20.8 C
Udupi
Sunday, February 15, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 174

ಭರತೇಶ್ ಶೆಟ್ಟಿ,ಎಕ್ಕಾರ್

ಮನುಷ್ಯ ಪ್ರಯತ್ನಕ್ಕಿಂತಲೂ ಮಿಗಿಲಾಗಿ ನಿಯತಿಯ ನಿಯಮ ಬಲಯುತವಾಗಿರುತ್ತದೆ. ಅದನ್ನು ಮೀರಿ ನಿಲ್ಲಲು ಯಾರಿಗಾದರೂ ಸಾಧ್ಯವೇ? ಪ್ರಾತಿಕಾಮಿ ನೇರವಾಗಿ ಹಸ್ತಿನೆಯಿಂದ ಹೊರಟು ಬಂದವನು ಪಾಂಡವರ ಬಳಿ ಸಾಗಿ ಧರ್ಮರಾಯನನ್ನು ಕಂಡು ಮಾತನಾಡಿಸಿದನು. “ಮಹಾಪ್ರಭು ನಿಮಗೆ ನನ್ನ ಪ್ರಣಾಮಗಳು. ಮಹಾರಾಜ ಧೃತರಾಷ್ಟ್ರರ ಆಜ್ಞೆ ಹೊತ್ತು ನಾನು ನಿಮ್ಮನ್ನರಸಿ ಬಂದಿದ್ದೇನೆ.” ಎಂದನು. “ದೊಡ್ಡಪ್ಪನ ಆಜ್ಞೆಯೇ? ಏನು ಆದೇಶವಿದೆ ಅವರಿಂದ?” ಎಂದು ಯುಧಿಷ್ಠಿರ ಪ್ರಶ್ನಿಸಿದನು. ಆಗ ಸವಿವರವಾಗಿ ವಿಚಾರ ತಿಳಿಸಿ ಮರುದ್ಯೂತದ ಆಹ್ವಾನವಿತ್ತು ಕಳುಹಿಸಿದ್ದಾರೆ ಎಂದನು ಪ್ರಾತಿಕಾಮಿ.

