27.1 C
Udupi
Tuesday, March 24, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -235

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೩೬ ಮಹಾಭಾರತ

ಕರ್ಣ ದಿನಮಣಿ ಸೂರ್ಯನಿಗೆ ಅರ್ಘ್ಯ ಸಮರ್ಪಿಸಿ ನಿತ್ಯದ ದಾನಕ್ಕೆ ಸಿದ್ಧನಾಗಿ ಇರುವಾಗ ಎದುರಾಗಿ ನಿಂತ ಬ್ರಾಹ್ಮಣ “ಅಂಗರಾಜ ಕರ್ಣಾ, ನಿನ್ನಲ್ಲಿ ದಾನ ಬೇಡಲು ಬಂದವನು ನಾನು” ಎಂದನು. ಕರ್ಣನ ಮನಸ್ಸು ಸ್ವಪ್ನ ನಿರ್ದೇಶಿತ ವಿಚಾರದತ್ತ ಹೊರಳಿತು. ಬ್ರಾಹ್ಮಣನನ್ನೊಮ್ಮೆ ಪಾದದಿಂದ ಶಿರದವರೆಗೆ ಅವಲೋಕಿಸಿ ನೋಡಿದ, ಇವನು ಇಂದ್ರನಾಗಿ ಇರಬಹುದೆ? ಎಂಬ ಸಂದೇಹವೂ ಮನದಲ್ಲಿ ಮೂಡಿತು. ಆದರೂ ಹೆಚ್ಚು ವಿಮರ್ಷೆಗೆ ಹೋಗದೆ “ಸ್ವಾಮಿ ತಮಗೆ ನನ್ನಿಂದ ಯಾವುದರ ಅಪೇಕ್ಷೆ ಇದೆ. ತಿಳಿಸಿದರೆ ಪೂರೈಸುವ ಪ್ರಯತ್ನ ಮಾಡುವೆ” ಎಂದನು. ಆಗ ಬ್ರಾಹ್ಮಣ “ಅಯ್ಯಾ ದಾನಶೂರಾ! ನೀನು ಧಾರಾಳವಾಗಿ ದಾನ ನೀಡಿರುವ ಖ್ಯಾತಿಯಿದೆ. ಆದರೆ ನಾನು ಕೇಳುವ ದಾನ ತುಸು ವಿಶೇಷವಾದದ್ದು. ಅಂತಹ ಅಪೇಕ್ಷೆ ಪೂರೈಸಿದರೆ ಇತಿಹಾಸ ನಿನ್ನನ್ನು ಸದಾ ಕಾಲ ಸ್ಮರಿಸುವ ಚರಿತ್ರೆ ನಿರ್ಮಾಣವಾದೀತು” ಎಂದನು. ಕೇಳಿಸಿಕೊಂಡ ಕರ್ಣ “ಸ್ವಾಮಿ ನಿಮ್ಮ ಬಯಕೆ ಏನೆಂದು ತಿಳಿಯದೆ ನಾನು ನೀಡುವುದಾದರೂ ಏನನ್ನು? ನಿಸ್ಸಂಕೋಚವಾಗಿ ಹೇಳಿ. ನಿಮ್ಮ ಬೇಡಿಕೆ ಏನು?” ಎಂದು ಕೇಳಿದನು. ಆಗ “ಕರ್ಣಾ! ನಾನು ಬೇಡುವ ದಾನ ಅನ್ಯರಾರಿಂದಲೂ ನೀಡಲಾಗದು. ಆದರೆ ಅದು ನಿನ್ನಿಂದ ಮಾತ್ರ ಸಾಧ್ಯ. ಅಂತಹ ಅಪ್ರತಿಮ ವಿಶಿಷ್ಟ ವಸ್ತು ನಿನ್ನಲ್ಲಿ ಮಾತ್ರ ಇರುವುದು. ಅನ್ಯಥಾ ಭಾವಿಸಬೇಡ. ನಿನ್ನ ಜನ್ಮ ಕಾಲದಿಂದ ಶರೀರಕ್ಕಂಟಿಕೊಂಡು ಒಂದು ಕವಚವಿದೆ. ಅದನ್ನು ಬಯಸಿ ಬಂದಿದ್ದೇನೆ” ಎಂದನು.

