27.3 C
Udupi
Sunday, August 31, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -225

ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೨೬ ಮಹಾಭಾರತ

ಧರ್ಮರಾಯನ ಪ್ರಶ್ನೆಗೆ ಉತ್ತರ ನೀಡುತ್ತಾ ನಹುಷೇಂದ್ರ ತನ್ನ ಕಥೆ ಮುಂದುವರಿಸಿದನು ” ನಾನು ಸ್ವರ್ಗ ಸುಖ ಅನುಭವಿಸುತ್ತಿದ್ದಂತೆ ಇನ್ನಷ್ಟು ಮತ್ತಷ್ಟು ಸುಖಭೋಗಗಳ ಆಸೆ ಬೆಳೆಯುತ್ತಲೆ ಹೋಗ ತೊಡಗಿತು. ಮಾನವ ದೇಹಧರ್ಮವೆ ಹಾಗೆ ಸುಖ ಅನುಭವಿಸಿದಷ್ಟು ಹೆಚ್ಚು ಹೆಚ್ಚು ಬಯಸುತ್ತದೆ. ನಾನೂ ಬಯಸಬಾರದ್ದನ್ನು ಅಪೇಕ್ಷಿಸಿದೆ. ಇಂದ್ರನ ಅರ್ಧಾಂಗಿಯಾದ ಶಚಿ ದೇವಿಯ ಮೇಲೆ ಯಾಕೋ ನನಗೆ ಮನಸ್ಸಾಯಿತು. ವರ್ತಮಾನ ಕಾಲದ ಇಂದ್ರ ನಾನು, ಹಾಗಾಗಿ ಶಚಿ ದೇವಿಯೂ ನನಗೆ ಸಂಬಂಧ ಪಟ್ಟವಳೆಂಬ ರೀತಿ ಭಾವನೆ ಬೆಳೆಯಿತು. ಅಂತೆಯೆ ಮುಂದುವರಿದು ನನ್ನ ಮನದಾಸೆಯನ್ನು ಶಚಿ ದೇವಿ ಇದ್ದಲ್ಲಿಗೆ ಹೇಳಿ ಕಳುಹಿಸಿದೆ. ಅವಳು ಏನು ಸಂಕಲ್ಪ ಮಾಡಿದಳೋ! ನನಗೆ ದುರ್ಯೋಗ ಬಂದೊದಗಿಯಾಗಿತ್ತೋ ಇಲ್ಲಾ ನನ್ನ ಸಂಚಿತ ಪುಣ್ಯ ಬಲ ಕ್ಷೀಣವಾಗಿತ್ತೊ ಏನೋ! ಆಕೆ ಶರತ್ತು ಬದ್ದವಾಗಿ ಒಪ್ಪಿದಳು. ‘ಋಷಿ ಮಂಡಲದ ಸಪ್ತ ಋಷಿಗಳು ಪಲ್ಲಕ್ಕಿಯಲ್ಲಿ ನನ್ನನ್ನು ಹೊತ್ತು ತಂದರೆ ನಿನ್ನನ್ನು ಸೇರಬಹುದು’ ಎಂದು ಹೇಳಿ ಕಳುಹಿದಳು. ಇದನ್ನು ಕೇಳಿ ಕಾಮಾತುರನಾಗಿದ್ದ ನನಗೆ ಮಹದಾನಂದ ಆಯಿತು. ಆ ಕಾಲಕ್ಕೆ ಸಪ್ತ ಋಷಿಗಳ ಯೋಗ್ಯತೆ ಏನು? ಅವರನ್ನು ಆ ರೀತಿ ನಡೆಸಿಕೊಳ್ಳ ಬಹುದೇ? ಈ ರೀತಿಯ ಯಾವ ಜಿಜ್ಞಾಸೆಯೂ ನನ್ನ ಮನದಲ್ಲಿ ಮೂಡಲಿಲ್ಲ. ನೇರವಾಗಿ ಸಪ್ತರ್ಷಿಗಳನ್ನು ಕರೆಸಿ ನನ್ನ ಬಯಕೆಯನ್ನೂ, ಶಚಿಯ ಆದೇಶವನ್ನೂ ಅವರೆಲ್ಲರ ಮುಂದೆ ನಿಸ್ಸಂಕೋಚವಾಗಿ ತಿಳಿಯಪಡಿಸಿ, ಹಾಗೆ ಮಾಡಬೇಕೆಂದು ಕೇಳಿಕೊಂಡೆನು. ಆದರೆ ಅವರು ಇದು ಅಧರ್ಮ ಎಂದು ತಿಳಿಯಪಡಿಸುವ ಪ್ರಯತ್ನ ಮಾಡಿದರಾದರೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಶತ ಯಾಗಾರ್ಜಿತ ಪುಣ್ಯ ಬಲದಿಂದ ನಿಮ್ಮೆಲ್ಲರ ಅಸಹಾಯಕತೆಗೆ ಒದಗಿ ಬಂದು ಇಂದ್ರ ಪದವಿ ಏರಿದವನು. ಈಗ ನನ್ನ ಆದೇಶ ನೀವು ಪಾಲಿಸುವ ಅನಿವಾರ್ಯತೆ ನಿಮಗಿದೆ ಎಂದು ಒತ್ತಾಯಿಸಿದೆ. ನಿರ್ವಾಹ ಇಲ್ಲದೆ ಅವರು ಒಪ್ಪಿಕೊಳ್ಳಬೇಕಾಯಿತು. ವಿಶಿಷ್ಟವಾದ ನಾನಾ ರತ್ನ ಖಚಿತವಾದ ಶಿಬಿಕೆಯಲ್ಲಿ ನನ್ನನ್ನು ಕುಳ್ಳಿರಿಸಿ, ಹೆಗಲು ಕೊಟ್ಟು ಹೊತ್ತು ನಡೆಯತೊಡಗಿದರು. ನಾನೋ ಆ ಹೊತ್ತಿಗೆ ಶಚಿ ದೇವಿಯ ದೇಹ ಸುಖದ ಅಮಲಿನಲ್ಲಿ ವಾಸ್ತವ ಮರೆತು ಬಿಟ್ಟಿದ್ದೆನು. ಆತುರ ಹೊಂದಿದವನಾಗಿ ಅವಸರಪಡುತ್ತಿದ್ದೆ. ಪಲ್ಲಕ್ಕಿಗೆ ಹೆಗಲು ಕೊಟ್ಟವರಲ್ಲಿ ಅಗಸ್ತ್ಯರು ಸ್ವಲ್ಪ ಕುಳ್ಳ ಶರೀರದವರಾದ ಕಾರಣ ತುಸು ನಿಧಾನವೂ, ಮತ್ತೆ ಅವರತ್ತ ಪಲ್ಲಕ್ಕಿ ವಾಲುತ್ತಲೂ ಇತ್ತು. ಇದನ್ನು ಗಮನಿಸಿದ ನನಗೆ ಆ ಹೊತ್ತಿಗೆ ಕೆಟ್ಟ ಕೋಪ ಬಂದು ಬಿಟ್ಟಿತು. ಬೇಗನೆ ಶಚಿ ದೇವಿಯ ಅಂತಃಪುರ ಸೇರುವ ಬಯಕೆಗೆ ತೊಡಕಾಗಿರುವ ಪೂಜನೀಯ ಅಗಸ್ತ್ಯ ಮಹರ್ಷಿಗಳಲ್ಲಿ ಬೇಗ ನಡೆಯಿರಿ ಎಂಬ ಒರಟು ಆಜ್ಞೆಯೊಂದಿಗೆ ಅವರ ಬೆನ್ನಿಗೆ ಕಾಲಿನಿಂದ ಒದ್ದು ಬಿಟ್ಟೆನು. ಬೇಗ ಬೇಗ ಎಂದು ತ್ವರೆ ಪಡಿಸುತ್ತಾ ಪದೇ ಪದೇ ತುಳಿದು ದೂಡತೊಡಗಿದೆನು. ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ನನಗೂ ದುರ್ಬುದ್ದಿ ಮನ ಮಾಡಿತ್ತು. ಶಚಿದೇವಿಯನ್ನು ಬಯಸುವುದು, ಸಪ್ತ ಋಷಿಗಳಲ್ಲಿ ಪಲ್ಲಕ್ಕಿ ಹೊರಿಸುವುದು ಬುದ್ದಿ ಇರುವವರು ಮಾಡುವ ಕೆಲಸವೇ? ಕುರುಡಾದ ನನ್ನ ವಿವೇಕ ನನ್ನನ್ನು ಆ ರೀತಿ ಪ್ರೇರೆಪಿಸಿತ್ತೋ? ಇಲ್ಲ ನಿಯತಿಯ ನಿಯಂತ್ರಣದಲ್ಲಿರುವ ನನ್ನ ಬದುಕಿನ ತಿರುವಿಗೆ ನಾನು ಬಂದು ಮುಟ್ಟಿದ್ದೆನೋ ಏನೋ! ನನ್ನ ವರ್ತನೆಯಿಂದ ಕೆರಳಿದ ಅಗಸ್ತ್ಯರು ‘ನೀನು ಘೋರ ಕಾನನದಲ್ಲಿ ಅಜಗರನಾಗಿ ಬಿದ್ದಿರು’ ಎಂದು ಶಾಪವಾಕ್ಯ ನುಡಿದು ಬಿಟ್ಟರು.”

