29.5 C
Udupi
Monday, December 22, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭರತೇಶ್ ಶೆಟ್ಟಿ ,ಎಕ್ಕಾರ್

ಭಾಗ 177

ತನ್ನ ಮಕ್ಕಳ ಜೊತೆ ವನವಾಸಕ್ಕಾಗಿ ಮುಂದುವರಿಯುವ ಮುದ್ದಿನ ಸೊಸೆ ದ್ರೌಪದಿಯ ತಲೆ ನೇವರಿಸುತ್ತಾ “ನೋಡು ಮಗಳೇ, ಪತ್ನಿಯಾಗಿ ಪತಿಸೇವೆ ಮಾಡುವುದು ಧರ್ಮ. ಆದರೆ ನಿನ್ನ ಬದುಕಿನ ವೈವಾಹಿಕ ಜೀವನ ಆರಂಭವಾದ ಕ್ಷಣದಿಂದಲೆ ಒಂದಿಲ್ಲೊಂದು ರೀತಿಯ ಕಷ್ಟಗಳನ್ನು, ಸವಾಲುಗಳನ್ನು ಇದಿರಿಸುತ್ತಾ ಸಾಗುತ್ತಿದೆ. ಈಗ ಹಸ್ತಿನೆಯಲ್ಲಾದ ದ್ಯೂತ ಪ್ರಕರಣ, ವನವಾಸವಂತೂ ದುಃಖದ ಸಂಗತಿಯೆ ಹೌದು. ಮಗಳೇ ದ್ರೌಪದಿ, ನಿನ್ನ ಅತ್ತೆಯಾದ ನನ್ನ ಬದುಕೂ ತಿರುವುಗಳನ್ನು ಪಡೆಯುತ್ತಾ ಸಾಗಿ ಬಂದಿದೆ. ಹುಟ್ಟಿದ ಮನೆಯಿಂದ ಹೆತ್ತವರನ್ನು ತೊರೆದು ಸಾಕುಮಗಳಾಗಿ ಕುಂತಿಭೋಜನ ಅರಮನೆ ಸೇರಿದೆ. ನಂತರ ಪ್ರಾಯ ಪ್ರಬುದ್ಧಳಾದಾಗ ಪಾಂಡು ಚಕ್ರವರ್ತಿಯೊಂದಿಗೆ ಮದುವೆಯಾಯಿತು. ಆದರೆ ಬದುಕಿನ ದುರಂತವೊ ಏನೋ ಮೃಗ ವೇಷದಿಂದ ಹರಿಣಗಳಂತೆ ಕಂಡ ಕಿಂದಮ ಋಷಿ ಚಕ್ರವರ್ತಿಗಳ ಬಾಣಕ್ಕೆ ತುತ್ತಾಗಿ ಮರಣಿಸುವ ಕಾಲದಲ್ಲಿ ಶಾಪವಿತ್ತರು. ಪತ್ನಿಯನ್ನು ಮುಟ್ಟದೆ ಶಾರೀರಿಕ ಸಂಬಂಧವಿಲ್ಲದೆ ದಿನ ಕಳೆಯುವಂತಾಯಿತು. ವಿರಕ್ತರಾದ ವೀರ ಚಕ್ರವರ್ತಿಗಳು ಸಂತಾನವಾಗದು ಎಂಬ ವ್ಯಥೆಗೊಳಗಾಗಿ ನಿಯೋಗ ಪದ್ದತಿಯ ಬಗ್ಗೆ ತರ್ಕಿಸುತ್ತಿದ್ದರು
