ಭಾಗ 168
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೬೯ ಮಹಾಭಾರತ
ಬಂದು ನೋಡಿದ ದ್ರೌಪದಿ ಎಲ್ಲರನ್ನು ಒಂದಾವರ್ತಿ ದಿಟ್ಟಿಸಿ ನೋಡಿ ಬಳಿಕ ಕೇಳತೊಡಗಿದಳು “ತುಂಬಿದ ಸಭೆಯಲ್ಲಿ ವೃದ್ದರೂ, ಶ್ರೋತ್ರಿಯರೂ, ಶಾಸ್ತ್ರವೇತ್ತರೂ, ಕರ್ಮನಿಷ್ಠರೂ, ಧರ್ಮಪರಾಯಣರೂ, ಗುರುಜನರೂ, ಬ್ರಾಹ್ಮಣರೂ, ಹಿರಿಯರೂ ಸೇರಿದ್ದೀರಿ. ನಿಮ್ಮೆಲ್ಲರ ಮುಂದೆ ಹೆಣ್ಣಾಗಿ, ಪ್ರಾಣಕ್ಕಿಂತ ಮಾನವೇ ಮಿಗಿಲಾಗಿರುವ ನಾನು ಹೇಗೆ ನಿಲ್ಲಲಿ? ಪವಿತ್ರವಾದ, ಆರ್ಯಾವರ್ತದಲ್ಲೇ ಶ್ರೇಷ್ಠವಾದ ಚಂದ್ರವಂಶದ ಸೊಸೆಯಾಗಿ ಬಂದವಳು ನಾನು. ಸೊಸೆ ಮಗಳಿಗೆ ಸಮಾನಳು. ಈ ಹಸ್ತಿನಾವತಿಯ ಸಭೆಯಲ್ಲಿ, ನಿಮ್ಮೆಲ್ಲರ ಕಣ್ಣೆದುರಲ್ಲೇ ಈ ರೀತಿ ಮಾನ ಕಳೆಯುವುದು ನ್ಯಾಯವೇ? ಧರ್ಮವೇ? ಇಲ್ಲಿ ನ್ಯಾಯವನ್ನೂ ಧರ್ಮವನ್ನೂ ಅರಿತಿರುವವರು ಯಾರೂ ಇಲ್ಲವೇ? ಕನಿಷ್ಠ ಪಕ್ಷ ಮನುಷ್ಯ ಜನ್ಮದಲ್ಲಿ ಹುಟ್ಟಿ ಸಂಸ್ಕಾರದಿಂದ ಹೃದಯವಂತಿಕೆ ಇರುವವರೂ ಯಾರೂ ಇಲ್ಲವೇ? ನಿಮ್ಮ ಸ್ವಂತ ಮಗಳೇ ನಾನಾಗಿದ್ದರೆ ಸುಮ್ಮನಿರುತ್ತಿದ್ದಿರೇ? ಪೂರ್ಣಾಧಿಕಾರಿಯಾಗಿರುವ ಮಹಾರಾಜಾ ನಿಮಗೆ ದೃಷ್ಟಿ ಇಲ್ಲದೆ ಕಾಣದಿರಬಹುದು, ನನ್ನ ಆರ್ತಸ್ವರವೂ ಕೇಳುತ್ತಿಲ್ಲವೇ? ಕೇಳಿಯೂ ಈ ಅನರ್ಥವನ್ನು ನಿಲ್ಲಿಸುವ ಮನಸ್ಸಾಗುತ್ತಿಲ್ಲವೇ?”
