ಭಾಗ 169
ಭರತೇಶ್ ಶೆಟ್ಟಿ,ಎಕ್ಕಾರ್

ಕಡು ದುಃಖದಿಂದ ಕಟ್ಟಕಡೆಯದಾಗಿ ದ್ರೌಪದಿ ” ಹಸ್ತಿನೆಯ ಸಭೆಯಲ್ಲಿ ನಾನು ಒಂದು ಪ್ರಶ್ನೆ ಕೇಳುವೆ. ಧರ್ಮಾತ್ಮರಿದ್ದರೆ ಉತ್ತರಿಸಿ. ಇಲ್ಲವಾದರೆ ಈ ಸಭೆಯಲ್ಲಿ ಧರ್ಮಕ್ಕೆ ಬೆಲೆಯಿಲ್ಲ ಎಂದಾಗುತ್ತದೆ. ಧರ್ಮರಾಯ ತನ್ನನ್ನು ಸೋತ ಮೇಲೆ ಎಲ್ಲಾ ಅಧಿಕಾರ ಕಳಕೊಳ್ಳುತ್ತಾನೆ. ಅಂತಹ ಸ್ಥಿತಿಯಲ್ಲಿ ಸ್ವಯಂ ಪರಾಧೀನನಾದ ಆತ ಹೇಗೆ ದ್ಯೂತವಾಡಿದ? ಸ್ವತಂತ್ರಳಾಗಿದ್ದ ಪತ್ನಿಯನ್ನು ಹೇಗೆ ಪಣಕ್ಕೊಡ್ಡಿದ? ಇದು ನ್ಯಾಯವೇ? ಪ್ರಾಜ್ಞರೂ, ದಂಡಾಧಿಕಾರಿಗಳೂ, ಜ್ಞಾನಿಗಳೆಲ್ಲರೂ ಇದ್ದೀರಿ. ನನ್ನ ಪ್ರಶ್ನೆಗೆ ಕರುಣದಿಂದ ಉತ್ತರಿಸಿ” ಎಂದು ಅಂಗಲಾಚಿ ಬೇಡಿದಳು.
ದ್ರೌಪದಿಯ ಅಳಲು ಉತ್ತರವಿಲ್ಲದೆ ಅರಣ್ಯರೋದನ ಸಮನಾಯಿತು. ಆರ್ತನಾದವನ್ನು ಕೇಳಿ ಸಂಯಮ ಕಳೆದುಕೊಂಡ ಭೀಮನ ಸಿಟ್ಟು ತಿರುಗಿದ್ದು ಧರ್ಮರಾಯನತ್ತ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ದ್ಯೂತವಾಡಿದ ಅಣ್ಣನ ಅಂಗೈಯನ್ನೇ ಸುಟ್ಟುಬಿಡುವೆನೆಂದು ಆರ್ಭಟಿಸಿ, ಸಹದೇವನಿಗೆ ಅಗ್ನಿಷ್ಟಿಕೆ ತರಲು ಆಜ್ಞಾಪಿಸಿದನು. ಅರ್ಜುನ ಸಹದೇವನನ್ನು ತಡೆದು ಕುಳ್ಳಿರಿಸಿ, ಅಣ್ಣ ಭೀಮನತ್ತ ಅಸಹನೆಯ ದೃಷ್ಟಿ ಬೀರಿ ಸೈರಿಸು ಎಂಬಂತೆ ಸೂಚನೆ ನೀಡಿದನು. ಹಿರಿಯಣ್ಣ ಧರ್ಮಜನ ಪರವಾಗಿ ತಿಳಿ ಹೇಳಿ ಭೀಮನನ್ನು ಶಾಂತಗೊಳಿಸಿದನು.
