28.1 C
Udupi
Monday, March 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 236

ಭರತೇಶ್ ಶೆಟ್ಟಿ, ಎಕ್ಕಾರ್

“ಕರ್ಣಾ! ಇಂದಲ್ಲಾ ನಾಳೆ ಪಾಂಡವರು ರಣ ಧಾರುಣಿಯಲ್ಲಿ ನಮಗಿದಿರಾಗುತ್ತಾರೆ. ನೀನು ನನ್ನ ಪಾಲಿನ ಪ್ರಧಾನ ಯೋಧ. ದಾನ ನೀಡುವಲ್ಲಿ ಅರಿತೂ ನೀನೇಕೆ ಮರುಳನಾದೆ. ಮಹಾತ್ಮನಾದ ನೀನು ಧಾರಾಳನೇ ಸರಿ, ಉಚಿತಾನುಚಿತಗಳ ವಿವೇಚನೆ ಇಲ್ಲದ ಮೂಢನಾದೆಯಾ? ನನ್ನ ಭಾಗಕ್ಕೆ ವಿಶ್ವಾಸ ಘಾತುಕನಾಗಿ ನೀನೂ ವ್ಯವಹರಿಸಿದೆಯಾ? ಅಸದಳ ವಿಕ್ರಮಿ, ಅಮಿತ ಪರಾಕ್ರಮಿ, ಅತುಲ ವೀರರಾದ ಭೀಷ್ಮಾಚಾರ್ಯ – ದ್ರೋಣಾಚಾರ್ಯರಿದ್ದರೂ ಅವರಿಗೆ ನಮಗಿಂತ ಪಾಂಡವರಲ್ಲಿ ಅಕ್ಕರೆ ಹೆಚ್ಚು. ಆದರೆ ನೀನು ಅಖಂಡ ಪಾಂಡವ ದ್ವೇಷಿ, ಅದರಲ್ಲೂ ಅರ್ಜುನನ ಬದ್ಧವೈರಿ ಎಂದೇ ನಾನು ಗ್ರಹಿಸಿದ್ದೆ. ನನ್ನ ಭಾವನೆಗೆ ಗ್ರಹಣ ಸದೃಶವಾಗಿದೆ ನಿನ್ನ ಈ ನಡೆ. ಯಾಕಾಗಿ ನಿನ್ನ ಅಭೇದ್ಯ ಕವಚ ದಾನ ಮಾಡಿದೆ ಕರ್ಣಾ? ರಣರಂಗ ಪ್ರವೇಶ ಕಾಲಕ್ಕೆ ನಿನಗಿದ್ದ ವೈಶಿಷ್ಟ್ಯ ಕೊಡುಗೆ ಕಳಕೊಂಡು ಪೂರ್ವದಲ್ಲಿಯೆ ಸೋಲಿನ ಹಾದಿಗೆ ಹೆಜ್ಜೆಯಿಡುವ ಮೂರ್ಖತನ ಯಾಕಾಗಿ ನಿನ್ನಿಂದಾಯ್ತು? ಛೇ! ಈ ರೀತಿ ನೀನು ಹಿತಶತ್ರುವಾಗುವೆ ಎಂದು ಎಣಿಸಿರಲಿಲ್ಲ. ಆಚಾರ್ಯದ್ವಯರ ನಡೆ ಪ್ರಾಮಾಣಿಕವೂ, ವೇದ್ಯವೂ ಆಗಿ ಗೋಚರಿಸುತ್ತಿದೆ. ನೀನಾದರೂ ವಿಜಯ ಕಹಳೆ ಮೊಳಗಿಸಬಲ್ಲೆ ಎಂದು ಎಲ್ಲಾ ವಿಚಾರದಲ್ಲೂ ಅವರಿಗಿಂತ ಮೊದಲು ನಿನಗೆ ಮಣೆ ಹಾಕುತ್ತಿದ್ದ ನನ್ನ ಹಣೆ ಬರಹದಲ್ಲಿ ನಂಬಿ ಕೆಡಬೇಕೆಂದು ಬರೆದಿದಿಯೇ? ಯಾಕೆ ಹೀಗಾಯ್ತು ಕರ್ಣಾ?” ಎಂದು ದುರ್ಯೋಧನ ಹತಾಶನಾಗಿ ಕೇಳಿದನು.

