25.6 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 228

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೨೯ ಮಹಾಭಾರತ

ಕೌರವ ಪಾಳಯ ಹಸ್ತಿನಾವತಿಯಲ್ಲಿ ಪಾಂಡವರ ಶ್ರೇಯಸ್ಸಿನ ಸುದ್ದಿ ಕೇಳಿ ತತ್ತರಿಸಿ ಹೋಗಿದ್ದಾರೆ. ಕೇಡು ಬಯಸುತ್ತಾ, ಸಾಧಿಸುವುದಕ್ಕಾಗಿ ದಾರಿ ಕಾಣದೆ ಕಂಗಾಲಾಗಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಗೆ ದೂರ್ವಾಸ ಮಹರ್ಷಿಗಳ ಆಗಮನವಾಯಿತು. ಬಂದಂತಹ ತಪೋನಿಧಿಯನ್ನು ಆದರಾತಿಥ್ಯಗಳಿಂದ ಬಹುವಿಧವಾಗಿ ಸತ್ಕರಿಸಿ ಪ್ರಸನ್ನೀಕರಿಸಿದರು. ಸುಪ್ರಸನ್ನರಾದ ದೂರ್ವಾಸ ಮಹರ್ಷಿ ದುರ್ಯೋಧನನಲ್ಲಿ “ನಿಮ್ಮ ಸೇವೆಗೆ ಮೆಚ್ಚಿದವನಿದ್ದೇನೆ. ಏನು ಬೇಕು ಕೇಳಿಕೊಳ್ಳಿ” ಎಂದು ಅವಕಾಶ ನೀಡಿದರು. ಕೇಳುವವನ ಬುದ್ದಿಗೂ ಒಂದು ಬಲ ಬೇಕಲ್ಲವೇ! ಪಾಂಡವರಿಂದ ಭಯಗ್ರಸ್ಥರಾದ ಕೌರವ ದುರ್ಯೋಧನನಿಗೆ ಯುದ್ದವಾದರೆ ಪಾಂಡವರೆದುರು ತಮಗೆ ಜಯ ಗಳಿಸಲು ಪೂರಕವಾಗುವ ರೀತಿಯ ವರ ಬೇಡುವ ಸುಸಂದರ್ಭವಿತ್ತು. ಆದರೆ ಸದಾ ವಾಮಮಾರ್ಗವನ್ನು ತರ್ಕಿಸುವ ಆತನ ಯೋಚನೆ ಈಗಲೂ ಅದೇ ಹಾದಿ ಹಿಡಿಯಿತು. ವನವಾಸದಲ್ಲಿರುವ ಪಾಂಡವರ ಬಳಿ ಇರುವ ಅಕ್ಷಯ ಪಾತ್ರೆ ದ್ರೌಪದಿ ಉಂಡಲ್ಲಿಗೆ ಆ ದಿನಕ್ಕೆ ಸಮಾಪ್ತವಾಗುತ್ತದೆ. ಇದರ ಬಗ್ಗೆ ಮಾಹಿತಿ ತಿಳಿದಿದ್ದು, ಅವಕಾಶವನ್ನು ಕುತಂತ್ರಕ್ಕೆ ಬಂಡವಾಳವಾಗಿಸಿದನು. ದೂರ್ವಾಸ ಮಹರ್ಷಿಗಳಲ್ಲಿ ಬೇಡಿಕೊಳ್ಳಲು ಕೈ ಜೋಡಿಸಿ ನಿಂತನು “ಪೂಜ್ಯರೆ, ನಿಮ್ಮಿಂದ ಒಂದು ಸಹಾಯ ಬೇಕಾಗಿದೆ. ಊಟದ ಸಮಯ ವಿಳಂಬಿಸಿ, ಹೊತ್ತಲ್ಲದ ಹೊತ್ತಲ್ಲಿ, ದ್ರೌಪದಿ ಊಟ ಪೂರೈಸಿದ ಬಳಿಕ ಪಾಂಡವರಲ್ಲಿಗೆ ಹೋಗಬೇಕು. ಹಾಗೆ ತೆರಳುವಾಗ ತಾವು ತಮ್ಮ ಬಹು ಸಹಸ್ರಾಧಿಕ ಶಿಷ್ಯರನ್ನು ಸೇರಿಸಿಕೊಂಡು ಹೋಗಬೇಕು. ಹಾಗೆ ಹೋದವರು ಅಲ್ಲಿ ಉಂಡು ತೃಪ್ತರಾದರೆ ನಮಗದು ಮಹಾ ಸಂತೋಷ ನೀಡುತ್ತದೆ. ತಾವಿದನ್ನು ನಡೆಸಿಕೊಡಬೇಕು” ಎಂದು ಪ್ರಾರ್ಥಿಸಿದನು. ದೂರ್ವಾಸರು “ಹಾಗೆಯೇ ಆಗಲಿ” ಎಂದು ಅಸ್ತು ಮುದ್ರೆ ತೋರಿದರು. ಈ ಕೋರಿಕೆಯಿಂದ ಭೀಷ್ಮ, ದ್ರೋಣ, ವಿದುರಾದಿಗಳಿಗೆ ಸಂಕಟವೂ, ಇನ್ನೇನಾಗಲಿದೆ ಎಂಬ ಭಯವೂ ಮನ ಮಾಡಿತು. ಭಗವಂತಾ, ನೀನು ಸಜ್ಜನರಾದ ಪಾಂಡವರನ್ನು ಈ ಶೀಘ್ರ ಕೋಪಿ ಮುನಿ ದೂರ್ವಾಸರು ಮುನಿಯದಂತೆ ಸಂರಕ್ಷಿಸಬೇಕೆಂದು ಮೊರೆಯಿಡತೊಡಗಿದರು.

ಅಂತೆಯೆ ದೂರ್ವಾಸರು ತನ್ನ ಬಹು ಸಹಸ್ರ ಸಂಖ್ಯೆಯ ಶಿಷ್ಯರೊಂದಿಗೆ ಪಾಂಡವರನ್ನರಸಿ ದ್ವೈತವನದತ್ತ ಪಾದ ಬೆಳೆಸಿದರು. ಮಹರ್ಷಿಗಳನ್ನು ಕಂಡು ಧರ್ಮರಾಯ ಸಹೋದರರ ಜೊತೆ ಸೇರಿ ಪಾದ ಪೂಜೆಗೈದು, ಉಚಿತಾಸನದಲ್ಲಿ ಕುಳ್ಳಿರಿಸಿ, ಫಲಪುಷ್ಪಗಳನ್ನಿಟ್ಟು ಆರಾಧಿಸಿದನು. ದೂರ್ವಾಸರಿಗೂ ಪಾಂಡವರೈವರನ್ನು ಕಂಡಾಗ ಆನಂದವಾಯಿತು. ತಾನು ಕುಂತಿಯ ಸೇವೆಗೊಲಿದು ಉಪದೇಶಿಸಿದ ಮಂತ್ರ ಮೂರ್ತ ರೂಪ ತಳೆದು ತನ್ನೆದುರು ಸಾಕ್ಷಾತ್ಕಾರಗೊಂಡಿದೆ. ಒಮ್ಮೆ ಎಲ್ಲರನ್ನೂ ನೋಡುತ್ತಾ ಕಣ್ತುಂಬಿಕೊಂಡರು. ತಕ್ಷಣ ವಿಮುಖರಾಗಿ ಆಶ್ರಮದ ಸುತ್ತ ಕಣ್ಣಾಡಿಸಿದರು.

ಧರ್ಮರಾಯನಿಗೆ ಮನದಲ್ಲಿ ಆತಂಕ ಮನ ಮಾಡಿತು. “ಸ್ವಾಮಿ, ನಮ್ಮ ಆತಿಥ್ಯದಲ್ಲೇನಾದರು ಕೊರತೆಯಾದರೆ ಮನ್ನಿಸಬೇಕು. ರಾಜೋಚಿತ ಸತ್ಕಾರ ಮಾಡುವ ಮನಸ್ಸು ಸದಾ ನನ್ನಲ್ಲಿ ಜಾಗೃತವಾಗಿದೆ. ಆದರೆ ಈ ಸಮಯದಲ್ಲಿ ನಮಗೆ ಸೌಕರ್ಯದ ಬಡತನ ಬಂದೊದಗಿದುದರಿಂದ ನಿಮ್ಮನ್ನು ವೈಭವದಿಂದ ಪೂಜಿಸುವ ಯೋಗ ಭಾಗ್ಯ ವಂಚಿತನಾಗಿರುವೆ. ನಮ್ಮಲ್ಲಿರುವ ಶುದ್ಧ ಜಲ, ಫಲ ಪುಷ್ಪ, ಗಂಧ ಚಂದನಾದಿಗಳಿಂದ ಯಥಾಸಾಧ್ಯ ಪೂರ್ಣ ಸಮರ್ಪಣಾ ಭಾವಸಹಿತ ಸೇವೆಗೈದಿದ್ದೇವೆ. ಸಂತುಷ್ಟರಾಗಿ ನಮ್ಮನ್ನು ಹರಸಬೇಕು” ಎಂದು ದೀನನಾಗಿ ಬೇಡಿದನು.

