30.4 C
Udupi
Tuesday, March 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 232

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೩೩ ಮಹಾಭಾರತ

ಕರ್ಣನು ದಿಗ್ವಿಜಯಕ್ಕೆ ಅನುಮತಿ ಪಡೆದು ಅದಕ್ಕೆ ಪೂರಕ ವಿಧಿ ಪೂರೈಸಿ ಹಿರಿಯರ ಆಶೀರ್ವಾದ ಹಾರೈಕೆ ಪಡೆದು ಹೊರಟನು. ಶಕುನಿ ಖಜಾಂಚಿಯಾಗಿ ಆಯ ವ್ಯಯದ ಲೆಕ್ಕಾಚಾರದ ಜವಾಬ್ದಾರಿ ವಹಿಸಿಕೊಂಡನು. ದುಶ್ಯಾಸನನು ಮಹಾ ವೈಷ್ಣವ ಯಾಗದ ಆಮಂತ್ರಣ ಆಹ್ವಾನದ ಹೊಣೆ ಹೊತ್ತನು. ಹೀಗೆ ನಗರಲಂಕಾರ, ವಸತಿ ಸಮುಚ್ಚಯದ ನಿರ್ಮಾಣ ನಿರ್ವಹಣೆ, ಯಾಗ ಸಿದ್ಧತೆ, ನೈರ್ಮಲ್ಯಾದಿ ಕೆಲಸಗಳೂ ಸಮರ್ಥರಿಗೆ ಹಂಚಲ್ಪಟ್ಟವು. ದುಶ್ಯಾಸನ ಯಾರೋ ದಾರಿ ಹೋಕರ ಮೂಲಕ ದ್ವೈತವನದಲ್ಲಿರುವ ಪಾಂಡವರಿಗೂ ಹೇಳಿಕೆ ಕಳುಹಿಸಿದನು. ಆ ದಾರಿ ಹೋಕರ ಸೋಗಿನಲ್ಲಿದ್ದ ದುಶ್ಯಾಸನನ ದೂತ ದುರ್ಯೋಧನನ ಗುಣಗಾನ ಮಾಡಿ, ವಿಜ್ರಂಭಣೆಯ ವರ್ಣನೆ ಮಾಡತೊಡಗಿದನು. ಕೇಳುತ್ತಾ ನಿಂತಿದ್ದ ಭೀಮಸೇನನ ಸಹನೆ ಮೀರಿತು “ನಮ್ಮ ಹದಿಮೂರು ವರ್ಷ ಕಳೆಯಲು ಇನ್ನು ಕೆಲ ಸಮಯವಷ್ಟೆ ಬಾಕಿ ಉಳಿದಿದೆ. ಮತ್ತೆ ನಾವೂ ಒಂದು ಮಹಾ ಮಾರಣ ಹೋಮ ಮಾಡಲಿದ್ದೇವೆ. ಆ ಮಹಾ ಯಾಗದಲ್ಲಿ ಎಲ್ಲರನ್ನು ಹೋಮಿಸಿ ಬಿಡುತ್ತೇವೆ” ಎಂದು ಆಕ್ರೋಶ ಭರಿತನಾಗಿ ನುಡಿದನು. ಇತ್ತ ಶಕುನಿ ಕರ್ಣನ ದಿಗ್ವಿಜಯದಿಂದ ಬರುತ್ತಿದ್ದ ಕಪ್ಪ ಸಂಗ್ರಹಿಸಿ ಇದರಲ್ಲೆಷ್ಟು ಉಳಿಸಬಹುದೆಂಬ ಲೆಕ್ಕಾಚಾರದಲ್ಲಿ ಮಗ್ನನಾಗಿದ್ದನು. ಆತನಿಗೆ ಯಾಗಕ್ಕಿಂತಲೂ ಸಂಪತ್ತು ಬಹಳ ಮಹತ್ವದ್ದಾಗಿತ್ತು. ಕರ್ಣ ದಿಗ್ವಿಜಯ ಪೂರೈಸಿ ಹೇರಳವಾದ ಸಂಪತ್ತು, ಚಿನ್ನ, ಧನಕನಕ ಸಂಗ್ರಹಿಸಿ ತಂದು ಹಸ್ತಿನೆಯ ಭಂಡಾರ ತುಂಬಿಸಿದನು.

