24.1 C
Udupi
Thursday, March 19, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 211

ಭರತೇಶ್ ಶೆಟ್ಟಿ, ಎಕ್ಕಾರ್

ಹಿಂದೆ ಸೂರ್ಯವಂಶದ ಸಗರ ಚಕ್ರವರ್ತಿ ಅಶ್ವಮೇಧ ಯಾಗ ಕೈಗೊಂಡಿದ್ದನು. ಆದರೆ ದೇವರಾಜ ಇಂದ್ರನಿಗೆ ಸಗರನ ನಿರಂತರ ಯಾಗಗಳು ವ್ಯಥೆಗೆ ಕಾರಣವಾಯಿತೋ ಏನೊ! ಯಾಗ ಪೂರ್ಣಾಹುತಿ ಆಗದಂತೆ ತಡೆಯುವ ನಿರ್ಣಯ ಕೈಗೊಂಡನು. ಅದಕ್ಕಾಗಿ ಪೂಜಿಸಿ ಬಿಟ್ಟ ಕುದುರೆಯನ್ನು ಅಪಹರಿಸಿ ಪಾತಾಳ ಲೋಕದಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಬಿಟ್ಟನು. ಸಗರ ಭೂಲೋಕದ ಎಲ್ಲೆಡೆ ಹುಡುಕಿಸಿದರೂ ಸಿಗಲಿಲ್ಲ. ಸಗರನ ಪುತ್ರರು ಕುದುರೆಯನ್ನು ಹುಡುಕುವುದಕ್ಕಾಗಿ ಪಣ ತೊಟ್ಟು ಹೊರಟರು. ಎಲ್ಲೆಡೆ ಯಾಗಾಶ್ವಕ್ಕಾಗಿ ಶೋಧ ಕಾರ್ಯ ಮುಂದುವರಿಸುತ್ತಿದ್ದ ಅವರಿಗೆ ಭೂಗತವಾಗಿರುವ ಕುದುರೆಯ ಬಗ್ಗೆ ಸುಳಿವು ಸಿಕ್ಕಿತು. ಕಾರ್ಯೋನ್ಮುಖರಾದ ಅವರು ಸಮುದ್ರದಡಿಯಲ್ಲಿ ದಾರಿ ಮಾಡಿಕೊಂಡು ಪಾತಾಳಕ್ಕೆ ಬಂದು ಹುಡುಕಿದರು. ಕಪಿಲಾಶ್ರಮದ ಬಳಿ ಕುದುರೆ ಕಾಣ ಸಿಕ್ಕಿತು. ಕಪಿಲ ಮಹರ್ಷಿಗಳು ಯಾಗ ಕಂಟಕರಾಗಿ ಯಾಗದ ಕುದುರೆಯನ್ನು ಅಪಹರಿಸಿದ್ದಾರೆ ಎಂದು ಅವರು ತಪ್ಪಾಗಿ ಭಾವಿಸಿದರು. ವಿವೇಚಿಸದೆ ಕ್ರೋಧಾವೇಶಕ್ಕೊಳಗಾಗಿ, ಕಪಿಲ ಮಹರ್ಷಿ ಯ ಮೇಲೆ ದಂಡ ಪ್ರಯೋಗಿಸಿದರು. ತಪೋಭಂಗದಿಂದ ಕ್ರುದ್ಧರಾಗದ ಕಪಿಲ ಮಹರ್ಷಿಗಳು ಕಣ್ತೆರೆದಾಗ ಹೊರ ಹೊಮ್ಮಿದ ನೇತ್ರಾಗ್ನಿಯ ಜ್ವಾಲೆಗೆ ಸಗರಪುತ್ರರೆಲ್ಲಾ ದಗ್ಧರಾಗಿ ಹೋದರು. ಪರಿಣಾಮ ಅವರ ಭಸ್ಮ ರಾಶಿಯಾಗಿ ಬಿದ್ದಿತು. ಇಲ್ಲಿಗೆ ಕುದುರೆಯಾಗಲಿ ಹುಡುಕಲು ಹೋದವರ ಗತಿಯಾಗಲಿ ಮತ್ತೆ ನಿಗೂಢವಾಯಿತು. ಆ ಬಳಿಕ ನಡೆದು ಹೋದ ವೃತ್ತಾಂತ ತಿಳಿಯಿತು.