“ಮುಂದೇನು ಗತಿ? ಮಾಡಬಾರದ ಕೃತಿಯ ಪರಿಣಾಮ ಆಗ ಬಾರದ ಸ್ಥಿತಿ ಬಂದೊದಗಿಯಾಗಿದೆ. ಮುನಿವರನ ಪಾದ ಪದ್ಮಗಳನ್ನು ಹಿಡಿದು ಪರಿ ಪರಿಯಾಗಿ ವಿಮೋಚನೆಗಾಗಿ ಬೇಡಿದೆ. ಅವರು ‘ಮಾಡಿದ ತಪ್ಪಿಗೆ ನೀನು ಶಿಕ್ಷೆ ಅನುಭವಿಸಲೆ ಬೇಕು. ಆದರೆ ಕಾಲಾಂತರದಲ್ಲಿ ಯಾವಾಗ ಸಮರ್ಥನಾದ ಧರ್ಮಜ್ಞನಲ್ಲಿ ಧರ್ಮ ಜಿಜ್ಞಾಸೆ ಮಾಡುತ್ತಿಯೋ, ಅವನು ನಿನ್ನ ಪ್ರಶ್ನೆಗಳಿಗೆ ಸದುತ್ತರವನ್ನು ನೀಡುತ್ತಾನೋ, ಮರಳಿ ನಿನಗೆ ಧರ್ಮ ಸಮ್ಮತ ಪ್ರಶ್ನೆಗಳನ್ನು ಕೇಳಿ ನಿನ್ನಿಂದ ಸಂತೃಪ್ತನಾಗುತ್ತಾನೋ, ಸಮಾನ ಯೋಗ್ಯತೆಯ ಮಹಾನುಭಾವನ ಸಂಪರ್ಕದಿಂದ ನಿನ್ನ ಶಾಪ ವಿಮೋಚನೆಯಾಗುವುದು’ ಎಂದು ನುಡಿದರು.