ಯಾರೂ ದ್ರೌಪದಿಯ ಪರವಾಗಿ ಸಹಾಯಕ್ಕೆ ಬಾರದೇ ಉಳಿದಾಗ ದುರ್ಯೋಧನನ ತಮ್ಮ ವಿಕರ್ಣ ಎದ್ದು ನಿಂತು ಇಡಿ ಸಭೆಯಲ್ಲಿರುವ ಎಲ್ಲರನ್ನೂ ಕರೆದು ಕರೆದು ಪ್ರಶ್ನಿಸಿದ. “ನಮ್ಮ ವಂಶದ ಸೊಸೆಯನ್ನು ಪಣಕ್ಕೊಡ್ಡಿದುದೇ ತಪ್ಪು. ಅದೂ ತನ್ನನ್ನು ತಾನು ಸೋತ ಬಳಿಕ ಅಧಿಕಾರವೇ ಇಲ್ಲದೆ ಧರ್ಮರಾಯ ಮುಂದುವರಿದದ್ದು ಅಕ್ಷಮ್ಯ. ಇಂತಹ ಘೋರ ಅಧರ್ಮವನ್ನು ಕುತಂತ್ರದಿಂದ ಮಾಡಿಸಿ, ಈ ರೀತಿ ಅಬಲೆಯ ಮಾನಹರಣ ಮಾಡುತ್ತಿರುವುದು ಮಹಾ ಪಾತಕ. ಅದನ್ನು ನೋಡಿ ಸುಮ್ಮನಿರುವುದೂ ಪಾಪವೆ ಆದ ಕಾರಣ ನಾವೆಲ್ಲರೂ ಇದರ ಫಲ ಅನುಭವಿಸಬೇಕಾದೀತು. ನನಗೆ ಯಾರ ಪ್ರೀತಿ – ಭೀತಿಯ ಭಯವಿಲ್ಲ. ಈ ಕುಕೃತ್ಯವನ್ನು ಖಂಡಿಸುತ್ತೇನೆ” ಎಂದು ನಿಷ್ಠುರವಾದಿಯಾಗಿ ನುಡಿದ.
ವಿಕರ್ಣನ ಮಾತು ಕೇಳಿ ಅಂಗರಾಜ ಕರ್ಣನೆದ್ದು ನಿಂತು “ಎಲಾ ವಿಕರ್ಣ, ನಿನ್ನ ಮಾತು ಈಗ ಸರಿ ಎಂದೆಣಿಸಿದರೂ, ಧರ್ಮರಾಜ ಒಂದು ವೇಳೆ ಆಕೆಯನ್ನು ಒಡ್ಡಿ ಪಣ ಗೆದ್ದಿದ್ದರೆ ಆಗ ಈ ಜಿಜ್ಞಾಸೆ ಬರುತ್ತಿತ್ತೇ? ಈಗ ಕಾಲ ಮಿಂಚಿಹೋಗಿದೆ. ಆಕೆಯ ಮೇಲೆ ಅಧಿಕಾರ ದುರ್ಯೋಧನನದ್ದಾಗಿದೆ. ನಿನ್ನಣ್ಣನ ವಿರೋಧಿಯಾಗಿ ವ್ಯವಹರಿಸುವುದು ಸಾಧುವಲ್ಲ” ಎಂದು ಆತನನ್ನು ಸುಮ್ಮನಾಗಿಸಿದನು.
ಕೇಳಿದ ಭೀಷ್ಮಾಚಾರ್ಯರು ಎದ್ದು “ದ್ರೌಪದಿ ಸಾಮಾನ್ಯಳಲ್ಲ – ಯಾಜ್ಞಸೇನೆ. ಆಕೆಯ ಪ್ರಶ್ನೆ ಉತ್ತರಿಸಲು ಕ್ಲಿಷ್ಟಕರವೇ ಹೌದು. ಧರ್ಮಸೂಕ್ಷ್ಮದ ಆಳ ಜ್ಞಾನವಿಲ್ಲದೆ ಉತ್ತರಿಸಲಾಗದು. ವಿಕರ್ಣ – ಕರ್ಣರ ವಾದವೂ ಭಾಗಶಃ ಅರ್ಥಪೂರ್ಣವೇ ಹೊರತು ಪೂರ್ಣವಲ್ಲ. ಆದರೆ ಈ ನ್ಯಾಯ ಧರ್ಮಕ್ಕೆ ಸ್ಪಷ್ಟ ಉತ್ತರ ನೀಡುವುದು ಯಾರಿಗೂ ಸುಲಭ ಸಾಧ್ಯವಲ್ಲ. ಸಮರ್ಥವಾಗಿ ಉತ್ತರಿಸಬಲ್ಲವರಿದ್ದರೆ ಧರ್ಮದ ಪ್ರತಿರೂಪ ಧರ್ಮರಾಯನೋರ್ವ ಮಾತ್ರ” ಎಂದು ನುಡಿದರು.