ರುದ್ರ ಮುನಿ ದೂರ್ವಾಸರು “ಅಯ್ಯಾ ಅಪರಾಹ್ನದ ಹೊತ್ತು ಮೀರುತ್ತಿದೆ, ನಮ್ಮ ಜಠರಾಗ್ನಿಗೆ ಆಹುತಿಯಾಗಬೇಕು” ಎಂದು ಕೇಳಿದರು. ಆಗ ಸಮಯ ಮೀರಿ ಹೋಗಿತ್ತು. ಆದರೆ ಅಭ್ಯಾಸ ಬಲದಿಂದ ಧರ್ಮರಾಯ “ಸ್ವಾಮೀ, ನಮ್ಮ ಪಾಲಿಗೆ ಸುಕೃತ ಫಲದಿಂದ ದೊರೆತ ಸೌಭಾಗ್ಯವಿದು. ಸಿದ್ದರಾಗಿ ಬನ್ನಿ. ಊಟೋಪಚಾರದ ವ್ಯವಸ್ಥೆ ನಾವು ಮಾಡುತ್ತೇವೆ” ಎಂದು ಹೇಳಿ ಬಿಟ್ಟನು. ದೂರ್ವಾಸರು ಸ್ನಾನಾದಿ ಕರ್ಮಗಳನ್ನು ಪೂರೈಸಲು ನದಿ ತೀರಕ್ಕೆ ತೆರಳಿದರು.

“ದ್ರೌಪದೀ…” ಎಂದು ಕರೆಯುತ್ತಾ ಧರ್ಮರಾಯ ಪಾಕಗೃಹದತ್ತ ಹೋದನು. ಇತ್ತ ಎಲ್ಲರೂ ದುಃಖ ದುಮ್ಮಾನಗಳಿಂದ ಅಣ್ಣನೇಕೆ ಈ ರೀತಿ ವ್ಯವಹರಿಸಿದ್ದಾನೆ? ಎಂದು ಸಂಕಟಕ್ಕೊಳಗಾಗಿದ್ದಾರೆ. ಧರ್ಮರಾಯ ಹೋಗಿ ನೋಡಿದರೆ ದ್ರೌಪದಿ ತಾನು ಉಂಡು ಬರಿದಾದ ಕನಕಾಕ್ಷಯ ಪಾತ್ರೆಯನ್ನು ತೊಳೆದಿಟ್ಟಾಗಿದೆ. ವಿಚಾರ ತಿಳಿದು ಕಣ್ಣೀರ್ಗರೆಯುತ್ತಾ “ದೇವರೇ, ಇದೆಂತಹ ಸ್ಥಿತಿ ಬಂತು ನಮಗೆ. ಅಕ್ಷಯ ಪಾತ್ರೆ ಇದ್ದರೂ ಹಸಿದವರಿಗೆ ಊಟವಿಕ್ಕಲಾಗದ ಚಕ್ರವರ್ತಿಯ ಪತ್ನಿ ನಾನಾದೆನೇ?” ಎಂದು ಅತ್ತು ಗೋಗರೆಯತೊಡಗಿದಳು. ಸತ್ಯ ಸಂಗತಿ ತಿಳಿದ ಧರ್ಮರಾಯ ದಿಕ್ಕು ತೋಚದವನಾಗಿ ಪದ್ಮಾಸನ ಬಲಿದು ಭಗವತ್ಧ್ಯಾನ ನಿರತನಾದನು. ಆಗ ಧೌಮ್ಯರು ಬಂದು ದ್ರೌಪದಿಯನ್ನು ಸಂತೈಸಿ, “ಮಗಳೇ ಈ ಪರೀಕ್ಷೆಯಿಂದ ಸಂರಕ್ಷಿಸುವವನು ಅವನೊಬ್ಬನೆ. ಪರಮಾಪ್ತ ಪರಮಾತ್ಮ. ಅವನಿಗೆ ಶರಣಾರ್ಥಿಯಾಗು – ಶ್ರೀಕೃಷ್ಣನನ್ನು ಅನನ್ಯ ಭಾವದಿಂದ ಪ್ರಾರ್ಥಿಸು” ಎಂದು ಹೇಳಿ ಅವಳಿಗೆ ದಿವ್ಯವಾದ ಮಂತ್ರೋಪದೇಶ ಮಾಡಿದರು.

