27.2 C
Udupi
Saturday, August 30, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 213

ಭರತೇಶ್ ಶೆಟ್ಟಿ, ಎಕ್ಕಾರ್

ಹಿಂದೆ ಕಾರ್ತವೀರ್ಯ ಎಂಬ ಕ್ಷತ್ರಿಯ ಮಹಾರಾಜ ಬೇಟೆಗಾಗಿ ಕಾಡಿಗೆ ಬಂದಿರುತ್ತಾನೆ. ಆಗ ಸುದೀರ್ಘ ಬೇಟೆಯಾಡಿ ಬಳಲಿ ಬಸವಳಿದು ಪರಿವಾರ ಸಹಿತ ವಿಶ್ರಾಂತಿಗಾಗಿ ಜಮದಗ್ನಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾನೆ. ಪರಶುರಾಮರ ತಂದೆ – ತಾಯಿಯರಾದ ಜಮದಗ್ನಿ ರೇಣುಕಾದೇವಿ ಜೊತೆಯಾಗಿ ಬಂದಂತಹ ರಾಜ ಪರಿವಾರವನ್ನು ಸತ್ಕರಿಸಲು ಸಿದ್ದರಾಗುತ್ತಾರೆ. ಸ್ನಾನಾದಿ ಶೌಚ ಪೂರೈಸಿ ಬರುವಂತೆ ಅವರಲ್ಲಿ ವಿನಂತಿಸಿ ಕಳುಹಿಸುತ್ತಾರೆ. ಮರಳಿ ಬರುವಷ್ಟರಲ್ಲಿ ಬಹು ಭಕ್ಷ ಭೋಜ್ಯ ಸಹಿತ ಮೃಷ್ಟಾನ್ನ ಭೋಜನ ಸಿದ್ದವಾಗಿರುತ್ತದೆ. ಉಂಡು ತೇಗಿದ ಕಾರ್ತವೀರ್ಯಾರ್ಜುನ ಈ ವನ ಮಧ್ಯದಲ್ಲಿ, ಇಷ್ಟು ಸಹಸ್ರ ಸಂಖ್ಯೆಯಲ್ಲಿ ಬಂದ ಸೈನ್ಯಕ್ಕೆ ಭರಪೂರ ಷಡ್ರಸೋಪೇತ, ಅದ್ಬುತ ರುಚಿಯ ಬಗೆಬಗೆಯ ಖಾದ್ಯ, ಭಕ್ಷ, ಪೇಯ, ಸಹಿತ ಭೋಜನದ ಸಿದ್ಧತೆ ಕ್ಷಣಮಾತ್ರದಲ್ಲಿ ಹೇಗಾಯಿತು? ಎಂದು ಕುತೂಹಲಿಗನಾಗಿ ಕೇಳುತ್ತಾನೆ.

ಜಮದಗ್ನಿ ಮಹರ್ಷಿ ಸತ್ಯ ಸಂಗತಿಯನ್ನು ವಿವರಿಸಿ ಹೇಳುತ್ತಾರೆ. “ಅಯ್ಯಾ ಮಹಾರಾಜನೆ, ಯಾಗ ಕಾರ್ಯ ನಿಮಿತ್ತವಾಗಿ ಸಹಕಾರ ಕೇಳಲು ದೇವಲೋಕಕ್ಕೆ ನಾನು ಹೋಗಿದ್ದೆನು. ಆ ಸಮಯ ನಾನು ಬಯಸಿದ್ದ ಕಾಮಧೇನುವನ್ನು ಯಾಗ ಸಂಪನ್ನತೆಗಾಗಿ ಕೇಳಿ ನನ್ನ ಆಶ್ರಮಕ್ಕೆ ಕರೆ ತಂದಿದ್ದೆ. ಆ ದಿವ್ಯ ಧೇನುವಿನ ಅನುಗ್ರಹದಿಂದ ಬೇಡಿದ ಸಕಲವೂ ಪ್ರಾಪ್ತವಾಗುವ ಕಾರಣ ಸುಸಾಂಗವಾಗಿ ಲೋಕ ಕಲ್ಯಾಣಕರ ಮಹಾಯಾಗ ನೆರವೇರಿಸಿಕೊಂಡೆವು. ಇನ್ನೇನು ಸುರ ಧೇನುವನ್ನು ಮರಳಿ ಸ್ವರ್ಗಕ್ಕೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ನಿಮ್ಮ ಆಗಮನವಾಯಿತು. ಪರಿವಾರ ಸಹಿತನಾಗಿ ಬಂದ ನಿಮಗೆ ಸುಖ ಭೋಜನ ವ್ಯವಸ್ಥೆ ಮಾಡುವಲ್ಲಿ ಬೇಡಿದ್ದನ್ನು ನೀಡುವ ಧೇನು ಅನುಕೂಲವಾಯಿತು. ಇಂದಿನ ಸರ್ವ ಸಿದ್ಧತೆಯೂ ದೇವಲೋಕದ ಧೇನುವಿನ ಕೊಡುಗೆ” ಎಂದುತ್ತರಿಸುತ್ತಾರೆ. ಆ ಕೂಡಲೇ ಮಹಾರಾಜ ಕಾರ್ತವೀರ್ಯಾರ್ಜುನ “ಹೌದೇ? ಹಾಗಿದ್ದರೆ ನಿತ್ಯ ಪ್ರಜೆಗಳ ಆಶಯ ಪೂರೈಸಬೇಕಾದ ನನಗೆ ಧೇನುವನ್ನು ನೀಡಬೇಕು. ಇಂತಹ ಧೇನು ರಾಜನ ಅರಮನೆಯಲ್ಲಿ ಇದ್ದರೆ ಬಹುಪಯೋಗಿಯಾಗುವುದು. ಪ್ರತಿಯಾಗಿ ನಿಮಗೆ ಸಹಸ್ರ ಉತ್ತಮ ಧೇನುಗಳನ್ನು ನೀಡುತ್ತೇನೆ” ಎನ್ನುತ್ತಾನೆ ರಾಜ ಕಾರ್ತವೀರ್ಯ. ಆಗ ಜಮದಗ್ನಿ ಮಹರ್ಷಿ “ಅಯ್ಯಾ ಕಾರ್ತವೀರ್ಯ, ನಿಗದಿತ ಅವಧಿಗೆ – ಯಾಗ ಸಂಪನ್ನತೆಗೆ ಪೂರಕ ಸಹಾಯಕ್ಕಾಗಿ ದೇವಲೋಕದ ಧೇನುವನ್ನು ಎರವಲಾಗಿ ತಂದಿದ್ದೇನೆ. ದಿವ್ಯ ಧೇನುವಿನ ಮೇಲೆ ನನಗೆ ಅಧಿಕಾರವಿಲ್ಲ. ಕಾರ್ಯ ಕಾರಣದಿಂದ ತರಿಸಿಕೊಂಡಿದ್ದು, ಯಾಗ ಸಮಾಪ್ತಿಯಾದ ಕೂಡಲೆ ಮರಳಿ ಸ್ವರ್ಗ ಸೇರಿಸುವ ಜವಾಬ್ದಾರಿ ನನಗಿದೆ. ಹಾಗಾಗಿ ನಿನಗೆ ನೀಡುವುದು ಸರ್ವತಾ ಸಾಧ್ಯವಿಲ್ಲ” ಎಂದರು. ಋಷಿಯ ವಚನ ಕೇಳಿಸಿಕೊಂಡ ಕಾರ್ತವೀರ್ಯ ಉದ್ಧಟತನ ತೋರುತ್ತಾ, ನೇರ ಮಾತಿಗೆ ಒಪ್ಪುದಿದ್ದರೆ ಬಲಾತ್ಕಾರವಾಗಿ ಸೆಳೆದೊಯ್ಯಬೇಕಾಗುತ್ತದೆ ಎಂದು ಎಚ್ಚರಿಸಿ, ಧೇನುವನ್ನು ಅತಿಕ್ರಮಣದಿಂದ ತನ್ನ ಅಹಂಕಾರ ಪ್ರದರ್ಶಿಸಿ ಎಳೆದೊಯ್ಯಲು ಮುಂದಾಗುತ್ತಾನೆ. ಅಂತೆಯೆ ಆತ ನಡೆದುಕೊಳ್ಳುತ್ತಾನೆ‌. ಇದೇನು ವ್ಯತಿರಿಕ್ತ ವರ್ತನೆ? ಉಂಡ ಮನೆಗೆ ಕನ್ನ ಹಾಕುವ ಕೃತಿಯಾಯಿತಲ್ಲ ಎಂದು ಋಷಿವರ ಬೇಸರ ಹೊಂದುತ್ತಾರೆ.

