ಭಾಗ – 214
ಭರತೇಶ್ ಶೆಟ್ಟಿ,ಎಕ್ಕಾರ್

ಪರಶುರಾಮರ ಅಭಯ ವಾಕ್ಯಗಳನ್ನು ಕೇಳಿ ಧರ್ಮರಾಯ ಸಹಿತ ಪಾಂಡವರು ಆನಂದಚಿತ್ತರಾದರು. ಯಾತ್ರೆ ಮುಂದುವರಿಸುತ್ತಾ ವೈಢೂರ್ಯ ಪರ್ವತದಲ್ಲಿರುವ ಚ್ಯವನಾಶ್ರಮಕ್ಕೆ ಬಂದರು. ಚ್ಯವನ ಮಹರ್ಷಿಗಳ ಕಥೆಯನ್ನು ಲೋಮಶ ಮಹರ್ಷಿಗಳಿಂದ ಕೇಳತೊಡಗಿದರು.
ಚ್ಯವನ ಮಹರ್ಷಿಯ ಹುಟ್ಟು ಒಂದು ಕೌತುಕ. ಇವರು ಭೃಗು ಮಹರ್ಷಿ ಮತ್ತು ಪುಲೋಮೆಯರ ಮಗ. ಚ್ಯವನರು ತಾಯಿಯ ಗರ್ಭದಲ್ಲಿರುವಾಗ ಅವರ ಮಾತೆ ಪುಲೋಮೆಯನ್ನು ಓರ್ವ ರಾಕ್ಷಸ ಅಪಹರಿಸುತ್ತಾನೆ. ತಾಯಿ ಭಯಭೀತಳಾಗಿ ಕಂಪಿಸುವಾಗ ಗರ್ಭದಿಂದ ಚ್ಯುತನಾಗಿ ಹುಟ್ಟು ಪಡೆದ ಕಾರಣದಿಂದಲೇ ಚ್ಯವನ ಎಂಬ ಹೆಸರು ಪಡೆದರು. ಭೃಗು ಮಹರ್ಷಿಗಳ ಮಂತ್ರ ರಕ್ಷೆಯ ಕಕ್ಷೆಯಲ್ಲಿದ್ದ ನವಜಾತ ಶಿಶು ಹುಟ್ಟುತ್ತಲೆ ಅಪ್ಪನ ತಪಃ ಶಕ್ತಿಯ ಬಲ ಪಡೆದಿತ್ತು. ಮಗು ರಾಕ್ಷಸನತ್ತ ನೋಡಿದ ಕೂಡಲೆ ರಕ್ಕಸ ಭಸ್ಮೀಭೂತನಾದ. ಬೆಳೆದು ಮುಂದೆ ಯೌವನದಲ್ಲಿ ಮನು ಪುತ್ರಿಯಾದ ‘ಆರುಷಿ’ ಯೆಂಬ ಕನ್ಯೆಯನ್ನು ಮದುವೆಯಾಗಿ ‘ಔರ್ವ’ ಎಂಬ ಮಗನನ್ನು ಪಡೆದರು.
ಹೀಗೆ ಸಾಗುತ್ತಿರಲು ಒಮ್ಮೆ ಚ್ಯವನ ಮಹರ್ಷಿ ತಪೋಮಗ್ನರಾಗಿ ಬಹು ಕಾಲ ಕಳೆದಿತ್ತು. ದೇಹದ ಸುತ್ತಲೂ ಹುತ್ತ ಬೆಳೆದು ಆವರಿಸಿ ಬಿಟ್ಟಿತು. ಆದರೂ ಕಣ್ಣಿನ ದೃಷ್ಟಿಯ ನೇರಕ್ಕೆ ಎರಡು ರಂಧ್ರಗಳು ತೆರೆದುಕೊಂಡಿದ್ದವು. ಅದೇ ಸಮಯ ಶರ್ಯಾತಿ ಎಂಬ ಹೆಸರಿನ ರಾಜ ಕಾರ್ಯಕಾರಣದಿಂದ ಕಾಡಿಗೆ ಬಂದವನು ವಿಶ್ರಾಂತಿಗಾಗಿ ಚ್ಯವನರು ತಪಸ್ಸನ್ನಾಚರಿಸುತ್ತಿದ್ದ ಪ್ರದೇಶದಲ್ಲಿ ಸೇನೆಯ ಸಮೇತ ಬಿಡಾರ ಹೂಡುತ್ತಾನೆ. ರಾಜನ ಜೊತೆ ಅವನ ಮುದ್ದಿನ ಮಗಳಾದ ಸುಕನ್ಯಾ ಕೂಡ ಬಂದಿದ್ದಳು. ಸಖಿಯರೊಂದಿಗೆ ತಿರುಗಾಡುತ್ತಾ ಹುತ್ತದೆಡೆ ಬಂದಾಗ ಅಲ್ಲಿರುವ ರಂಧ್ರಗಳ ಬಗ್ಗೆ ಆಸಕ್ತಿ ಮೂಡಿತು. ಏನೆಂದು ಬಗ್ಗಿ ನೋಡಿದರೆ ಏನೊ ಒಂದು ರೀತಿಯ ಹೊಳಪು ಕಾಣಿಸಿತು. ಕಾತರಕ್ಕೆ ಒಳಗಾದ ಸುಕನ್ಯೆ ಒಂದು ಕಡ್ಡಿಯನ್ನೆತ್ತಿ ರಂಧ್ರಗಳ ಮೂಲಕ ಕುಕ್ಕಿದಳು. ಕುಕ್ಕಿದ ಕಡ್ಡಿ ರಕ್ತ ಸಿಕ್ತವಾಯಿತು. ರಂಧ್ರದ ಮೂಲಕ ಇಣುಕಿ ನೋಡಿದರೆ ರಕ್ತ ಚಿಲುಮೆಯಂತೆ ಹರಿದಿಳಿಯುತ್ತಿರುವುದು ಕಾಣಿಸಿತು.