ಧೌಮ್ಯರ ಮಾರ್ಗದರ್ಶನದಂತೆ ಅನ್ಯ ಮಾರ್ಗವಿಲ್ಲದೆ ದ್ರೌಪದಿ ಪರ್ಣಶಾಲೆಯ ಪಾಕಶಾಲೆಯಲ್ಲಿ ಮಂಡಿಯೂರಿ ಕುಳಿತು, ಭಗವಂತನಿಗೆ ಶರಣಾಗತಳಾಗಿ ಕೈಗಳನ್ನು ಜೋಡಿಸಿ ಅಕ್ಷಯ ಪಾತ್ರೆಯನ್ನು ಶಿರದ ಮೇಲಿಟ್ಟು “ಕೃಷ್ಣಾ, ವಾಸುದೇವಾ, ಭಕ್ತ ವತ್ಸಲಾ, ಆರ್ತ ರಕ್ಷಕಾ, ಆಪದ್ಬಾಂಧವಾ, ಕೃಷ್ಣಾ ಕೃಷ್ಣಾ.. ಕೃಷ್ಣಾ… ನೀನೇ ಕಾಪಾಡಬೇಕು ದೇವಾ… ನಿನ್ನನ್ನೇ ಸರ್ವಸ್ವವೆಂದು ನಂಬಿರುವ ನನ್ನ ಪತಿಯಂದಿರ ಮಾನ ರಕ್ಷಣೆ ಮಾಡು ಭಗವಂತಾ… ಹಸಿದವರಿಗೆ ಅನ್ನವಿಲ್ಲ ಎನ್ನುವ ದುಸ್ಥಿತಿ – ದುರ್ಗತಿ ನಮ್ಮ ಪಾಲಿಗೊದಗದಂತೆ ನೀನು ಪೊರೆಯಬೇಕು ಪರಮಾತ್ಮ” ಎಂದು ಅನನ್ಯ ಭಕ್ತಿಯಿಂದ ಬೇಡುತ್ತಾ, ಧೌಮ್ಯರಿಂದ ಉಪದೇಶಿತ ದಿವ್ಯ ಮಂತ್ರವನ್ನು ಏಕಾಗ್ರ ಚಿತ್ತದಿಂದ ಪಠಿಸಿ ಧ್ಯಾನಿಸತೊಡಗಿದಳು.

ಭಕ್ತ ಬಾಂಧವನಾದ ಶ್ರೀಕೃಷ್ಣ ಸದ್ಭಕ್ತರ ಪ್ರಾರ್ಥನೆಗೆ ಒಲಿದು ಬಾರದಿರುವನೇ? ಪಾಂಡವರ ಪರ್ಣಶಾಲೆಯ ಮುಂದೆ ಪ್ರಕಟನಾದನು. ಎಲ್ಲರು ಸಡಗರದಿಂದ ನಮಸ್ಕರಿಸಿ ಸ್ವಾಗತಿಸಿದರು. ಕೃಷ್ಣ ಮಾತ್ರ ಮುಗುಳ್ನಗುತ್ತಾ ನೇರವಾಗಿ ತನ್ನನ್ನು ಭಕ್ತಿಯ ಬಲೆಯಿಂದ ಸೆಳೆದತ್ತ ಸಾಗುವಂತೆ ಪಾಕಶಾಲೆಯೊಳಗೆ ಬಂದು ನಿಂತನು. ಕೃಷ್ಣಾಗಮನದ ಕಾಂತಿಯ ದಿವ್ಯ ಪ್ರಭೆಯಿಂದ ಕಣ್ತೆರೆದು ದ್ರೌಪದಿ ನೋಡಿದಳು. ಭಗವಂತನ ಪಾದ ಪದ್ಮಗಳನ್ನು ಹಿಡಿದು ತನ್ನ “ಕೃಷ್ಣಾ …. ತ್ರಾಹೀ ತ್ರಾಹೀ.. ಪ್ರಾಹೀ ಪ್ರಾಹೀ…” ಎಂದು ಕಣ್ಣೀರ ಧಾರೆಯಿಂದ ಪಾದ ತೊಳೆವಂತೆ ಆರ್ತಳಾಗಿ ಕಂಬನಿಗರೆದಳು. ಕೃಷ್ಣ ತನ್ನ ಆಪ್ತಳಾದ ದ್ರೌಪದಿಯನ್ನು ಎದ್ದು ನಿಲ್ಲಿಸಿ, ತನ್ನ ಉತ್ತರೀಯದಿಂದ ಕಣ್ಣೀರನ್ನೊರಸಿ ನಸು ನಕ್ಕನು. “ತಂಗಿ, ಬಹಳ ದೂರದ ಹಾದಿ ಕ್ರಮಿಸಿ ಬಂದಿರುವೆ. ಹಸಿವಾಗಿದೆ. ಏನಾದರು ಇದ್ದರೆ ಕೊಡುವೆಯಾ” ಎಂದು ಕೇಳಿದನು. “ಗೋವಿಂದಾ… ನಿನ್ನದೂ ಪರೀಕ್ಷೆಯೆ? ಅಲ್ಲಾ ನೀನೂ ಹಸಿದು ಬಂದಿರುವೆಯಾ? ಭಗವಂತನಾದ ನಿನ್ನ ಉದರಾಗ್ನಿಯ ಜ್ವಾಲೆಗೆ ನನ್ನ ಶುದ್ಧವಾದ ಭಕ್ತಿಯನ್ನು ಹವಿಸ್ಸಾಗಿ ಅರ್ಪಿಸಿದ್ದೇನೆ. ಸಂತೃಪ್ತನಾಗು ಪರಮಾತ್ಮ. ನಮಗೊದಗಿದ ಆಪತ್ತಿಗೆ ಬಂಧುವೂ ಬಾಂಧವನೂ ಆದ ನಿನ್ನನ್ನು ಸ್ಮರಿಸಿರುವುದು. ಧರ್ಮ ಪಾಲಿಸುವ ಯೋಗ ಕರುಣಿಸಿ ಮಾನ ಉಳಿಸು ಎಂದು ಬೇಡುತ್ತಿದ್ದೇನೆ. ಅಕ್ಷಯ ಪಾತ್ರೆಯ ವರ ಪಡೆದವರು ನಾವು, ಆದರೆ ಹಸಿದು ಬಂದು ಅಶನ ಕೇಳಿದ ದೂರ್ವಾಸ ಮಹರ್ಷಿಗಳಿಗೆ ಉಣಬಡಿಸಲು ಏನೂ ಇಲ್ಲದಾಗಿ ಹೋಗಿದೆ. ಮಿಂದು ಬಂದು ಊಟ ಮಾಡುವಿರಂತೆ ಎಂದು ಧರ್ಮಜ ಹೇಳಿದ ನುಡಿ ಅಸತ್ಯವಾಗದಂತೆ ಸಂರಕ್ಷಿಸು ಕೃಷ್ಣಾ” ಎಂದು ಪರಿಪರಿಯಾಗಿ ಪರಿತಪಿಸುತ್ತಾ ಪ್ರಾರ್ಥಿಸಿದಳು ಪಾಂಚಾಲೆ.