ಮಿತ್ರ ದುರ್ಯೋಧನನ ಆತಂಕ ಸಹಜವೇ ಆಗಿತ್ತು. ಸಂತೈಸಲು ಮುಂದಾದ ರಾಧೇಯ ಉತ್ತರ ನೀಡ ತೊಡಗಿದ. “ಸುಯೋಧನಾ! ಆಗಬೇಕಾದದ್ದೇ ಆಗಿದೆ. ಭಯ – ವ್ಯಥೆ ಪಡಬೇಡ. ನನ್ನ ಬಳಿ ಬಂದವನು ದೇವರಾಜ ಇಂದ್ರ. ನಾನು ಸೂರ್ಯನಿಗೆ ಅರ್ಘ್ಯವರ್ಪಿಸಿ ತಿರುಗುವ ಕಾಲಕ್ಕೆ ಬಂದು ಬೇಡಿದ್ದಾನೆ. ಒಲ್ಲೆ ಎನ್ನಲಾಗದೆ ನೀಡಿದ್ದೇನೆ. ಕವಚ ಇದ್ದರೂ ಆ ಅರ್ಜುನನನ್ನು ಗೆಲ್ಲಲಾಗುತ್ತಿತ್ತೋ ಇಲ್ಲವೋ! ನನಗೆ ಗೊತ್ತಾಗದ ವಿಚಾರ. ಆದರೆ ಈಗ ದೊರೆತ ಇಂದ್ರ ಶಕ್ತಿಯ ವೈಜಯಂತಿ ಶರ ನಮಗೆ ವಿಜಯ ಒದಗಿಸುವುದರಲ್ಲಿ ಸಂಶಯವಿಲ್ಲ. ಅರ್ಜುನನ ಆರ್ಜನೆ ಸಾಧನೆಯ ಸಂಪಾದನೆ ಏನೇ ಇದ್ದರೂ ಈಗ ಈ ದಿವ್ಯಾಸ್ತ್ರದ ಮುಂದೆ ಸಾಗದು. ಆತನಿಗೆ ಮರಣಕಾರಕ ಆಯುಧ ನನ್ನ ತೂಣಿರ ಸೇರಿಯಾಗಿದೆ. ಕವಚವಿದ್ದೂ ಆತನೆದುರು ಕೈ ಸಾಗದೆ ಈಗಾಗಲೇ ನಾವು ಸೋತು ಹಲವು ಬಾರಿ ಹಿಂದಿರುಗಿದ್ದೇವೆ. ಕವಚದಿಂದ ಜೀವವೊಂದುಳಿದಿದೆ. ಆದರೆ ಇನ್ನು ಅಂತಹ ಸಾಧ್ಯತೆ ಇಲ್ಲ. ಅರ್ಜುನನ ರುಂಡ ನಿನ್ನ ಪದಕಮಲದಲ್ಲಿ ತಂದೆಸೆಯಬಲ್ಲ ಶಕ್ತಿ ಶರ ನಮ್ಮಲ್ಲಿದೆ” ಎಂದು ಹೇಳಿ ಸಮಾಧಾನಪಡಿಸಿದನು. ಇದೆಲ್ಲವನ್ನು ಕೇಳಿಸಿಕೊಂಡ ದುರ್ಯೋಧನ ಕರ್ಣನನ್ನು ಬಿಗಿದಪ್ಪಿ ಬರಸೆಳೆದು ಬಿಗಿದಪ್ಪಿ ಸಂತೃಪ್ತಿಯ ನಿಟ್ಟುಸಿರೆಳೆದು ಬಿಟ್ಟನು.

