31.8 C
Udupi
Saturday, April 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -196

ಭರತೇಶ್ ಶೆಟ್ಟಿ ,ಎಕ್ಕಾರ್

ಅದ್ದೂರಿ ಸ್ವಾಗತದೊಂದಿಗೆ ಸುಧರ್ಮ ಸಭೆಯ ರಾಜಸ್ಥಾನ ಪ್ರವೇಶಿಸಿದನು ಅರ್ಜುನ. ವೈಭವದ ಓಲಗ, ಸಿಂಹಾಸನಾರೂಢನಾಗಿ ಶೋಭಿಸುತ್ತಿದ್ದಾನೆ ದೇವರಾಜ ಇಂದ್ರ. ದೇವೇಂದ್ರನನ್ನು ಕಂಡೊಡನೆ ಪಾರ್ಥ ಪ್ರಣಾಮಗಳನ್ನು ಸಲ್ಲಿಸಿದನು. ವಿಶೇಷ ಮರ್ಯಾದೆಯಾಗಿ ದೇವೇಂದ್ರನು ಸಿಂಹಾಸನದಿಂದೆದ್ದು ಇಳಿದು ಬಂದು ಅರ್ಜುನನಿಗೆ ಪ್ರೇಮಾಲಿಂಗನವಿತ್ತನು. ಪಾಶುಪತಾಸ್ತ್ರ ಸಂಪಾದನೆಯ ವೈಶಿಷ್ಟ್ಯ ಗಳನ್ನು ಕೇಳಿ ತಿಳಿದು ಪರಮಾನಂದಗೊಂಡನು. ಸುತನ ಸಾಧನೆಗೆ ಹೆಮ್ಮೆಯೆಣಿಸಿ, ಕರೆದೊಯ್ದು ಸ್ವರ್ಗ ಸಿಂಹಾಸನದಲ್ಲಿ ತನ್ನ ಒತ್ತಿನಲ್ಲಿ ಕುಳ್ಳಿರಿಸಿದನು.

ದೇವೇಂದ್ರನ ಜೊತೆಯಾಗಿ ಕುಳಿತ ಅರ್ಜುನನ ಮನದಲ್ಲಿ ಅಮಿತಾನಂದವಾಗುತ್ತಿದೆ. ಮತ್ತೆ ಮತ್ತೆ ಶಿವಾನುಗ್ರಹದ ಮಹಾತ್ಮೆಯನ್ನು ನೆನೆದು ಪುಳಕಿತನಾಗುತ್ತಲೆ ಇದ್ದಾನೆ. ಇದು ಕನಸೋ ನಿಜವೋ? ಸಶರೀರಿಯಾಗಿ ಸ್ವರ್ಗ ಪ್ರವೇಶ, ಅದೂ ದೇವೇಂದ್ರನ ಸಿಂಹಾಸನದಲ್ಲಿ ಕುಳಿತಿರುವುದು. ಶತ ಮಹಾಯಾಗಗಳನ್ನು ಮಾಡಿ ಅದ್ವಿತೀಯ ಪುಣ್ಯ ಸಂಪಾದನೆ ಮಾಡಿದವರಿಗೆ ಸುಲಭ ಸಾಧ್ಯವಾಗದ ಈ ಯೋಗ ನನಗೆ ಒದಗಿ ಬಂದಿದೆಯೆಂದರೆ ಇದು ದೈವಾನುಗ್ರಹ ಅಲ್ಲದೆ ಮತ್ತಿನ್ನೇನೂ ಅಲ್ಲ. ಹೀಗೆ ಮನದಲ್ಲಿ ತರ್ಕಿಸುತ್ತಿರುವಾಗಲೆ ಅರ್ಜುನನಿಗೆ ಮುದ ನೀಡಲು ದೇವಲೋಕದ ಅಪ್ಸರಾಂಗನೆಯರ ವಿಶೇಷ ನೃತ್ಯ ಆರಂಭಗೊಂಡಿತು.

ರಂಭೆ, ಊರ್ವಶಿ, ತಿಲೋತ್ತಮೆ, ಘೃತಾಚಿ, ಮಂಜುಘೋಷೆ ಮೊದಲಾದ ಅಪ್ಸರೆಯರು ಮನೋಹರವಾಗಿ ನರ್ತಿಸಲು ಆರಂಭಿಸಿದರು. ಒಬ್ಬರನ್ನು ಮೀರಿಸುವ ಚೆಲುವು ಇನ್ನೊಬ್ಬರದ್ದು. ಅತಿ ಚೆಲುವೆಯರ ವೈಯಾರ ಶೃಂಗಾರದ ನೃತ್ಯಕ್ಕೆ ಗಂಧರ್ವರ ವಾದನ ಗಾಯನ ಮೇಳದಲ್ಲಿ ನೃತ್ಯ ವಿಶೇಷ ಮೆರುಗು ಪಡೆದಿದೆ.