ದುರ್ಯೋಧನನಿಗೆ ಧರ್ಮರಾಯನ ತೀರ್ಪಿನ ಮೇಲೆ ಪೂರ್ಣವಿಶ್ವಾಸವಿತ್ತು. ಪ್ರಾಣಹೋದರೂ ಅಧರ್ಮ, ಅನ್ಯಾಯದ ಪಥ ಅನುಸರಿಸಿ ಸ್ವಾರ್ಥಿಯಾಗಿ ವ್ಯವಹರಿಸಲಾರ ಎಂಬ ಧೈರ್ಯದಿಂದ ಮಹತ್ತರ ವಿಚಾರ ಘೋ಼ಷಿಸಿಯೇ ಬಿಟ್ಟನು. “ಧರ್ಮರಾಯ ಇಂದಿನ ದ್ಯೂತದಲ್ಲಿ ಕೌರವರು ದ್ರೌಪದಿಯನ್ನು ಮೋಸದಿಂದ ಜಯಿಸಿದ್ದಾರೆ ಎಂದು ಹೇಳಿದರೆ ನಾವು ಗೆದ್ದ ಸರ್ವಸ್ವವನ್ನೂ ಆ ಕ್ಷಣದಲ್ಲೇ ಮರಳಿಸುತ್ತೇವೆ”.
ಈಗ ಎಲ್ಲರ ದೃಷ್ಟಿಯೂ ಧರ್ಮರಾಯನತ್ತ ತಿರುಗಿತು. ಧರ್ಮರಾಯ ಸರ್ವಸ್ವವನ್ನೂ ಪಣಕ್ಕಿಟ್ಟು ಕಳಕೊಂಡರೂ ಧರ್ಮಪ್ರಜ್ಞೆಯನ್ನು ತನ್ನಲ್ಲಿ ಇನ್ನೂ ಸ್ವಾಭಿಮಾನಿಯಾಗಿ ಉಳಿಸಿಕೊಂಡಿದ್ದ. ಭೀಷ್ಮಾಚಾರ್ಯರ ಅಭಿಪ್ರಾಯದಂತೆ ಉತ್ತರ ಹೇಳಲೇ ಬೇಕಾದ ಅನಿವಾರ್ಯತೆ ಈಗ ಬಂದಿದ್ದರಿಂದ ಹೇಳ ತೊಡಗಿದ-
ನ್ಯಾಯವನ್ನು ಮುಚ್ಚಿಡಲಾರೆ. ಆತ್ಮವಂಚನೆ ನನ್ನಿಂದ ಎಸಗಲಾಗದು. ಧರ್ಮಬುದ್ದಿಯ ವಿವೇಚನೆಯಿಂದ ಹೇಳುತ್ತೇನೆ – ಮೊದಲಾಗಿ ಒಂದು ಮಾತು – ಜೀವನದಲ್ಲಿ ಸುಖ, ದುಃಖಗಳು ನಮ್ಮ ನಮ್ಮ ಕರ್ಮಾನುಸಾರವಾಗಿ ಒದಗಿ ಬರುತ್ತವೆ. ಅದಕ್ಕೆ ಅನ್ಯರಾರು ಹೊಣೆಗಾರರಾಗಲಾರರು. ಇನ್ನು ಇಂದಿನ ದ್ಯೂತದ ಪಣದ ವಿಚಾರವಾಗಿ- ಗಂಡನಾದವನು ರಾಜನಾಗಿರಲಿ, ದಾಸನೇ ಆಗಿರಲಿ ಅಥವಾ ಇನ್ನು ಎಂತಹ ಸ್ಥಿತಿಯಲ್ಲೇ ಇರಲಿ, ಅವನಿಗೆ ಪತ್ನಿ ಅಧೀನಳೇ ಹೊರತು ಅನ್ಯಳಾಗಲಾರಳು. ಇದೇ ನಾನರಿತ ಧರ್ಮದ ಅನುಭವದ ಸತ್ಯ” ಎಂದನು. ಧರ್ಮರಾಯನ ತೀರ್ಪು ಕೌರವರಿಗೆ ಸಂಭ್ರಮವನ್ನೂ, ಮಿತಿ ಮೀರಿದ ಉಲ್ಲಾಸವನ್ನೂ ನೀಡಿತು.
