ಭಾಗ 178
ಭರತೇಶ್ ಶೆಟ್ಟಿ,ಎಕ್ಕಾರ್

ಅತ್ತೆ ಕುಂತಿದೇವಿಯ ಹಿತವಚನಗಳನ್ನು ಕೇಳಿ ಧೈರ್ಯ ತಳೆದುಕೊಂಡು ಸಂತೋಷದಿಂದ ಆಯಿತು ಎಂಬಂತೆ ತಲೆಯಾಡಿಸಿದಳು ದ್ರೌಪದಿ. ಕಷ್ಟದಲ್ಲಿರುವವರಿಗೆ ಸಾಂತ್ವಾನ ಹೇಳುವಾಗ ತಾವು ಕಳೆದ ಅಂತಹುದೆ ಸಂದರ್ಭ ಉದಾಹರಣೆಯಾಗಿ ಹೇಳಿ ಆ ಸಂಕಷ್ಟ ಸ್ಥಿತಿ ದಾಟಿ ಬಂದ ಬಗೆಯನ್ನು ವಿವರಿಸಿದಾಗ ಅವ್ಯಕ್ತ ಚೈತನ್ಯ ಮೂಡಿಬರುತ್ತದೆ.
ಮತ್ತೆ ದ್ರೌಪದಿಯ ಬೆನ್ನು ಸವರುತ್ತಾ ಕುಂತಿ, “ಮಗಳೇ ನೀನು ಸಮರ್ಥಳು ಹೌದು. ನಿಜಾರ್ಥದಲ್ಲಿ ನಿನಗೆ ಉಪದೇಶದ ಅಗತ್ಯವಿಲ್ಲ. ಆದರೂ ನನ್ನ ಸಮಾಧಾನಕ್ಕಾಗಿ ಹೇಳಿದ್ದೇನೆ. ನಿನ್ನ ಜೀವನದಲ್ಲಿ ಮತ್ತೆ ಸುಖದ ದಿನಗಳು ಬರಲಿವೆ. ನೀನು ಸಾಮ್ರಾಜ್ಞಿಯಾಗಿ ಮೆರೆಯುವ ಕಾಲ ನಿಶ್ಚಯವಾಗಿಯೂ ಇದೆ. ಅಲ್ಲಿಯವರೆಗೆ ಶ್ರೀ ಹರಿಯನ್ನು ಸ್ತುತಿಸುತ್ತಾ ಕಷ್ಟ ಬಂದರೂ ಸಾವಧಾನದಿಂದ ಕಳೆಯುತ್ತಾ ಸಾಗಲಿ ಮುಂದಿನ ಹದಿಮೂರು ಸಂವತ್ಸರ. ಅದಾದ ಬಳಿಕ ನವ ಮಾಸ ಕಳೆದು ಪ್ರಸವವೇದನೆ ಅನುಭವಿಸಿ, ಮಗುವಿನ ಮುಖ ನೋಡುವಾಗ ತಾಯಿಯ ಮನಸ್ಸು ಉಲ್ಲಾಸಗೊಳ್ಳುವಂತೆ, ನಿನ್ನ ಬದುಕಲ್ಲೂ ಸಂಭ್ರಮ ಮರಳಿ ಬರುತ್ತದೆ.” ಹೀಗೆ ಹರಸಿ, ಮಕ್ಕಳೈವರನ್ನೂ ಮುದ್ದಿಸಿ ಮನದಣಿಯೆ ನೋಡಿ ಕಣ್ತುಂಬಿಕೊಂಡಳು ಕುಂತಿ. ಆ ಬಳಿಕ ಮತ್ತೊಮ್ಮೆ ತಿರುಗಿ ಅವರೆಲ್ಲರನ್ನೂ ನೋಡುತ್ತಾ, ಎರಡೂ ಕೈಗಳನ್ನೆತ್ತಿ ಆಶೀರ್ವಾದ ಮುದ್ರೆ ತೋರುತ್ತಾ ಹಿಂದೆ – ಹಿಂದೆ ಮೂರ್ನಾಲ್ಕು ಹೆಜ್ಜೆ ಹಾಕಿದಳು. ಮನದೊಳಗೆ ಮಕ್ಕಳ ಜೊತೆಗಿರಬೇಕೆಂಬ ಸೆಳೆತವಿದ್ದರೂ, ಅದುಮಿಟ್ಟುಕೊಂಡು ವಿದುರನ ಜೊತೆ ಹೊರಟಳು. ಪಾಂಡವರು ವಾಸ್ತವ ಸ್ಥಿತಿ ಅರಿತು ತಾಯಿಯನ್ನು ಬೀಳ್ಕೊಟ್ಟರು. ಹಿಂದಿರುಗಿ ಹಸ್ತಿನೆಯತ್ತ ಬರುತ್ತಿದ್ದ ವಿದುರ – ಕುಂತಿಯನ್ನು ಅನುಸರಿಸಿ ಬಹುಮಂದಿ ಪ್ರಜಾಜನರು, ನಮ್ಮಿಂದ ಇವರ ವನವಾಸಕ್ಕೆ ತೊಂದರೆಯಾಗಬಾರದು ಎಂದು ತರ್ಕಿಸಿ ಹಿಂದೆ ತೆರಳಿದರು.
