22.7 C
Udupi
Monday, February 16, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 173

ಭರತೇಶ್ ಶೆಟ್ಟಿ ಎಕ್ಕಾರ್

ದ್ರೌಪದಿಯ ಸ್ವಾಭಿಮಾನ ಹಾಗೂ ಪ್ರಜ್ಞೆಯನ್ನು ಬಹುವಾಗಿ ಮೆಚ್ಚಿದ ಧೃತರಾಷ್ಟ್ರ ಸಂತೋಷಗೊಂಡನು. ತಕ್ಷಣ ಯೋಚಿಸಿ ಸ್ವ ಇಚ್ಚೆಯಿಂದ ಆಜ್ಞೆ ಮಾಡಿದನು ” ಮಗಳೇ, ನೀನು ಕೇಳದಿದ್ದರೂ ಪರವಾಗಿಲ್ಲ. ನನಗಾದ ಸಂತೋಷದಿಂದ ಮೆಚ್ಚುಗೆಯ ರೂಪದಲ್ಲಿ ನನ್ನ ಕೊಡುಗೆಯಾಗಿ ನೀವು ದ್ಯೂತದಲ್ಲಿ ಏನೇನು ಕಳಕೊಂಡಿದ್ದೀರೋ ಅದೆಲ್ಲವೂ ಮರಳಿ ಪಾಂಡವರದ್ದೇ ಆಗುವಂತೆ ಹಿಂದಿರುಗಿಸುತ್ತಿದ್ದೇನೆ. ಸ್ನೇಹದ್ಯೂತಕ್ಕೆಂದು ಕರೆದ ಕಾರಣ ಸ್ನೇಹಪೂರ್ವಕವಾಗಿ ಸರ್ವ ಸಂಪತ್ತು ಅವರಿಗೆ ಸೇರಲಿ. ಪಾಂಡವರು ನನಗೆ ಮಕ್ಕಳೇ ಆಗಿದ್ದಾರೆ”. ಎಂದನು

ಧೃತರಾಷ್ಟ್ರನ ಆಜ್ಞೆಯಂತೆ ಪಾಂಡವರ ಆಯುಧಗಳ ಸಹಿತ ಮುಕುಟ, ಸಕಲಾಭರಣಗಳೂ ನೀಡಲ್ಪಟ್ಟವು. ಒತ್ತೆಯಿಟ್ಟು ಕಳಕೊಂಡ ಸರ್ವ ಸಂಪದಗಳೂ ಸ್ವತಂತ್ರವಾದವು. ಅವರೆಲ್ಲರೂ ವಸನ ಭೂಷಣ ಧರಿಸಿ ಆಯುಧಪಾಣಿಗಳಾಗಿ ನಿಂತರು. ದ್ರೌಪದಿಯೂ ಅವರ ಸನಿಹದಲ್ಲಿ ಅನುಸರಿಸಿ ಸ್ಥಿತಳಾದಳು.

ಧೃತರಾಷ್ಟ್ರನ ಅಪ್ಪಣೆಯಿಂದ ದುರ್ಯೋಧನನ ಮುಖ ನಿರಾಸೆಗೊಂಡು ಕಪ್ಪಡರಿ ಹೋಯಿತು. ಅದನ್ನು ಕಂಡು ಕರ್ಣ, “ಪಾಂಡವರಿಗೆ ಮರು ಸಂಪಾದನೆಯಾಗಲು ಹೆಣ್ಣಿನ ಕಣ್ಣೀರು ಅಸ್ತ್ರವಾಗಬೇಕಾಯಿತು” ಎಂದನು. ಇದನ್ನು ಕೇಳಿದ ದುಶ್ಯಾಸನ “ಈ ಪಾಂಡವರನ್ನೊಮ್ಮೆ ನೋಡಿ ಹೆದರಿದ ಹಸುಗಳಂತೆ ಕಾಣುತ್ತಾರೆ” ಎಂದು ಅಪಹಾಸ್ಯ ಮಾಡಿದನು. ಆಗ ಮತ್ತೆ ಕರ್ಣ “ಬರೇ ಹಸುಗಳಲ್ಲ.. ಹೋರಿಗಳು ಒಂದು ಹಸುವಿನ ಹಿಂದೆ ಐದು ಹೋರಿಗಳು” ಎಂದು ಟೀಕೆ ಮಾಡಿದನು. ದುರ್ಯೋಧನಾದಿಗಳು ಈ ಮಾತು ಕೇಳಿ ಗೊಳ್ಳೆಂದು ನಗೆಯಾಡಿ “ಹೌದು ಹೋರಿಗಳೇ ಇವರು ಹೋರಿಗಳು…” ಎಂಬಂತೆ ನೀಚ ವಚನಗಳನ್ನಾಡುತ್ತಾ ವಿಕೃತ ಸ್ವಭಾವ ಪ್ರಕಟಿಸಿದನು.

ವಿಪರೀತವಾದ ಈ ವರ್ತನೆ ನೋಡಿ ಕೆರಳಿದ ಭೀಮಸೇನ ತನ್ನ ರುಧಿರಮುಖಿ ಗದೆ ಬೀಸುತ್ತಾ..”ಬನ್ನಿ ಹೆಣ್ಣನ್ನು ಎದುರಿಟ್ಟು ಸಂಪಾದಿಸುವ ಹೇಡಿಗಳು ನಾವಲ್ಲ. ನಾನೊಬ್ಬನೇ ನೀವಿಷ್ಟೂ ಮಂದಿ ದುಷ್ಟರನ್ನು ಕ್ಷಣಾರ್ಧದಲ್ಲಿ ನಿರ್ನಾಮ ಮಾಡಿ ಪೂರ್ಣ ಸಂಪಾದನೆ ಸಾಧಿಸುವೆ” ಎಂದು ಅಬ್ಬರಿಸುತ್ತಾ ಮುಂದುವರಿದನು. ಆಗ ಅರ್ಜುನ ತಡೆಯುವ ಪ್ರಯತ್ನ ಮಾಡಿದರೂ, ದೂಡಿ ಮುನ್ನಡೆದಾಗ, ಧರ್ಮರಾಯನೇ ಎದುರು ಬಂದು ಗದೆಯನ್ನು ಹಿಡಿದು ನಿಲ್ಲಿಸಿದನು.

ಬಳಿಕ ಪಾಂಡವರು ಅಲ್ಲಿ ನಿಲ್ಲಲಾಗದೆ ಕುಂತಿಯನ್ನು ಕರೆದು ಜೊತೆಯಾಗಿ ಇಂದ್ರಪ್ರಸ್ಥಕ್ಕೆ ತೆರಳುವ ಸಿದ್ಧತೆ ಮಾಡಿದರು. ಅಂತೆಯೆ ಅಲ್ಲಿಂದ ಬೀಳ್ಗೊಟ್ಟು ಧೃತರಾಷ್ಟ್ರ, ಭೀಷ್ಮ, ವಿದುರ, ದ್ರೋಣಾದಿ ಹಿರಿಯರಿಗೆ ವಂದಿಸಿ ಇಂದ್ರಪ್ರಸ್ಥದತ್ತ ಮುಖ ಮಾಡಿ ಹೊರಟರು.

