31.9 C
Udupi
Friday, April 18, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 162

ಭರತೇಶ್ ಶೆಟ್ಟಿ, ಎಕ್ಕಾರ್

ವಿದುರನಿಗೆ ಏನನ್ನಬೇಕೆಂದು ಅರ್ಥವಾಗಲಿಲ್ಲ. ಧರ್ಮರಾಯನ ಸಜ್ಜನಿಕೆ ಇಷ್ಟವಾದರೂ, ರಾಜನಾಗಿ ರಾಜಕೀಯದ ನಡೆ ಅರಿಯದ ಈತ ಚಾಣಾಕ್ಷ ರಾಜಕಾರಣಿಯಂತೂ ಅಲ್ಲವೇ ಅಲ್ಲ. ರಾಜಕೀಯದಲ್ಲಿ ಪ್ರಜಾಹಿತಕ್ಕೆ, ದೇಶದ ರಕ್ಷೆಗೆ, ವಂಶದ ಶ್ರೇಯಸ್ಸಿಗೆ ಬೇಕಾಗಿ ನೀತಿಯಾಗಿ ಅರ್ಥಪೂರ್ಣವಾದ ಸ್ವಾರ್ಥ ಬಳಸಬೇಕು. ಆದರೆ ಈ ಧರ್ಮಜ ಧರ್ಮ ಪಾಲಕನಷ್ಟೇ ಹೌದು. ಈತನ ಧರ್ಮವೇ ಪಾಂಡವರ ರಕ್ಷಣೆ ಮಾಡಬೇಕು. ಹೀಗೆಂದು ಮನದಲ್ಲಿ ವಿದುರ ಯೋಚಿಸತೊಡಗಿದನು.

ಧರ್ಮರಾಯ ತನ್ನ ಪರಿವಾರ ಬಳಗವಾದ ತಮ್ಮಂದಿರು, ದ್ರೌಪದಿ, ಮಾತೆ ಕುಂತಿಯಾದಿ ಎಲ್ಲರನ್ನು ಹೊರಟು ಸಿದ್ಧರಾಗಲು ಹೇಳಿದನು. ಅಂತೆಯೇ ಅವರು ಸಿದ್ಧರಾಗಿ ನಿಂತರು.

ಇಂದ್ರಪ್ರಸ್ಥದಿಂದ ಹೊರಟು ಹಸ್ತಿನೆಗೆ ಹೋಗುವ ದಾರಿ ಮಧ್ಯದಲ್ಲಿ ಸತ್ಯಸಂಧನಾದ ಧರ್ಮರಾಯ ಮಾತುಕತೆಯಲ್ಲಿ ನಿರತರಾಗಿ ಸಾಗುತ್ತಿದ್ದರು. ಧರ್ಮರಾಯನ ಪ್ರಾಮಾಣಿಕ ಯೋಚನೆಗಳನ್ನೆಲ್ಲಾ ಗಮನಿಸುತ್ತಾ ವಿದುರ ದೇವರಲ್ಲಿ ಮತ್ತೆ ಮತ್ತೆ ಪ್ರಾರ್ಥಿಸತೊಡಗಿದ. “ದೇವರೇ ಧರ್ಮಾತ್ಮರಾದ ಈ ಪಾಂಡವರನ್ನು ಪರಮಾತ್ಮನಾದ ನೀನೆ ಕಾಪಾಡಬೇಕು. ಅವರಿಗೇನೂ ಅಮಂಗಲವಾಗದಿರಲಿ” ಎಂದು ಪ್ರಾರ್ಥಿಸಿ ಹರಸುತ್ತಿದ್ದನು.

