾನು ಪರಸತಿ. ನಿನ್ನ ದೃಷ್ಟಿ ಪರಸತಿಯರತ್ತ ಸೆಳೆಯಲ್ಪಡಬಾರದು, ಅದು ಅಧರ್ಮ. ಅನುಚಿತ ಕಾಮಿಯಾಗಿ ವ್ಯವಹರಿಸಿದರೆ ಪಾಪಾತ್ಮನಾಗುವೆ. ಅಕಾರ್ಯವನ್ನು ಮಾಡಲು ಮುಂದಾದರೆ ಅಪಕೀರ್ತಿ ನಿನ್ನದಾಗುತ್ತದೆ. ನನಗೆ ಪ್ರೀತಿಯ ಪತಿಯಂದಿರಿದ್ದಾರೆ. ಒಂದು ವೇಳೆ ನೀನು ನನ್ನನ್ನು ಬಯಸಿ ಮುಂದುವರಿದೆ ಎಂದಾದರೆ ಪ್ರಳಯಾಂತಕ ಸ್ವರೂಪರಾದ ನನ್ನ ಪತಿಗಳು ನೀನು ಎಲ್ಲಿ ಅಡಗಿದರೂ, ನೆಲದೊಳಗನ್ನು ಹೊಕ್ಕರೂ, ಆಕಾಶಕ್ಕೆ ಏರಿದರೂ, ಸಮುದ್ರದಾಳಕ್ಕೆ ಇಳಿದರೂ ನೀನು ತಪ್ಪಿಸಿಕೊಳ್ಳಲಾಗದು. ರಾತ್ರಿ ಬೆಳಗಾಗುವುದರೊಳಗೆ ವಧಿಸಲ್ಪಡುವೆ. ಅನಾವಶ್ಯಕವಾಗಿ ನಿನ್ನ ಪ್ರಾಣ ಕಳೆದುಕೊಳ್ಳುವ ದುಸ್ಸಾಹಸಕ್ಕೆ ಮನಮಾಡದಿರು. ನಿನ್ನ ಶ್ರೇಯಸ್ಸಿಗಾಗಿ ಹೇಳುತ್ತಿದ್ದೇನೆ. ಮೇಲಾಗಿ ದಾಸಿಯೂ, ಅಪ್ರಾರ್ಥನೀಯಳೂ ಆದ ನನ್ನಲ್ಲಿ ನೀನು ಬೇಡಕೂಡದು. ಮಾಡಬಾರದ ಕಾರ್ಯಕ್ಕೆ ಮುಂದಾದರೆ, ಆಗ ಬಾರದ್ದು ಮುಂದಾಗುತ್ತದೆ. ಮಹಾಮಾರಿ ಸ್ವರೂಪಳಾದ ನನಗೆ ಬಲಿಯಾಗಿ ಬರಬೇಡ” ಎಂದು ಎಚ್ಚರಿಸಿ ಹೇಳಿದಳು.
ಕೀಚಕನಿಗೆ ಇವಳಲ್ಲಿ ವ್ಯರ್ಥ ಮಾತು ಯಾಕೆ? ನನ್ನ ಅಕ್ಕ ಮಹಾರಾಣಿ. ಅವಳು ಆದೇಶವಿತ್ತರೆ ಇವಳು ಆಜ್ಞಾನುವರ್ತಿಯಾಗಿ ನನ್ನ ಬಳಿ ಬರಲೇಬೇಕು. ಹಾಗೆಂದು ತರ್ಕಿಸಿ ಅಕ್ಕ ಸುದೇಷ್ಣೆಯನ್ನು ಕಾಣಲು ಆತುರದಿಂದ ಓಡುವಂತೆ ನಡೆದನು. ಹೋದವನು ತನ್ನ ಮನದ ಬಯಕೆಯನ್ನು ಸುದೇಷ್ಣೆಯಲ್ಲಿ ಹೇಳಿ, ಅವಳು ನನಗೆ ಬೇಕೆ ಬೇಕು ಎಂಬಂತೆ ಪಟ್ಟು ಹಿಡಿದನು. ಆಗ ರಾಣಿಯಾಗಿ ಸರ್ವ ಪ್ರಜಾ ರಕ್ಷಕಿಯ ಹೊಣೆಗಾರಿಕೆಯೂ ಇದ್ದ ಸುದೇಷ್ಣೆ “ನೋಡು ಸೋದರಾ! ಆಕೆ ಪರಪತ್ನಿ, ಮಾತ್ರವಲ್ಲ ಆಕೆ ಬಹು ಪತಿಯರಿಗೆ ವಲ್ಲಭೆ. ಆಕೆಯೆ ಹೇಳಿರುವಂತೆ ಐವರ ಪತ್ನಿಯಾಗಿದ್ದಾಳೆ. ಯಾವುದೊ ಕಾರಣದಿಂದ ಸುಸಮಯದ ಪ್ರತೀಕ್ಷೆಯಿಂದ ಕಾಲ ಕಳೆಯುವುದಕ್ಕಾಗಿ ಹೀಗಿದ್ದಾಳೆ. ಮನಮೋಹಕ ಚೆಲುವೆಯಾಗಿರುವ ಅವಳ ಪತಿಯಂದಿರು ಗಂಧರ್ವರಂತೆ. ತಪ್ಪಿ ಯಾರಾದರು ಆಕೆಯ ತಂಟೆಗೆ ಹೋದರೆ ರಾತ್ರಿ ಬೆಳಗಾಗುವುದರೊಳಗೆ ಕೊಂದು ಕಳೆಯುವ ಶಕ್ತಿವಂತರಂತೆ. ಮೇಲಾಗಿ ಪರಸತಿಯೂ, ದಾಸಿಯೂ ಆದವಳನ್ನು ಬಯಸುವುದು ನಮಗೆ ಶೋಭೆಯಲ್ಲ” ಎಂದು ತಿಳಿ ಹೇಳಿದಳು.
