24.9 C
Udupi
Tuesday, February 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 156

ಭರತೇಶ್ ಶೆಟ್ಟಿ ,ಎಕ್ಕಾರ್

ಭೀಷ್ಮಾಚಾರ್ಯರು ಧರ್ಮರಾಯನ ಜಿಜ್ಞಾಸೆಗೆ ಉತ್ತರ ಹೇಳಲು ಆರಂಭಿಸಿದರು “ಅಯ್ಯಾ ಧರ್ಮರಾಯ, ವಾಸುದೇವ ಕೃಷ್ಣನೆ ಸರ್ವೋತ್ತಮನಿದ್ದಾನೆ. ನಮ್ಮೆಲ್ಲರ ಮಹಾಭಾಗ್ಯವಾಗಿ ನಮಗೊದಗಿ ಅಗ್ರಪೂಜೆಗೈಯುವ ಮಹಾಯೋಗ ಒದಗಿದೆ. ತಮಾಸುರನನ್ನು ಮತ್ಸ್ಯರೂಪ ಧಾರಣೆ ಮಾಡಿ ಕೊಂದು ಜಗತ್ತಿಗೆ ವೇದಗಳನ್ನು ಮರಳಿ ಒದಗಿಸಿದವನಿಗಿಂತ ಶ್ರೇಷ್ಠ ಆಚಾರ್ಯ ಯಾರಿದ್ದಾರೆ? ಸಮುದ್ರ ಮಥನ ಕಾಲದಲ್ಲಿ ಮಂದರಗಿರಿಗೆ ಬೆನ್ನು ಕೊಟ್ಟು ಲೋಕಕ್ಕೆ ಸಮಸ್ತ ಸುವಸ್ತುಗಳನ್ನು ಕರುಣಿಸಿದವನಿಗಿಂತ ಉತ್ತಮ ಋತ್ವಿಜ ರಿದ್ದಾರೆಯೇ? ದುರುಳ ಹಿರಣ್ಯಕಶ್ಯಪನನ್ನು ಸಂಹರಿಸಿ ಪ್ರಹ್ಲಾದನನ್ನು ಉದ್ದರಿಸಿದವನಿಗಿಂತ ಮಹತ್ತರವಾದ ಸಂಬಂಧಿ ಇದ್ದಾರೆಯೇ? ಬಲಿ ಚಕ್ರವರ್ತಿಯ ಸಮಸ್ತ ಸಾಧಕವನ್ನೇ ದಾನವಾಗಿ ಪಡೆದು ಸ್ವರ್ಗಾಧಿಪತ್ಯವನ್ನು ದೇವೇಂದ್ರನಿಗೆ ಒದಗಿಸಿದ ವಾಮನನಿಗಿಂತ ಮಿಗಿಲಾದ ಸ್ನಾತಕ ರಿದ್ದಾರೆಯೇ? ಪರಶುರಾಮನಾಗಿ ಅವತರಿಸಿ ದುಷ್ಟ ಕ್ಷತ್ರಿಯರನ್ನೆಲ್ಲಾ ನಿಗ್ರಹಿಸಿ ಭೂದಾನ ಮಾಡಿದ ಮಹಾತ್ಮನಿಗಿಂತ ಹೆಚ್ಚಿನ ಸಜ್ಜನಪ್ರಿಯರು ಇದ್ದಾರೆಯೇ? ಶ್ರೀ ರಾಮನಾಗಿ ರಾಮರಾಜ್ಯದ ಸುಖಜೀವನ ಒದಗಿಸಿದ ಪುರುಷೋತ್ತಮನಿಗೆ ಸರಿಸಮನಾದ ರಾಜ ರಿದ್ದಾರೆಯೇ? ಬಿಡೋಣ ಇದೆಲ್ಲಾ ಕಾಲಾಂತರದ ಕಥನಗಳು. ಸಕಲ ಶಾಸ್ತ್ರಾರ್ಥಗಳನ್ನು ಮನನ ಮಾಡಿ ಆಚರಣೆಯಿಂದ ಮಾರ್ಗದರ್ಶನ ನೀಡುತ್ತಿರುವ ಆಚಾರ್ಯ, ಯಜ್ಞ ಕಾರ್ಯಕ್ಕೆ ಪ್ರೇರಕನೂ ಪೂರಕನೂ ಆಗಿರುವ ಋತ್ವಿಜ, ಪಾಂಡವರೆನಗೆ ಪಂಚಪ್ರಾಣವೆಂದ ಸಂಬಂಧಿ, ಸತ್ತು ಹೋಗಿದ್ದ ಗುರುಪುತ್ರನನ್ನು ತಂದೊಪ್ಪಿಸಿದ ಸ್ನಾತಕ, ಸಜ್ಜನರನ್ನು ಆತ್ಮೀಯವಾಗಿ ಅನುಗ್ರಹಿಸುವ ಸ್ನೇಹಿತ, ರಾಜರನ್ನೆಲ್ಲಾ ಸೋಲಿಸಿ ರಾಜಕುಮಾರಿಯರನ್ನು ಸೆರೆಯಲ್ಲಿಟ್ಟಿದ್ದ ನರಕಾಸುರನನ್ನೇ ತರಿದು ಕುಮಾರಿಯರನ್ನು ರಕ್ಷಿಸಿದ ಮಹಾರಾಜ ಎಂದೆನಿಸಿರುವ ಶ್ರೀ ಕೃಷ್ಣನೇ ಅಗ್ರ ಪೂಜೆಗೆ ಅರ್ಹ ಎಂದು ತಾರ್ಕಿಕವಾಗಿಯೂ ಸಮರ್ಥಿಸಿ ಹೇಳಬಹುದು”. ಹೀಗೆ ಭೀಷ್ಮಾಚಾರ್ಯರು ಕೃಷ್ಣನ ಗುಣ ರೂಪಗಳನ್ನು ಗೋಚರಿಸುವಂತೆ ವಿವರಿಸಿದರು. ಧರ್ಮರಾಯನಿಗೆ ಮಹಾತ್ಮ ಕೃಷ್ಣ ಇಷ್ಟು ಶ್ರೇಷ್ಠನಾಗಿದ್ದೂ ಋಷಿ ಮುನಿಗಳ, ತಪಸ್ವಿಗಳ, ವಿಪ್ರೋತ್ತಮರ ಪಾದಗಳನ್ನು ತೊಳೆ ತೊಳೆದು ಪಾವನತ್ವಕ್ಕೆ ಸಾಕ್ಷಿಯಾಗಿ ಕಣ್ಮುಂದೆ ಕಾಣಿಸಿದಾಗ ಕೃತಾರ್ಥನಾಗಿಯೂ ಕೃಷ್ಣನೆ ಅಗ್ರಪೂಜೆಗೆ ಅಧಿಕಾರಿ ಎಂದು ಅರಿವಾಯಿತು. ಋಷಿಗಳೂ, ವೇದವಿದರೂ, ಜ್ಞಾನಿಗಳೆಲ್ಲರೂ “ಸಾಧು ಸಾಧು” ಎಂದು ಆಯ್ಕೆಯನ್ನು ಬೆಂಬಲಿಸಿದರು.

ಹಾಗೆಯೆ ಸಕಲ ವಿಧಿ ವಿಧಾನ ವೈಭವಗಳಿಂದ ಶ್ರೀಕೃಷ್ಣನನ್ನು ಸತ್ಕರಿಸಿ ಪೂಜಿಸಿ ಅಗ್ರಪೂಜೆಯ ಸ್ವರ್ಣ ಪೀಠವಿತ್ತು ಆಸೀನನಾದ ಕೃಷ್ಣನಿಗೆ ಫಲ ಕಾಣಿಕೆಗಳನ್ನಿತ್ತು ನಮಸ್ಕರಿಸಿದರು.