ಆಗ ಕೃಷ್ಣನು “ತಂಗಿ ಮೊದಲು ನನ್ನ ಹಸಿವು ತಣಿಸು. ನೋಡೋಣ ನಿನ್ನ ಕಾಂಚಣ ತಳಿಗೆಯನ್ನೊಮ್ಮೆ ಕೊಡು” ಎಂದನು. ಕೊಟ್ಟಾಗ, ಅಕ್ಷಯ ಪಾತ್ರೆಯೊಳಗೆ ಒಂದು ಸುತ್ತು ಕೈ ಸವರಿದನು. ಒಂದಗಳು ಅನ್ನ ಸಹಿತ ಕೈಗಂಟಿದ ಪಾಕ ಶೇಷವನ್ನು ಹೊರತೆಗೆದು ತೋರಿಸಿದನು. ಭಗವಂತನ ಲೀಲಾ ದರ್ಶನವಲ್ಲವೆ ಇದು! ತೊಳೆದಿಟ್ಟ ಪಾತ್ರೆಯಲ್ಲಿ ಉಳಿದಿತ್ತೊ? ಅತಯವಾ ಕೃಷ್ಣನ ಕೈಯಲ್ಲಿ ಈ ಪಾಕಶೇಷವಿತ್ತೋ? ಬಲ್ಲವನು ಆತನೊಬ್ಬನಲ್ಲದೆ ಇನ್ಯಾರೂ ಅಲ್ಲ. ಎಲ್ಲರಿಗೂ ತೋರಿಸಿ “ದ್ರೌಪದಿ, ಏನೂ ಇಲ್ಲವೆಂದೆಯಲ್ಲಮ್ಮಾ ನೀನು? ಇಷ್ಟು ಇದೆ! ಸದ್ಯಕ್ಕೆ ನನಗಿಷ್ಟು ಸಾಕೆಂದು ಅದನ್ನು ಸೇವಿಸಿದನು. ಅದು ಪರಮಾತ್ಮನ ಉದರ ಸೇರಿತೋ ಇಲ್ಲವೋ! ಡರ್ರೆಂದು ತೇಗು ಮಾತ್ರ ಸಾಕ್ಷಿಯಾಗಿ ಬಂತು. “ಪ್ರಾಣದೇವರಿಗೆ ತೃಪ್ತಿಯಾಯಿತು. ಸಂತೃಪ್ತನಾದೆ. ಸರಿ ಹೊರಗೆ ಹೋಗೋಣ” ಎಂದು ಎಲ್ಲರನ್ನೂ ಹೊರ ಕರೆದು ಕೊಂಡು ಬಂದನು ಕೃಷ್ಣ.

ಅಷ್ಟು ಹೊತ್ತಿಗೆ ಸ್ನಾನಾದಿ ಕರ್ಮ ಪೂರೈಸಿ, ಅನುಷ್ಠಾನ ಕರ್ಮ ವಿರಚಿಸಿ ಎದ್ದ ದೂರ್ವಾಸರಿಗೆ, ಶಿಷ್ಯರಿಗೆ ಹೊಟ್ಟೆ ಕಂಠಪೂರ್ತಿ ತುಂಬಿದ ಅನುಭವವಾಗುತ್ತಿದೆ. ಅವರೆಲ್ಲರಿಗೂ ತೇಗು ಮೇಲಿಂದ ಮೇಲೆ ಬರತೊಡಗಿದೆ. ಸಂತೃಪ್ತ ಭಾವ ಶರೀರಕ್ಕೂ ಮನಸಿಗೂ ಆಗುತ್ತಿದೆ. ಏನಿದು ವಿಚಿತ್ರ ಎಂದು ತನ್ನ ಸುಜ್ಞಾನದಿಂದ ತಿಳಿದ ದೂರ್ವಾಸರಿಗೆ ಶ್ರೀ ಹರಿಯ ಲೀಲಾ ವಿನೋದದ ಫಲಶ್ರುತಿಯೆಂದು ಅರಿವಾಯಿತು. ನೇರವಾಗಿ ಪರ್ಣಾಶ್ರಮದತ್ತ ಬಂದು ನೋಡಿದರೆ ಶ್ರೀ ಕೃಷ್ಣ ಪರಮಾತ್ಮ ಪಾಂಡವರ ಜೊತೆಯಾಗಿ ಮಂದಸ್ಮಿತನಾಗಿ ನಾಲ್ಕು ಹೆಜ್ಜೆ ಮುಂದೆ ಬಂದು ಸ್ವಾಗತಿಸಿ, ಪ್ರಣಾಮಗಳನ್ನು ಸಲ್ಲಿಸುತ್ತಾ, ಮುನಿಗಳನ್ನೂ ಅವರ ಶಿಷ್ಯರನ್ನೂ ಆದರದಿಂದ ಬರಮಾಡಿಕೊಂಡನು. “ಬನ್ನಿ ಬನ್ನಿ.. ಎಲ್ಲರೂ ಕುಳಿತುಕೊಳ್ಳಿ. ದ್ರೌಪದಿ ನೀರು ತಾ” ಎಂದು ಕೂಗಿ ಕರೆದು ಹೇಳಿದನು.