ವೈಷ್ಣವ ಯಾಗ ವಿಜ್ರಂಭಣೆಯಿಂದ ನೆರವೇರಿತು. ದುರ್ಯೋಧನ ಯಾಗ ದೀಕ್ಷಿತನಾಗಿ ಅನ್ನ ಸಂತರ್ಪಣೆ, ದಾನ, ದಕ್ಷಿಣೆ ಸಂಭಾವನೆ, ಉಡುಗೊರೆ ವಿಶೇಷವಾಗಿಯೆ ನೀಡಲ್ಪಟ್ಟಿತು. ಶಕುನಿ ಅಲ್ಲೂ ಇಷ್ಟು ಸಾಕು, ಅಷ್ಟು ಯಾಕೆ ಎಂಬ ಅಡ್ಡಿ ಮಾಡುತ್ತಾ ಉಳಿಸುವ ತಂತ್ರಗಾರಿಕೆಯಲ್ಲಿ ನಿರತನಾಗಿದ್ದನು.

ಯಾಕೋ ಏನೋ ರಾಜಸೂಯ ಯಾಗಾಧ್ವರ ಪದೇ ಪದೇ ದುಶ್ಯಾಸನ, ಶಕುನಿಯಿಂದ ಪ್ರಸ್ತಾಪಿಸಲ್ಪಡುತ್ತಿತ್ತು. ಹೋಲಿಕೆ ಮಾಡುತ್ತಾ ವೈಷ್ಣವ ಯಾಗದಲ್ಲಿ ಇದು ವಿಶೇಷ, ಅದು ಹೆಚ್ಚಿಗೆ, ಈ ಭವನ, ಆ ಸೌಧ, ಹೀಗೆ ಹಾಗೆ ಎಂದು ರಾಜಸೂಯಕ್ಕೆ ಹೋಲಿಕೆ ಮಾಡುತ್ತಾ, ವೈಷ್ಣವಯಾಗವನ್ನು ಶ್ರೇಷ್ಟವಾಗಿ ವೈಭವದಿಂದ ನಡೆಸಲ್ಪಟ್ಟಿದೆ ಎಂಬ ಭಾವ – ಅರ್ಥದಲ್ಲಿ ಸಿಕ್ಕ ಸಿಕ್ಕವರಲ್ಲಿ ಹೇಳುತ್ತಾ ಕೇಳುತ್ತಾ ಹೌದು ಹೌದು ಎಂದು ಹೇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ವಿಕೃತ ಸಂತೋಷಪಡುತ್ತಿದ್ದರು. ದುರ್ಯೋಧನನು ಶ್ರೇಷ್ಟ ಸಾಧಕ, ವಿಕ್ರಮಿ ಎಂದೆಲ್ಲಾ ಹೊಗಳುತ್ತಾ ಓಡಾಡುತ್ತಿದ್ದರು. ಜನ ಹೇಳದಿದ್ದರೂ, ಕೇಳದಿದ್ದರೂ ತಾವೇ ಆಡಿಕೊಳ್ಳುತ್ತಾ ಶಕುನಿಯಾದಿಗಳು ತೃಪ್ತರಾಗುತ್ತಿದ್ದರು. ಅಂತೂ ಇಂತೂ ಭಕ್ತಿಗಿಂತಲೂ ಸ್ವ ಪ್ರತಿಷ್ಠೆಯನ್ನು ಮುಖ್ಯ ವಿಷಯವಾಗಿಸಿ ಸಾಗಿದಂತಿತ್ತು. ಬೇಕಷ್ಟು ಐಶ್ವರ್ಯವಿದ್ದು ಸದ್ಬುದ್ಧಿ ಸದಾಶಯವಿರದಿದ್ದರೆ ಏನು ಫಲ? ತಮ್ಮನ್ನು ತಾವೇ ಅತಿಯಾಗಿ ಹೊಗಳಿಕೊಳ್ಳುವುದು, ಪರರ ಅಭ್ಯುದಯವನ್ನು ಕಂಡು ಮತ್ಸರಿಸುವುದು, ಹೋಲಿಕೆ ಮಾಡುವುದು, ಇತರರನ್ನು ದೂಷಿಸುವುದು ಅಧಃಪತನದ ಹಾದಿಯ ಮೆಟ್ಟಲೇರಿದಂತೆ.

