ಭಾಗ 180
ಭರತೇಶ್ ಶೆಟ್ಟಿ,ಎಕ್ಕಾರ್

“ದುರಾತ್ಮನೆ! ನಿಮ್ಮ ಒಳ್ಳೆಯದಕ್ಕಾಗಿ, ಭವಿಷ್ಯದ ಸುಭಿಕ್ಷೆಗಾಗಿ, ಚಂದ್ರವಂಶದ ಉಳಿವಿಗಾಗಿ ದಿವ್ಯಜ್ಞಾನದಿಂದ ತಿಳಿದ ಸತ್ಯ ವಿಚಾರ ವಿವರಿಸಿ ಎಚ್ಚರಿಸಿದರೆ, ಧಿಕ್ಕರಿಸಿ ಅವಹೇಳನ ಮಾಡುವೆಯಾ ಮದಾಂಧ? ಯೌವನ, ಸಂಪತ್ತು, ಅಧಿಕಾರ ಈ ಮೂರು ವಿಧಾನ ಮದೋತ್ಪತ್ತಿಗೆ ಕಾರಣವಾಗುತ್ತದೆ. ಇವುಗಳು ನಶ್ವರವೂ ತಾತ್ಕಾಲಿಕವೂ ಆಗಿದ್ದು ಅಹಂಕಾರ ಉತ್ಪತ್ತಿಗೆ ಪ್ರೇರಕವೂ ಆಗಿ ಸರ್ವನಾಶಕ್ಕೆ ಹೇತುವಾಗುವುದು. ನೀನು ಮದೋನ್ಮತ್ತನಾಗಿ ಉಚಿತಾನುಚಿತಗಳನ್ನು ಅರಿಯಾಲಾಗದೆ ಹೋದೆ. ನಮ್ಮಂತವರು ಬಂದು ನಿಸ್ವಾರ್ಥಿಯಾಗಿ ಶ್ರೇಯೋಭಿಲಾಷೆಯಿಂದ ನಿಮ್ಮ ಶ್ರೇಯಸ್ಸು ಬಯಸಿ ಜಾಗೃತರಾಗಿ ಎಂದು ಹೇಳಿದರೆ, ತೊಡೆ ತಟ್ಟಿ ಧಿಕ್ಕಾರ ಭಾವ ಪ್ರಕಟಿಸಿ ನೀಚತನ ತೋರಿದೆಯಾ? ಅಂತಹ ನಿನ್ನ ತೊಡೆ ಮುರಿಯಲ್ಪಟ್ಟು ನಿನಗೆ ಸಾವು ಬರಲಿ” ಎಂದು ದುರ್ಯೋಧನನ್ನು ಮಹಿಮಾನ್ವಿತರಾದ ಮೈತ್ರೇಯರು ಶಪಿಸಿದರು.
ಮೈತ್ರೇಯರ ಶಾಪದಿಂದ ಧೃತರಾಷ್ಟ್ರನ ಜಂಘಾಬಲವೇ ಉಡುಗಿ ಹೋದಂತಾಯಿತು. ತನ್ನ ಮಕ್ಕಳ ಶ್ರೇಯಸ್ಸನ್ನು ಬಯಸಿದರೆ, ತದ್ವಿರುದ್ದವಾಗಿ ಪತನಹೇತುವಾಗಬಲ್ಲ ಘಟನೆ ಘಟಿಸಿತಲ್ಲಾ? ತಡಮಾಡದೆ ಎಚ್ಚೆತ್ತು ತಡವರಿಸುತ್ತಾ, ಮೈತ್ರೇಯರಿಗೆ ಕೈಮುಗಿದು ಕ್ಷಮಿಸಿ ಅನುಗ್ರಹಿಸುವಂತೆ ಬೇಡಿದನು. ಆದರೆ ಮೈತ್ರೇಯ ಮಹರ್ಷಿ ಸೂಚ್ಯವಾಗಿ ಹೇಳಿದರು “ನಿಯತಿಯ ನಿರ್ಧಾರವನ್ನು ನಿಲ್ಲಿಸಲು ನಿನ್ನಿಂದಾಗಲಿ ನನ್ನ ನೀತಿಯ ಮಾತುಗಳಿಗಾಗಲಿ ಸಾಧ್ಯವಿಲ್ಲ. ನಾಶವಾಗಲೆಂದೆ ಇರುವುದು ಕಾಲದ ವಶವರ್ತಿಯಾಗಿ ನಶಿಸಲೇ ಬೇಕು. ಭವಿಷ್ಯದ ನಿಜ ವಿಚಾರದ ಮಾತುಗಳು ನೀಚರಾದ ನಿಮಗೆ ನಗಣ್ಯವಾಗಿ ತಿರಸ್ಕರಿಸಲ್ಪಟ್ಟಿತು. ನಿಮ್ಮ ಕರ್ಮದ ಫಲ ಬೆಂಬತ್ತಿ ಬಂದಾಗ ಅನುಭವಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ದರಾಗಿರಿ” ಎಂದು ನುಡಿದು ಹೊರಟೇ ಹೋದರು.
