24.4 C
Udupi
Thursday, March 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 195

ಭರತೇಶ್ ಶೆಟ್ಟಿ ಎಕ್ಕಾರ್

ಅರ್ಜುನ ಒಂದೊಮ್ಮೆಗೆ ತನ್ಮಯತೆಯಿಂದ ಪುಳಕಿತನಾಗಿದ್ದಾನೆ. ಮೈ ರೋಮಾಂಚನವಾಗುತ್ತಿದೆ. ಸಾಕ್ಷಾತ್ ಪಾರ್ವತಿ ಪರಮೇಶ್ವರರನ್ನು ಗಣಾಧಿಪತಿ, ದೇವಸೇನಾಧಿಪತಿ, ನಂದೀಶ, ಶಿವಗಣ ಪ್ರಮಥರ ಜೊತೆ ಪ್ರತ್ಯಕ್ಷ ಕಂಡದ್ದೇ ಮಹಾ ಸೌಭಾಗ್ಯ. ಜೀವನ ಸಾರ್ಥಕವಾದ ಧನ್ಯತೆ ಮನತುಂಬಿದೆ. ಇನ್ನು ಪರಶಿವನ ಅಮೃತಸದೃಶ ವಾಕ್ಯ ಸ್ಮರಿಸಿದಾಗ “ಅರ್ಜುನಾ, ನಿನ್ನಿಂದ ಇನ್ನು ಬಹಳಷ್ಟು ಲೋಕ ಕಲ್ಯಾಣ ಕಾರ್ಯವಾಗಲಿಕ್ಕಿದೆ. ಇಳೆಯ ಭಾರವಿಳುಹುವ ಶ್ರೀ ಹರಿಯ ಸಂಕಲ್ಪದಲ್ಲಿ ನೀನು ಆತನ ಆಯುಧವಾಗಿ ಹೊಂದಿಕೊಂಡು, ಆತನ ನೆರಳಿನಂತೆ ಜೊತೆಗಿದ್ದು ಸಹಕಾರಿಯಾಗು. ನಿನಗೆ ಸನ್ಮಂಗಲವಾಗಲಿ” ಎಂಬ ಅಭಯವಾಕ್ಯ ನೆನಪಾಯಿತು. ಬದುಕು ಇನ್ನೂ ಬಹಳಷ್ಟಿದೆ. ಭವಿಷ್ಯದ ಸಾಧನೆಗೆ ಇಂದಿನದು ಪೂರ್ವ ತಯಾರಿ ಮಾತ್ರ ಎಂಬುವುದು ಸೂಚ್ಯವಾಗಿ ಅರ್ಥವಾಗಿದೆ ಕಲಿ ಪಾರ್ಥನಿಗೆ.

ಗಿರಿಜೆ ಗಿರೀಶರು ಒಲಿದು ಮೈದೋರಿ ನಿಂತು ಅವರ ಪಾದ ಸ್ಪರ್ಶವಾದ ಸ್ಥಳದಲ್ಲಿ ಕುಳಿತು ನೆಲವನ್ನು ಪೂಸುತ್ತಾ, ಆ ಧೂಳನ್ನು ಹಿಡಿಯಾಗಿ ಹಿಡಿದು ಅಘ್ರಾಣಿಸುತ್ತಾ ಮತ್ತೊಮ್ಮೆ ಉದ್ದಂಡ ನಮಸ್ಕಾರವನ್ನು ಮಾಡಿ ಮಂಡಿಯೂರಿ ಮಹಾದೇವನನ್ನು ಸ್ತುತಿಸಿ, ಸ್ಮರಿಸಿದನು. ಉದ್ದಟತನದಿಂದ ಹೋರಾಡಿದ ತಪ್ಪಿಗೆ ಕ್ಷಮೆಯನ್ನು, ಭಕ್ತಿಗೆ ಮೆಚ್ಚಿ ಅನುಗ್ರಹಿಸಿದ ದೇವನಿಗೆ ಕೃತಜ್ಞತೆಯನ್ನೂ ಸಲ್ಲಿಸುತ್ತಾ ಕನಸಿನ ಲೋಕ ವಿಹಾರಿಯಾಗಿ ಮೈಮರೆತು ಶಿವ ಧ್ಯಾನ ನಿರತನಾಗಿದ್ದಾನೆ ಪಾರ್ಥ.

ಅಷ್ಟರಲ್ಲಿ ಏನೋ ಶಬ್ದ ಕೇಳಿಸಿತು. ತಿರುಗಿ ನೋಡಿದರೆ ದಿವ್ಯ ರಥವೊಂದು ಬಂದು ನಿಂತಿದೆ. ಓರ್ವ ಇಳಿದು ಬಂದು ಅರ್ಜುನನಿಗೆ ನಮಸ್ಕರಿಸಿದನು. ಅರ್ಜುನನೂ ನಿಂತು ಪ್ರತಿ ನಮಸ್ಕಾರ ಸಲ್ಲಿಸಿದನು. ಬಂದವನು “ನನ್ನ ಹೆಸರು ಮಾತಲಿ ಎಂಬುವುದಾಗಿ. ಈ ದಿವ್ಯರಥ ದೇವರಾಜ ಇಂದ್ರನದ್ದು. ನಾನು ಈ ರಥದ ಸಾರಥಿ. ನಿಮ್ಮನ್ನು ಸಶರೀರಿಯಾಗಿ ದೇವಲೋಕಕ್ಕೆ ಕರೆತರಲು ನನಗೆ ಅಪ್ಪಣೆಯಿತ್ತು ಕಳುಹಿಸಿದ್ದಾರೆ ಮಹಾಪ್ರಭು ದೇವೇಂದ್ರ. ತಾವು ರಥವೇರಿದರೆ ನಮ್ಮ ಪ್ರಯಾಣ ಆರಂಭಿಸಬಹುದು” ಎಂದನು.

ಅರ್ಜುನನಿಗೆ ಪರಮಾಶ್ಚರ್ಯ, ತಪಸ್ಸಿಗೆ ಎಷ್ಟೊಂದು ಮಹಾತ್ಮೆ ಇದೆ? ಮಹಾದೇವನೆ ಒಲಿದು ಬಂದು ಅನುಗ್ರಹಿಸುವಂತಾಯಿತು. ಈಗ ಈ ಸೌಭಾಗ್ಯವೂ ಅದರದ್ದೆ ಮುಂದುವರಿದ ಯೋಗ. ಋಷಿ ಮುನಿಗಳು ತಪಸ್ಸಿನಲ್ಲಿ ಜೀವನ ಕಳೆಯುತ್ತಾರೆ. ಆ ಜೀವನವೆ ಶ್ರೇಷ್ಠ ಸಾಧನೆ ಎಂಬಷ್ಟರ ಮಟ್ಟಿಗೆ ಪ್ರೇರಣೆಯಾಗುತ್ತಿದೆ. ಮಾತಲಿಯ ವಿನಂತಿಯಂತೆ ದಿವ್ಯವರೂತ ಏರಿ ಕುಳಿತನು ಪಾರ್ಥ. ಯಾನ ಆರಂಭವಾಯಿತು. ಗಗನ ಮಾರ್ಗವಾಗಿ ಏರಿ ಹೋಗ ತೊಡಗಿದ ರಥ ತಪೋ ಭೂಮಿಗೆ ಸುತ್ತು ಹೊಡೆಯುತ್ತಾ ಮೇಲೇರುತ್ತಿದೆ. ಅರ್ಜುನ ಭೂಲೋಕವನ್ನೇ ನೋಡುತ್ತಿದ್ದಾನೆ. ಗಿರಿ ಶಿಖರಗಳು, ನದಿಗಳು, ಕಾಡು, ನಗರ ಪಟ್ಟಣಗಳು, ಸಮುದ್ರ ಸಾಗರ.. ನೋಡ ನೋಡುತ್ತಿದ್ದಂತೆ ಕಿರಿದಾಗುತ್ತಾ ಕಣ್ಮರೆಯಾದವು. ಕರಿ ಮೊಡಗಳನ್ನೇರಿ ಸಾಗಿ ಬಿಳಿ ಮೋಡಗಳ ಮೇಲಿಂದ ಹಾರುತ್ತಿದೆ ರಥ. ಇನ್ನೂ ಎತ್ತರೆತ್ತರಕ್ಕೆ ಹಾರಿ ಸೌರ ಮಂಡಲ, ತಾರಾ ಲೋಕ ದಾಟುತ್ತಾ.. ವಿಶೇಷವಾದ ಲೋಕ ಸೇರಿತು. ಕೌತುಕ ತಾಳಲಾರದೆ ಅರ್ಜುನ ಕೇಳಿದ “ಇದು ಸ್ವರ್ಗ ಲೋಕವೇ?”… ಮಾತಲಿ ಉತ್ತರಿಸಿ ಸಂಶಯ ಪರಿಹರಿಸಿದ ” ಇಲ್ಲಾ ಇದು ಜ್ಯೋತಿರ್ಲೋಕ. ಇಲ್ಲಿಯವರೆಗೆ ಬಾಹ್ಯ ಬೆಳಕಿತ್ತು. ಇನ್ನು ಮುಂದೆ ಬೆಳಕು ಇರುವುದಿಲ್ಲ. ನಮ್ಮಲ್ಲಿರುವ ಪುಣ್ಯವೇ ಸ್ವಯಂಪ್ರಭೆಯ ಬೆಳಕಾಗಿ ಬೆಳಗುತ್ತದೆ. ಆ ಬೆಳಕು ನಮಗೆ ದಿಗ್ದರ್ಶನ ಮಾಡಬಲ್ಲುದು. ಅತಿಶಯ ಪುಣ್ಯವಂತರಿಗೆ ಮಾತ್ರ ಇಲ್ಲಿಂದ ಮುಂದೆ ಕ್ರಮಿಸಲು ಸಾಧ್ಯ. ಮಹಾತ್ಮನೂ ಪುಣ್ಯಾತ್ಮನೂ ಆದ ನಿನ್ನ ಶ್ರೇಷ್ಠತೆಯಿಂದಲೆ ನಾವೀಗ ಪ್ರಯಾಣಿಸುತ್ತಿದ್ದೇವೆ” ಎಂದನು. ಈ ವಿಚಾರ ತಿಳಿದಾಗ ಅರ್ಜುನ ದೈವಾನುಗ್ರಹ ಪಡೆದ ಮಾನವನ ಜೀವನದಲ್ಲಿ ಉತ್ಕರ್ಷೆಗೇರಲು ಸಾಧ್ಯ. ಪರಮಶಿವನ ಕರುಣಾಮೃತದ ಸಿಂಚನಮಾತ್ರದಿಂದ ಪಾವನನಾದ ನನಗೆ ಈ ಭಾಗ್ಯ ಒದಗುವಂತಾಯಿತು. ಎಂದು ನೆನೆದು ಮನಸಾರೆ ಸ್ಮರಿಸಿ ಪರಮೇಶ್ವರನಿಗೆ ನಮಿಸಿದನು. ಕೃಷ್ಣ ಪರಮಾತ್ಮನನ್ನೂ ನೆನೆದು ಸ್ತುತಿಸಿದನು.