ಪಾಂಡವರು ತಮ್ಮ ಮುಕುಟ, ದಿವ್ಯಾಭರಣಗಳನ್ನು ಕಳಚಿಟ್ಟು, ದಾಸರಂತೆ ಕುಳಿತಿದ್ದರೂ, ದ್ರೌಪದಿ ಮಾತ್ರ ಛಲ ಬಿಡದೆ ನಿಂತಿದ್ದಾಳೆ. ದುಶ್ಯಾಸನನ ಬುದ್ದಿ ಕೆರಳಿ “ದಾಸಿಗೆ ಇನ್ನೂ ಇಷ್ಟು ಕೊಬ್ಬು ಇದೆಯೇ?, ಇಳಿಸುವೆನೆಂದು ಸೆರಗಿಗೆ ಕೈಯಿಕ್ಕಿ ಹಿಡಿದೆಳೆಯ ತೊಡಗಿದನು. ರಟ್ಟೆಯ ತ್ರಾಣ ಒಗ್ಗೂಡಿಸಿ ದುಶ್ಯಾಸನನ ಸೆಳೆತದಿಂದ ಮಾನ ಉಳಿಸಲು ಒದ್ದಾಡುತ್ತಿದ್ದಾಳೆ. ಸಭೆಯಲ್ಲಿ ಸಜ್ಜನರು ನೋಡಲಾಗದೆ ಕಣ್ಮುಚ್ಚಿ ತಲೆ ತಗ್ಗಿಸಿದರೆ, ಕೌರವ ಕೂಟ ಸಂತಸದಿಂದ ಆಸ್ವಾದಿಸುತ್ತಿದ್ದಾರೆ… ದ್ರೌಪದಿ ಹೆಸರೆತ್ತಿ ತನ್ನ ಪತಿಯರನ್ನು ಒಬ್ಬೊಬ್ಬರಾಗಿ ಕರೆದು ಕೂಗಿದಳು, ಸಭೆಯಲ್ಲಿದ್ದ ಪ್ರತಿಯೋರ್ವನನ್ನೂ ರಕ್ಷಣೆಗಾಗಿ ಕಾಡಿ ಬೇಡಿದಳು. ರಾಣಿ – ಸಖಿಯರನ್ನೂ ಕರೆದು ಕಣ್ಣೀರಿಳಿಸಿದಳು. ಇಲ್ಲಾ ಯಾರ ಸಹಾಯವೂ ಒದಗಲಿಲ್ಲ. ಕೈ ದಣಿದಿದೆ. ದುಶ್ಯಾಸನನ ಬಲ ವೃದ್ಧಿಸುತ್ತಿದೆ. ತನ್ನ ದೇಹ ನಿಶ್ಯಕ್ತವಾಗುತ್ತಿದೆ. ಹೋಯಿತು ಮಾನ, ಯಾರೂ ಇಲ್ಲವೆ ನನ್ನ ಮಾನ ಕಾಯುವವರು ಎಂದು ಕೊರಗತೊಡಗಿದ್ದಾಳೆ….
ಮುಂದುವರಿಯುವುದು