ಅರ್ಜುನನಿಗೇಕೊ ಊರ್ವಶಿಯ ಸ್ಪಷ್ಟ ಚಲನೆ, ಆಂಗಿಕ ಭಾವ, ನಾಟ್ಯ ಶುದ್ದತೆ ಮನಸ್ಸಿಗೆ ಮುದ ನೀಡಿದ ಕಾರಣ ಆಕೆಯನ್ನು ಏಕಾಗ್ರಚಿತ್ತದಿಂದ ಕಲಾರಾಧಕನಾಗಿ ನೋಡ ತೊಡಗಿದನು. ಅರ್ಜುನನೂ ನಾಟ್ಯ ಶಾಸ್ತ್ರ ಪ್ರವೀಣ. ಕಲಿತದ್ದನ್ನು ಪ್ರತ್ಯಕ್ಷವಾಗಿ ಕಾಣುತ್ತಾ ಮೈಮರೆತಿದ್ದಾನೆ. ಊರ್ವಶಿಗೂ ಅರ್ಜುನ ತನ್ನನ್ನು ನೋಡುತ್ತಿದ್ದಾನೆ ಎಂದಾಗ ಹುಮ್ಮಸ್ಸು ಇಮ್ಮಡಿಯಾಯಿತು. ಅದ್ಬುತ ಕೌಶಲ್ಯ ಒಣಪು ವಯ್ಯಾರ, ಹೆಜ್ಜೆ ಗೆಜ್ಜೆಗಳ ಸಮ್ಮಿಲನ, ವೇಗ ಓಘದ ಚುರುಕು, ಭಾವಾಭಿವ್ಯಕ್ತಿ ಪ್ರಕಟಿಸುತ್ತಾ ಎಲ್ಲವೂ ಅರ್ಜುನನಿಗೆ ಮೆಚ್ಚುಗೆಯಾಗುತ್ತಿದೆ ಎಂದು ಮತ್ತಷ್ಟು ಸೊಬಗಿನಿಂದ ನರ್ತಿಸುತ್ತಿದ್ದಾಳೆ. ಬಹುಹೊತ್ತು ನಿರಂತರವಾಗಿ ಸಾಗಿದ ಕಾರ್ಯಕ್ರಮ ಮುಕ್ತಾಯವಾಯಿತು. ದೇವೇಂದ್ರ ಸಾಮಾನ್ಯನೆ? ಆತ ಸಹಸ್ರಾಕ್ಷನೂ ಹೌದು. ಅರ್ಜುನ ಊರ್ವಶಿಯನ್ನು ನೋಡಿ ಆನಂದಿಸುತ್ತಿರುವುದನ್ನೂ, ಅತ್ತಲಿಂದ ಊರ್ವಶಿಯೂ ಪ್ರತಿಸ್ಪಂದನೆ ನೀಡುವುದನ್ನು ನೋಡಿ ತನ್ನಷ್ಟಕ್ಕೆ ತರ್ಕಿಸಿದ್ದು ಏನೆಂದರೆ ‘ಪಾರ್ಥನಿಗೆ ಊರ್ವಶಿ ಇಷ್ಟವಾಗಿದ್ದಾಳೆ’.

ಇದಾದ ಬಳಿಕ ದೇವೇಂದ್ರ ಸಂಗೀತವಾದಕ ಗಂಧರ್ವ ಚಿತ್ರಸೇನನನ್ನು ಕರೆದು “ಊರ್ವಶಿಯ ಬಳಿ ಹೋಗಿ, ಇಂದು ಅತಿಥಿಯಾಗಿ ಅರ್ಜುನ ಭವನಕ್ಕೆ ಹೋಗಬೇಕು. ಆತನನ್ನು ಉಪಚರಿಸುವುದಕ್ಕೆ ಸಿದ್ಧಳಾಗಿರುವಂತೆ ನಾನು ಹೇಳಿರುವೆ” ಎಂಬುವುದಾಗಿ ತಿಳಿಸುವಂತೆ ಆಜ್ಞಾಪಿಸಿದನು.

ಸುದ್ದಿ ತಿಳಿದು ಊರ್ವಶಿಗೆ ರೋಮಾಂಚನವಾಯಿತು. ಅರ್ಜುನೇನು ಸಾಮಾನ್ಯನೇ? ಮಾನವನಾದರೂ ದೇವಲೋಕಕ್ಕೆ ಬಂದು ಇಂದ್ರ ಪೀಠದಲ್ಲಿ ಕುಳಿತುಕೊಳ್ಳುವಷ್ಟು ಯೋಗ್ಯತೆ ಪಡೆದಿರುವನೆಂದತರೆ ಅಸಾಮಾನ್ಯ ವ್ಯಕ್ತಿತ್ವ ಆತನದ್ದು ಎನ್ನುವುದು ನಿಜ. ಅಂತಹ ದಿವ್ಯ ತೇಜಸ್ವಿಯ ಸೇವೆಯ ಅವಕಾಶ ಒದಗಿದುದಕ್ಕೆ ತಾನೇ ಭಾಗ್ಯವಂತೆ ಎಂದು ಸಂಭ್ರಮಿಸಿದಳು. ತಡಮಾಡದೆ ಶೃಂಗರಿಸಿಕೊಳ್ಳುವ ತಯಾರಿಯಲ್ಲಿ ತೊಡಗಿದಳು.

ಮುಂದುವರಿಯುವುದು …

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page