ಭಾಗ – 223
ಭರತೇಶ ಶೆಟ್ಟಿ, ಎಕ್ಕಾರ್

ಧರ್ಮರಾಯನು ನಾನು ಸಂತೃಪ್ತನಾಗಿದ್ದೇನೆ, ಎಂದಾಕ್ಷಣ ಅಜಗರನಾಗಿ ಬಿದ್ದಿದ್ದವನ ಶಾಪ ವಿಮೋಚನೆಯಾಯಿತು. ಭೀಮನೂ ಬಂಧನದಿಂದ ಬಿಡುಗಡೆಯಾದನಿ. ದಿವ್ಯ ಶರೀರದಿಂದ ಕಂಗೊಳಿಸುತ್ತಿದ್ದ ಆ ಪುರುಷನು ಧರ್ಮರಾಜನನ್ನು ಕುರಿತು “ವತ್ಸಾ! ನಾನು ನಿಮ್ಮ ಹಿರಿಯನಾದ ನಹುಷೇಂದ್ರನಾಗಿದ್ದೇನೆ. ಯಯಾತಿಯ ತಂದೆ ನಾನು. ಈ ರೀತಿ ಶಾಪಗ್ರಸ್ಥನಾಗಿ ಅಜಗರ ರೂಪದಲ್ಲಿ ಬಿದ್ದಿರುವ ಹಿಂದೆ ಬಲು ದೊಡ್ಡ ಕಥೆಯೇ ಇದೆ. ಅದನ್ನು ವಿಸ್ತಾರವಾಗಿ ಹೇಳುವೆ ಕೇಳು” ಎಂದನು.
ಧರ್ಮರಾಯನು “ಹಾಗೆಯೆ ಆಗಲಿ” ಎಂದು ಕಥಾಶ್ರವಣಕ್ಕೆ ಸಿದ್ದನಾದನು. ನಹುಷ ಕಥೆ ಹೇಳಲು ಆರಂಭಿಸಿದನು. “ದೇವಲೋಕದಲ್ಲಿ ತ್ರಿಭುವನ ಐಶ್ವರ್ಯ ಮದದಿಂದ ದೇವೇಂದ್ರ ಮದೋನ್ಮತ್ತನಾಗಿ ಹೋಗಿದ್ದ ಕಾಲವದು. ಆಸ್ಥಾನದಲ್ಲಿ ಹೊಗಳುಭಟರಿಗೂ ಕೊರತೆ ಇರಲಿಲ್ಲ. ಪರಿಣಾಮವಾಗಿ ಇನ್ನಷ್ಟು ಉಬ್ಬಿ ಕೊಬ್ಬಿ ಬೀಗುತ್ತಿದ್ದ ಸಮಯ. ಒಂದು ದಿನ ಸಿಂಹಾಸನರೂಢನಾಗಿ ಕುಳಿತಿದ್ದಾಗ ದೇವಗುರು ಬ್ರಹಸ್ಪತಿ ಆಚಾರ್ಯರು ಆಸ್ಥಾನ ಪ್ರವೇಶ ಮಾಡುತ್ತಾರೆ. ಆ ದಿನ ಅಹಂಕಾರವೇಕೊ ತಲೆಗಡರಿದ್ದ ದೇವೇಂದ್ರ ನೋಡಿಯೂ ಗೌರವ ಸೂಚಿಸಲಿಲ್ಲ. ಅಪಮಾನಿತರಾದ ದೇವಗುರುಗಳು ಅರೆ ಕ್ಷಣವೂ ಅಲ್ಲಿ ನಿಲ್ಲದೆ ಹೊರಟು ಹೋದರು. ಬಳಿಕ ತನ್ನಿಂದಾದ ಪ್ರಮಾದದ ಅರಿವಾಗಿ ದೇವೇಂದ್ರ ಭೀತನಾದನು. ಸಮಾಲೋಚನೆ ನಡೆಸಿ ತಾನೇ ಸ್ವಯಂ ಗುರುವರ್ಯರ ಬಳಿ ಹೋಗಿ ಪಾದಕ್ಕೆರಗಿ ಕ್ಷಮಾಪಣೆ ಕೇಳುವೆನೆಂದು ಹೊರಟನು. ಆಶ್ರಮಕ್ಕೆ ದೇವರಾಜ ಬರುತ್ತಿರುವ ಕಾರ್ಯ ಕಾರಣ ತಿಳಿದ ಸುರಾಚಾರ್ಯರಾದ ಬ್ರಹಸ್ಪತಿಗಳು ಆತನಿಗೆ ಸಿಗಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಸಂದರ್ಶನಕ್ಕೆ ಅವಕಾಶ ಆಗಲಿಲ್ಲ. ಇದು ಸುಸಂದರ್ಭ ಎಂದು ಅವಕಾಶ ಬಳಸಿಕೊಂಡ ರಾಕ್ಷಸರು ದೇವಗುರು ಶುಕ್ರಾಚಾರ್ಯರ ಮಾರ್ಗದರ್ಶನ, ಆಶೀರ್ವಾದ ಪಡೆದು ದೇವಲೋಕಕ್ಕೆ ದಾಳಿ ಮಾಡಿದರು. ದೇವೇಂದ್ರನೂ ಇಲ್ಲದ ಕಾರಣ ಸುಲಭದಲ್ಲಿ ಸುರಗದ್ದುಗೆ ಅಸುರರ ಪಾಲಾಯಿತು. ಇತ್ತ ದೇವಗುರುಗಳೂ ಇಲ್ಲ, ಅತ್ತ ದೇವಲೋಕದ ಅಧಿಕಾರವೂ ಕೈತಪ್ಪಿದ ದುಃಖದಿಂದ ಪರಿಹಾರ ಕಾಣಲು ಬ್ರಹ್ಮದೇವರನ್ನು ಅರಸುತ್ತಾ ಸತ್ಯಲೋಕಕ್ಕೆ ಬಂದನು ದೇವೇಂದ್ರ. ಸಂಪೂರ್ಣ ವೃತ್ತಾಂತ ವಿವರಿಸಿದಾಗ ಕೇಳಿಸಿಕೊಂಡ ಸೃಷ್ಟಿಕರ್ತ ಬ್ರಹ್ಮ ದೇವರು ಅಭಯಪ್ರದರಾದರು. “ಇಂದ್ರಾ ಚಿಂತಿಸಬೇಡ, ನೀನು ಗುರು ನಿಂದೆ ಮಾಡಿದೆ. ಅಸುರರು ಗುರು ಶುಕ್ರಾಚಾರ್ಯರ ಪೂಜನೆಯಿಂದ ಸ್ವರ್ಗ ಸಂಪಾದಿಸಿದರು. ಇನ್ನು ಹೀಗೆ ಮುಂದುವರಿಯಗೊಟ್ಟರೆ ಪರಿಸ್ಥಿತಿ ವಿಕೋಪಕ್ಕೆ ಹೋದೀತು. ಈಗ ನಿಮಗೋರ್ವ ಸೂಕ್ತ ಗುರುವಿನ ಅಗತ್ಯವಿದೆ. ವಿಶ್ವರೂಪನೆಂಬ ಓರ್ವ ತಪಸ್ವಿ ಬ್ರಾಹ್ಮಣನಿದ್ದಾನೆ. ಬ್ರಹ್ಮಜ್ಞಾನಿಯೂ, ತಪಸ್ಸಂಪನ್ನನೂ ಆದ ಆತ ಗುರುಸ್ಥಾನಕ್ಕೇರಲು ಸೂಕ್ತನಾಗಿದ್ದಾನೆ. ಅವನನ್ನು ಕಂಡು ತತ್ಕಾಲಕ್ಕೆ ಗುರುವಾಗಿ ಸ್ವೀಕರಿಸು. ಅಸುರ ವಧೆಯಾದ ಬಳಿಕ ಬ್ರಹಸ್ಪತಿ ಆಚಾರ್ಯರನ್ನು ಕರೆತರುವ ಬಗ್ಗೆ ಯೋಚಿಸೋಣ” ಎಂದು ಸೂಚಿಸಿದರು.
ಅಂತೆಯೆ ವಿಶ್ವರೂಪನ ಬಳಿ ದೇವತೆಗಳ ಸಹಿತ ದೇವೇಂದ್ರ ಬಂದು ಸಹಾಯ ಯಾಚಿಸಿದನು. ಮೊದಲು ಅಸಾಧ್ಯ ಎಂದು ಋಷಿವರ ವಿಶ್ವರೂಪ ನಿರಾಕರಿಸಿದರು. ಆಗ ಸುರಾಧಿಪ ಪರಿ ಪರಿಯಾಗಿ ಬೇಡಿಕೊಳ್ಳುತ್ತಾ, ಮಗನು ತಂದೆಯ ಸೇವೆ ಮಾಡುವುದು, ಪುತ್ರರಹಿತರಾದ ಹಿರಿಯರ ಸೇವೆ ಮಾಡುವುದು ಲೋಕದಲ್ಲಿ ಅತಿ ಶ್ರೇಯಸ್ಕರವಾದ ಎರಡು ಕರ್ಮಗಳು. ದೇವತೆಗಳಾದ ನಾವು ಹಿರಿಯರೂ ನಿನಗೆ ಪಿತೃಗಳೂ ಆಗಿದ್ದೇವೆ. ಪಿತೃ ಶುಶ್ರೂಷೆಗೆ ಸಮನಾದ ಧರ್ಮವುಂಟೆ? ಗುರುಗಳಲ್ಲಿ ಬ್ರಹ್ಮನು, ತಂದೆಯಲ್ಲಿ ರುದ್ರನು, ಅಣ್ಣನಲ್ಲಿ ಇಂದ್ರನು, ತಾಯಿಯಲ್ಲಿ ಭೂಮಿದೇವಿ, ತಂಗಿಯಲ್ಲಿ ದಯಾದೇವಿ, ಅತಿಥಿಗಳಲ್ಲಿ ಯಮಧರ್ಮನು, ಅಭ್ಯಾಗತರಲ್ಲಿ ಅಗ್ನಿಯು, ಸರ್ವಭೂತಗಳಲ್ಲಿ ಶ್ರೀಹರಿಯು ನೆಲೆಸಿ ಸೇವೆ ಮಾಡಿದವರಿಗೆ ಆಯಾ ದೇವರುಗಳು ಮಹಾ ಫಲಪ್ರದರಾಗುತ್ತಾರೆ. ಬ್ರಹ್ಮಜ್ಞಾನಿಗಳಾದ ನೀವು ಕಿರಿಯವರು ಆದರೂ ನಿಮ್ಮ ಜ್ಞಾನಕ್ಕೆ ಮಣಿದು ನಮ್ಮನ್ನು ಉದ್ದರಿಸಬೇಕೆಂದು ಬೇಡಿಕೊಳ್ಳುತ್ತಿದ್ದೇವೆ.” ಎಂದು ಆರ್ತನಾಗಿ ಯಾಚಿಸಿದನು.
