27.2 C
Udupi
Wednesday, December 24, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 219

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೨೦ ಮಹಾಭಾರತ

ಮುದಿ ವಾನರನಂತೆ ಬಿದ್ದುಕೊಂಡಿದ್ದ ವಜ್ರಕಾಯ ಹನೂಮಂತ ಎದ್ದು ನಿಂತು ಭೀಮನನ್ನು ಕರೆದು “ತಮ್ಮಾ ನಾನೇ ನಿನ್ನ ಅಣ್ಣ ಶ್ರೀರಾಮನ ಚರಣದಾಸ ಹನುಮ. ಮರಣವಿಲ್ಲದ ನಾನು ರಾಮಧ್ಯಾನ ನಿರತನಾಗಿ ಇನ್ನೂ ಇದ್ದೇನೆ. ನಿನ್ನ ಮುಂದಿನ ದಾರಿ ತೊಂದರೆ ಒದಗುವ ಸಾಧ್ಯತೆ ಇದ್ದ ಕಾರಣ ತಡೆದೆ. ನೀನು ಹುಡುಕುತ್ತಾ ಬಂದಿರುವ ಪುಷ್ಪಗಳಿರುವ ಸರೋವರ ಇಲ್ಲಿಗೆ ಸನಿಹದಲ್ಲಿ ಇದೆ. ನಿನಗೆ ಶ್ರೇಯಸ್ಸಾಗಲಿ” ಎಂದು ನುಡಿದು ಭೀಮಸೇನನನ್ನು ಬಿಗಿದಪ್ಪಿ ಆಲಿಂಗಿಸಿದನು. ಸರೋವರವಿರುವ ಕಡೆ ಹೋಗುವ ದಾರಿಯನ್ನೂ ತೋರಿದ ಆಂಜನೇಯ.

ಭೀಮಸೇನನಿಗೆ ಈ ವರೆಗೆ ಮಾನಹರಣವಾದ ಕಾರಣ ಕ್ಷತ್ರಿಯ ಕುಲಜನಾದ ನಾನಿನ್ನು ಬದುಕಿರಬಾರದು ಎಂಬಷ್ಟರ ಮಟ್ಟಕ್ಕೆ ವ್ಯಥೆಯಾಗಿತ್ತು. ಈಗ ಈತ ವಾನರನಲ್ಲ ನನ್ನ ಅಣ್ಣ ಹನೂಮಂತ ಎಂದು ತಿಳಿದಾಗ ಮಹದಾನಂದವಾಯಿತು. ಇಷ್ಟಕ್ಕೆ ಸಮಾಧಾನವಾಗದೆ ಅಣ್ಣ ಹನುಮನ ನಿಜರೂಪವನ್ನು ಕಾಣಬೇಕೆಂಬ ಆಸೆಯಾಯಿತು. ತಮ್ಮನೆಂದು ಭೀಮನನ್ನು ಹನುಮ ಪ್ರೀತಿಯಿಂದ ಆದರಿಸಿದ್ದರೂ, ಸಲುಗೆ ತೋರದೆ ಭಕ್ತನಂತೆ ತನ್ನ ಆಶಯವನ್ನು ತಿಳಿಸಿ ಬೇಡಿಕೊಂಡನು. ಅನುಜನ ಅಪೇಕ್ಷೆಯಂತೆ ಆಂಜನೇಯ ಬೃಹದ್ರೂಪ ತಳೆದು ಬೆಳೆದು ನಿಂತು ಅನುಗ್ರಹಿಸಿದನು.