ಇತ್ತ ಅರಣ್ಯವಾಸಿಗಳಾದ ಪಾಂಡವರ ಬೇಸರ ಕಳೆಯಲು ಮತ್ತೆ ಮಾರ್ಕಾಂಡೇಯರು ಕಾಮ್ಯಕಾವನಕ್ಕೆ ಬಂದರು. ಹಿಂದೊಮ್ಮೆ ದ್ವೈತ ವನದಲ್ಲಿದ್ದಾಗಲೂ ಬಂದಿದ್ದರು. ಅನೇಕ ವಿಧವಾದ ಧರ್ಮ ಬೋಧೆಯನ್ನೂ, ನ್ಯಾಯ ವಿಚಾರಗಳನ್ನೂ, ಬಹುವಿಧದ ಸಾಂದರ್ಭಿಕ ನೀತಿ ಕಥೆಗಳನ್ನೂ ವಿಶ್ರುತ ಪಡಿಸಿ ಪಾಂಡವರ ಬೇಸರ ದೂರೀಕರಿಸಿ, ನೈತಿಕ ಬಲ, ಧಾರ್ಮಿಕ ನಂಬಿಕೆ ಬಲಪಡಿಸಿ ಧೀ ಶಕ್ತಿ ತುಂಬಿದರು. ಈ ಸಂದರ್ಭ ಮಾರ್ಕಾಂಡೇಯರು ಹೇಳಿದ ಕಥಾ ಮಾಲಿಕೆ ಅಗಾಧವಾಗಿದೆ.‌ ಧರ್ಮ ಶಿಕ್ಷಣದ ಮಹತ್ತರ ಅಧ್ಯಯನ ಇದಾಗಿದೆ. ಮಾರ್ಕಾಂಡೇಯರು ತಾನು ಬಂದ ಉದ್ದೇಶ ಧರ್ಮಜ್ಞಾನ ನೀಡುವ ಕಾರ್ಯ ಪೂರೈಸಿ ಹಿಂದಿರುಗಿದರು.

ಹೀಗಿರಲು ಒಂದು ದಿನ ಸೂರ್ಯೋದಯವಾಗಿ ಹೊತ್ತು ಮೇಲೆರುತ್ತಿರುವ ಸಮಯ. ನೈಮಿತ್ತಿಕ ಕರ್ಮ ಪೂರೈಸಿ ಧರ್ಮರಾಜ ಕುಳಿತಿದ್ದಾನೆ. ಸಹೋದರರೂ ಜತೆಗಿದ್ದಾರೆ. ಓರ್ವ ಬ್ರಾಹ್ಮಣ ಓಡೋಡಿ ಬಂದನು. “ಸ್ವಾಮಿ ನನ್ನ ದಿನವೇ ಹಾಳಾಯಿತು. ಹೋತ್ರ ಮಾಡಲು ಬೇಕಾದ ಜೊಡು ಅರಣಿಯನ್ನು (ಹೋಮ ಮಾಡಲು ತಿಕ್ಕಿ ಅಗ್ನಿಯನ್ನು ಉಂಟು ಮಾಡುವ ಮರದ ಜೋಡು ತುಂಡುಗಳು) ಆಶ್ರಮದ ಬಳಿಯ ಮರಕ್ಕೆ ಜೋತು ಹಾಕಿದ್ದೆ. ಹರಿಣವೊಂದು ಬಂದು ಮರಕ್ಕೆ ಮೈಯುಜ್ಜಿಕೊಳ್ಳುತ್ತಿತ್ತು. ನೋಡುತ್ತಿದ್ದಂತೆಯೇ ಅರಣಿಯ ಜೋಡಿಯನ್ನು ಕಟ್ಟಿದ್ದ ಹಗ್ಗ ಆ ಜಿಂಕೆಯ ಕೋಡಿಗೆ ಸಿಕ್ಕಿ ಕೊಂಡಿತು. ಬಿಡಿಸಬೇಕೆಂದು ಹೋದರೆ ಅದು ಓಡಿ ಹೋಗಿ ಬಿಟ್ಟಿತು. ನಾನು ಅಗ್ನಿ ಹೋತ್ರ ಮಾಡಲಾಗದ ಸ್ಥಿತಿ ಉಂಟಾಗಿದೆ. ದಯವಿಟ್ಟು ಆ ಹರಿಣವನ್ನು ಬೆನ್ನಟ್ಟಿ ನನ್ನ ಅರಣಿಗಳನ್ನು ಮರಳಿ ಸಿಗುವಂತೆ ಮಾಡಬೇಕು” ಎಂದು ಬೇಡಿಕೊಂಡನು.