ಇದನ್ನೆಲ್ಲಾ ನೋಡುತ್ತಿದ್ದ ಕೆಲ ರಾಜರಿಗೆ ಅಸಮಧಾನವಾಯಿತು. ಒಬ್ಬ ಗೊಲ್ಲನಿಗೆ, ಚೋರನಿಗೆ, ಕಪಟಿಗೆ ಅಗ್ರಪೂಜೆಯ? ಎಂಬ ರೀತಿ ಚೇದಿರಾಜ ಶಿಶುಪಾಲನು ಕೆರಳಿ ಸಹಿಸಲಾಗದೆ ಘರ್ಜಿಸಿದನು. ಆತನ ಅಸಹನೆಗೆ ಸಮಾನಮನಸ್ಕ ಕೆಲರಾಜರೂ ಜೊತೆಯಾದರು. ಮೊದಲೇ ಶಿಶುಪಾಲ ಕೃಷ್ಣನ ಬಗ್ಗೆ ವೈರಭಾವ ಹೊಂದಿದ್ದವನು. ಹಗೆ ಸಾಧಿಸಲು ಸಮಯಾವಕಾಶ ಕಾಯುತ್ತಿದ್ದನು. ಸಿಕ್ಕ ಅವಕಾಶಗಳಲ್ಲಿ ಸಾಧಿಸಲಾಗದೆ ಚಡಪಡಿಸುತ್ತಾ ಇದ್ದವನು. ಈಗ ಸುಸಮಯವಾಗಿ ಬೆಂಬಲಿಗ ರಾಜರ ಜೊತೆಯಾಗಿ ಕೃಷ್ಣನ ತೇಜೋವಧೆ ಮಾಡಲು ಮುಂದಾಗಿದ್ದಾನೆ. ಪ್ರಕರಣ ಅನುಕೂಲವಾದರೆ ಪ್ರಾಣವಧೆಗೂ ಸಿದ್ಧನಾಗಿ ಬಂಡೆದ್ದ ರಾಜರನ್ನೆಲ್ಲಾ ಪ್ರೋತ್ಸಾಹಿಸತೊಡಗಿದ್ದಾನೆ. “ಸಭ್ಯರೇ ಸರಿಯಾಗಿ ಯೋಚಿಸಿ, ನಾವೇನು ಕೆಲಸವಿಲ್ಲದೆ ಇಲ್ಲಿ ಬಂದವರೇ? ಇಲ್ಲ ಈ ಪಾಂಡವರು ಏನು ಮಾಡಿದರೂ ನೋಡಿ ಸಹಿಸುವಷ್ಟು ಹೆದರಿಕೆ ಉಳ್ಳವರೆ? ನಾವೂ ಸ್ವಾಭಿಮಾನ ಸಂಪನ್ನರಲ್ಲವೇ? ಸತ್ಕುಲ ಪ್ರಸೂತರಲ್ಲವೇ? ಪರಾಕ್ರಮ ನಮ್ಮಲ್ಲೂ ಇದೆಯಲ್ಲಾ? ನಮ್ಮೆಲ್ಲರನ್ನು ಅಪಮಾನಿಸುವ ರೀತಿ ಬೆಳವಣಿಗೆಯಾಗುತ್ತಿದೆ. ಧರ್ಮರಾಯ ಸಜ್ಜನನಿದ್ದಾನೆ, ಸತ್ಕಾರ್ಯ ಮಾಡುವಾಗ ಸಹಕರಿಸಬೇಕೆಂದು ನಾವು ಕಾಣಿಕೆ ನೀಡಿದ್ದೇವೆ. ಅದನ್ನು ತಿಳಿದು ಅವರು ವ್ಯವಹರಿಸಬೇಕಿತ್ತು.” ಹೀಗೆ ಆರಂಭಿಸಿ ತೀರಾ ನಿಂದನಾತ್ಮಕ ರೀತಿಯ ಆಕ್ಷೇಪ, ಅವ ಮರ್ಯಾದೆಯ ಮಾತುಗಳನ್ನಾಡಲು ಪ್ರಾರಂಭ ಮಾಡಿದ ಶಿಶುಪಾಲ.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page