ಭೀಷ್ಮಾಚಾರ್ಯರತ್ತ ತಿರುಗಿ “ಪಿತಾಮಹಾ! ಬ್ರಹ್ಮಚಾರಿಯಾದ ನೀವು ಪರಮ ಧರ್ಮಿಷ್ಟರು, ಎಲ್ಲೇ ಅನ್ಯಾಯವಾದರೂ ವಿವೇಚಿಸಿ ನ್ಯಾಯ ಒದಗಿಸಬಲ್ಲ ಸಮರ್ಥ ದಂಡಾಧಿಕಾರಿ. ಇಂದೇಕೆ ಸುಮ್ಮನುಳಿದು, ನಿರಪರಾಧಿಯಾದ ನಾನು ಈ ಪರಿಯ ಶಿಕ್ಷೆ ಅನುಭವಿಸುತ್ತಿದ್ದರೂ ಮೌನ ತಳೆದಿದ್ದೀರಿ? ಅಂದರೆ ನಾನು ದೋಷಿಯೇ? ನನ್ನ ಅಪರಾಧವಾದರೂ ಏನು? ಸರ್ವತಂತ್ರ ಸ್ವತಂತ್ರರೂ, ಸರ್ವ ಶಕ್ತರೂ ಆಗಿರುವ ನೀವು, ಗುರು ಭಗವಾನ್ ಭಾರ್ಗವರನ್ನೇ ನ್ಯಾಯಕ್ಕಾಗಿ ಎದುರಿಸಿದ ಎದೆಗಾರಿಕೆಯುಳ್ಳ ಮಹಾತ್ಮರು. ಇಂದೇಕೆ ಅಳುಕುತ್ತಿರುವಿರಿ?” ಮೌನವೆ ಉತ್ತರವಾದಾಗ ಪೂಜ್ಯ ಗುರುಗಳಾದ ದ್ರೋಣಾಚಾರ್ಯ – ಕೃಪಾಚಾರ್ಯರತ್ತ ನೋಡಿ “ನಿಮ್ಮ ಶಿಷ್ಯರಿಗೆ ಉಚಿತಾನುಚಿತ ಕೃತ್ಯಗಳನ್ನು ಬೋಧಿಸಿ ತಡೆಯಲಾಗದಂತಹ ಸ್ಥಿತಿ ನಿಮಗೊದಗಿತೆ? ನೀವು ಪ್ರತ್ಯಕ್ಷ ವೀಕ್ಷಕರಾಗಿ ಉಪಸ್ಥಿತರಿದ್ದೂ ಈ ರೀತಿಯ ಅಧರ್ಮಕ್ಕೆ ಅವಕಾಶವೇ?” ಕೇಳಿದ ಪ್ರಶ್ನೆಗೆ ಉತ್ತರ ದೊರೆಯದಾಗ “ಹಿರಿಯರಾದ ಮಂತ್ರಿವರ್ಯ, ಧರ್ಮ ಮೂರ್ತಿಯಾದ ವಿದುರ ಮಹಾಶಯರೇ, ಹಿತ ಅಹಿತಗಳನ್ನು ತರ್ಕಿಸಿ ಮಂತ್ರಾಲೋಚನೆ ಮಾಡಬೇಕಾದ ಧರ್ಮಾತ್ಮರಾದ ನೀವೂ ಏನೇನೂ ಮಾಡಲಾರದೆ ಉಳಿದಿರೇ? ಛಿ! ಛಿ! ಚಂದ್ರವಂಶದ ಕೀರ್ತಿ ಪತಾಕೆಯೇ ಕಳೆಗುಂದಿತೇ? ಇಲ್ಲಿ ಧರ್ಮ ಸತ್ತು ಹೋಗಿದೆಯೇ? ಗೋ, ಬ್ರಾಹ್ಮಣ, ಸ್ತ್ರೀಯರ ರಕ್ಷಣೆ ಮಾಡುವ ಕರ್ತವ್ಯ ಹೊಂದಿರುವ ಕ್ಷತ್ರಿಯ ವೀರರೇ ನಿಮ್ಮ ವೀರತ್ವ ನಾಶವಾಗಿದೆಯೇ?” ಬಳಿಕ ತಿರುಗಿ ಒಮ್ಮೆ ತನ್ನ ಪತಿಗಳಾದ ಪಾಂಡವರೈವರನ್ನು ನೋಡಿದಳು- “ಐದು ಮಂದಿ ವಿಕ್ರಮಿ ಪರಾಕ್ರಮಿ ಪತಿಗಳ ಮಡದಿಯಾದ ನನಗೆ ಇಂತಹ ಹೀನಾಯ ಸ್ಥಿತಿ ಬಂದೊದಗಿದರೆ ಇನ್ನು ಸಾಮಾನ್ಯ ಸ್ತ್ರೀಯೋರ್ವಳ ಮಾನಕ್ಕೆ ಈ ಸಾಮ್ರಾಜ್ಯದಲ್ಲಿ ರಕ್ಷಣೆ ಇದೆಯೇ?”