ವಾಸ್ತವದಲ್ಲಿ ಜನರ ಭಾವನೆ ಎದುರಿನಲ್ಲಿ ಭಯದಿಂದ ಹೌದೌದು ಎಂದು ತಲೆಯಾಡಿಸಿದರೂ, ಇವರ ಉದ್ದೇಶವರಿತಿದ್ದ ಪ್ರಜೆಗಳು ಮತ್ಸರದಿಂದಲಾದರೂ ಮಾಡಿದರಲ್ಲ? ಮೋಸದ ದ್ಯೂತದಲ್ಲಿ ಸೂರೆಗೈದ ಸದುದ್ದೇಶದಿಂದ ಮಾಡಿದ್ದ ರಾಜಸೂಯದ ಸಂಪತ್ತು ದುಷ್ಟರ ಕೈಸೇರಿದರೂ ಸತ್ಕಾರ್ಯಕ್ಕೆ ವಿನಿಯೋಗವಾಯಿತಲ್ಲಾ? ಎಂದು ಆಡಿಕೊಂಡರು.

ಯಾಗ ಮುಗಿದ ಬಳಿಕ ಒಂದು ದಿನ ಯಾಗದ ಯಶಸ್ಸಿನ ಬಗ್ಗೆ ಮಾತನಾಡುತ್ತಾ ದುರ್ಯೋಧನ ಮಿತ್ರ ಕರ್ಣನನ್ನು ಆತನ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದನು. ಕರ್ಣನೂ ಸಂತೋಷದಿಂದ “ಮಿತ್ರಾ ಈ ಕರ್ಣನ ಬದುಕು ನಿನ್ನ ಸೇವೆಗೆಂದು ಮೀಸಲಾಗಿದೆ. ಇನ್ನೂ ಇಂತಹ ಮಹತ್ಕಾರ್ಯವಿದ್ದರೆ ನನಗೆ ಅವಕಾಶ ನೀಡಬೇಕು” ಎಂದು ಕೇಳಿಕೊಂಡನು. ದುರ್ಯೋಧನ ಅತಿ ಸಂತೋಷದಿಂದ ಆಲಿಂಗಿಸಿ “ಕರ್ಣಾ ನಿನ್ನ ಮಾತು ನಿಜವಾಗಲಿ. ರಾಜಸೂಯ ಯಾಗದ ಆಸೆಯಿದೆ. ಆ ಭಾಗ್ಯ ಯಾವಾಗ ಒದಗುತ್ತದೊ?” ಎಂದು ನುಡಿದನು. ಇದನ್ನು ಕೇಳಿದ ಕರ್ಣ ” ಈಗಾಗಲೆ ಆ ಮಧ್ಯಮ ಪಾಂಡವ ಅರ್ಜುನನನ್ನು ಸಂಹರಿಸುವ ಪ್ರತಿಜ್ಞೆ ಮಾಡಿದ್ದೇನೆ. ಈಗ ಇನ್ನೊಂದು ಮಾತು ಹೇಳುತ್ತೇನೆ ಕೇಳು. ಇಂದಿನಿಂದ ನನ್ನ ಆ ಪ್ರತಿಜ್ಞೆ ಪೂರೈಸುವವರೆಗೆ ಪ್ರತಿದಿನ ಬ್ರಾಹ್ಮಣರಿಗೆ ಇಲ್ಲಾ ಎನ್ನದೆ ಒಂದು ಭಾರ ಹೊನ್ನನ್ನು ದಾನ ಮಾಡುತ್ತೇನೆ. ಇದು ತಪ್ಪದಂತೆ ನಿತ್ಯ ಪಾಲಿಸುತ್ತೇನೆ” ಎಂದು ನುಡಿದು ಆಕಾಶ ನೋಡಿ ನಮಿಸಿದನು. ಸಂತೋಷಗೊಂಡ ಕೌರವ ಮತ್ತೆ ಅವನನ್ನಪ್ಪಿ ಬೆನ್ನು ತಟ್ಟಿದನು. ಅವರು ಅಲ್ಲಿಂದ ಕೈ ಕೈ ಹಿಡಿದು ಸಾಗಿ ಅರಮನೆ ಸೇರಿ ವಿಶ್ರಾಂತರಾದರು.