ಪರಿಹಾರವೇನು ಎಂದು ಯೋಚಿಸಿದ ಜಮದಗ್ನಿ ಮಹರ್ಷಿ ತಪಸ್ಸಿಗಾಗಿ ತೆರಳಿದ್ದ ತನ್ನ ಸುಪುತ್ರ ಪರಶುರಾಮನನ್ನು ನೆನೆದು ಕರೆಸಿಕೊಳ್ಳುತ್ತಾರೆ. ತಂದೆಯ ಮೊರೆ ಆಲಿಸಿ ಪರಶುರಾಮರು ಧಾವಿಸಿ ಬರಿತ್ತಾರೆ. ಸಮಗ್ರ ಸಂಗತಿ ತಿಳಿದು “ಒಳ್ಳೆಯ ಮಾತಿನಿಂದ ಹೇಳುತ್ತೇನೆ. ಕೇಳದಿದ್ದರೆ ರಾಜನ ದೌಷ್ಟ್ಯಕ್ಕೆ ಆಯುಧ ಮುಖದಲ್ಲೆ ಉತ್ತರ ನೀಡುತ್ತೇನೆ” ಎಂದು ತಂದೆ ಜಮದಗ್ನಿ ಮಹರ್ಷಿಗೆ ಸಮಾಧಾನ ಹೇಳುತ್ತಾರೆ. ಅದರಂತೆಯೆ ಕಾರ್ತವೀರ್ಯನಿಗೆ ಸಾಕಷ್ಟು ತಿಳಿ ಹೇಳಿದರೂ ಕೇಳದಿದ್ದಾಗ ಯುದ್ಧಕ್ಕೆ ಸಿದ್ಧರಾಗಿ ಅವನನ್ನು ಸಂಹಾರ ಮಾಡಿ ಧೇನುವನ್ನು ಮರಳಿ ಆಶ್ರಮಕ್ಕೆ ತಂದೊಪ್ಪಿಸಿ ತಪೋಭೂಮಿಯತ್ತ ತೆರಳುತ್ತಾರೆ.

ಕಾರ್ತವೀರ್ಯನ ವಧೆಯಾದ ಸುದ್ದಿ ಕೇಳಿ ಆತನ ಮಕ್ಕಳು ಕ್ರುದ್ದರಾಗಿ ಪ್ರತಿಕಾರ ತೀರಿಸಲು ಆಶ್ರಮಕ್ಕೆ ಆಕ್ರಮಣ ಮಾಡಿ ಜಮದಗ್ನಿಯನ್ನು ಕೊಲೆಗೈಯುತ್ತಾರೆ.