ರುದ್ರ ಮುನಿಯಾದ ದೂರ್ವಾಸರು ನಕ್ಕು ಬಿಟ್ಟರು. “ಮರದ ಬೇರು ನೀರನ್ನೆಳೆದು ಹೀರಿದ ಮೇಲೆ, ಪ್ರತ್ಯೇಕವಾಗಿ ಅದರ ಕೊಂಬೆ, ರೆಂಬೆ, ಎಲೆಗಳಿಗೆ ನೀರು ಸುರಿಯಬೇಕೆ? ಅದೇ ನೀರು ಅಂತರ್ಯದಿಂದಲೆ ಎಲ್ಲೆಡೆ ಹರಿಯುವುದು ಪೃಕೃತಿ ಧರ್ಮವಲ್ಲವೆ ಶ್ರೀ ಹರಿ? ನಮ್ಮ ಹಸಿವು ನಿವಾರಣೆಯಾಗಿದೆ. ನಮಗೆ ಉಣ್ಣುವ ಕೆಲಸವನ್ನು ಕಡಿಮೆಗೊಳಿಸಿದೆ. ಈ ಊಟದ ಗುಟ್ಟು ನನಗರಿವಾಗಿದೆ. ಧನ್ಯರಾದೆವು ನಾವು ಕೃಷ್ಣಾ. ಸಂಚಾರಿಯಾಗಿ ಹಸ್ತಿನಾಪುರಕ್ಕೆ ನಾನು ಹೋದ ಸಂದರ್ಭ ಸತ್ಕಾರದಿಂದ ಸಮಾಧಾನಗೊಂಡು ಅವರ ಮನದಾಸೆ ಕೇಳಿದರೆ, ಈ ರೀತಿ ವ್ಯವಹರಿಸುವ ಬೇಡಿಕೆಯನ್ನಿತ್ತರು. ಅಂಧರಾಜನ ಮಕ್ಕಳ ಕೋರಿಕೆ ಈಡೇರಿಸುವ ಮನ ಮಾಡಿದ ನಾನೂ ಕುರುಡನಾಗಿ ಹೋದೆ. ಈಗ ನನ್ನ ಕಂಗಳೂ ಹೊಂಬೆಳಕನ್ನು ತಳೆದಿದೆ. ಚಂದ್ರವಂಶದ ಜ್ಯೋತಿಯನ್ನು ನೋಡ ಹೋದರೆ ಕಮಟು ನಾರುವ ಹೊಗೆಯನ್ನಷ್ಟೆ ಹಸ್ತಿನೆಯಲ್ಲಿ ಕಂಡ ಹಾಗಾಗುತ್ತಿದೆ. ಬೆಳಗಿ ಬೆಳಗುವ ಬೆಳಕನ್ನು ಸೂಸುವ ಸುಜ್ಯೋತಿಯನ್ನು ನಾನಿಂದು ಇಲ್ಲಿ ನೋಡುತ್ತಿದ್ದೇನೆ. ದೈವಾನುಗ್ರಹವಿರುವಲ್ಲಿ ಮಾತ್ರ ಎಲ್ಲವೂ ಇರುತ್ತದೆ. ಅದಿಲ್ಲದೆ ಅನ್ಯ ಸಂಪತ್ತೇನಿದ್ದರೂ ಅದು ಶೂನ್ಯ ಎಂಬ ಮರ್ಮದ ಅನುಭವವಾಗುತ್ತಿದೆ. ಕೃಷ್ಣಾ ನೀನು ಪ್ರತ್ಯಕ್ಷ ಇರುವಲ್ಲಿ ಅದಕ್ಕಿಂತ ಮಿಗಿಲಾದ ಅನುಗ್ರಹ ನಾನೇನು ಮಾಡಬಲ್ಲೆ!” ಎಂದು ಹೇಳಿ ಕೃಷ್ಣನಿಗೆ ವಂದಿಸಿ, ಎಲ್ಲರಿಗೂ ಆಶೀರ್ವದಿಸಿ “ಸುಜನರಿಗೆ ಸುಮಂಗಲವಾಗಲಿ” ಎಂದು ಮನದಲ್ಲಿ ಹರಸುತ್ತಾ ದೂರ್ವಾಸರು ಶಿಷ್ಯರೊಂದಿಗೆ ಹೊರಟರು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page