ಹನೂಮಂತನ ದಿವ್ಯರೂಪವನ್ನು ಕಣ್ತುಂಬಾ ನೋಡಿ ಧನ್ಯನಾದನು ಭೀಮಸೇನ. ಈಗ ವಾತ್ಸಲ್ಯದಿಂದ ಸಂಬಂಧಿಯಾಗಿ, “ಅಗ್ರಜಾ, ಕೌರವರ ಅಧರ್ಮಯುಕ್ತ ಮೋಸದಾಟಕ್ಕೆ ಒಳಗಾಗಿ ನಾವು ಪಾಂಡವರು ವನವಾಸಿಗಳಾಗಿದ್ದೇವೆ. ನಾವು ಮರಳಿ ರಾಜ್ಯಕ್ಕೆ ಹೋಗುವ ಸಂದರ್ಭ ಸಂಘರ್ಷ ಏರ್ಪಡುವ ಸಾಧ್ಯತೆಯೆ ಹೆಚ್ಚಾಗಿದೆ. ನಮಗೀಗ ಕೌರವರು ಕಡುವೈರಿಗಳಾಗಿಯೆ ಕಾಣುತ್ತಿದ್ದಾರೆ. ಅವರ ಸರ್ವ ಅಪರಾಧಗಳನ್ನೂ ನಾವು ಸಹಿಸಿ ಮನ್ನಿಸಿದ್ದೆವು. ಯಾವ ಕ್ಷಣ ಅವರು ನಮ್ಮ ಸತಿಯಾದ ದ್ರೌಪದಿಯ ಸೆರಗಿಗೆ ಕೈಯಿಕ್ಕಿ ಎಳೆದಾಡಿದರೊ ಅಲ್ಲಿಂದ ವಧಾರ್ಹರಾಗಿ ಗೋಚರಿಸುತ್ತಿದ್ದಾರೆ. ನನ್ನ ತಮ್ಮ ಅರ್ಜುನ ಶಿವಾನುಗ್ರಹಕ್ಕಾಗಿ ಇಂದ್ರಕೀಲಕ ಸೇರಿದ್ದಾನೆ. ಆತನಿಗೆ ಕಾರ್ಯ ಸಿದ್ಧಿಯಾಗಿದೆ ಎಂಬ ವರ್ತಮಾನ ನಮಗೆ ಬಂದಿದೆಯಾದರೂ , ಅರ್ಜುನ ಬಂದು ನಮ್ಮ ಜೊತೆ ಸೇರುವುದನ್ನು ಕಾತರದಿಂದ ಕಾಯುತ್ತಿದ್ದೇವೆ. ವಾಸುದೇವ ನಮಗೆಲ್ಲರಿಗೂ ಪೂಜ್ಯನು ಆಗಿದ್ದಾನೆ. ಅತಿಮಾನುಷ ಶಕ್ತಿ ಸಂಪನ್ನನಾಗಿ ಲೋಕ ಕಂಟಕಗಳನ್ನು ಪರಿಹರಿಸಿ ಸುಜನರನ್ನು ರಕ್ಷಿಸುತ್ತಿರುವ ಮಹಾತ್ಮನಾಗಿದ್ದಾನೆ. ಅಂತಹ ದೇವನಿಗೆ ಅರ್ಜುನ ಅತ್ಯಾಪ್ತನಾಗಿದ್ದಾನೆ. ಆತನ ಸಖ್ಯದೊಂದಿಗೆ ಅರ್ಜುನ ಈಗಾಗಲೇ ಅಗ್ನಿದತ್ತ ಧನುಸ್ಸು ಗಾಂಡೀವ, ಅಕ್ಷಯ ತೂಣಿರ ಹಾಗು ದಿವ್ಯ ರಥವನ್ನು ಹೊಂದಿದ್ದಾನೆ. ಆ ದಿವ್ಯ ರಥಕ್ಕೆ ರಾಮಭಕ್ತನಾದ ನಿನ್ನನ್ನು ಸ್ಮರಿಸಿ ಕಪಿಧ್ವಜವನ್ನು ರಥಾಗ್ರದಲ್ಲಿ ಏರಿಸಿದ್ದಾನೆ. ಆತನ ಹಾಗು ನನ್ನ ಭಕ್ತಿಗೆ ಒಲಿದು ಕಪಿಯ ಚಿಹ್ನೆಯಲ್ಲಿ ಸಾಕ್ಷಾತ್ಕಾರಗೊಳ್ಳಬೇಕು. ಅಗತ್ಯಕಾಲದಲ್ಲಿ ನಿಮ್ಮನ್ನು ಅರ್ಜುನ ಸ್ಮರಿಸುತ್ತಾನೆ ಆ ಸಂದರ್ಭ ಪ್ರತ್ಯಕ್ಷವಾಗಿ ನೀವು ರಥ ಶಿಖರದಲ್ಲಿ ಧ್ವಜ ಮಧ್ಯ ಪ್ರತ್ಯಕ್ಷವಾಗಿ ಸಾನಿಧ್ಯಗೊಂಡು ಅನುಗ್ರಹಿಸಬೇಕು” ಎಂದು ನಮಿಸಿ ಬೇಡಿಕೊಂಡನು.