ಧರ್ಮರಾಯನು ಹಿಂದು ಮುಂದಾಲೋಚಿಸದೆ ಬ್ರಾಹ್ಮಣನಿಗೆ ಧೈರ್ಯದ ನುಡಿಯನ್ನಾಡಿ ಅಭಯವಿತ್ತನು. ತಮ್ಮಂದಿರಿಗೂ ಆದೇಶ ನೀಡಿ “ನಿಮ್ಮ ಆಯುಧ ಧಾರಣೆ ಮಾಡಿಕೊಳ್ಳಿ, ಹರಿಣವನ್ನು ಹಿಡಿದು ಅರಣಿಯನ್ನು ತರಬೇಕು” ಅಣ್ಣನ ಅಪ್ಪಣೆ ಮೀರುವ ತಮ್ಮಂದಿರೆ? ತತ್ಕ್ಷಣದಲ್ಲೇ ಎದ್ದು ಆಯುಧ ಧಾರಣೆ ಮಾಡಿ ಬ್ರಾಹ್ಮಣ ತೋರಿದ ಹರಿಣ ಓಡಿದ ದಿಕ್ಕಿನತ್ತ ಬೆಂಬತ್ತಿ ಓಡಿದರು.

ನಿಯತಿಯ ನಿಯಮದ ಚಲನೆಯೊಳಗೆಲ್ಲರೂ ಪಾತ್ರಧಾರಿಗಳು ಅಲ್ಲವೇ? ಓಡಿದರು – ಬೆಂಬತ್ತಿದರು. ಒಮ್ಮೆ ಕಾಣಿಸಿದ ಜಿಂಕೆ ಅರೆಕ್ಷಣದಲ್ಲಿ ಓಡಿ ಕಣ್ತಪ್ಪಿಸಿಕೊಳ್ಳುತ್ತಿತ್ತು. ಗೊಂಡಾರಣ್ಯದೊಳಗೆ ಬಿಡದೆ ಓಡಿದ ಪಾಂಡವರಿಗೆ ಸಿಕ್ಕಿತು ಸಿಕ್ಕಿತು ಎನ್ನುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಿತ್ತು. ಅರ್ಜುನನ ಶಬ್ದವೇಧಿ ವಿದ್ಯೆಯೂ ಹರಿಣದ ನಾಗಲೋಟ ಭೇದಿಸಲಾಗದೆ ಹೋಯಿತು. ಮೃಗಶಾಸ್ತ್ರ ಕೋವಿದರಾದ ನಕುಲ ಸಹದೇವರ ಶ್ರಮವೂ ಫಲವೀಯಲಿಲ್ಲ. ಯುಧಿಷ್ಠಿರನ ಈಟಿಯ ಗುರಿಯೂ ತಪ್ಪಿತು. ಭೀಮನ ಕಥೆಯೂ ಇದಕ್ಕೆ ಹೊರತಾಗಿ ಏನೂ ಸಾಧಿಸಲಿಲ್ಲ. ಮಾರುತಿ ನಂದನ ಹಾರಿದ, ಏರಿ ಹೋದ ಆದರೂ ವ್ಯಥೆಯ ಕಥೆಯಾಯಿತು ಬಿಟ್ಟು ಬೇರೇನೂ ಆಗಲಿಲ್ಲ. ಇನ್ನಾಗದು ಎಂದು ನಿಂತರೆ ಎದುರಲ್ಲಿ ನಡೆಯುತ್ತಾ ಸಾಗುವ ಜಿಂಕೆ ಕಾಣಿಸುತ್ತಿತ್ತು. ಮತ್ತೆ ಮಾಯಾಮೃಗದ ನಾಗಾಲೋಟ. ಅದ್ಯಾವ ಗಮ್ಯದೆಡೆ ಸೆಳೆದೊಯ್ಯತ್ತಿದೆಯೋ? ಓಡಿ ಓಡಿ ಕಡೆಗೂ ಕಾಲು ಸೋತಿತು, ಎದೆಯಾರಿತು, ದೇಹ ದಣಿಯಿತು. ಕುಳಿತು ಬಿಟ್ಟರು ಪಾಂಡು ಪುತ್ರರು.