ಈ ವೃತ್ತಾಂತದಿಂದ ಕೆಂಡಾಮಂಡಲರಾಗಿ ನಖ ಶಿಖಾಂತ ಉರಿಯತೊಡಗಿದ ಪರಶುರಾಮರು ಇಂತಹ ದುಷ್ಟ ಕ್ಷತ್ರಿಯರ ಕುಲವನ್ನು ಉಳಿಸಲಾರೆನೆಂದು ಹೊರಟು ಮೊದಲು ಕಾರ್ತವೀರ್ಯನ ಮಕ್ಕಳೆಲ್ಲರನ್ನು ನಾಶಗೈಯುತ್ತಾರೆ. ಮುಂದುವರಿದು ಲೋಕದಲ್ಲಿ ಇನ್ನೆಂದಿಗೂ ಕ್ಷತ್ರಿಯರಿಂದ ಇಂತಹ ದುಷ್ಟ ಪ್ರವೃತ್ತಿ ಪ್ರಕಟಗೊಳ್ಳಬಾರದು ಎಂದು ಇಪ್ಪತ್ತೊಂದು ಬಾರಿ ಭೂಮಂಡಲ ಪ್ರದಕ್ಷಿಣೆಗೈದು ಆರ್ಯಾವರ್ತದ ಕ್ಷತ್ರಿಯರನ್ನೆಲ್ಲಾ ಸಂಹರಿಸುತ್ತಾರೆ. ಆ ಬಳಿಕ ಗೆದ್ದ ಭೂಮಿಯನ್ನು ಕಶ್ಯಪರಿಗೆ ದಾನ ಮಾಡುತ್ತಾರೆ. ಆ ನಂತರ ಮಹೇಂದ್ರ ಪರ್ವತದಲ್ಲಿ ತಪೋ ನಿರತರಾಗುತ್ತಾರೆ.

ಹೀಗೆ ತಪೋ ಮಗ್ನರಾಗಿದ್ದ ಭಾರ್ಗವರಾಮತರು ಅಷ್ಟಮಿ ಹಾಗೂ ಚತುರ್ದಶಿ ತಿಥಿಯಂದು ತಪಸ್ಸಿನೆಂದೆದ್ದು ಬರುತ್ತಾರೆ ಎಂಬ ವಿಚಾರ ಧರ್ಮರಾಯನಿಗೆ ತಿಳಿಯಿತು. ಇನ್ನು ಚತುರ್ದಶಿಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಇಲ್ಲಿಯೆ ಧ್ಯಾನ ನಿರತರಾಗಿ ಕಾಲ ಕಳೆದು ಪರಶುರಾಮರ ದರ್ಶನ ಪಡೆದು ಮುಂದುವರಿಯೋಣ ಎಂದು ತೀರ್ಮಾನಿಸಿದರು. ಅಂತೆಯೆ ಚತುರ್ದಶಿಯ ದಿನ ಪಾಂಡವರಿಗೆ ಪರಶುರಾಮರ ದರುಶನ ಭಾಗ್ಯ ಪ್ರಾಪ್ತವಾಯಿತು. ಧರ್ಮರಾಯನನ್ನು ಉದ್ದೇಶಿಸಿ “ಯುಧಿಷ್ಠಿರಾ, ಶ್ರೀಹರಿಯ ಒಲುಮೆ ನಿಮಗಿದೆ. ಲೋಕ ಕಲ್ಯಾಣಾರ್ಥ ಮಹತ್ತರ ಕಾರ್ಯ ನಿಮ್ಮಿಂದ ಆಗಲಿಕ್ಕಿದೆ. ಶಿವ ಕಾರುಣ್ಯದ ಪ್ರಸಾದ ರೂಪದಲ್ಲಿ ಪಾಶುಪತಾಸ್ತ್ರ ಸಂಪಾದನೆ ಅರ್ಜುನನಿಗೆ ಆಗಿದೆ. ದೇವಲೋಕದಲ್ಲೂ ಸಾಧನೆಗೈದು ದಿವ್ಯಾಸ್ತ್ರಗಳು ಅರ್ಜುನ ಅಕ್ಷಯ ತೂಣಿರ ಸೇರಿ ಮತ್ತಷ್ಟು ಪ್ರಬಲನಾಗಿದ್ದಾನೆ. ಭಯ ಪಡಬೇಡಿ, ನಿಮಗೆ ಜಯವಾಗಲಿ – ಶುಭವಾಗಲಿ” ಎಂದು ಹರಸಿ ಪರಶುರಾಮರು ಅಂತರ್ಧಾನರಾದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page