ದ್ರೌಪದಿಯ ಆರ್ತನಾದವನ್ನು ಕೇಳಿದಾಗ ಭೀಮಾದಿಗಳು ಕ್ರೋಧಾವೇಶಕ್ಕೊಳಗಾದರು. ಸಂಪತ್ತು ಸೌಭಾಗ್ಯಗಳನ್ನು ಸೋತಾಗ ಏನೂ ಅನ್ನಿಸದಿದ್ದರೂ, ಮರಳಿ ಸ್ವಾಧಿನಗೊಳಿಸಬಲ್ಲೆವು ಎಂಬ ವಿಶ್ವಾಸವಿತ್ತೊ ಏನೋ… ಆದರೆ ಈಗ ಮಾನಹರಣಗೊಳ್ಳತೊಡಗುವಾಗ ತತ್ತರಿಸಿಯೇ ಹೋದರು. ಕಣ್ಣುಗಳಲ್ಲಿ ಅಶ್ರುಧಾರೆ ತುಂಬಿ ಒಮ್ಮೆ ಕಾಣಿಸದಂತೆ ಮಂಜಾಗಿಸಿಯೇ ಬಿಟ್ಟಿತು. ಏರುತ್ತಿರುವ ಕೋಪದ ಉಪಶಮನಕ್ಕಾಗಿ ನೆಲ ಬಿರಿಯುವಂತೆ ಮುಷ್ಟಿಗಟ್ಟಿ ಭೀಮ ಗುದ್ದಿ ಬಿಟ್ಟನು.
ಇತ್ತ ದುಶ್ಯಾಸನ ಉತ್ಸಾಹದ ಉನ್ಮಾದವೇರಿಸುತ್ತಾ, ಮೈಮೇಲೆ ಪ್ರಜ್ಞೆ ಇಲ್ಲದವನಂತೆ “ಎಲೆದಾಸಿ, ಸಾಕು ನಿನ್ನ ನಾಟಕ. ಇಲ್ಲಿ ನಿನ್ನ ಮೊಸಳೆ ಕಣ್ಣೀರಿಗೆ ಬೆಲೆ ನೀಡುವವರು ಯಾರೂ ಇಲ್ಲ” ಎನ್ನುತ್ತಾ ದ್ರೌಪದಿಯ ತುರುಬಿನ ಹಿಡಿತ ಬಿಗಿಗೊಳಿಸಿ ಜಗ್ಗಿ ಎಳೆದನು. ದುಶ್ಯಾಸನನ ದುಷ್ಕೃತ್ಯ ಕಾಣುತ್ತಾ ಸಂಭ್ರಮಿಸಿ ಶಕುನಿ ಉತ್ತೇಜನದ ಮಾತುಗಳನ್ನು ಆಡುತ್ತಾ ಹುರಿದುಂಬಿಸಿದರೆ, ದುರ್ಯೋಧನ ಮಹೋಲ್ಲಾಸದಿಂದ ತನ್ನ ಮಹದಾಸೆ ಪೂರೈಸುತ್ತಿರುವ ಸೇಡಿನ ಸರ್ಪದಂತೆ ಬುಸುಗುಟ್ಟುತ್ತಾ ಅಟ್ಟಹಾಸದ ನಗೆಯೊಂದಿಗೆ ಅಬ್ಬರಿಸಲು ತೊಡಗಿದ್ದಾನೆ. ಕರ್ಣ- ಕೌರವರಿಗೆ ಸಂತೋಷ ಒದಗಿಸಿದ್ದಕ್ಕಾಗಿ ದುಶ್ಯಾಸನನನ್ನು “ಭಲೇ ಭಲೇ ಭೇಷ್ ದುಶ್ಯಾಸನ” ಎಂದು ಶಹಭಾಸ್ ಗಿರಿ ನೀಡಲು ಆರಂಭಿಸಿದರು. ದುಶ್ಯಾಸನ ಇಮ್ಮಡಿ ಉಬ್ಬಿ ತನ್ನವರ ಬೆಂಬಲಕ್ಕೆ ಪೂರಕ ಪ್ರತಿಸ್ಪಂದನೆ ನೀಡುತ್ತಾ ದ್ರೌಪದಿಯನ್ನು ಬೀಸಿ ಎಳೆದಾಡುತ್ತಿದ್ದಾನೆ. ಎಲ್ಲರಿದ್ದೂ ಯಾರೂ ಇಲ್ಲದಂತೆ ಅನಾಥಳಾಗಿ ರೋದಿಸುವ ಪಾಂಚಾಲಿಯ ರಕ್ಷಕರಾರೂ ಇಲ್ಲದೇ ಹೋದರಲ್ಲ ಈ ಹೊತ್ತು!
ಮುಂದುವರಿಯುವುದು…