ಭಾಗ 171
ಭರತೇಶ್ ಶೆಟ್ಟಿ ಎಕ್ಕಾರ್

ಹೀಗೆ ನಿಬಂಧನೆಯ ಮೇಲೆ ವಿದುರ ಸಹ್ಯ ಅಸಹ್ಯ ಸಂಗತಿಗಳನ್ನು, ಧರ್ಮಪಾಲನೆಗೆ ಮಹಾರಾಜನಾಗಿ ಧೃತರಾಷ್ಟ್ರ ಅನುಸರಿಸಲೇ ಬೇಕಾದ ವಿಷಯಗಳನ್ನೂ ವಿವರಿಸಲಾರಂಭಿಸಿದನು. “ಮಹಾರಾಜ, ಪಾಂಡವರನ್ನು ಕಾಡಿಗೆ ಅಟ್ಟಿದ್ದೇವೆ, ನಮ್ಮ ಹಾದಿ ಸುಗಮವಾಗಿದೆಯೆಂದು ನಿನ್ನ ಮಕ್ಕಳು ಉಬ್ಬಿ ಕೊಬ್ಬಿದ್ದಾರೆ. ಪಾಂಡವರು ಕಾಡು ಸೇರಿದರೂ ಧರ್ಮ ಪಥದಲ್ಲಿ ಸಾಗಿ ಪುಣ್ಯ ಸಂಚಯ ಮುಖೇನ ಬಲಾನ್ವಿತರೇ ಆಗುತ್ತಾರೆ. ಆದರೆ ಈ ಕೌರವರು ಪಾಪ ಕೂಪದಲ್ಲಿ ಮಿಂದೇಳುತ್ತಾ ಅಧರ್ಮಿಗಳಾಗಿ ಅಧೋಗತಿ ಪ್ರಾಪ್ತಿಯ ಪಥ ಕ್ರಮಿಸಲಾರಂಭಿಸಿದ್ದಾರೆ. ತಡೆಯುವ ಮನಸ್ಸು ನಿನ್ನಲ್ಲೂ ಕ್ಷೀಣವಾದ ಕಾರಣದಿಂದಲೇ ಅವರಿಗೆ ಪರೋಕ್ಷ ಪ್ರೇರಣೆಯಾಗಿದೆ. ಸೂಕ್ಷ್ಮವಾಗಿ ಗಮನಿಸು, ನಿನ್ನ ಮಕ್ಕಳನ್ನು ದಮನಿಸಲು ನಿಂತರೆ ಭೀಮಾರ್ಜುನರಿಗೆ ಹೆಚ್ಚು ಹೊತ್ತು ಬೇಕಿತ್ತೇ? ಆದರೂ ಅವರಣ್ಣ ಧರ್ಮರಾಯನ ಆಜ್ಞಾನುವರ್ತಿಗಳಾಗಿ ಕಾನನವಾಸಿಗಳಾಗಿದ್ದಾರೆ. ಇನ್ನೂ ಕಾಲ ಮಿಂಚಿ ಹೋಗಿಲ್ಲ, ನಿನ್ನ ಮಕ್ಕಳು ತಪ್ಪನ್ನು ಅರಿತು ಅಧರ್ಮ ಮಾರ್ಗ ತೊರೆದು ಪಾಂಡವರನ್ನು ಕರೆತಂದು ಕ್ಷಮೆ ಯಾಚಿಸಿ, ಅವರದ್ದಾದ ಸರ್ವ ಸಂಪತ್ತನ್ನೂ ಮರಳಿ ನೀಡಿ ಸೌಹಾರ್ದಯುತವಾಗಿ ಬದುಕಿದರೆ ಉಳಿಗಾಲವಿದೆ. ಇಲ್ಲದೇ ಹೋದರೆ ಪಾಂಡವರ ಪ್ರತಿಜ್ಞೆಯ ಸಾಕ್ಷಾತ್ಕಾರದ ಪ್ರತೀಕ್ಷೆ ಮಾಡಬೇಕೆ ಹೊರತು ಅನ್ಯತಾ ಏನೂ ಸಾಗದು. ಪ್ರತಿಜ್ಞೆ ಮಾಡಿದ ಪಾಂಡವರನ್ನು ಕಾಡಿನಿಂದ ಕರೆಸುವ ಆಜ್ಞೆ ನೀನಾದರೂ ಮಾಡಬಹುದು. ಪ್ರಾಯಶ್ಚಿತ ಪೂಜೆಗಳಿಂದ ಪ್ರತಿಜ್ಞೆ ಪೂರೈಸದೆ ಬರಬಹುದಾದ ವಚನ ಭ್ರಷ್ಟತೆಯ ದೋಷಗಳಿಗೆ ತಡೆಯಾಗಿಸಬಹುದು. ಧರ್ಮರಾಯನೂ ಈ ವಿಧಾನಕ್ಕೆ ಒಪ್ಪಿಯೇ ಒಪ್ಪುತ್ತಾನೆ. ಯಾಕೆಂದರೆ ಸರ್ವನಾಶ ಬಯಸುವ ಕುತ್ಸಿತ ಮನಸ್ಸು ಆತನದ್ದಲ್ಲ. ಹೀಗೆ ಮಾಡಲು ಮುಂದಾದಾಗ ನಿನ್ನ ಮಕ್ಕಳು ಒಪ್ಪದೆ ಪ್ರತಿರೋಧ ಒಡ್ಡುತ್ತಾರೆ. ರಾಜಾಜ್ಞೆ ಮಾಡಿ ನೀನು ನಿಯಂತ್ರಿಸಿಕೊಳ್ಳಬೇಕು. ಒಂದೊಮ್ಮೆಗೆ ನಿನ್ನ ಮಗ ದುರ್ಯೋಧನ ಕ್ರೋಧಾವೇಶಕ್ಕೋ, ಅತಿರೇಕ ಪ್ರವೃತ್ತಿಗೋ ಮನ ಮಾಡಿದರೂ ಮಾಡಿಯಾನು. ಆತನ ಹುಟ್ಟೇ ವಿನಾಶದ ವಿಚಿತ್ರ ಶಕುನಗಳನ್ನು ತೋರಿತ್ತು. ಪ್ರಾಜ್ಞರ ಸಲಹೆಯಂತೆ ಅಂದು ನೀನು ಆ ಅನಿಷ್ಟ ಶಿಶುವನ್ನು ಕಳೆದುಕೊಳ್ಳುವ ಗಟ್ಟಿ ಮನಸ್ಸು ಮಾಡಿದ್ದರೆ, ಇಂದು ಬಂದಿರುವ – ಮುಂದೆ ಬರಬಹುದಾದ ಭೀಕರ ಸ್ಥಿತಿಗಳು ನಿರ್ಮಾಣವಾಗದೆ ತಡೆಯಲ್ಪಡಬಹುದು. ಈಗಾಗಲೆ ಆಗಿರುವುದು ಆಗಿ ಹೋಗಿದೆ. ಇನ್ನು ಮುಂದೆ ಧರ್ಮಬುದ್ಧಿಯಿಂದ ಸರಿಪಡಿಸಲು ಮುಂದಾಗುವಾಗ ನಿನ್ನ ಮಗ ಅಡ್ಡಿಪಡಿಸಿದರೆ ಅಂತಹ ದುಷ್ಟ ಬುದ್ದಿಯನ್ನು ನಿಗ್ರಹಿಸಿಯಾದರೂ ನೀನು ನ್ಯಾಯ ಧರ್ಮದ ನಡೆಯಲ್ಲಿ ಸಾಗಬೇಕು. ಹಾಗೆ ನೀನು ಮಾಡಿದೆ ಎಂದಾದರೆ ನಿನ್ನ ಉಳಿದ ಮಕ್ಕಳಾದರೂ ಬದುಕುಳಿಯುತ್ತಾರೆ. ತಪ್ಪಿದರೆ ಪಾಂಡವರ ಪ್ರತಿಜ್ಞೆಯಂತೆ ನಿನ್ನ ಮಕ್ಕಳೂ, ಕರ್ಣ ಶಕುನಿಯಾದಿ ಸಮಸ್ತ ಪರಿವಾರವೂ ಸೇರಿ ಪಾಂಡವರಿಗೆ ಮಾಡಿದ ಅಪಚಾರ, ಅಧರ್ಮ, ಅನ್ಯಾಯದಿಂದ ಉತ್ಪತ್ತಿಯಾಗುವ ಪಾಪಾಗ್ನಿ ಪ್ರಜ್ವಲಿಸುತ್ತದೆ. ಅದೇ ಯಜ್ಞವಾಗಿ ಸಮಸ್ತ ಪರಿವಾರ ಸಹಿತ ನಿನ್ನ ಸಂತಾನವೆಲ್ಲವೂ ಆಹುತಿಯಾಗುವುದನ್ನು ಪ್ರತ್ಯಕ್ಷ ಸಾಕ್ಷಿಯಾಗಿ ನೋಡುತ್ತಾ ಅಸಹಾಯಕನಾಗಿ ಕೊರಗಿ ಯಾತನೆ ಅನುಭವಿಸಬೇಕಾಗುತ್ತದೆ. ಆಗ ಸಂತೈಸಲು ಯಾರು ಉಳಿದಿರಲಾರರು. ವಿವೇಚಿಸಿ ನಿರ್ಧರಿಸಲು ನಿನಗಿರುವ ಕಟ್ಟ ಕಡೆಯ ಅವಕಾಶವಿದು” ಎಂದನು.