ಹೀಗಿರಲು ಪಾಂಡವರು ದ್ವೈತವನದಲ್ಲಿ ರಾತ್ರಿಯ ಹೊತ್ತು ಎಂದಿನಂತೆ ಪರ್ಣಕುಟೀರದಲ್ಲಿ ಮಲಗಿದ್ದಾರೆ. ಧರ್ಮರಾಯನಿಗೆ ಒಂದು ವಿಶೇಷ ಸ್ವಪ್ನ ದರ್ಶನವಾಯಿತು. ಆ ವನದ ಮೃಗಗಳೆಲ್ಲಾ ಒಟ್ಟಾಗಿ ಬಂದು ಕೈಮುಗಿದು ನಮ್ಮನ್ನು ಕೊಲ್ಲಬಾರದೆಂದು ಬೇಡಿಕೊಂಡವು. ಈ ಸ್ವಪ್ನ ಸೂಚನೆ ಏನಿರಬಹುದೆಂಬ ವ್ಯಥೆ ಧರ್ಮರಾಯನಿಗಾಯಿತು. ಧೌಮ್ಯ ಮಹರ್ಷಿಗಳಲ್ಲಿ ಸಹೋದರರ ಸಹಿತ ಸಮಾಲೋಚನೆ ನಡೆಸಿ ಇನ್ನು ಈ ದ್ವೈತವನ ಪರಿಸರದಲ್ಲಿ ಇರುವುದು ಬೇಡ ಎಂದು ಕಾಮ್ಯಕಾವನದತ್ತ ಸಾಗಿ ನೆಲೆ ನಿಂತರು.

ಒಂದು ದಿನ ಕಾಮ್ಯಕಾವನದಲ್ಲಿ ಹಗಲು ಹೊತ್ತು ಪಾಂಡವರು ಬೇಟೆ, ವಿಹಾರಕ್ಕಾಗಿ ಒಬ್ಬೊಬ್ಬರು ಹೊರ ಹೋಗಿದ್ದಾರೆ. ಆಶ್ರಮದಲ್ಲಿ ದ್ರೌಪದಿ ಒಬ್ಬಳೆ ಇದ್ದಾಳೆ. ಆ ಸಂದರ್ಭ ಸಿಂಧೂ ದೇಶದ ರಾಜ ಜಯದ್ರಥ ಅದೆ ದಾರಿಯಾಗಿ ಎತ್ತಲೋ ಹೋಗುತ್ತಿದ್ದವ ಕಾಡಮಧ್ಯೆ ಪಾಂಡವರ ಆಶ್ರಮದ ಹೊರಗೆ ಒಬ್ಬಳು ಸ್ತ್ರೀ ಕುಳಿತಿರುವುದನ್ನು ನೋಡಿ ಆ ಕಡೆಗೆ ಹೋದನು. ದ್ರೌಪದಿ ಜಯದ್ರಥನನ್ನು ನೋಡಿ “ಅಣ್ಣಾ! ಯಾವಾಗ ಬಂದಿರಿ? ದುಶ್ಯಲೆ ಕ್ಷೇಮವೆ? ಬಾಯಾರಿಕೆ ಏನಾದರೂ ಬೇಕೆ?” ಎಂದು ಕೇಳಿದಳು. ಕೌರವರ ಓರ್ವಳೆ ತಂಗಿ ದ್ರೌಪದಿಗೆ ನಾದಿನಿ, ದುಶ್ಯಲೆಯ ಗಂಡ ಈ ಜಯದ್ರಥ.