ಪಾಂಡವರು ಹಸ್ತಿನೆಗೆ ಬಂದು ಮುಟ್ಟಿದ ಸುದ್ದಿ ತಿಳಿದು ದುರ್ಯೋಧನ ಸ್ವಾಗತಿಸಿ ಸತ್ಕರಿಸಿದನು. ಪಾಂಡವರು ಹಿರಿಯರಾದ ಭೀಷ್ಮ, ದ್ರೋಣ, ಕೃಪ, ಧೃತರಾಷ್ಟ್ರ, ಗಾಂಧಾರಿಯಾದಿ ಸರ್ವರಿಗೂ ವಂದಿಸಿ ಆಶೀರ್ವಾದ ಪಡೆದರು. ಅವರಿಗಾಗಿ ನಿಯೋಜಿತವಾಗಿದ್ದ ನಿವಾಸಗಳಿಗೆ ಹೋಗಿ ವಿಶ್ರಾಂತರಾದರು. ಒಂದೆರಡು ದಿನಗಳ ಕಾಲ ಪಾಂಡವರನ್ನು ಅರಸಿ ಬರುತ್ತಿದ್ದ ಪ್ರಜಾ ಜನರನ್ನು ಕಂಡು ಸಂತೋಷದಿಂದ ಅವರ ಜೊತೆ ಕುಶಲೋಪಚರಿ ವಿಚಾರಿಸುತ್ತಾ ಕಾಲ ಕಳೆದರು. ಬಹು ಸಮಯದ ನಂತರ ಹಸ್ತಿನಾವತಿಗೆ ಬಂದವರಾದ್ದರಿಂದ ಮತ್ತೊಮ್ಮೆ ಎಲ್ಲವನ್ನೂ ಗಮನಿಸುತ್ತಾ ತಿರುಗಾಡಿದರು. ಹೀಗಿರಲು ದುರ್ಯೋಧನನ ಅನುಚರನೊಬ್ಬ ಸುದ್ದಿವಾಹಕನಾಗಿ ಧರ್ಮರಾಯನಲ್ಲಿಗೆ ಬಂದನು. ಅನುಮತಿ ಪಡೆದು ಬಳಿ ಸಾಗಿ “ಮಹಾರಾಜ ನೀವು ನಿಮ್ಮ ತಮ್ಮಂದಿರೊಡನೆ ನೂತನ ಭವನಕ್ಕೆ ಬರಬೇಕಂತೆ” ಎಂದು ವಿನಮ್ರನಾಗಿ ತಿಳಿಸಿದನು. ಆಗಲಿ ಎಂದು ಧರ್ಮರಾಯ ತನ್ನ ತಮ್ಮಂದಿರ ಜೊತೆ ಹಸ್ತಿನೆಯಲ್ಲಿ ನಿರ್ಮಾಣಗೊಂಡಿದ್ದ ನೂತನ ಭವನಕ್ಕೆ ಬಂದು ಸೇರಿದರು. ಇದಿರುಗೊಂಡ ಶಕುನಿ ಪಾಂಡವರ ಉಪಚಾರದ ವ್ಯವಸ್ಥೆ ಮಾಡಿಸಿದನು. ನಂತರ ಭವನದ ವೈಭವಗಳನ್ನೆಲ್ಲಾ ತೋರಿಸಿ ವಿವರಿಸುತ್ತಾ ಭವನದ ಮಧ್ಯದಲ್ಲಿರುವ ವಿಶಾಲವಾದ ಆಸ್ಥಾನಕ್ಕೆ ಬಂದು ಸೇರಿದರು. ಅಲ್ಲಿ ಆಸ್ಥಾನ ಪ್ರಮುಖರು, ಹಿರಿಯರು, ಪ್ರಾಜ್ಞರೆಲ್ಲಾ ಆಸೀನರಾಗಿದ್ದರು. ಮಧ್ಯ ಭಾಗದಲ್ಲಿ ಸುಂದರ ಮಂಚದಲ್ಲಿ ಪಗಡೆ ಹಾಸನ್ನು ಹಾಸಿ ಇಡಲಾಗಿತ್ತು. ಶಕುನಿ ಧರ್ಮರಾಯನನ್ನು ಅತ್ತ ಕರೆದೊಯ್ದು “ಧರ್ಮರಾಜಾ, ಧೃತರಾಷ್ಟ್ರ ಮಹಾರಾಜರ ಇಷ್ಟದಂತೆ ಮುಖ್ಯಸ್ಥರೆಲ್ಲಾ ಬಂದು ಸಭೆಯಲ್ಲಿ ಕುಳಿತಿದ್ದಾರೆ. ಪ್ರಾಜ್ಞನೂ, ಧರ್ಮಾತ್ಮನೂ ಆಗಿರುವ ನೀನು ದ್ಯೂತದಲ್ಲಿ ಆಸಕ್ತನೆಂದು ತಿಳಿದಿದ್ದೇವೆ. ಚಕ್ರವರ್ತಿಯೂ ಆಗಿರುವ ನಿನ್ನ ಸಂತೋಷಕ್ಕಾಗಿ ದ್ಯೂತದ ಆಟದ ವ್ಯವಸ್ಥೆಯಾಗಿದೆ. ನೀನು ಒಪ್ಪಿ ಅನುಮತಿ ನೀಡಿದರೆ ಒಂದು ಆಟ ಆಡೋಣವೇ?” ಎಂದು ಕೇಳಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page