ಆದರೂ ಕೆಲಮಂದಿ ಪ್ರಜೆಗಳು ಬೆಂಬಿಡದೆ ಪಾಂಡವರ ಜೊತೆಯಾಗಿ ನಡೆದರು. ಮುಸ್ಸಂಜೆಯ ಹೊತ್ತಿಗೆ ಗಂಗಾ ತೀರ ತಲುಪಿ ವಿಶಾಲವಾದ ಒಂದು ಆಲದ ಮರದಡಿ ವಿಶ್ರಾಂತರಾದರು. ಮರುದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪ್ರಾತಃ ವಿಧಿ ಪೂರೈಸಿದ ಬಳಿಕ ಧರ್ಮರಾಯ ಸಭೆ ಸೇರಿ, ಅನುಸರಿಸಿ ಬಂದಿದ್ದ ಪ್ರಜಾ ಜನರ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿ ನುಡಿದನು – “ವನವಾಸ ಅನುಭವಿಸಲು ನೀವೆಲ್ಲಾ ನಿರ್ಧರಿಸಿರುವುದು ಸಮಂಜಸವಲ್ಲ. ಪಾಂಡವರಾದ ನಮ್ಮ ಮೇಲೆ ನೀವು ತೋರುತ್ತಿರುವ ನಿಜ ಪ್ರೇಮಕ್ಕೆ ನಾವು ಚಿರ ಋಣಿಗಳಾಗಿದ್ದೇವೆ. ಬಂಧುಗಳ ಜೊತೆಯಾಗಿ ನದಿ ತೀರದವರೆಗೆ ಬಂದು ಬೀಳ್ಗೊಡುವ ಸಂಪ್ರದಾಯವಿದೆ. ಅಂತೆಯೇ ನೀವೆಲ್ಲರೂ ನನ್ನ ಬಂಧುಗಳಂತೆಯೆ ಇಲ್ಲಿಯವರೆಗೆ ಬಂದಿದ್ದೀರಿ. ಈಗ ನಮ್ಮನ್ನು ಬೀಳ್ಗೊಟ್ಟು ಮುಂದುವರಿಯಗೊಟ್ಟರೆ ನಿಮಗೂ – ನಮಗೂ ಸಹಾಯವಾಗುತ್ತದೆ. ನಮ್ಮಮ್ಮ ವಿದುರನ ಮನೆಯಲ್ಲಿದ್ದಾರೆ. ನೀವು ಸದಾ ಅವರ ಕ್ಷೇಮ ವಾರ್ತೆ ವಿಚಾರಿಸುತ್ತಿದ್ದರೆ ಮಹದುಪಕಾರವಾಗುತ್ತದೆ. ಪತಿಯಿಲ್ಲದ ನಮ್ಮ ಮಾತೆ ಮಕ್ಕಳಾದ ನಮ್ಮನ್ನು ನೋಡಿ ಸಂತೋಷಪಡುತ್ತಿದ್ದಳು. ಈಗ ಮಕ್ಕಳಾದ ನಾವು ಜೊತೆಗಿರದೆ ದುಃಖಿಸುತ್ತಿರಬಹುದು. ಅವರನ್ನು ಸಂತೈಸಿ ಸಹಕರಿಸುವ ಕೆಲಸ ನಿಮ್ಮಿಂದಾಗಬೇಕು” ಎಂದು ಕೈಮುಗಿದು ಬೇಡಿದನು. ಮನಸ್ಸಿಲ್ಲದ ಮನಸ್ಸಿನಿಂದ ಧರ್ಮರಾಯನ ಮಾತಿಗೆ ಒಪ್ಪಿ ಅವರು ಹಿಂದಿರುಗಿದರು.
ಧೌಮ್ಯರು ಅವರ ಶಿಷ್ಯರಾದ ಪಾಂಡವರ ಜೊತೆಯಾಗಿ, ದ್ರೌಪದಿಯನ್ನು ಸೇರಿಸಿಕೊಂಡು ವನವಾಸಕ್ಕೆ ಮುಂದುವರಿದರು. ಹೀಗೆ ಸಾಗುತ್ತಾ ‘ಕಾಮ್ಯಕ’ ಎಂಬ ವನ ಪ್ರದೇಶವನ್ನು ಪ್ರವೇಶಿಸಿದರು.
ಮುಂದುವರಿಯುವುದು…