ಮರುದ್ಯೂತದ ವಿಚಾರ ಕೇಳಿದ ಕೂಡಲೆ ದ್ರೌಪದಿ ಹಾಗೂ ಉಳಿದ ಪಾಂಡವರು ಆತಂಕ್ಕೊಳಗಾದರು. ಧರ್ಮರಾಯನತ್ತ ಅಸಮಾಧಾನದ ದೃಷ್ಟಿ ಬೀರಿ ಸಲ್ಲದು ಎನ್ನುವಂತೆ ನಕಾರಾತ್ಮಕ ಮುಖಭಾವ ಪ್ರಕಟಿಸಿದರು. ಧರ್ಮರಾಯ ಅವರೆಲ್ಲರನ್ನೂ ಉದ್ದೇಶಿಸಿ ಹೇಳ ತೊಡಗಿದನು. “ತಮ್ಮಂದಿರೇ, ನಾವು ಈಗಾಗಲೇ ಎಲ್ಲವನ್ನೂ ಒಮ್ಮೆ ಕಳಕೊಂಡವರು. ಈಗ ಸ್ವತಂತ್ರರಾಗಿ, ನಮ್ಮದಾದ ಸಮಸ್ತ ಸಂಪಾದನೆ ಮರಳಿ ಸಿಕ್ಕಿರುವುದು ದೊಡ್ಡಪ್ಪನ ಔದಾರ್ಯದಿಂದ. ಅಡ್ಡ ದಾರಿಯ ಸ್ವಾಧೀನಕ್ಕೆ ಮನಮಾಡಿದ್ದ ಕೌರವಾದಿಗಳಿಗೆ ಭ್ರಮನಿರಸನ ಆಗಿದ್ದರೂ ಆಗಿರಬಹುದು. ಪರಿಣಾಮ ಇಲ್ಲದ ಸಂಚುಗಳನ್ನೆಲ್ಲಾ ಹೂಡಿ ಮರು ಸಂಪಾದನೆಗೆ ಈ ನಾಟಕ ಆಡಿರಬಹುದು. ಒಮ್ಮೆ ಕೊಟ್ಟಿರುವುದನ್ನು ಅವರು ಮರಳಿ ಕೇಳಿ ಪಡೆಯಲಾಗದು. ಸಾಧಿಸಿ ಗೆಲ್ಲಲಾಗದು. ಉಳಿದಿರುವ ದಾರಿ ಇದೇ ಹೊರತು ಅನ್ಯ ನೇರ ಮಾರ್ಗ ಅವರಿಗೆ ತೋಚದಾಗಿದೆ. ಏನೇ ಇರಲಿ ದೊಡ್ಡಪ್ಪ ಕರೆದರೆ ಹೋಗದೆ ಇರಲು ಸಾಧ್ಯವೇ? ಆಗಬೇಕಾಗಿರುವುದು ಆಗಲೇ ಬೇಕು. ಒಂದೊಮ್ಮೆಗೆ ನಾವು ಆಡಿದರೆ ಶಕುನಿಯ ಕುತಂತ್ರದಿಂದ ಮತ್ತೆ ಸೋತರೂ ಸೋಲಬಹುದು. ಎಲ್ಲವನ್ನೂ ಕಳೆದು ಕೊಳ್ಳುವ ಸಾಧ್ಯತೆಯೂ ಇದೆ. ಧರ್ಮ ಮೀರಿ ವ್ಯವಹರಿಸಲು ನಮಗಾಗದು. ಹಾಗಾಗಿ ನಾವು ಹೋಗಲೆ ಬೇಕಾದ ಅನಿವಾರ್ಯತೆ ಒದಗಿದೆ. ಏನೇ ಕಷ್ಟ ಬಂದರೂ ಧರ್ಮ ಪಥದಲ್ಲೇ ಸಾಗೋಣ. ನಮಗೆ ಧರ್ಮವೇ ಶ್ರೀರಕ್ಷೆ.” ಎಂದು ಸಕಲ ಹುನ್ನಾರವನ್ನೂ ಅರಿತು ನಿರ್ಧಾರ ಪ್ರಕಟಿಸಿದನು. ಕೇಳಿದ ಭೀಮಾರ್ಜುನರು, ನಕುಲ ಸಹದೇವರು, ಕುಂತಿ ದ್ರೌಪದಿ ತಡೆಯಲು ವಿಧಿಯಿಲ್ಲದೆ ಜೊತೆಯಾಗಿ ಮರಳಿ ಹಸ್ತಿನಾವತಿಗೆ ಬಂದು ಸೇರಿದರು.