ಧೃತರಾಷ್ಟ್ರನ ಹತ್ತಿರ ಬಂದ ವಿದುರ “ಅಣ್ಣಾ, ಪಾಂಡವರ ಶಪಥಕ್ಕೆ ಪೂರಕವಾಗಿ ಮೈತ್ರೇಯರ ಶಾಪವೂ ಸೇರಿಕೊಂಡಿತು. ಇನ್ನು ಆಗಲಿರುವುದು ಏನೆಂಬುದು ಸ್ಪಷ್ಟವಾದಂತೆ ಕಾಣುತ್ತಿದೆ” ಎಂದನು. ಭಯಗೊಂಡ ಧೃತರಾಷ್ಟ್ರ ನನ್ನ ಮಕ್ಕಳು ಯಾಕೋ ಏನೋ ಪಾಂಡವ ದ್ವೇಷಿಗಳಾಗಿದ್ದಾರೆ. ಈಗಂತೂ ಪಾಂಡವ – ಕೌರವ ಎರಡು ಪಕ್ಷಗಳಾಗಿ ಒಡೆದು ಹೋಗಿ ಬದ್ದ ವೈರಿಗಳಾಗಿಯೆ ವ್ಯವಹರಿಸುತ್ತಿದ್ದಾರೆ. ಹೇಗೆ ನಿಯಂತ್ರಿಸಲಿ ಈ ಸ್ಥಿತಿಯನ್ನು? ಎಂದು ಮರುಗಿದನು.
ವಿದುರ ಯೋಚಿಸಿ, “ಮಹಾರಾಜ, ನೀನು ರಾಜದಂಡವನ್ನು ಧಾರಣೆ ಮಾಡಿದವನು. ಧರ್ಮದ ಪ್ರತಿನಿಧಿಯಾಗಿ ನಿಷ್ಪಕ್ಷಪಾತಿಯಾಗಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಕ್ಕೆ ಸಹವರ್ತಿಯಾಗಿ ನಡೆಯಬೇಕಿತ್ತು. ಅದರಿಂದಲೆ ಸತ್ಕೀರ್ತಿಯೂ ಸುಭಿಕ್ಷೆಯೂ ಸಾಧ್ಯವಾಗುತ್ತಿತ್ತು. ಆದರೆ ನೀನು ಪುತ್ರ ವ್ಯಾಮೋಹಕ್ಕೊಳಗಾದೆ. ಭೀಷ್ಮಾಚಾರ್ಯರಿಗೆ ನಿನ್ನ ಕುರಿತಾದ ದಾಕ್ಷಿಣ್ಯ ಭಾವ ತಡೆದರೆ, ನಿನ್ನ ಮಕ್ಕಳನ್ನು ದುಷ್ಟ ಕೂಟ ಆವರಿಸಿ ಸದ್ಬುದ್ಧಿ ನಾಶಗೊಳಿಸಿ ಬಿಟ್ಟಿದೆ. ಹೀಗಾದಾಗ ಧರ್ಮಕ್ಕೆ ಇಲ್ಲಿರಲು ಸಾಧ್ಯವೇ? ಧರ್ಮಿಷ್ಟರೂ ಸತ್ಕರ್ಮಿಗಳೂ ಆದ ಪಾಂಡವರಲ್ಲಿ ಅದು ನಿಕ್ಷೇಪಗೊಂಡಿದೆ. ಈಗ ನಮ್ಮ ಈ ಪಾಳಯ ಬೇರು ಸತ್ತ ಮರದಂತಾಗಿದೆ. ಮುಂದೆ ನಾಶವೆ ಹೊರತು ಚಿಗುರಲಾಗದ ಸ್ಥಿತಿ ನಿರ್ಮಾಣವಾಗಿದೆ” ಎಂದನು.
ವಿದುರನ ಮಾತುಗಳನ್ನು ಕೇಳಿ ವಿಪರೀತ ನಡುಕ, ಭಯ, ಆತಂಕಗಳಿಗೆ ಒಳಗಾದ ಧೃತರಾಷ್ಟ್ರ, “ಹೇ! ವಿದುರಾ ಹಾಗಾಗಬಾರದು. ವಂಶವನ್ನೂ, ನನ್ನ ಸಂತಾನವನ್ನೂ ಉಳಿಸಬೇಕು. ಅವರು ಇನ್ನೆಷ್ಟೋ ಕಾಲ ಸುಖವಾಗಿ ಬದುಕಿ ಬಾಳಬೇಕು. ಧರ್ಮಜ್ಞಾನಿಯಾದ ನೀನು ನಿಷ್ಠಾವಂತನೆಂದು ಗೊತ್ತಿದೆ. ಪ್ರಾಮಾಣಿಕನಾಗಿ ಹೇಳು, ನಾನೇನು ಮಾಡಿದರೆ ಈ ವಿನಾಶವನ್ನು ತಡೆಯಬಹುದು… ಹೇಳು ವಿದುರಾ… ಹೇಳು!” ಎಂಬಂತೆ ಗೊಂದಲಕ್ಕೊಳಗಾಗಿ ಒತ್ತಾಯಿಸಿದ.
ಮಹಾರಾಜನಾಗಿದ್ದರೂ ತನ್ನ ಅಣ್ಣನೂ ಹೌದಲ್ಲವೇ! ವಿದುರನ ಮನ ಕರಗಿತು. ಸ್ಪಷ್ಟವಾಗಿ ವಿವರಿಸಿದ, “ನಾನು ಹೇಳುವ ಮಾತು ಕಹಿಯಾಗಿರಬಹುದು, ನಿನಗೆ ಹಿತವಾಗದು ಆದರೆ ಅದನ್ನು ಒಪ್ಪಿ ಅನುಷ್ಠಾನಗೊಳಿಸಿದರೆ ನಮ್ಮ ಸಾಮ್ರಾಜ್ಯ, ಪರಿವಾರ ಎರಡೂ ಉಳಿದೀತು. ಮನಸಾಕ್ಷಿಯಾಗಿ ತರ್ಕಿಸಿ, ವಿವೇಚಿಸಿ ಅನುಸರಿಸುವೆಯಾದರೆ ಖಂಡಿತಾ ಹೇಳುವೆ” ಎಂದನು
ಮುಂದುವರಿಯುವುದು…





