26.8 C
Udupi
Tuesday, March 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 202

ಭರತೇಶ್ ಶೆಟ್ಟಿ,ಎಕ್ಕಾರ್

ಹೀಗೆ ಅರ್ಜುನನಿಲ್ಲದೆ ಪಾಂಡವರ ಪರಿವಾರ ಕೊರಗುತ್ತಾ ಕುಳಿತಿದ್ದಾರೆ. ಧರ್ಮರಾಯ ಬಹಿರಂಗವಾಗಿ ತೋರಗೊಡದೆ ತನ್ನವರಿಗೆ ಧೈರ್ಯದ ನುಡಿಗಳಿಂದ ಭಯಮುಕ್ತಗೊಳಿಸುವ ಪ್ರಯತ್ನನಿರತನಾಗಿದ್ದಾನೆ. ಅಂತಹ ಸಂದರ್ಭ ಅಲ್ಲಿಗೆ ‘ಬೃಹದಶ್ವ’ ಮಹರ್ಷಿಗಳ ಆಗಮನವಾಗುತ್ತದೆ. ಯಥೋಚಿತ ಸತ್ಕಾರ ಮಾಡಿ ದರ್ಬಾಸನದಲ್ಲಿ ಕುಳ್ಳಿರಿಸಿ ಸೇವೆ ಮಾಡಿದರು. ಮಹರ್ಷಿಗಳು ಧರ್ಮರಾಯನಲ್ಲಿ ಕುಶಲೋಪರಿ ವಿಚಾರಿಸಿದಾಗ, ” ಮಹಿಮಾನ್ವಿತರೇ ಯಾಕೋ ಏನೋ ಒಂದು ರೀತಿಯ ಜಿಗುಪ್ಸೆ ನನ್ನ ಮೇಲೆ ನನಗೆ ಮೂಡುತ್ತಿದೆ. ನನ್ನ ಒಬ್ಬನ ಬೇಜಾವಾಬ್ದಾರಿಯ ನಡೆಯಾಗಿ ದ್ಯೂತವಾಡಿದೆ. ಸರ್ವಸ್ವವನ್ನೂ ಕಳೆದುಕೊಂಡು ಕಾಡಾಡಿಗಳಾಗಿದ್ದೇವೆ. ನನ್ನ ಸೋದರರು, ದ್ರೌಪದಿಯೂ ಈ ಸಂಕಷ್ಟದ ಜೀವನ ಬದುಕುವಂತಾಗಲು ನಾನೇ ಕಾರಣನಾಗಿ ವ್ಯಥೆಗೊಳಗಾಗಿದ್ದೇನೆ ” ಎಂದನು.

ಧರ್ಮರಾಯನ ಅಂತರಂಗದ ವೇದನೆ ಅರಿತು ಬೃಹದಶ್ವರು ಸಮಾಧಾನ ಹೇಳತೊಡಗಿದರು “ಹೇ ಚಕ್ರವರ್ತಿಯೇ, ಸಜ್ಜನರಿಗೆ ಕಷ್ಟಗಳು ಬಂದಾಗಲೇ ಸ್ಪುಟಕ್ಕಿಟ್ಟ ಚಿನ್ನದಂತೆ ಅಪರಂಜಿಯಾಗುವುದು. ನಿನ್ನ ಬದುಕಿಗೆ ಇದಿರಾದ ಸಂಕಷ್ಟವನ್ನು ಸಂತೋಷದಿಂದ ಅನುಭವಿಸು. ವ್ಯಾಕುಲ ಚಿತ್ತನಾಗಿ ಸಮಯ ವ್ಯರ್ಥವಾಗದಿರಲಿ. ನಿನ್ನ ಮನವನ್ನಾವರಿಸಿರುವುದು ಪಾಪ ಪ್ರಜ್ಞೆ. ಅದು ಖಂಡಿತಾ ಸಾಧುವಲ್ಲ. ಈ ಹಿಂದೆಯೂ ಓರ್ವ ಸಮರ್ಥ ಚಕ್ರವರ್ತಿ ದ್ಯೂತವಾಡಿ ನಿಮ್ಮಂತೆಯೇ ಸರ್ವ ಸಂಪತ್ತು ಕಳಕೊಂಡು ವನವಾಸಿಯಾಗಿದ್ದನು. ನಿಮಗಿಂತಲೂ ಭಯಾನಕವೂ, ಕಷ್ಟಕರವೂ ಆದ ದಿನಗಳನ್ನು ಕಳೆಯುವಂತಾಗಿತ್ತು. ನಿಮ್ಮ ಪರಾಮರ್ಷೆ ಮತ್ತು ಧೈರ್ಯಕ್ಕಾಗಿ ಆ ಕಥೆಯನ್ನು ಹೇಳುತ್ತೇನೆ. ಪೂರ್ತಿ ಕೇಳಿದರೆ ನಿನ್ನ ಮನಸ್ಸಿಗೆ ಹಿತವಾಗಬಹುದು” ಎಂದು ನಳ ಚಕ್ರವರ್ತಿಯ ಕಥೆಯನ್ನು ಎಲ್ಲರಿಗೂ ಕೇಳಿಸುವಂತೆ ಹೇಳತೊಡಗಿದರು.