ಮೊದಲೇ ಶಾರೀರಿಕವಾಗಿ ಕಣ್ಣು ಕಾಣದ ಅಂಧರಾಜ ಧೃತರಾಷ್ಟ್ರ, ಈಗ ಆತನ ಮನಸ್ಸಿಗೂ ಪುತ್ರ ವ್ಯಾಮೋಹ ಕುರುಡುತನವನ್ನೇ ಕವಿಯುವಂತೆ ಮಾಡಿತು. ಪರಿಣಾಮ ವಿದುರನ ಧರ್ಮವಾಕ್ಯಗಳು ಗಾಯದ ಮೇಲೆ ಉಪ್ಪು ಸುರಿದಂತೆ ಉರಿಯತೊಡಗಿತು. ದುರ್ಯೋಧನನನ್ನು ಕಳೆದುಕೊಳ್ಳಲು ಸಿದ್ಧನಿರದೆ ಆತನ ಕೃತ್ಯಗಳು ದೌಷ್ಟ್ಯದ್ದೆಂದು ಮನಸ್ಸೊಪ್ಪಲಿಲ್ಲ. ಬದಲಾಗಿ ವಿದುರ ಪಾಂಡವ ಪಕ್ಷಪಾತಿ, ತನ್ನ ಮಕ್ಕಳ ವಿರೋಧಿ ಎಂದಷ್ಟೇ ಬಿಂಬಿಸಿತು. ಕಾಮಾತುರನಿಗೆ ಭಯ, ಲಜ್ಜೆ ಇಲ್ಲದಂತೆ ಅಧಿಕಾರದ ಅತಿಕಾಮಿಗಳಿಗೆ ಭವಿಷ್ಯದ ಕ್ರೂರತೆ ಮನವರಿಕೆಯಾಗದು. ವಿದುರ ಖಳನಾಯಕನಂತೆ ಭಾಸವಾಗಿ ಆತನಲ್ಲೇ ದೋಷ ಕಂಡಿತು.
ವಿಪರೀತ ಕೋಪ ಆವರಿಸಿ ಧೃತರಾಷ್ಟ್ರ ವಿದುರನನ್ನೇ ಮನಬಂದಂತೆ ನಿಂದಿಸಿದನು. “ನೀನು ನೀಚ ಸ್ವಭಾವದವನು. ಕೀಳು ಬುದ್ದಿಯವನು. ನಿನ್ನಂತವನನ್ನು ನನ್ನ ಆತ್ಮೀಯನೆಂದು ಬಗೆದು ಅವಿವೇಕಿಯಾಗಿ ಅಭಿಪ್ರಾಯ ಕೇಳಿದ್ದು ನನ್ನ ಮೂರ್ಖತನ. ಗರತಿಯಲ್ಲದ ಪತ್ನಿಯಿಂದ ಸಂಸಾರ ಉಳಿಸುವ ಸಲಹೆ ಕೇಳಿದಂತಾಯಿತು ನನ್ನ ಸ್ಥಿತಿ. ಜಾರೆಯಾದ ಆಕೆಗೆ ಎಷ್ಟು ಹೇಳಿದರೂ – ಏನೇ ಕೇಳಿದರೂ, ಅವಳ ಮನಸ್ಸು ತನಗಿಷ್ಟವಿರುವಲ್ಲಿಯೇ ಇರುತ್ತದೆ. ನೀನೂ ಹಾಗೆಯೇ. ನಿನಗೆ ಪಾಂಡವರ ಹಿತವೇ ಮುಖ್ಯವಾಗಿ ಹೋಯಿತು. ನೀನು ಅವರಿದ್ದಲ್ಲಿಗೆ ಹೋಗಿ ಸೇರಿಕೋ. ಇಲ್ಲಿದ್ದು ನನ್ನ ಮಕ್ಕಳಿಗೆ ದುರ್ದೆಸೆ ಬಯಸುತ್ತಾ ಇಲ್ಲಿನ ಅನ್ನದಂಡ ಮಾಡುತ್ತಾ, ಭೂಮಿಗೆ ಭಾರವಾಗಿ ಬದುಕಬೇಡ. ಈ ಕ್ಷಣವೇ ಅರಮನೆ ತೊರೆದು ಇಷ್ಟ ಬಂದಲ್ಲಿಗೆ ಹೋಗಿ ಬದುಕಿಕೋ” ಎಂದು ಆಜ್ಞಾಪಿಸಿದನು. ದುರ್ಯೋಧನನನ್ನೆ ನಿಗ್ರಹಿಸಲು ಹೇಳಿದ ಮಾತು ಅಸಹನೀಯ ವೇದನೆ ನೀಡಿದ ಫಲಶ್ರುತಿಯೇ ಈ ಆಜ್ಞೆಗೆ ಪೂರಕ ಕಾರಣವಾಗಿತ್ತು. ಧೃತರಾಷ್ಟ್ರನಿಗೆ ಆತನ ಮಕ್ಕಳೇ ಸರ್ವಸ್ವವಾಗಿದ್ದರು. ಧರ್ಮಬೋದನೆ ಮಾಡಿದ ವಿದುರನೆ ಅರಮನೆಯಿಂದ ಹೊರಹಾಕಿಸಲ್ಪಟ್ಟನು.
ಮುಂದುವರಿಯುವುದು