ಕೀಚಕ ಎಲ್ಲಿ ಕೇಳುವ ಸ್ಥಿತಿಯಲ್ಲಿದ್ದಾನೆ? ‘ಕಾಮಾತುರನಾಂ ನ ಭಯಂ ನ ಲಜ್ಜಂ’ ಎಂಬ ಉಕ್ತಿಯಂತೆ ವ್ಯವಹರಿಸತೊಡಗಿದ್ದಾನೆ. ಸುದೇಷ್ಣೆಗೂ ಎಚ್ಚರಿಕೆಯ ಬೆದರಿಕೆಯೊಡ್ಡತೊಡಗಿದ, ” ಮತ್ಸ್ಯ ದೇಶದ ಸೇನಾಪತಿ ನಾನು. ಸಮಸ್ತ ಗಜ, ತುರಗ, ಪದಾತಿ, ಕಾಳಾಳು ಸೈನ್ಯ ನನ್ನ ಅಧೀನದಲ್ಲಿದೆ. ಮುಂದೆ ನಾನೇನು ಮಾಡುವೆನೊ ನನಗೇ ತಿಳಿದಿಲ್ಲ. ಅನಾಹುತವಾಗಬಾರದು ಎಂದಿದ್ದರೆ ನೀನಾಗಿ ಆಕೆಯನ್ನು ನನಗೊಪ್ಪಿಸು. ಒಂದೋ ನಾನು ಕ್ರೋಧಾವೇಶದಿಂದ ಈಕೆಯನ್ನಷ್ಟೆ ಅಲ್ಲ ಸಮಸ್ತ ಮತ್ಸ್ಯದೇಶವನ್ನೆ ವಶಪಡಿಸುವೆ. ಅಡ್ಡಿಯಾಗಿ ಬಂದವರನ್ನೆಲ್ಲಾ ಕೊಂದು ಕೆಡಹಲೂ ಹಿಂಜರಿಯಲಾರೆ. ಒಂದೊಮ್ಮೆಗೆ ಆಗದೆ ಹೋದರೆ ಪ್ರಾಣತ್ಯಾಗಕ್ಕೂ ಸಿದ್ದ. ಏನೇ ಆದರೂ ಆಗಲಿ ನನಗೆ ಅವಳು ಬೇಕೇ ಬೇಕು. ಏನು ಮಾಡುತ್ತೀಯೊ ನಿನಗೆ ಬಿಟ್ಟದ್ದು. ಆಕೆ ನನ್ನ ಅಂತಃಪುರಕ್ಕೆ ಬರುವಂತೆ ನೀನು ಮಾಡಬೇಕು. ಇಲ್ಲವೆಂದಾದರೆ ಈ ಕೀಚಕ ಯಾವುದಕ್ಕೂ ಸಿದ್ದ” ಎಂದು ಬೆದರಿಸಿದನು.
ರಾಜಕಾರಣ ನಿಪುಣೆಯಾದ ಸುದೇಷ್ಣೆ ಕೀಚಕನ ದುರ್ಬುದ್ಧಿಯನ್ನು ಚೆನ್ನಾಗಿ ಅರಿತವಳು. ಬರಬಹುದಾದ ಆಪತ್ತನ್ನು ಕಲ್ಪಿಸಿಕೊಂಡು ಉಚಿತ ಮಾರ್ಗೋಪಾಯವನ್ನು ಯೋಚಿಸಿದಳು. “ಕೀಚಕಾ, ಒಂದು ಸಮಾರಂಭವನ್ನು ಆಯೋಜಿಸು. ಬಳಿಕ ವಿಶೇಷ ಸುರೆಯನ್ನು ತರಿಸಿಕೊ. ನಾನು ನನ್ನ ಸೈರಂಧ್ರಿ ಮಾಲಿನಿಯನ್ನು ಕರೆದು ಚಿನ್ನದ ಕಲಶವಿತ್ತು ಕಳುಹಿಸುವೆ. ಏಕಾಂತದಲ್ಲಿ ಆಕೆಯ ಮನವೊಲಿಸು. ಯಾವ ಅಡೆತಡೆಯೂ ಇಲ್ಲದ ಆ ಸಂದರ್ಭದಲ್ಲಿ ಬೇಕಾದ ಆಮಿಷಗಳನ್ನೊಡ್ಡಿ ಪ್ರಲೋಭನೆಗೊಳಿಸಿ ನಿನ್ನ ಆಸೆ ಪೂರೈಸಿಕೊ” ಎಂದು ಹೇಳಿ ಕಳುಹಿಸಿದಳು.