ಧರ್ಮರಾಯ ಕೈ ಸನ್ನೆಯಲ್ಲಿ ನೀರು ಬೇಕು ಬಾಯಾರಿದೆ ಎಂದು ನಕುಲನತ್ತ ತಿರುಗಿ ಹೇಳಿದ. ಅಣ್ಣನ ಸೇವೆಗೆ ಸದಾ ಸಿದ್ದ ತಮ್ಮಂದಿರು. ಅವರಿಗೂ ಎದೆಯೊಡೆಯುವ ಶುಷ್ಕತೆಯ ಭಾವವಾಗುತ್ತಿದ್ದರೂ, ಮರವೇರಿ ನಕುಲ ಸುತ್ತಮುತ್ತಲ ಪ್ರದೇಶವನ್ನೊಮ್ಮೆ ನೋಡಿದನು. ಸನಿಹದಲ್ಲಿ ತಿಳಿ ನೀರ ಸರೋವರವಿರುವುದನ್ನು ಕಂಡನು. ಅಣ್ಣ ಧರ್ಮಜನ ಆಣತಿಯಂತೆ ಸಹದೇವ ನೀರು ತರಲು ಅತ್ತ ಸಾಗಿದನು. ಏರನ್ನು ಏರಿ, ಜಾರು ಪ್ರದೇಶದಲ್ಲಿ ಇಳಿಯುತ್ತಾ ಸರೋವರದೆಡೆ ಬಂದು ತಲುಪಿದನು. ಪ್ರಶಾಂತ ಪುಷ್ಕರಣಿ. ನಿರ್ಮಲ ಜಲ ತುಂಬಿ ವಿಸ್ತಾರವಾಗಿ ಚಾಚಿಕೊಂಡಿದೆ. ತಂಗಾಳಿ ಮಂದವಾಗಿ ಬೀಸುತ್ತಿದೆ. ನೇರವಾಗಿ ನೀರಿಗಿಳಿದನು. ಆಗ ಸ್ವರವೊಂದು ಕೇಳಿ ಬಂತು. “ನಿಲ್ಲು, ಇದು ನನ್ನ ಅಧಿಕಾರದಲ್ಲಿರುವ ಸರೋವರ. ನಾನು ಕೇಳುವ ಪ್ರಶ್ನೆಗೆ ಉತ್ತರ ನೀಡಿದರೆ ಮಾತ್ರ ಜಲ ಸ್ಪರ್ಶಿಸಬಹುದು. ಇಲ್ಲದಿದ್ದರೆ ಸಂಚಕಾರ ಎಚ್ಚರ” ತಿರುಗಿ ಒಂದು ಸುತ್ತು ನೋಡಿದ ಸಹದೇವ – ಯಾರೂ ಇಲ್ಲ. ತಡೆಯುವವ ಬರಲಿ ನೋಡೋಣ ಎಂದು ಪ್ರಾಣ ಹೋಗುವ ಬಾಯಾರಿಕೆ ನೀಗಿಸಲು ಬೊಗಸೆ ನೀರನ್ನೆತ್ತಿ ಕುಡಿದನು. ಅರೆ ಕ್ಷಣದಲ್ಲಿ ತಲೆ ತಿರುಗಿತು. ಶರೀರ ಕಂಪಿಸಿತು. ದೇಹ ಶೀತಲವಾಯಿತು. ಒಂದೆರಡು ಹೆಜ್ಜೆ ಇಡುವುದರೊಳಗೆ ಬಿದ್ದು ಬಿಟ್ಟನು. ಉಸಿರು ನಿಂತಿತು.

ಸಹದೇವ ಬರಲಿಲ್ಲ. ಏನಾಯಿತು ನೋಡಿ ಬಾ ಎಂದು ನಕುಲನನ್ನು ಕಳುಹಿಸಿದನು. ಆತನು ಅದೆ ಹಾದಿ ಹಿಡಿದು ನೇರವಾಗಿ ಬಂದು ನೀರಿಗಿಳಿದು ಕುಡಿದನು, ಎಚ್ಚರಿಕೆಗೆ ಕಿವಿಗೊಡಲಿಲ್ಲ. ಅದೇ ಕಥೆ ಪುನರಾವರ್ತನೆ. ಆತನೂ ನಿಸ್ತೇಜನಾಗಿ ಬಿದ್ದ. ಆತನ ಪ್ರಾಣವಾಯು ಸಂಚಾರವೂ ನಿಂತಿತು.