ಧರ್ಮರಾಯನನ್ನು ವಿಧಿಯೆ ಸೆಳೆದು ತಂದಿದೆ ಎಂದರೆ ತಪ್ಪಾಗದು. ವಿದುರ – ಭೀಷ್ಮಾದಿಗಳಿಗೆ ಮನೋವೇದನೆಯಾದರೂ ಆಕ್ಷೇಪಿಸುವ ವ್ಯಾಪ್ತಿಯ ವಿಚಾರವಾಗಿರಲಿಲ್ಲ. ಧರ್ಮರಾಯನು ಯೋಚಿಸಿಯೆ ಪುರ ಪ್ರವೇಶ ಮಾಡಿದನು. “ಇಲ್ಲಿ ದ್ಯೂತ ಸುಖಾಂತ್ಯವಾಗದು. ಅನ್ಯಾಯ ನಡೆದರೂ ಅಂತಿಮವಾಗಿ ಗೆಲ್ಲುವುದು ಧರ್ಮವೇ ಹೊರತು ಅಧರ್ಮವಲ್ಲ. ಪ್ರಾರಬ್ಧ ಕರ್ಮದ ಫಲ ಅನುಭವಿಸಲೇ ಬೇಕು. ಅಧರ್ಮಿಗಳ ಪಾಪದ ಕೊಡ ತುಂಬದೆ ಅವರು ಮುಕ್ತರಾಗಲಾರರು. ಈ ಪ್ರಕ್ರಿಯೆಗೆ ನಿಯತಿ ನಮ್ಮನ್ನೇ ಮಧ್ಯವರ್ತಿಗಳಾಗಿ ಆಡಿಸುತ್ತಿರುವಂತಿದೆ. ಭಗವಂತನ ಕೃಪೆಯಿದ್ದರೆ, ಧರ್ಮದ ಕಕ್ಷೆಯೊಳಗೆ ನಮಗೆ ರಕ್ಷಣೆ ಇದ್ದೇ ಇದೆ. ಗೊಂದಲಕ್ಕೊಳಗಾಗದೆ ವಿಧಿಯಾಟದಲ್ಲಿ ನಾನು ಪಾತ್ರಧಾರಿಯಾಗುವೆ.” ಈ ರೀತಿ ತರ್ಕಿಸುತ್ತಾ ಪಾಂಡವರಿಗಾಗಿ ನಿಯೋಜಿತವಾಗಿದ್ದ ಅರಮನೆಯಲ್ಲಿ ವಿಶ್ರಾಂತರಾದರು. ಆತಿಥ್ಯ ಸ್ವೀಕರಿಸಿ, ರಾತ್ರಿಯ ನಿದ್ದೆಗಳೆದು, ಪ್ರಾತಃವಿಧಿ ಪೂರೈಸಿ ಕುಳಿತಿರುವಾಗ ದೂತ ಮುಖೇನ ಮರುದ್ಯೂತಕ್ಕೆ ನಿಮಂತ್ರಣ ಬಂತು.

ಅಂತೆಯೇ ಪಾಂಡುಪುತ್ರರು ದೇವತಾ ಪ್ರಾರ್ಥನೆಗೈದು ಬಂದು ದ್ಯೂತಕ್ಕಾಗಿ ವ್ಯವಸ್ಥೆಯಾಗಿದ್ದ ಭವನ ಸೇರಿದರು. ಮತ್ತೆ ಮರು ದ್ಯೂತದಲ್ಲೂ ದುರ್ಯೋಧನನ ಪ್ರತಿನಿಧಿಯಾಗಿ ಶಕುನಿಯೆ ಆಡಲಿರುವ ವಿಚಾರದ ಘೋಷಣೆಯಾಯಿತು. ಧರ್ಮರಾಯನು ಪ್ರತಿಸ್ಪರ್ಧಿಯಾಗಿ ತನ್ನ ಪೀಠವೇರಿ ಆಟಕ್ಕೆ ಕುಳಿತನು.