ಅಂತೆಯೆ ಸಿದ್ಧನಾದ ಕೀಚಕ, ರಾಜಯೋಗ್ಯವಾದ ಚೆನ್ನಾಗಿ ಸೋಸಿದ ಮದ್ಯವನ್ನು ತರಿಸಿಕೊಂಡು ಒಂದು ಕಾರ್ಯಕ್ರಮ ಆಯೋಜಿಸಿದನು. ಸುದೇಷ್ಣೆಗೂ ವಿಚಾರ ಹೇಳಿ ಕಳುಹಿಸಿದನು.
ಸುದೇಷ್ಣೆ, ಯೋಜನೆಯಂತೆ ಸೈರಂಧ್ರಿಯನ್ನು ಕರೆದು ಚಿನ್ನದ ಕಲಶ ಕೈಗಿತ್ತು ಸೇನಾಧ್ಯಕ್ಷ ಕೀಚಕನ ಬಳಿ ಹೋಗಿ ವಿಶೇಷ ಸುರೆಯನ್ನು ತನಗಾಗಿ ತರುವಂತೆ ಕೇಳಿಕೊಂಡಳು.
ದ್ರೌಪದಿ, “ಮಹಾರಾಣಿ, ಮೊದಲೆ ನನ್ನ ಶರತ್ತುಗಳನ್ನು, ಪ್ರತಿಜ್ಞೆಯನ್ನು ಸ್ಪಷ್ಟವಾಗಿ ಹೇಳಿ ನೀವು ಒಪ್ಪಿದ ಬಳಿಕ ಇಲ್ಲಿ ಇದ್ದೇನೆ. ಅನ್ಯ ಕಾರ್ಯಗಳಿಗೆ ನನ್ನನ್ನು ಕಳುಹಿಸಬಾರದು. ಕೇವಲ ಸೈರಂಧ್ರಿ ವೃತ್ತಿ ಅದೂ ಮಹಾರಾಣಿಗೆ ಮಾತ್ರ ಎಂದು ನಿರ್ದಿಷ್ಟವಾಗಿ ಹೇಳಿರುವಾಗ ಯಾಕೆ ಈ ಮರೆವು ನಿನಗಾಯಿತು? ಆ ಕೀಚಕ ಕಾಮುಕನು. ನಾನು ಅಲ್ಲಿ ಹೋದರೆ ಖಂಡಿತವಾಗಿಯೂ ಆತ ಅನುಚಿತ ವರ್ತನೆ ತೋರುತ್ತಾನೆ. ಈ ಎಲ್ಲಾ ಅನರ್ಥಗಳಿಗೆ ನಾನು ಕಾರಣವಾಗಲು ಬಯಸುವುದಿಲ್ಲ. ನಿನಗೆ ಬೇಕಾದಷ್ಟು ಸೇವಕಿಯರಿದ್ದಾರೆ, ಬೇರೆ ಯಾರನ್ನಾದರು ಕಳುಹಿಸಿ ತರಿಸಿ ಕೊಳ್ಳುವ ವ್ಯವಸ್ಥೆ ಮಾಡಬಹುದಲ್ಲವೆ?” ಎಂದು ಕೇಳಿದಳು.
ಸುದೇಷ್ಣೆ “ಮಾಲಿನಿ, ನೀನು ರಾಣಿಯ ಆದೇಶದಂತೆ ಹೋಗುತ್ತಿರುವೆ. ಅಲ್ಲಿ ನನ್ನ ಸೇವಕಿಯಾಗಿ ಹೋದ ನಿನಗೇನೂ ತೊಂದರೆ ಕೊಡಲಾರ ಕೀಚಕ. ಮೇಲಾಗಿ ನನಗೆ ಆ ಉತ್ಕೃಷ್ಟ ಸುರಾಪಾನದ ಆತುರ ಹೆಚ್ಚಾಗಿ ಚಡಪಡಿಸುತ್ತಿದ್ದೇನೆ. ದಯಮಾಡಿ ವಿಳಂಭಿಸದೆ ಹೋಗಿ ತಂದು ಕೊಡುವೆಯಾ? ಆಶ್ರಯದಾತಳಾದ ನನ್ನ ಒಂದು ಕಿರು ಆಸೆಯನ್ನೂ ಈಡೇರಿಸಲಾರೆಯಾ?” ಎಂದು ವಿನಮ್ರಳಾಗಿ ವಿನಂತಿಸಿದಳು.
ದ್ರೌಪದಿ ನಿರುಪಾಯಳಾಗಿ ಕೀಚಕನ ಅರಮನೆಯತ್ತ ಹೋಗಲೇ ಬೇಕಾದ ಅನಿವಾರ್ಯತೆ ಒದಗಿ ಬಂತು.
ಮುಂದುವರಿಯುವುದು…