ಈ ಮಾತು ಕೇಳಿ ಸ್ವಪ್ನ ವಿಚಾರ ಸತ್ಯವಾಯಿತೆಂದು ಕರ್ಣನಿಗೆ ಮನವರಿಕೆಯಾಯಿತು. ತಕ್ಷಣ ಆತ ಕೇಳಿದ “ಸ್ವಾಮೀ ತಾವು ಓರ್ವ ನಿಜ ಬ್ರಾಹ್ಮಣನೇ? ಇಲ್ಲ ಆ ರೂಪದಲ್ಲಿ ಬಂದಿರುವ ಸ್ವರ್ಗಾಧಿಪ ದೇವೇಂದ್ರನೆ?”

“ಕರ್ಣಾ! ಅದ್ಬುತ. ನಿನ್ನ ಗ್ರಹಿಕೆ ಸರಿಯಾಗಿಯೇ ಇದೆ. ನಾನು ದೇವರಾಜ ಇಂದ್ರನು ಹೌದು. ಈಗ ನನ್ನ ಬೇಡಿಕೆ ಈಡೇರಿಸಲಾರೆಯಾ?” ಎಂದು ಕೇಳಿದನು.

ದೇವಲೋಕದ ದೇವತೆಗಳ ರಾಜ ದೇವೇಂದ್ರ ಮನುಷ್ಯ ಮಾತ್ರನಾದ ನನ್ನಲ್ಲಿ ಬೇಡುತ್ತಿರುವುದೆ? ಶತಯಾಗಾರ್ಚಿತ ಪುಣ್ಯ ಬಲ ಸಂಪನ್ನನಾಗಿ ಇಂದ್ರ ಪದವಿಗೇರಿ, ಸ್ವರ್ಗ ಸುಖಭೋಗ ಅನುಭವಿಸುವ ಸುರೇಂದ್ರ ಕೊರತೆಯಾಗಿ ಬೇಡಲು ಬಂದನೆ? ಕಲ್ಪವೃಕ್ಷ, ಕಾಮಧೇನು, ಸ್ಪರ್ಶಮಣಿಗಳಿರುವ, ಕಾಮಿಸಿದ್ದನ್ನು ಪಡೆಯುವ ಯೋಗ ಭಾಗ್ಯವಂತ. ಆದಾಗ್ಯೂ ನನ್ನಿಂದ ಅಪೇಕ್ಷೆ ಪಡುವುದೆ? ಊಳಿಗಕ್ಕೆ ದೇವತೆಗಳು, ಅಧೀನರಾಗಿ ಅಷ್ಟ ದಿಕ್ಪಾಲಕರು, ವಿಹಾರಕ್ಕೆ ನಂದನವನ, ಭೋಗಕ್ಕೆ ರಂಭಾದಿ ಸುರ ನಾರಿಯರು, ಪಾನಕ್ಕೆ ದಿವ್ಯ ಪಿಯೂಷ, ಮೇಲಾಗಿ ಮುನಿ ಮನೀಷಿಗಳ ಹೋಮ ಯಾಗದ ಹವಿರ್ಭಾಗ ಸಂಪನ್ನನಾಗಿರುವ ಸುರೇಶನಿಗೆ ಯಾವ ಕೊರತೆಯಾಯಿತು? ಹಾಗೂ ಯೋಚಿಸಿದರೆ ದೇವತೆಗಳನ್ನು ಸಾಕ್ಷಾತ್ಕರಿಸಿ ಬೇಡುವವರು ಮನುಷ್ಯರಾದ ನಾವು. ಅನುಗ್ರಹ ಕಾರಕ ಶಕ್ತಿ ಸಾಮರ್ಥ್ಯವುಳ್ಳವರು ದೇವತೆಗಳು. ಅದೇನೆ ಇರಲಿ, ಬಿಡೋಣ, ಈಗ ಶಚೀಕಾಂತ ಬೇಡಿರುವುದು ನನ್ನ ಕವಚ. ಅದರಿಂದ ಆತನಿಗೇನಾದರೂ ಉಪಯೋಗ ಅಥವಾ ಉಪಕಾರ ಆಗಲಿಕ್ಕಿದೆಯೆ? ನನಗಾದರೆ ಅದರಿಂದ ಪ್ರಯೋಜನವಿದೆ. ಈ ಕವಚ ವಜ್ರ ಸದೃಶ ಕಠಿಣವೂ, ಅಭೇದ್ಯವೂ ಆಗಿ ನನಗೆ ಪ್ರಾಣರಕ್ಷಣೆ ನೀಡಬಲ್ಲುದು. ಹಾಗಿದ್ದರೆ ಸಂಚುಕಾರನಾಗಿ ನನ್ನ ಬಳಿ ಬಂದು ಬೇಡಿದ್ದಾನೆಯೆ? ಆತನ ಅನುಗ್ರಹ ಪುತ್ರ ಅರ್ಜುನ ನನ್ನ ವೈರಿ. ಪರಸ್ಪರ ಒಬ್ಬರನ್ನೊಬ್ಬರು ಕೊಲ್ಲುವ ಪ್ರತಿಜ್ಞಾಬದ್ದರು