ಹಿಂದೆ ನಿಷಧ ದೇಶದ ಅಧಿಕಾರಿ ನಳ ಚಕ್ರವರ್ತಿ ಪರಮ ಧರ್ಮಿಷ್ಟನೂ, ವಿಕ್ರಮಿಯೂ, ಜನಾನುರಾಗಿ, ನ್ಯಾಯ ಮಾರ್ಗಿಯೂ ಆಗಿ ಪ್ರಜಾ ಸಂರಕ್ಷಣೆ ಮಾಡುತ್ತಿದ್ದನು. ಅವನ ಪತ್ನಿ ವಿದರ್ಭ ದೇಶದ ಭೀಷ್ಮಕನ ಮಗಳು ದಮಯಂತಿ. ಇವರಿಗೆ ಇಬ್ಬರು ಮಕ್ಕಳು – ಒಂದು ಗಂಡು, ಇನ್ನೊಂದು ಹೆಣ್ಣು. ಇಂತಹ ಸುಖ ಸಂಸಾರಿಯಾದ ನಳ ಚಕ್ರವರ್ತಿ ದಾಯಾದಿಯಾದ ಪುಷ್ಕರನ ಆಹ್ವಾನ ಸ್ವೀಕರಿಸಿ ದ್ಯೂತವನ್ನು ಆಡಿದ್ದನು. ಪರಿಣಾಮ ಸಮಸ್ತವನ್ನೂ ಕಳಕೊಂಡು ಪೂರ್ವ ನಿರ್ಣಯದಂತೆ ವನವಾಸಕ್ಕೆ ಹೊರಟು ನಿಲ್ಲಬೇಕಾಯಿತು. ದೇಶ, ಕೋಶವೆಲ್ಲವೂ ಪುಷ್ಕರನ ವಶವಾಯಿತು. ದಮಯಂತಿ ಜಾಣೆ – ಮಕ್ಕಳಿಗೆ ತೊಂದರೆ ಆಗಬಾರದೆಂದು ತರ್ಕಿಸಿ, ತನ್ನ ಆಪ್ತರ ಜತೆಸೇರಿಸಿ ವಿದರ್ಭ ದೇಶದಲ್ಲಿರುವ ಹೆತ್ತವರ ಬಳಿ ಕಳುಹಿಸಿಕೊಟ್ಟು ಗಂಡನನ್ನು ಅನುಸರಿಸಿ ಹೊರಟಳು. ನಳ ಚಕ್ರವರ್ತಿ ತನ್ನ ಪತ್ನಿ ದಮಯಂತಿಯ ಜೊತೆ ಸಮಾಲೋಚಿಸಿ ನೀನೂ ವಿದರ್ಭಕ್ಕೆ ಹೋಗಿ ಮಕ್ಕಳ ಜೊತೆಯಿರು. ನನ್ನೊಡನೆ ಬಂದರೆ ಕಷ್ಟವಾದೀತೆಂದು ಎಷ್ಟು ಪರಿ ಪರಿಯಾಗಿ ಹೇಳಿದರೂ- ಬೇಡಿದರೂ ಕೇಳಲೊಪ್ಪದೆ ‘ ಸಹಧರ್ಮಿಣಿಯಾಗಿ ಪತಿಯ ಕಷ್ಟದಲ್ಲೂ ಜೊತೆಗಿರಬೇಕಾದದ್ದೇ ಧರ್ಮ ‘ ಎಂದುತ್ತರಿಸಿ ಧರ್ಮದ ನೆಲೆಯಿಂದ ನಳ ಚಕ್ರವರ್ತಿಯ ಬಾಯಿ ಮುಚ್ಚಿಸಿ ಹಿಂಬಾಲಿಸಿ ಬಂದಳು.