ಆ ಕೂಡಲೇ ದುರ್ಯೋಧನ ತನ್ನ ತಂದೆ ಧೃತರಾಷ್ಟ್ರನಲ್ಲಿಗೆ ಬಂದು ಇನ್ನಿಲ್ಲದಂತೆ ಅಂಗಲಾಚಿ ತೊಳಲಾಟ ತೋಡಿ “ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆಯಲ್ಲ ಅಪ್ಪಾ! ಇನ್ನು ಈ ಪಾಂಡವರ ಎದುರು ಬದುಕಿರಲು ಅಸಾಧ್ಯ. ಇಂದಲ್ಲ ನಾಳೆ ಇವರು ಇದಕ್ಕಿಂತಲೂ ಮಿಗಿಲಾಗಿ ನಿನ್ನ ಮಕ್ಕಳೆದುರು ಬೆಳೆದು ನಿಲ್ಲುತ್ತಾರೆ. ಸರ್ವ ಸ್ವಾಧೀನ ಪಡಿಸಿ ನಮಗೆ ಬದುಕಿಲ್ಲದಂತೆ ಮಾಡುತ್ತಾರೆ. ಈ ಕೂಡಲೇ ಅವರನ್ನು ಮತ್ತೆ ಕರೆಸಿಕೊಂಡು ದ್ಯೂತವಾಡುವಂತೆ ಮಾಡಬೇಕು. ದ್ಯೂತ ವ್ಯಸನಿಯಾದ ಧರ್ಮರಾಯ ಬಂದೇ ಬರುತ್ತಾನೆ. ಆಡಿ ಸೋಲುತ್ತಾನೆ. ಸೋತು ಭಿಕಾರಿಯಾದ ಆ ಪಾಂಡವರು ಮತ್ತೆ ಕಾಡು ಪಾಲಾಗಬೇಕು. ನಮ್ಮ ದಾರಿಯ ಮುಳ್ಳು ಕಿತ್ತೊಗೆಯಲ್ಪಡುವಂತಾಗಿ ನಾವು ಚಕ್ರವರ್ತಿಗಳಾಗುವಂತೆ ಮಾಡಬೇಕು” ಎಂದು ಗೋಗರೆದನು. ಮೊದಲೇ ಪುತ್ರ ವ್ಯಾಮೋಹದ ಪರಾಕಾಷ್ಟೆ ಏರಿದ್ದ ರಾಜ ಧೃತರಾಷ್ಟ್ರ ಆರಂಭದಲ್ಲಿ ಒಪ್ಪಲಿಲ್ಲ. ಬುದ್ಧಿಯ ಮಾತುಗಳಿಂದ ತಿದ್ದುವ ಪ್ರಯತ್ನ ಮಾಡಿದನು. ಆದರೆ ದುರ್ಯೋಧನ ತನ್ನ ಹಠ ಬಿಡದೆ, ಪ್ರಾಣ ತ್ಯಾಗದಂತಹ ಮಾತುಗಳನ್ನಾಡಿದಾಗ ಧೃತರಾಷ್ಟ್ರ ಅಸಹಾಯಕನಾಗಿ ಮೃದುವಾಗತೊಡಗಿದನು. ಆದರೂ ನೇರವಾಗಿ ಒಪ್ಪದೆ ಸಮಾಲೋಚನೆಗೆ ಮುಂದಾಗಿ ಚರ್ಚೆ ಮಾಡಿ ತೀರ್ಮಾನಿಸಲು ನಿರ್ಧರಿಸಿದನು. ಹೀಗೆ ಆಲೋಚಿಸಿದಾಗ ಶಕುನಿಯ ದುಷ್ಪ್ರೇರಣೆಯ ನಿರಂತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅಂತಿಮವಾಗಿ ಪಾಂಡು ಪುತ್ರರು ಚಕ್ರವರ್ತಿ ಸಾಮ್ರಾಟರಾಗಿ, ಅವರಿಗೆ ಅಡಿಯಾಳುಗಳಾಗಿ ಕೌರವರು ಬದುಕುವ ಸ್ಥಿತಿ ನಿಚ್ಚಳವಾಗಿ ಸಾಬೀತಾಯಿತು. ಪರಿಣಾಮದಲ್ಲಿ ಗೊಂದಲಕ್ಕೊಳಗಾದ ಧೃತರಾಷ್ಟ್ರನು ವಿವೇಕ ಶೂನ್ಯನಾಗಿ ಮರುದ್ಯೂತಕ್ಕೆ ಒಪ್ಪಿಗೆ ನೀಡಿದನು. ಪ್ರಾತಿಕಾಮಿಯನ್ನು ಕರೆದು ಈ ಕೂಡಲೆ ಇಂದ್ರಪ್ರಸ್ಥದತ್ತ ಹೋಗುತ್ತಿರುವ ಪಾಂಡವರು ಮರಳಿ ಹಸ್ತಿನಾವತಿಗೆ ಬರಬೇಕಂತೆ ಎಂದು ನಾನು ಆಮಂತ್ರಿಸಿರುವೆನೆಂದು ಹೇಳು. ಇಲ್ಲಿ ನಡೆದು ಹೋದ ಘಟನೆಗಳಿಂದ ರಾಜಾ ಧೃತರಾಷ್ಟ್ರ ಬಹುವಾಗಿ ನೊಂದುಕೊಂಡಿದ್ದಾರೆ. ಪ್ರಾಯಶ್ಚಿತ್ತವಾಗಿ ನಾಲ್ಕೈದು ದಿನಗಳ ಕಾಲ ನೀವೆಲ್ಲರೂ ಹಸ್ತಿನಾವತಿಯಲ್ಲಿ ವಿರಮಿಸಿ ಆತಿಥ್ಯ ಸ್ವೀಕರಿಸಿ ಹೋಗಬೇಕಂತೆ. ಮತ್ತೆ ಒಮ್ಮೆ ಸಂತೋಷಕ್ಕಾಗಿ ದ್ಯೂತ ಕೂಟವನ್ನೂ ಆಯೋಜಿಸಿ ನೋವು ಮರೆಯುವ ಪ್ರಯತ್ನ ಮಾಡುತ್ತಾರಂತೆ. ಹೀಗೆ ನನ್ನ ಮುಖವಾಣಿಯಾಗಿ ನೀನು ಹೇಳಬಾಮರಳಿ ಕರೆದುಕೊಂಡು ಬಾ” ಎಂದು ಪ್ರಾತಿಕಾಮಿಗೆ ಧೃತರಾಷ್ಟ್ರ ಆಜ್ಞಾಪಿಸಿದನು. ರಾಜಾಜ್ಞೆ ಹೊತ್ತು ಪ್ರಾತಿಕಾಮಿ ಪಾಂಡವರು ಹೋದ ಇಂದ್ರಪ್ರಸ್ಥದ ದಾರಿಯಾಗಿ ಬೆಂಬತ್ತಿ ಹೊರಟನು.