ನಾವು. ಅದನ್ನರಿತು ಅರ್ಜುನನ ಕಾರ್ಯ ಸಾಧನೆಗೆ ಪೂರಕನಾಗಿ, ನನ್ನ ಆಚರಣೆಯಾದ ಸತ್ಕರ್ಮ ದಾನಶೀಲತೆಯನ್ನು ಬಂಡವಾಳವಾಗಿಸಿ ವ್ಯವಹರಿಸುತ್ತಿದ್ದಾನೊ ಸಹಸ್ರಾಕ್ಷ? ಒಂದೊಮ್ಮೆಗೆ ದಾನ ನೀಡುವುದೇ ಧರ್ಮವೆಂದು ನೀಡಿದರೆ ನನ್ನ ಸಾವಿಗೆ ನಾನೆ ಸಹಕರಿಸಿದಂತಾಗುತ್ತದೆ. ಅರ್ಜುನ ತನ್ನ ಪ್ರತಿಜ್ಞೆ ಈಡೇರಿಸಲು ಅನುಕೂಲವಾಗುತ್ತದೆ. ಸುರಾಧಿಪನಿಗೆ ಅನಗತ್ಯವೂ, ಪ್ರಯೋಜನ ಇಲ್ಲದ್ದೂ ಆದ ಈ ದಿವ್ಯ ರಕ್ಷಾಕವಚವನ್ನು ನೀಡಿ ವೃಥಾ ವ್ಯರ್ಥಗೊಳಿಸಿದಂತಾಗುತ್ತದೆ. ಏನು ಮಾಡಲಿ ಈಗ? ಛೆ! ಈ ಕರ್ಣನಿಗೆ ಮರಣ ಭಯವೇ? ಖಂಡಿತಾ ಇಲ್ಲ. ಎಂದಾದರೂ ಒಂದು ದಿನ ಕವಚವಿದ್ದರೂ ಸಾವು ಇದ್ದೇ ಇದೆ. ಮೃತ್ಯುವಿಗೆ ಹೆದರಿ ಈ ಕರ್ಣ ಅಳುಕಬಾರದು. ಯಾರಿಗೂ ಇಲ್ಲ ಕೊಡಲಾರೆ ಎನ್ನದ ರಾಧೇಯ ಇಂದೇಕೆ ಅಳುಕಬೇಕು? ಸಾಕ್ಷಾತ್ ಇಂದ್ರನೆ ಬಂದು ಭಿಕ್ಷಾರ್ಥಿಯಾಗಿದ್ದಾನೆ. ಈ ವಸುಸೇನ ಆತನಿಗೆ ದಾನ ನೀಡುವಲ್ಲಿ ಜೀವನ ಕದನವನ್ನೆ ಗೆದ್ದಾಯಿತು. ಇನ್ನು ಯಾವ ಸೋಲಾದರೂ ಕರ್ಣನ ಚರಿತ್ರೆಗೆ ಕಳಂಕ ಬಾರದು. ಅಂತಹ ಪ್ರಾಪಂಚಿಕ ಸೋಲು ಒಂದೊಮ್ಮೆಗೆ ಬಂದರೂ ನಗಣ್ಯ. ನನ್ನ ವೈರಿ ಅರ್ಜುನ ಯಾರ ಅನುಗ್ರಹದಿಂದ ಹುಟ್ಟಿದ್ದಾನೊ?, ಯಾರ ಅನುಗ್ರಹ ಬಾಳಿನುದ್ದಕ್ಕೂ ಆತನಿಗಿದೆಯೊ? ಅಂತಹ ದೇವೇಶನೆ ಪ್ರತ್ಯಕ್ಷ ಬಂದು ನನ್ನ ಅನುಗ್ರಹಕ್ಕಾಗಿ ಕೈಚಾಚಿದ್ದಾನೆ ಎಂದಾದರೆ ಕರ್ಣನ ಸ್ಥಾನ ಈ ಇಬ್ಬರಿಗಿಂತಲೂ ಎತ್ತರಕ್ಕೆ ಏರಿದಂತೆ ಆಗುತ್ತದೆ. ಇನ್ನು ಯೋಚಿಸಲಾರೆ, ಆಗಲಿರುವುದು ಆಗಿಯೆ ಆಗುತ್ತದೆ. ಕವಚ ನೀಡಿದರೂ, ನೀಡದೇ ಇದ್ದರೂ ಆಗಲಿರುವುದನ್ನು ತಡೆದು ನಿಲ್ಲಿಸಲಾಗದು. ನಿಯತಿಯ ನಿಯಮ ಮೀರಿ ನಿಲ್ಲುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ದಾನ ನೀಡುವುದು ನನಗೆ ಭೂಷಣ. ಹೀಗೆ ಕರ್ಣ ಸಮಗ್ರವಾಗಿ ಯೋಚಿಸಿ ತೀರ್ಮಾನಿಸುವಾಗ ಮೌನವಾಗಿದ್ದನು.

“ಕರ್ಣಾ! ಯಾಕೆ ಸುಮ್ಮನಾಗಿ ನಿಂತಿರುವೆ. ಕೊಡುವ ಮನಸ್ಸಿಲ್ಲದಿದ್ದರೆ ಅಂತಹ ದಾನವನ್ನು ಬಲಾತ್ಕಾರದಿಂದ ನಾನು ಕೇಳಿ ಪಡೆಯಲಾಗದು. ಬೇಡ ನನಗೆ, ನಾನು ಮರಳಿ ಹೋಗುವೆ, ಮರುಗಬೇಡ” ಎಂದನು ಬ್ರಾಹ್ಮಣ ರೂಪಿ ದೇವೇಂದ್ರ.

“ಸ್ವಾಮೀ, ಈ ಕರ್ಣ ಇಂದಿನವರೆಗೆ ಬೇಡಿದ ಯಾರಿಗೂ ‘ಇಲ್ಲಾ’ ಎಂದವನಲ್ಲ. ಇಂದೂ ಹಾಗನ್ನಲಾರೆ. ಮನಸ್ಪೂರ್ವಕವಾಗಿ ಈಗಲೂ ನೀಡುತ್ತೇನೆ. ಆದರೆ ಸತ್ಪಾತ್ರರಿಗೆ ಅಗತ್ಯವಿರುವುದನ್ನು ನೀಡಿದರೆ ಪ್ರಯೋಜನವಿದೆ. ನೀನು ಈ ವಜ್ರಕವಚವನ್ನು ಯಾಕೆ ಬಯಸಿದ್ದೀರಿ ಎಂದು ನಾನರಿಯೆ. ನನಗಾದರೆ ಇದು ರಕ್ಷಾ ಕವಚವಾಗಿ ಪ್ರಾಣಕ್ಕೆ ಸಮನಾಗಿದೆ. ಅಂತಹ ಅಮೂಲ್ಯವಾದುದನ್ನು ನಾನು ಕಳೆದುಕೊಳ್ಳುವಾಗ, ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತೇನೆ. ಆದರೆ ಪಡೆದ ನಿಮಗದು ನಿರುಪಯುಕ್ತವಾಗುವ ಕಾರಣ ದಾನವೆಂದು ಪರಿಗಣಿತವಾಗದೆ ಕಳಂಕ ಕಾರಕ ಆಗುತ್ತದೆ. ಹಾಗಾಗಿ ನಿಮ್ಮಿಂದ ಪ್ರತಿಯಾಗಿ ಏನಾದರು ಪಡೆಯಲು ಬಯಸುತ್ತಿದ್ದೇನೆ. ಹಾಗೆ ವ್ಯವಹರಿಸುವಲ್ಲಿ ಸಾತ್ವಿಕವಾದ ಕಾರಣವೂ ಇದೆ. ಅನುಗ್ರಹಕಾರಕ ಶಕ್ತಿಯುಳ್ಳ ದೇವರಾದ ಕಾರಣ ಅದಕ್ಕೆ ಸಮನಾದ ಬದಲಿ ಏನಾದರೊಂದು ಶಕ್ತಿಯೊಂದನ್ನು ನೀವು ಕರುಣಿಸಬೇಕು. ಆಗ ನಿಮ್ಮ ದೇವತ್ವದ ಘನತೆಗೆ ಹುಲು ಮಾನವನಾದ ನನ್ನಿಂದ ಚ್ಯುತಿ ಬಾರದು. ಮಾತ್ರವಲ್ಲ ದೇವರಾಜ! ಈ ರೀತಿ ಮಾಡುವುದರಿಂದ ರಾಜಸ ದಾನವಾಗಿ ಮಾನ್ಯತೆ ಪಡೆದು ಪರಸ್ಪರ ಕೊಡುಕೊಳ್ಳುವ ವಿನಿಮಯ ವ್ಯವಹಾರವಾಗಿ ನಿನ್ನ ಸ್ಥಾನಕ್ಕೂ ಭಿಕ್ಷಾರ್ಥಿಯಾಗಿ ಪಡೆದೆ ಎಂಬ ಕುಂದು ಬಾರದು. ಇಬ್ಬರಿಗೂ ಪ್ರಯೋಜನವಾಗುತ್ತದೆ. ದಯವಿಟ್ಟು ಅಷ್ಟಾದರೂ ಈ ಕರ್ಣನ ಮೇಲೆ ಕೃಪೆದೋರಬೇಕು. ನೀವು ಕೇಳಿದ್ದನ್ನು ಖಂಡಿತಾ ನೀಡುತ್ತೇನೆ” ಎಂದು ಪ್ರಾರ್ಥಿಸಿ ನಮಸ್ಕರಿಸಿದನು.

ಇಂದ್ರನಿಗೆ ಕರ್ಣನ ನಡೆಯ ಬಗ್ಗೆ ಮೆಚ್ಚುಗೆಯಾಗಿ “ಹಾಗೆಯೇ ಆಗಲಿ” ಎಂದು ನುಡಿದು “ಕರ್ಣಾ! ಇಗೋ ನನ್ನ ಶಕ್ತಿಗೆ ಸಮನಾದ ಇಂದ್ರ ಶಕ್ತಿಯುಳ್ಳ ಆಯುಧವನ್ನು ನಿನಗೆ ಕರುಣಿಸುತ್ತೇನೆ. ಎದುರಾಗುವ ಎಂತಹ ವೀರನೇ ಆದರೂ ಈ ಶಕ್ತಿ ಆಯುಧ ” ವೈಜಯಂತಿ ಶರ’ ದಿಂದ ನಿಗ್ರಹಿಸಲ್ಪಟ್ಟು ವಿಜಯ ಪ್ರಾಪ್ತಿಯಾಗುತ್ತದೆ” ಎಂದು ಹೇಳಿ ಮೊದಲಾಗಿ ಇಂದ್ರನು ಕರ್ಣನಿಗೆ ನೀಡಿದನು.

ಸಂತುಷ್ಟನಾದ ಕರ್ಣ, ಸ್ವೀಕರಿಸಿ, ಅಭೇದ್ಯವಾಗಿದ್ದ ತನ್ನ ಕವಚವನ್ನು ಶರೀರ ಸೀಳಿ ಕಿತ್ತು ತೆಗೆದು ಸುರಪತಿಗೆ ಪ್ರತಿ ದಾನವಾಗಿ ನೀಡಿದನು. ಸ್ವೀಕರಿಸಿದ ಇಂದ್ರ ಕರ್ಣನ ದಾನಶೂರತ್ವವನ್ನು ಹೊಗಳಿ, ಹರಸಿ ಅಂತರ್ಧಾನನಾದನು.

ಕೆಲವು ದಿನಗಳು ಕಳೆದಾಗ ದುರ್ಯೋಧನನಿಗೆ ಕರ್ಣ ಕವಚ ದಾನ ಮಾಡಿದ ವಿಚಾರ ಹೇಗೋ ತಿಳಿಯಿತು. ಅಯ್ಯೋ ಎಂತಹ ಅನರ್ಥ ಮಾಡಿ ಬಿಟ್ಟ ಎಂಬ ವ್ಯಥೆಯಿಂದ ಚಿಂತಾಕ್ರಾಂತನಾಗಿ ಕರ್ಣನನ್ನು ಕರೆಸಿ, ಯಾಕೆ ಹೀಗೆ ಮಾಡಿದೆ? ಎಂದು ಕೇಳಿದನು.

ಮುಂದುವರಿಯುವುದ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page