ಆಗ ನನಗೊದಗಿದ್ದ ದೂರ್ವಾಸ ಪ್ರಣೀತ ಅನುಗ್ರಹ ಮಂತ್ರಗಳ ಬಗ್ಗೆ ಪತಿದೇವನಲ್ಲಿ ಹೇಳಿಕೊಂಡೆನು. ಅವರ ಸಮ್ಮತಿಯಿಂದ ಆ ಮುಖೇನ ಪಾಂಡವರ ಹುಟ್ಟು ಆಯಿತು. ಮಕ್ಕಳು ಬೆಳೆಯುತ್ತಿದ್ದಂತೆಯೆ ಒಂದು ದಿನ ಅದೇನು ವಿಧಿಯಾಟವೋ! ಪಾಂಡು ಚಕ್ರವರ್ತಿಯವರ ಮರಣವಾಯಿತು. ಮತ್ತೆ ಹಸ್ತಿನಾವತಿಗೆ ಬಂದ ಬಳಿಕ ಅರಗಿನ ಮನೆಯಲ್ಲಿ ನಮ್ಮನ್ನು ಸುಡುವ ಪ್ರಯತ್ನವೂ ನಡೆಯಿತು. ಆದರೆ ಈ ವರೆಗೆ ನಡೆದ ಪ್ರಕರಣಕ್ಕಿಂತಲೂ ಹೇಯವಾದದ್ದು ದ್ಯೂತ ಪ್ರಕರಣ ಮತ್ತು ಈ ವನವಾಸ. ಇಲ್ಲಿಯವರೆಗೆ ಮಕ್ಕಳ ಜೊತೆಯಾಗಿದ್ದ ನಾನು ಮಕ್ಕಳು ನನ್ನೊಡನೆ ಇರದೆ ಬದುಕಬೇಕಾದ ದುರಂತವೂ ನನ್ನ ಬದುಕಿನಲ್ಲಿ ನಡೆಯುತ್ತಲಿದೆ. ಹೆಣ್ಣಾಗಿ ಹುಟ್ಟಿದ ಮೇಲೆ ಸವಾಲುಗಳೇನು ಬಂದರೂ ಎದುರಿಸಿ ಬದುಕು ನಡೆಸುತ್ತಿರಬೇಕು. ಇನ್ನೂ ಒಂದು ಮಾತು, ನನ್ನ ಐವರು ಮಕ್ಕಳ ಸ್ವಭಾವ ಅರಿತು ವ್ಯವಹರಿಸಿದರೆ ಗೊಂದಲ ಉಂಟಾಗದು. ಸಹದೇವನು ತುಂಬಾ ಸೂಕ್ಷ್ಮ ಪ್ರವೃತ್ತಿಯವನು, ಭೀಮನಿಗೆ ಹಸಿವೆ ಜಾಸ್ತಿ, ಅರ್ಜುನ ಅಧ್ಯಯನಶೀಲ, ನಕುಲ ಶೃಂಗಾರ ಪ್ರಿಯ. ಪಾಂಡವರ ಪಾಲಿನ ಗೃಹ ಲಕ್ಷ್ಮಿಯಾಗಿ, ಅವರಿಗೆ ತಾಯಿಯೂ ಆಗಿ ಊಟೋಪಚಾರ ಸಮಯಕ್ಕೆ ಸರಿಯಾಗಿ ತಯಾರಿಸಿ ಉಣಬಡಿಸುವ ಹೊಣೆಗಾರಿಕೆಯೂ ನಿನಗಿದೆ. ಋಷಿ ಮುನಿಗಳು ನೀವಿರುವಲ್ಲಿಗೆ ಬಂದರೆ ಯಥಾಸಾಧ್ಯ ಆದರ ಆತಿಥ್ಯವನ್ನು ಮರೆಯದೆ ಮಾಡಬೇಕು. ನೀನು ಪತಿಯಂದಿರಿಗೆ ಪೂರಕಳೂ ಪ್ರೇರಕಳೂ ಆಗಿ ಸಹಧರ್ಮಿಣಿಯಾಗಿ ಜೊತೆಯಾಗಿರು. ” ಈ ರೀತಿ ಜಾಗೃತೆಯ ಮಾತುಗಳನ್ನು ಕುಂತಿ ದ್ರೌಪದಿಗೆ ಹೇಳಿದಳು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page