ಅರೆ ಏನಿದು ಹೋದ ಇಬ್ಬರದ್ದು ಪತ್ತೆ ಇಲ್ಲ ಎಂದು ಅರ್ಜುನನ್ನು ಅಣ್ಣ ಧರ್ಮಜ ಕಳುಹಿಸಿದ. ಈಗಲೂ ಮತ್ತದೇ ಎಚ್ಚರಿಕೆ. ಅರ್ಜುನ ಸಾಮಾನ್ಯನೆ? “ಅಯ್ಯಾ ದಣಿವಾರಿಕೆಗೆ ಜಲವೆ ಮಾಧ್ಯಮ. ಅದು ದೇವರ ಸೃಷ್ಟಿ . ಯಾರ ಅಧೀನವೂ ಅಲ್ಲ ಎಂದು ಉತ್ತರಿಸಿದನು. ನನ್ನ ಪ್ರಶ್ನೆಗಳಿಗುತ್ತರಿಸದೆ ಮುಂದುವರಿದರೆ ಅವರಿಬ್ಬರ ಗತಿ ನಿನಗೂ ಆದೀತು ಎಂದಾಗ ಅರ್ಜುನ ಅತ್ತ ನೋಡಿದನು. ಅಲ್ಲಿ ತಮ್ಮಂದಿರಿಬ್ಬರೂ ಬಿದ್ದಿದ್ದಾರೆ. ಅವರ ಮುಖಕ್ಕೆ ನೀರು ಪ್ರೋಕ್ಷಿಸುವೆ. ನಾನೂ ಬಾಯಾರಿಕೆ ತೀರಿಸಬೇಕು. ಅದಕ್ಕಿಂತ ಮೊದಲು ಈ ಆಗಂತುಕನಿಗೆ ತಕ್ಕ ಶಾಸ್ತಿಯಾಗಬೇಕೆಂದು ಬಗೆದು ಸರೋವರದ ಸುತ್ತ ಅಕ್ಷಯಾಸ್ತ್ರ ಪ್ರಯೋಗಿಸಿ ಶರ ಪಂಜರದಂತೆ ಕೋಟೆ ಕಟ್ಟಿದನು. ” ಅಯ್ಯಾ ನೀನು ವೀರನು ಹೌದಾದರೆ ನನ್ನ ಶರ ಕೋಟೆಯನ್ನು ದಾಟಿ ಬಾ” ಎಂದು ಸವಾಲೆಸೆದು ನೀರಿಗಿಳಿದು ಕುಡಿಯುತ್ತಿದ್ದಂತೆ ಅರ್ಜುನನಿಗೂ ನಡುಗಿತು ಕಾಯ, ಮಂಜಾಯಿತು ಕಂಗಳು, ಓಲಾಡುತ್ತಾ ಮೇಲೆ ಬರಲೆತ್ನಿಸಿದರೆ ಕಾಲುಗಳು ಸಾಗಲಿಲ್ಲ. ಬಿದ್ದೇ ಬಿಟ್ಟನು. ಶ್ವಾಸ ಸ್ಥಂಭನವಾಯಿತು.

ಆಗ ಅತ್ತ ಬಾಯಾರಿ ಕಾಯುತ್ತಿದ್ದ ಧರ್ಮರಾಯ ಸೋದರ ಭೀಮನನ್ನು ನೋಡಿ ಪ್ರಶ್ನಾರ್ಥಕ ದೃಷ್ಟಿ ಬೀರಿದನು. ಸಂಜ್ಞೆಯರಿತ ಭೀಮ ಅವರನ್ನು ಕರೆದು ಕೊಂಡು ಬಾ ಎಂದು ಕಳುಹಿಸಿದರೆ ಭೀಮನಿಗೂ ತತ್ಸಮಾನ ಸ್ಥಿತಿ ಒದಗಿತು.

ಹೋದವರ್ಯಾರೂ ಬರುತ್ತಿಲ್ಲ ಯಾಕೆಂದು ಆತಂಕಕ್ಕೊಳಗಾಗಿದ್ದಾನೆ. ಈಗ ಧರ್ಮರಾಯ ಒಬ್ಬ ಮಾತ್ರ ಉಳಿದಿರುವುದು. ಉಳಿದ ನಾಲ್ವರ ಸರೋವರ ತಟದಲ್ಲಿ ಹತಪ್ರಾಣರಾಗಿ ಸತ್ತು ಬಿದ್ದಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page