ಹೀಗೆ ಕೇಳುತ್ತಾ ಎದ್ದು ನಿಂತ ದ್ರುಪದ ರಾಜನ ಪುತ್ರಿಯ ಬಿಗಿದುಟ್ಟ ನಾರು ಸೀರೆ, ಬಿಚ್ಚಿ ಹರಡಿದ ಕೇಶರಾಶಿ, ತೇಜಃಪೂರ್ಣವಾದ ಮುಖಮುದ್ರೆ, ಲಾವಣ್ಯ ತುಂಬಿ ತುಳುಕುತ್ತಿದ್ದ ಅಂಗಾಂಗಗಳನ್ನು ಕಂಡ ಸಿಂಧೂ ದೇಶದ ಸೈಂಧವನಿಗೆ ಮೋಹ ಅಂಕುರಿಸಿತು. ಇವಳನ್ನು ಒಲಿಸಿಕೊಳ್ಳಬೇಕೆಂದು ಸಮೀಪ ಬರುತ್ತಾ “ಎಲ್ಲರೂ ಕ್ಷೇಮವಾಗಿ ಇದ್ದಾರೆ” ಎಂದು ಹೇಳಿದ. ಆತನ ನಡವಳಿಕೆಯಲ್ಲಿ ಏನೋ ವ್ಯತ್ಯಾಸ ಅರಿತ ದ್ರೌಪದಿ ಒಂದು ಹೆಜ್ಜೆ ಹಿಂದೆ ಸರಿದು ಬಾಗಿಲ ಬಳಿ ನಿಂತಳು. ಆಗ ಆತ “ಭಾವಂದಿರು ಯಾರೂ ಕಾಣಿಸುತ್ತಿಲ್ಲ? ಎಲ್ಲಿ ಹೋಗಿದ್ದಾರೆ?” ಎಂದು ಕೇಳಿದ. “ಅವರೆಲ್ಲೋ ವನ ವಿಹಾರ, ಬೇಟೆಗಾಗಿ ಹೊರ ಹೋಗಿದ್ದಾರೆ” ಎಂದಳು. ಇದು ನನಗೊಲಿದ ಅವಕಾಶ ಎಂದು “ಅಯ್ಯೋ! ಎಷ್ಟೊಂದು ಸೊರಗಿರುವೆ ದ್ರೌಪದಿ? ಆದರೂ ನೀನು ಇನ್ನೂ ಚೆಲುವೆಯಾಗಿ ಕಂಗೊಳಿಸುತ್ತಿರುವೆ” ಎನ್ನುತ್ತಾ ಭ್ರಾತೃ ಸಂಬಂಧ ಮರೆತು ಹತ್ತಿರ ಹತ್ತಿರ ಬರತೊಡಗಿದ . ಈತನ ಈ ನಡೆಯಿಂದ ಆತಂಕಕ್ಕೆ ಒಳಗಾದ ದ್ರೌಪದಿ ಹೆದರಿ ರಕ್ಷಣೆಗಾಗಿ ಆಶ್ರಮದ ಒಳ ಹೋದಳು. ಜಯದ್ರಥನೂ ಅವಳನ್ನನುಸರಿಸಿ ಒಳಹೊಕ್ಕು ದ್ರೌಪದಿಯತ್ತ ಕೈಬೀಸಿ ಹಿಂದಿನಿಂದ ಕತ್ತನ್ನು ಬಿಗಿಯಾಗಿ ಹಿಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page