ಆಂತರಿಕವಾಗಿ ಆಪ್ತರೊಡನೆ ತುರ್ತು ಸಮಾಲೋಚನೆಯ ಬಳಿಕ ಧೃತರಾಷ್ಟ್ರನ ತೀರ್ಮಾನ ತಿಳಿದು ಭೀಷ್ಮ ವಿದುರಾದಿಗಳು, ಕೃಪ ದ್ರೋಣಾಚಾರ್ಯರು ಗಾಂಧಾರಿಯ ಒಡಗೂಡಿಗೊಂಡು ಧೃತರಾಷ್ಟ್ರನಲ್ಲಿಗೆ ಬಂದು ವಿಧ ವಿಧವಾಗಿ ತರ್ಕಿಸಿದರು. ದ್ಯೂತ ಸುಖಾಂತ್ಯವಾಗದು. ವಿನಾಶಕ್ಕೆ ಹೇತುವಾಗುವುದು. ಪಾಂಡವರು ಸರ್ವ ಸಮರ್ಥರಾಗಿದ್ದಾರೆ. ವಂಚನೆಗೊಳಗಾದರೂ ಮತ್ತೆ ಸ್ವಸಾಮರ್ಥ್ಯದಿಂದ ಪುನರಪಿ ಸಾಧಿಸಿ ಸಂಪಾದಿಸಬಲ್ಲ ಯೋಗ್ಯತೆ ಅವರಿಗಿದೆ. ಪರಿಣಾಮ ಸರ್ವನಾಶಕ್ಕೆ ದಾರಿಯಾದೀತು ಎಂದು ವಿದುರ ಎಳೆಎಳೆಯಾಗಿ ವಿವರಿಸಿದರೂ ಕೇಳಲಿಲ್ಲ. ಗಾಂಧಾರಿಯೂ ಈಗೊಮ್ಮೆ ಆದ ಅನಾಹುತವೆ ದುಸ್ವಪ್ನದಂತೆ ಕಾಡುತ್ತಿದೆ. ಮತ್ತೆ ಆ ದ್ಯೂತದ ಪುನರಾವರ್ತನೆ ಬೇಡವೆಂದು ಬೇಡಿದರೂ ಧೃತರಾಷ್ಟ್ರ ಕೇಳಲಿಲ್ಲ. ಬದಲಾಗಿ “ಈಗ ಕರೆಸಿರುವುದು ಸಂತೋಷಕೂಟಕ್ಕೆ. ಏನೂ ಭಯಪಡುವ ಅಗತ್ಯವಿಲ್ಲ, ಉದ್ದೇಶ ಸ್ಪಷ್ಟವಿದೆ. ಎಲ್ಲವನ್ನೂ ಅರಿತು ನಮ್ಮ ಒಳಿತಿಗಾಗಿಯೆ ತೀರ್ಮಾನಿಸಿದ್ದೇನೆ” ಎಂದು ಸೂಚ್ಯವಾಗಿ ಹೇಳಿ ಅವರೆಲ್ಲರ ಒತ್ತಡದಿಂದ ನುಣುಚಿಕೊಂಡನು.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page