ಇಷ್ಟೆಲ್ಲಾ ನಡೆದು ನಾನು ಶಾಪಗ್ರಸ್ಥನಾಗುವ ಹೊತ್ತಿಗೆ ಖಾಲಿಯಾದ ಇಂದ್ರ ಪೀಠವೇರಲು ದೇವೇಂದ್ರ ಮರಳಿ ಬಂದಾಗಿತ್ತು. ಅಶ್ವಮೇಧ ಯಾಗ ಪೂರೈಸಿ ಬ್ರಹ್ಮಹತ್ಯಾ ದೋಷ ನಿವಾರಿಸಿ, ಪುಣ್ಯ ಸಂಪಾದಿಸಿ ಬಂದಿದ್ದನು. ಈ ಸಂಧಿಯ ಕಾಲ ನನ್ನ ಬುದ್ದಿಯೂ ಮರುಳಾಗಿ ಸ್ವರ್ಗಾಧಿಪತ್ಯ ಬಿಟ್ಟುಕೊಡಲು ಪರ್ಯಾಯ ರೂಪದಿಂದ ದುಷ್ಪ್ರೇರಣೆ ನೀಡಿತ್ತೋ ಏನೋ! ಅಂದಿನ ದಿನ ಶಾಪಗ್ರಸ್ಥನಾದ ನಾನು ಅಜಗರನಾಗಿ ಇಲ್ಲಿ ಬಿದ್ದೆನು. ಮೇಲೇರಿದವನು ಆ ಔನ್ನತ್ಯದಿಂದ ಬಿದ್ದಾಗ ಆಗುವ ನೋವು ಶಾರೀರಿಕವಾಗಿಯೂ ಮಾನಸಿಕವಾಗಿಯೂ ದ್ವಿಗುಣವಾಗಿ ಬಾಧಿಸುತ್ತಿತ್ತು. ಎಷ್ಟೋ ಶತಮಾನಗಳನ್ನು ಹೀಗೆಯೇ ಅನುಭವಿಸಿದನು. ಈಗ ನಿನ್ನಿಂದ ಬಿಡುಗಡೆಯಾಯಿತು. ನಮ್ಮ ವಂಶಜನೇ ಆದ ನೀನು, ಇಂದ್ರ ಪದವಿ ಏರಿದ, ಶತ ಯಾಗಾರ್ಜಿತ ಪುಣ್ಯ ಬಲ ಹೊಂದಿದ್ದ ನನಗೆ ಸಮಾನನಾದೆ. ಧರ್ಮರಾಜ ನಿಮಗೆಲ್ಲರಿಗೂ ಶುಭವಾಗಲಿ” ಎಂದು ಹರಸಿದನು ನಹುಷೇಂದ್ರ. ಆ ಹೊತ್ತಿಗೆ ದಿವ್ಯ ರಥವೊಂದು ಅಲ್ಲಿಗೆ ಬಂದು ನಹುಷನನ್ನು ಮೇಲೇರಿಸಿಕೊಂಡು ಹೋಯಿತು.

ಭೀಮನ ಜೊತೆ ಆಶ್ರಮ ಸೇರಿದ ಧರ್ಮರಾಯ ನಡೆದ ವೃತ್ತಾಂತವನ್ನು ಎಲ್ಲರ ಮುಂದೆ ಪ್ರಕಟಿಸಿದಾಗ ಧೌಮ್ಯಾದಿ ಋಷಿವರೇಣ್ಯರು ಬಹುವಾಗಿ ಸಂತಸಪಟ್ಟು ಧರ್ಮರಾಯನ ಯೋಗ್ಯತೆಯ ಪರೀಕ್ಷೆಯಾಯಿತು ಎಂದರು.

ಹೀಗಿರಲು ಒಂದು ದಿನ ಪೂಜ್ಯರಾದ ಮಾರ್ಕಾಂಡೇಯರು ಅಲ್ಲಿಗೆ ಆಗಮಿಸಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page