ಮುಂದೆ ಇದೇ ವಂಶದಲ್ಲಿ ಹುಟ್ಟಿದ ಭಗೀರಥನೆಂಬವನು ಅಮರಗಂಗೆಯನ್ನು ತನ್ನ ತಪಸ್ಸಿನ ಮೂಲಕ ಮೆಚ್ಚಿಸಿ ಅವಳು ಭೂಲೋಕಕ್ಕೆ ಬಂದು ಪಾತಾಳವನ್ನು ಸೇರಿ ದಗ್ಧರಾಗಿ ಹೋಗಿರುವ ತನ್ನ ಪಿತೃಗಳ ಭಸ್ಮರಾಶಿಯ ಮೇಲೆ ಹರಿದು ಅವರಿಗೆ ಸದ್ಗತಿಯನ್ನು ಕರುಣಿಸಬೇಕೆಂದು ಬೇಡಿಕೊಂಡನು. ಭಕ್ತನ ಅಪೇಕ್ಷೆಗೆ ಸಮ್ಮತಿಸಿದಳು ಗಂಗೆ. ಭಗೀರಥ ಮಹಾದೇವ ಶಿವನ ತಪಸ್ಸನ್ನಾಚರಿಸಿ ಒಲಿಸಿಕೊಂಡು ಸ್ವರ್ಗದಿಂದ ಭೂಲೋಕಕ್ಕೆ ಧುಮುಕುವ ಗಂಗೆಯ ರಭಸವನ್ನು ತಡೆಯಲು ದಾರಿ ತೋರಬೇಕೆಂದು ಪ್ರಾರ್ಥಿಸಿದನು. ಭಗೀರಥನ ಪ್ರಾರ್ಥನೆಯಂತೆ ಸುರಲೋಕದಿಂದ ಧುಮ್ಮಿಕ್ಕುವ ಗಂಗೆಯನ್ನು ತನ್ನ ಶಿಖೆಯಲ್ಲಿ ಆಧರಿಸಿ ಧರಿಸಿ ಗಂಗಾಧರನಾಗಿ ಧಾರಘಾತವನ್ನು ತಡೆಹಿಡಿದನು. ಭಗೀರಥ ಮತ್ತೆ ಪರಶಿವನನ್ನು ಸಂಪ್ರಾರ್ಥಿಸಿದಾಗ, ಸುಪ್ರೀತನಾದ ಪರಮೇಶ್ವರ ಏಳು ಹನಿ ನೀರು ಅನುಗಾಲವೂ ತನ್ನ ಶಿಖೆಯಿಂದ ತೊಟ್ಟಿಕ್ಕಿ ಹರಿಯುತ್ತಿರುವಂತೆ ಹೊರಬಿಟ್ಟನು. ಹೀಗೆ ಹನಿ ಹನಿಗಳಾಗಿ ಭುವಿಗೆ ಬಿದ್ದಾಗ ಉಂಟಾದ ಸರೋವರವೇ ‘ಬಿಂದು ಸರೋವರ’. ಅಲ್ಲಿಂದ ಮುಂದೆ ಹರಿದು ನದಿಗಳಾದವು. ಅವುಗಳಲ್ಲಿ ಮುಖ್ಯವಾದುದು ಗಂಗೆ. ಭಗೀರಥನು ಕೈ ಮುಗಿದು ದಾರಿ ತೋರುತ್ತಾ ಮುಂದೆ ಸಾಗಿದಂತೆ ಗಂಗೆಯೂ ಹರಿದು ಬಂದಳು. ಹೀಗೆ ಬರುತ್ತಿರುವಾಗ ಪಥ ಮಧ್ಯದಲ್ಲಿ ಜನ್ಹು ಮಹರ್ಷಿಗಳ ಆಶ್ರಮ ನದಿಯ ರಭಸಕ್ಕೆ ಕೊಚ್ಚಿಹೋಯಿತು. ಕುಪಿತರಾದ ಮುನಿವರ ಗಂಗೆಯ ಗಮನವನ್ನು ಅಂದರೆ ಹರಿಯುವಿಕೆಯನ್ನು ನಿರ್ಬಂಧಿಸಿದರು. ಭಗೀರಥ ಬಹುವಾಗಿ ಪ್ರಾರ್ಥಿಸಿ ಒಲಿಸಿಕೊಂಡಾಗ ತನ್ನ ತೊಡೆ ಸೋಕಿನಿಂದ ಹರಿದು ಹೋಗಲು ದಾರಿ ಬಿಟ್ಟು ಕೊಟ್ಟರು. ಅಲ್ಲಿಂದ ಹರಿಯುತ್ತಾ ಸಾಗಿದ ಗಂಗೆಗೆ ಜಾಹ್ನವಿ ಎಂಬ ಹೆಸರಾಯಿತು. ಅಗಸ್ತ್ಯರು ಮೊದಲು ಯಾವ ಸಮುದ್ರವನ್ನು ಕುಡಿದು ಬತ್ತಿಸಿದ್ದರೋ, ಸಗರ ಪುತ್ರರು ಸಮುದ್ರ ತಳದಿಂದ ಪಾತಾಳಕ್ಕೆ ದಾರಿ ಮಾಡಿ ಹೋಗಿದ್ದರೋ.. ಆ ದಾರಿಯಾಗಿ ಹರಿದು ಪಾತಾಳ ಸೇರಿದಳು. ಸಗರ ಪುತ್ರರ ಚಿತಾಭಸ್ಮದ ರಾಶಿಯನ್ನು ತೊಳೆದು ಅವರ ಸದ್ಗತಿಗೆ ಕಾರಣಳಾದಳು. ಹೀಗೆ ಹರಿದು ಗಂಗಾಜಲದಿಂದ ತುಂಬಿಕೊಂಡು ಮೊದಲಿನಂತೆಯೇ ಸಮುದ್ರವಾಯಿತು. ಅದಕ್ಕೆ ‘ಗಂಗಾ ಸಾಗರ’ ವೆಂದು ಹೆಸರಾಯಿತು. ಭಗೀರಥನ ಶ್ರಮದಿಂದ ಹರಿದು ಬಂದ ಗಂಗಾಮಾತೆಗೆ ‘ಭಾಗೀರಥಿ’ ಎಂಬ ಹೆಸರೂ ಉಂಟಾಯಿತು. ಅಗಸ್ತ್ಯರ ಸಾಹಸದಂತೆ ಭಗೀರಥನ ಪ್ರಯತ್ನವೂ ಪ್ರಸಿದ್ಧವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page