ದುರ್ಯೋಧನ ಈ ಬಾರಿ ನಮ್ಮ ದ್ಯೂತದ ಆಟದಲ್ಲಿ ಸಂಪತ್ತು, ಐಶ್ವರ್ಯ, ಗಜ, ತುರಗ, ಸೇನೆ, ಅಥವಾ ಮನುಷ್ಯರನ್ನು ಪಣವಾಗಿಟ್ಟು ಆಡುವುದು ಬೇಡ. ಹೀಗೆಯೇ ಸಾಮಾನ್ಯವಾಗಿ ಪಣವಿಡದೇ ಆಟ ಆಡೋಣ ಎಂದನು. ಈ ನೂತನ ನಿಯಮ ಕೇಳಿದ ಪಾಂಡವರಲ್ಲಿ ಮನ ಮಾಡಿದ್ದ ಆತಂಕ ಕಳೆದು ನಿರುಮ್ಮಳರಾಗಿ ದೀರ್ಘ ಉಸಿರೆಳೆದು ಬಿಡುವಷ್ಟರಲ್ಲಿ, ದುರ್ಯೋಧನ ಮುಂದುವರಿಸಿದ – “ಆದರೆ, ಒಂದು ಶರತ್ತಿನ ಮೇಲೆ ಆಟ ಆಡೋಣ. ಏನೆಂದರೆ, ಆಟ ಸಾಗಿ ಯಾರು ಸೋಲುತ್ತಾರೋ, ಅವರು ಹನ್ನೆರಡು ವರ್ಷ ವನವಾಸ ಮತ್ತೆ ಒಂದು ವರ್ಷದ ಅಜ್ಞಾತ – ಗುಪ್ತವಾಸ ಮಾಡಬೇಕು. ವನವಾಸ ಕಾಲದಲ್ಲಿ ಸಂಚಾರಿಗಳಾಗಿ ತಿರುಗಾಡಬಹುದಾದರೂ, ಅಜ್ಞಾತವಾಸದ ಅವಧಿಯಲ್ಲಿ ಒಂದೇ ಕಡೆ ನೆಲೆನಿಂತು, ನಿಜ ಮರೆಸಿ ಅಜ್ಞಾತರಾಗಿ ಕಾಲ ಕಳೆಯಬೇಕು. ಸೋತವರು ಇಂತಹ ಅಜ್ಞಾತವಾಸದಲ್ಲಿರುವಾಗ ಗೆದ್ದವರು ಪತ್ತೆ ಹಚ್ಚಿ ಗುರುತಿಸುವಲ್ಲಿ ಸಫಲರಾದರೆ ಸೋತವರು ಮತ್ತೆ ಹನ್ನೆರಡು ವರ್ಷ ವನವಾಸ – ಒಂದು ವರ್ಷ ಅಜ್ಞಾತವಾಸಿಗಳಾಗಿ ಕಾಲ ಕಳೆಯಬೇಕು. ಮತ್ತೆ ಅಜ್ಞಾತವಾಸದಲ್ಲಿ ಜ್ಞಾತರಾದರೆ ಪುನರಪಿ ದ್ವಾದಶ ಸಂವತ್ಸರ ಕಾಲ ಕಾನನವಾಸವೂ, ಪೂರ್ಣ ಸಂವತ್ಸರ ಕಾಲ ನಿಯಮಬದ್ದ ಗುಪ್ತವಾಸವೂ ಊರ್ಜಿತವಾಗುತ್ತದೆ” ಎಂದು ನಿಬಂಧನೆಯನ್ನು ಸ್ಪಷ್ಟವಾಗಿ ವಿವರಿಸಿದನು.

ಧರ್ಮರಾಯ ವಿಸ್ಮಿತನಾಗಿ, “ಇದೆಂತಹ ವಿಚಿತ್ರ ಪಣ? ಸೋತವರು ಶಾಶ್ವತವಾಗಿ ರಾಜ್ಯಾಧಿಕಾರದಿಂದ ವಂಚಿತರಾಗಿ ಉಳಿಯುವಂತೆ ಮಾಡುವ ಯೋಜಿತ ಸಂಚು. ದ್ಯೂತದಲ್ಲಿ ಪ್ರಬಲನಾದ ಶಕುನಿ ತಾನು ಗೆದ್ದೇ ಗೆಲ್ಲಬಲ್ಲೆ ಎಂಬ ಪೂರ್ಣ ವಿಶ್ವಾಸದಿಂದ ನಮ್ಮ ಸಾಮ್ರಾಜ್ಯ ಕಸಿಯಲು ರೂಪಿಸಿದ ಕುತಂತ್ರವಿದು” ಹೀಗೆ ವಾಮಮಾರ್ಗದ ಮುಖೇನ ಅಧಿಕಾರ ಸ್ಥಾಪನೆಯ ತಂತ್ರಗಾರಿಕೆಯಿದು ಎಂದರ್ಥವಾಯಿತು ಧರ್ಮಜನಿಗೆ.

ಮುಂದುವರಿಯುವುದು…..

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page