ಹೀಗೆ ಕಾಡಾಡಿಗಳಾಗಿ ಅಲೆಯುತ್ತಾ ಸಾಗಿದ ನಳ ಚಕ್ರವರ್ತಿ – ದಮಯಂತಿ ಸುಡು ಬಿಸಿಲ ಬೇಗೆಯ ಉಪಶಮನಕ್ಕಾಗಿ ವನಮಧ್ಯೆ ಹರಿಯುತ್ತಿದ್ದ ಪಯೋಷ್ಣಿ ನದಿ ಯಲ್ಲಿ ಶುಚಿರ್ಭೂತರಾದರು. ಚಕ್ರವರ್ತಿ ಸ್ನಾನಕ್ಕಿಂತ ಮೊದಲು ತನ್ನ ಉಡುಪುಗಳನ್ನು ಒಗೆದು ಒಣಗಲು ನದಿ ತಡಿಯ ಮರಳ ಮೇಲೆ ಹಾಸಿದ್ದನು. ಮಿಂದು ಬಂದು ನೋಡಿದರೆ ಈತನ ಉಡುಪುಗಳನ್ನು ಅದ್ಯಾವುದೊ ಹಕ್ಕಿಗಳು ಹೆಕ್ಕಿ ಹೊತ್ತೊಯ್ದು ಹಾರಿ ಹೋಗಿದ್ದವು. ಇನ್ನೇನು ಗತಿ ಎಂದು ಯೋಚಿಸುವಾಗ ದಮಯಂತಿ ತನ್ನ ಸೀರೆಯ ಸೆರಗನ್ನು ಮಾನ ಮುಚ್ಚಬಲ್ಲಷ್ಟು ನೀಡಿದಳು. ಹಾಗೇ ಸುತ್ತಿಕೊಂಡು ಮೇಲೆ ಬಂದಾಗ ಪಾಳು ಬಿದ್ದ ಕಲ್ಲಿನ ಕಟ್ಟೆಯೊಂದು ಕಾಣಿಸಿತು. ವಿಶ್ರಾಂತಿಗಾಗಿ ಒತ್ತಟ್ಟಾಗಿ ಸತಿ ಪತಿಗಳಿಬ್ಬರು ಅಂಟಿಕೊಂಡಂತೆ ಕುಳಿತಿದ್ದರು. ದಣಿದು ಬಸವಳಿದಿದ್ದ ಕೋಮಲೆ ದಮಯಂತಿಗೆ ಹಾಗೆ ಕುಳಿತಲ್ಲೆ ನಿದ್ದೆ ಹತ್ತಿತು. ನಳ ಭೂಪತಿ ಕುಳಿತು ಯೋಚನಾ ಮಗ್ನನಾಗಿದ್ದವನು ತಿರುಗಿ ನೋಡಿದರೆ ದಮಯಂತಿ ನಿದ್ರಾವಶಳಾಗಿದ್ದಾಳೆ. ಒಂದೇ ಸೀರೆಯನ್ನು ಸುತ್ತಿಕೊಂಡು ಅವರಿಬ್ಬರು ಕುಳಿತಿದ್ದರು. ಈಗ ನಳ ಚಕ್ರವರ್ತಿ ತನಗೆ ಬೇಕಾದಷ್ಟು ಸೀರೆಯನ್ನು ಸಾವಧಾನವಾಗಿ ಹರಿದು ಸ್ವತಂತ್ರನಾಗಿ ನಿಂತನು. ಮಡದಿ ದಮಯಂತಿಯನ್ನು ಇನ್ನೂ ನನ್ನ ಜೊತೆ ಕರೆದೊಯ್ದರೆ ಈಕೆ ಪಡಬಾರದ ಕಷ್ಟ ಸಹಿಸಿಕೊಳ್ಳಬೇಕಾಗಿ ಬರಬಹುದು. ಈ ಕ್ಷಣಕ್ಕೆ ನಾನು ಮಾಡ ಹೊರಟಿರುವುದು ಮಹಾಪರಾಧವೆ ಆದರೂ, ಆಕೆಗೆ ದುಃಖ ಒದಗಿ ಬಂದರೂ, ಹುಡುಕಲಾದಷ್ಟು ಹುಡುಕುವ ಪ್ರಯತ್ನ ಮಾಡಿ, ಮಕ್ಕಳ ನೆನಪಾದಾಗ ವಿದರ್ಭಕ್ಕೆ ಹೋಗಿ ತಂದೆ ತಾಯಿಯ ಜೊತೆ ರಕ್ಷಣೆ ಪಡೆದುಕೊಂಡಾಳು. ಹಾಗೆಂದು ಆಪತ್ತು ಎದುರಾದರೆ ಸ್ವರಕ್ಷಣೆಗಾಗಿ ಕ್ಷಾತ್ರ ವಿದ್ಯಾಪಾರಂಗತೆಯಾದ ಈಕೆ ಹೋರಾಡ ಬಲ್ಲಷ್ಟು ಸಾಮರ್ಥ್ಯ ಹೊಂದಿದ್ದಾಳೆ. ಧರ್ಮಚಾರಿಣಿಯೂ, ಪತಿವ್ರತೆಯೂ ಆಗಿರುವ ಈಕೆಗೆ ದೈವಬಲವೂ ಶ್ರೀರಕ್ಷೆಯಾಗಿ ಒದಗೀತು. ಹೀಗೆಲ್ಲ ಮಡದಿಯ ಕುರಿತಾಗಿ ತರ್ಕಿಸಿದನು. ಬಳಿಕ ಭಗವಂತನನ್ನು ಮನಸಾರೆ ಪ್ರಾರ್ಥಿಸಿ ಪತ್ನಿ ಸುಕ್ಷೇಮವಾಗಿ ಬದುಕುವ ದಾರಿ ತೋರಿ ಪೊರೆಯಲು ಬೇಡಿಕೊಂಡನು. ನಂತರ ತಾನಿಲ್ಲಿ‌ನಿಲ್ಲದೆ ಇವಳನ್ನು ತೊರೆದು ಹೋಗುವುದು ಉಚಿತ. ಹಾಗೆ ಮಾಡದಿದ್ದರೆ ದೀರ್ಘಕಾಲದ ವನವಾಸ ಈಕೆಗೂ ಶಿಕ್ಷೆಯಾಗುತ್ತದೆ ಎಂದು ತೀರ್ಮಾನಿಸಿ ದೃಢ ನಿರ್ಧಾರ ತಳೆದನು. ಅದಂತೆ ಆಕೆಯನ್ನು ಅಲ್ಲಿಯೆ ಬಿಟ್ಟು ತಾನೊಬ್ಬನೇ ಎದ್ದು ಹೊರಟು ಹೋದನು.

ಗಾಢ ನಿದ್ರೆಯಿಂದ ಎಚ್ಚರವಾಗಿ ನೋಡಿದರೆ, ತನ್ನ ಸೀರೆಯ ಸೆರಗು ಹರಿದು ತುಂಡಾಗಿದೆ. ಅದನ್ನು ಸುತ್ತಿಕೊಂಡಿದ್ದ ಪತಿಯಿಲ್ಲ. ಉದ್ದೇಶಪೂರ್ವಕವಾಗಿ ತೊರೆದು ಹೋದರೆ? ಅಯ್ಯೋ ಅವರಿಗೇನಾದರೂ ಅಪಾಯ ಒದಗಿತೆ? ಎಂಬ ಭಯ ದಮಯಂತಿಯ ಮನದಲ್ಲಿ ಆತಂಕ ಮೂಡಿಸಿತು. ತನ್ನ ಸಂಕಷ್ಟದ ಸ್ಥಿತಿಯ ದುಃಖಕ್ಕಿಂತಲೂ ಪತಿಗೇನಾದರು ಆದರೆ ಎಂಬ ವ್ಯಥೆ! ಇದು ತಾನೆ ನಿಜವಾದ ಪಾತಿವೃತ್ಯ. “ಎಲ್ಲಿದ್ದೀರೀ…” ಎಂದು ತನಗಾಗುವಷ್ಟು ಏರು ಸ್ವರದಲ್ಲಿ ಕೂಗಿ ಕರೆಯುತ್ತಾ ಕಾಡೆಲ್ಲಾ ಓಡಾಡಿದಳು. ದಣಿದಳು, ಸೋತಳು, ಬಸವಳಿದಳು. “ಅಯ್ಯೋ ಇನ್ನು ನನ್ನಿಂದಾಗದು” ಎಂದು ಏದುಸಿರು ಬಿಡುತ್ತಾ ಹೆಜ್ಜೆ ಹಾಕುವಾಗ, ಕಾಡ ಕಿರಾತನೊಬ್ಬ ಎದುರಾದನು. ಮುಸ್ಸಂಜೆಯಾಗುವ ಹೊತ್ತು ಸೂರ್ಯ ಪಡುವಣದತ್ತ ವಾಲಿದ್ದಾನೆ. ಇಲ್ಲಿ ಕಿರಾತ ದಮಯಂತಿಯನ್ನು ಕಂಡು ಅವಳ ರೂಪ ಲಾವಣ್ಯಕ್ಕೆ ಮರುಳಾಗಿ ಹೋಗಿದ್ದಾನೆ. ಅವನೊಳಗಿನ ಕಾಮತೃಷೆ ಪುಟಿದೇಳುತ್ತಿದೆ. ಮುಂದಡಿಯಿಟ್ಟು ಸನಿಹ ಬರುತ್ತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page