ರಾಜಾ ಶರ್ಯಾತಿಯ ಮಗಳು ಸುಕನ್ಯೆ ತಪ್ಪು ಕೃತಿಯನ್ನೆಸಗಿದ್ದು. ಆದರೆ ಶಿಕ್ಷೆ ಪ್ರಾಪ್ತವಾದದ್ದು ರಾಜನ ಸೇನೆಗೆ! ಹೇಗೆಂದರೆ ಅವರೆಲ್ಲರಿಗೂ ಮಲಮೂತ್ರ ಬದ್ಧವಾದವು. ಈ ಸಮಸ್ಯೆಯಿಂದ ರಾಜ ಪರಿವಾರವೆ ವೇದನಾಮಯ ಸಮಸ್ಯೆ ಎದುರಿಸಿತು. ಏನಾಯಿತು ಎಂಬ ಹಾಗೆ ವಿವೇಚಿಸುತ್ತಾ ರಾಜ ವ್ಯಥೆ ಪಡುವಾಗ ಮಗಳು ಸುಕನ್ಯೆ ಬಳಿ ಬಂದಳು. ಅಪ್ಪನನ್ನು ಕರೆದು ತಾನು ಮಾಡಿದ ಕೆಲಸ ಹಾಗೂ ಯಾರೋ ಮಹಾತ್ಮನಿಗೆ ತನ್ನಿಂದಾದ ವೇದನೆಯ ವಿಚಾರ ವಿವರಿಸಿದಳು. ಆ ಕೂಡಲೇ ರಾಜ ಶರ್ಯಾತಿ ಚ್ಯವನ ಮಹರ್ಷಿಗಳನ್ನು ಪ್ರಾರ್ಥಿಸಿದಾಗ, “ನನಗೆ ನಿನ್ನ ಮಗಳಿಂದ ಅಂಧತ್ವ ಪ್ರಾಪ್ತವಾಗಿದೆ. ಹಾಗಾಗಿ ನಿನ್ನ ಮಗಳನ್ನು ನನ್ನ ಸೇವೆಗೆ ನೀಡಬೇಕೆಂದು” ಹೇಳಿದರು.
ರಾಜನ ಪ್ರೀತಿಯ ಮಗಳನ್ನು ಓರ್ವ ಕಾನನವಾಸಿ ಋಷಿಗೆ ನೀಡಲು ಮನಸ್ಸು ಒಪ್ಪಲಿಲ್ಲ. ಯೋಚಿಸುತ್ತಿರುವಾಗ, ಪರಿವಾರದ ಅಸಹನೀಯ ತೊಳಲಾಟ ಕಂಡು ಸ್ವಯಂ ಸುಕನ್ಯ ರಾಜನ ಬಳಿ ಬಂದು “ಅಪ್ಪಾ ಮುನಿವರನ ಕ್ರೋಧದಿಂದಾಗಿ ನಮ್ಮ ಪರಿವಾರವೆ ಒದ್ದಾಡುತ್ತಿದೆ. ತಪ್ಪು ನನ್ನಿಂದಾಗಿದೆ. ಈ ಮಹಾತ್ಮನ ಸೇವೆ ಮಾಡಲು ನಾನು ಒಪ್ಪುವುದರಿಂದ ನಮ್ಮ ಪರಿವಾರ ವೇದನೆಯಿಂದ ಮುಕ್ತಿ ಪಡೆಯಲಿದ್ದರೆ, ಹಾಗೆ ಮಾಡಲು ಸಿದ್ಧಳಿದ್ದೇನೆ. ರಾಜ ಕುಮಾರಿಯಾಗಿ ನನಗದು ಕರ್ತವ್ಯವೂ ಹೌದು. ಮಾತ್ರವಲ್ಲದೆ ಕೃತ ಅಪರಾಧಕ್ಕೆ ಸೂಕ್ತ ಪರಿಮಾರ್ಜನೆಗೂ ದಾರಿಯಾಗಲಿದೆ” ಎಂದಳು. ಮಗಳ ತೀರ್ಮಾನ ಕೇಳಿ, ರಾಜಾ ಇನ್ನಷ್ಟು ಗೊಂದಲಕ್ಕೆ ಒಳಗಾದರೂ ಅನ್ಯ ಮಾರ್ಗವಿಲ್ಲದೆ ಒಪ್ಪಿ ಋಷಿ ಸೇವೆಗೆ ಅರ್ಪಿಸಿ, ಮಗಳನ್ನು ಚ್ಯವನ ಮಹರ್ಷಿಯ ಜೊತೆ ವಿವಾಹ ಮಾಡಿಸಿದನು.
ಇದಾಗಿ ಕೆಲಸಮಯದ ಬಳಿಕ ಚ್ಯವನ ಮಹರ್ಷಿಯ ಪತ್ನಿ ಸುಕನ್ಯೆ ಸ್ನಾನ ಪೂರೈಸಿ ಕೆರೆ ದಂಡೆಯ ಮೇಲೆ ಬರುತ್ತಿರುವಾಗ ಇಬ್ಬರು ಯುವಕರು ಎದುರಾದರು. ಸುಕನ್ಯೆಯ ಸೌಂದರ್ಯಕ್ಕೆ ಮೋಹಿತರಾಗಿ ಆಕೆಯ ಬಳಿ ತಮ್ಮ ಮನದಾಸೆ ತೋಡಿಕೊಂಡರು.
ಮುಂದುವರಿಯುವುದು…