ಈ ರೀತಿಯಾಗಿ ಇಂದ್ರಾದಿ ದೇವತೆಗಳು ಒತ್ತಾಯ ಮಾಡಿದಾಗ ವಿಶ್ವರೂಪ ಒಪ್ಪಿಕೊಳ್ಳುತ್ತಾನೆ. ಶ್ರೀ ಹರಿಯ ಪರಮ ಭಕ್ತನಾಗಿದ್ದ ವಿಶ್ವರೂಪ ದೇವಗುರು ಮತ್ತು ಪುರೋಹಿತನಾಗಿ ವೈಷ್ಣವಿ ವಿದ್ಯೆಯ ಬಲದಿಂದ ದೇವತೆಗಳಿಗೆ ಚೈತನ್ಯಪ್ರದನಾದನು. ವಿಶ್ವರೂಪನಿಂದ ನಾರಾಯಣ ಕವಚ ಸ್ವೀಕರಿಸಿ ಬಲಯುತರಾದ ದೇವತೆಗಳು ದೇವಲೋಕವನ್ನು ಆಕ್ರಮಿಸಿದ್ದ ರಾಕ್ಷಸರನ್ನು ನಿರಾಯಾಸವಾಗಿ ಗೆದ್ದು ಕೊಂದು ಸುರಲೋಕಾಧಿಪತ್ಯ ಪುನರಪಿ ಸ್ವಾಧೀನಗೊಳಿಸಿದರು.
ದೇವಗುರುವಾದ ವಿಶ್ವರೂಪನು ಅಂತರ್ಯದಲ್ಲಿ ಅಸುರ ಪಕ್ಷಪಾತಿಯಾಗಿದ್ದನು. ಯಾಗದ ಹವಿರ್ಭಾಗವನ್ನು ಗಟ್ಟಿಯಾಗಿ ಸ್ವಾಹಾಕಾರದಿಂದ ದೇವತೆಗಳಿಗೆ ನೀಡುವ ಮಂತ್ರ ಉಚ್ಚರಿಸುತ್ತಿದ್ದರೂ, ಮನಸ್ಸಿನಿಂದ ರಾಕ್ಷಸರಿಗೂ ಶ್ರೇಯಸ್ಸನ್ನು ಬಯಸಿ ಹೋಮಿಸುತ್ತಿದ್ದನು. ಈ ರೀತಿಯ ದ್ವಂದ್ವ ಭಾವವನ್ನು ಅರಿತುಕೊಂಡ ದೇವೇಂದ್ರನಿಗೆ ಆತಂಕ ಉಂಟಾಯಿತು. ವಿಶ್ವರೂಪ ದೇವಗುರುವಾಗಿ ಹವಿರ್ಭಾಗ ದೇವತೆಗಳಿಗೆ ನೀಡಿದರೂ ರಾಕ್ಷಸರಿಗೂ ಶ್ರೇಯಸ್ಸನ್ನು ಬಯಸಿದರೆ ಮುಂದೆ ಬಲಯುತರಾದ ಅಸುರರಿಂದ ತೊಂದರೆ ನಿಶ್ಚಿತ. ಹೀಗೆ ಮುಂದುವರಿದರೆ ದಾನವರ ನಿಗ್ರಹ ಅಸಾಧ್ಯ ಎಂದು ಕಲ್ಪಿಸಿ ದೇವಗುರುವಾಗಿದ್ದ ವಿಶ್ವರೂಪನ ಶಿರಚ್ಛೇದನ ಮಾಡಿಯೇ ಬಿಟ್ಟನು.
ಬ್ರಹ್ಮಹತ್ಯಾ ದೋಷಕ್ಕೆ ಗುರಿಯಾದ ಇಂದ್ರನಿಗೀಗ ಮತ್ತೆ ಸ್ವಯಂಕೃತ ಅಪರಾಧದಿಂದ ಗುರುವಿನ ಕಾರಣದಿಂದಲೇ ಸಂಕಟ ಒದಗಿದೆ.
ಮುಂದುವರಿಯುವುದು…



