ಬಹುಹೊತ್ತು ಸಾಗಿದ ದಿವ್ಯ ವರೂತ ಪುಣ್ಯಲೋಕದತ್ತ ಬಂದು ತಲುಪಿತು. ಮಾತಲಿ ಪ್ರತಿಯೊಂದನ್ನೂ ವರ್ಣಿಸಿ ವಿವರಿಸುತ್ತಾ ಯಾನ ಸಾಗುತ್ತಿತ್ತು. ಸ್ವರ್ಗದ ರಾಜಧಾನಿ ಅಮರಾವತಿ, ನಂದನವನ, ದಿಕ್ಪಾಲಕರ ಭವನಗಳು, ಅಪ್ಸರೆಯರ ಅರಮನೆಗಳು, ಸುರಾಂಗನೆಯರ ನಿವೇಶನಗಳು, ವಿಹಾರ ಮಂಟಪಗಳು, ಪುಣ್ಯಾತ್ಮರಾಗಿ ಸ್ವರ್ಗಸ್ಥರಾದ ಮಹಾನುಭಾವರ ವಸತಿಗಳು, ಸ್ವರ್ಗದ ದೇವೇಂದ್ರನ ಅರಮನೆ – ಹೀಗೆ ಸುಧರ್ಮ ಸಭಾಸ್ಥಾನದವರೆಗೆ ಬಂದಿತು ವರೂತ.

ತಟಸ್ಥವಾದ ರಥದಿಂದ ಅರ್ಜುನ ಮತ್ತು ಮಾತಲಿ ಕೆಳಗಿಳಿದರು. ನೋಡುತ್ತಿದ್ದಾನೆ ಪಾರ್ಥ, ಒಂದೆಡೆ ದೇವ ಮಹಾರಾಣಿ ಶಚೀದೇವಿಯ ಭವ್ಯ ಮಂದಿರ. ಇತ್ತ ಸಿದ್ಧರು ಚಾರಣರು ಹಾಡುತ್ತಿದ್ದಾರೆ. ಸುರ ಪುಷ್ಪಗಳ ಸೌರಭ ತೇಲಿಬರುತ್ತಿದೆ. ಎಲ್ಲೆಲ್ಲೂ ಸಂತೋಷದ ಉನ್ಮಾದವೇ ತುಂಬಿದೆ. ಒಂದು ಸುತ್ತು ಅವಲೋಕಿಸಿ ತಿರುಗುವಷ್ಟರಲ್ಲಿ ಸುಧರ್ಮ ಸಭೆಯ ಪ್ರವೇಶ ದ್ವಾರದಿಂದ ವಿಲಾಸಿನಿಯರು ಬಂದು ಅರ್ಜುನನ ಪಾದ ತೊಳೆದರು, ಮೈಗೆ ದಿವ್ಯ ಸುಗಂಧ ಪೂಸಿ, ಕನಕ ಭೂಷಣ, ಮುಕುಟಗಳಿಂದ ಸಿಂಗರಿಸಿದರು. ವಿಶೇಷ ವಸನ ಭೂಷಣಗಳನ್ನು ಧರಿಸಿ ಸಿದ್ಧಗೊಳಿಸಿದರು. ಅರ್ಘ್ಯ ಪಾದ್ಯಾದಿಗಳನ್ನು ಮಧುಪರ್ಕಗಳನ್ನಿತ್ತು ಸತ್ಕರಿಸಿ ಸ್ವಾಗತಿಸುತ್ತಾ, ಸುರನಾರಿಯರು ಕೈ ಹಿಡಿದು ಅರ್ಜುನನನ್ನು ಮಹೇಂದ್ರನ ಸುಧರ್ಮ ಸಭೆಗೆ ಕರೆದೊಯ್ಯುತ್ತಿದ್ದಾರೆ..

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page