ಹನೂಮಂತ ಭೀಮನ ನುಡಿ ಕೇಳಿ ಸಂತೋಷದ ನಗೆ ಸೂಸಿ “ಕಂದ ಭೀಮಾ, ಸೋದರ ವಾತ್ಸಲ್ಯವನ್ನು ನಾನು ಕಂಡಿರುವುದು ನನ್ನ ದೇವರಾದ ರಾಮ ಮತ್ತು ಅವರ ತಮ್ಮ ಲಕ್ಷ್ಮಣರಲ್ಲಿ. ಸುದೈವವಶಾತ್ ಇಂದು ನಿನ್ನ ನಡೆಯೂ ಅವರ ಸ್ವಭಾವದ ಲಕ್ಷಣ ತೋರಿಸಿ ನನಗೆ ನಿನ್ನಲ್ಲಿ ಅತೀವ ಗೌರವ ಮೂಡಿಸಿದೆ. ನಿನಗಾಗಿ ಏನಾದರು ಕೇಳಿಕೊಳ್ಳುವ ಅವಕಾಶವಿದ್ದರೂ ನಿಸ್ವಾರ್ಥಿಯೂ, ಸೋದರ ಶ್ರೇಯೋಭಿಲಾಷಿಯೂ ಆಗಿ ಬೇಡಿಕೊಂಡಿರುವೆ. ನಿನ್ನ ಅಭೀಷ್ಟದಂತೆಯೆ ಆಗಲಿ. ನನ್ನನ್ನು ಪ್ರಾರ್ಥಿಸುವ ಕಾಲಕ್ಕೆ ಬಂದು ನಿನ್ನ ಕೇಳಿಕೆಯನ್ನು‌ ನಡೆಸಿಕೊಡುತ್ತೇನೆ” ಎಂದು ವಾಗ್ದಾನ ನೀಡಿ ಭೀಮಸೇನನನ್ನು ಬೀಳ್ಕೊಟ್ಟನು.

ಹೊರಟು ಬಂದ ಭೀಮಸೇನ ಹನುಮಂತ ತೋರಿದ ದಾರಿಯಲ್ಲಿ ಸಾಗಿ ಸೌಗಂಧಿಕಾ ಪುಷ್ಪಗಳಿರುವ ಸರೋವರದ ಬಳಿ ಬಂದು ಸೇರಿದನು. ಆದರೆ ಆ ಸರೋವರ ಪ್ರವೇಶ ನಿಷಿದ್ಧವಾಗಿತ್ತು. ಕಾರಣ ಅದರ ಸುತ್ತ ಕುಬೇರನಿಂದ ನಿಯೋಜಿಸಲ್ಪಟ್ಟ ಕಾವಲು ಪಡೆ ರಕ್ಷಾ ಕವಚವಾಗಿತ್ತು. ಭೀಮಸೇನ ಮಾತ್ರ ಹೂವುಗಳನ್ನು ನೋಡಿದಾಕ್ಷಣ ಆನಂದದಿಂದ ಸರೋವರಕ್ಕಿಳಿಯಲು ಮುಂದಾದರೆ ಕಾವಲು ಪಡೆ ತಡೆಯಿತು. ಹೂವು ಬೇಕೆಂದು ಹೇಳಿದಾಗ ಆಗದು ಎಂಬ ಉತ್ತರ. ಭೀಮನಿಗೆ ಕೋಪ ಬಂದು ಹೊಡೆದಾಟ ಆರಂಭವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page