ಭಾಗ 155
ಭರತೇಶ್ ಶೆಟ್ಟಿ,ಎಕ್ಕಾರ್

ಸಹದೇವನ ಮೇಲ್ವಿಚಾರಣೆಯಲ್ಲಿ ಯಜ್ಞಕ್ಕೆ ಬೇಕಾದ ಪರಿಕರಗಳೆಲ್ಲವೂ ಪುರೋಹಿತರಾದ ಧೌಮ್ಯರ ಆದೇಶದಂತೆ ಸಂಗ್ರಹವಾದವು. ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೆನಿಸಿದ ಯಾಜ್ಞವಲ್ಕ್ಯರು ರಾಜಸೂಯದ ಪ್ರಧಾನ ಅಧ್ವರ್ಯುವಾದರು. ವಸುಪುತ್ರರಾದ ಪೈಲರು ಧೌಮ್ಯರೊಂದಿಗೆ ಹೋತೃವಾದರು. ಸುನಾಮರು ಉದ್ಗಾತವಾದರು. ಸ್ವಯಂ ವ್ಯಾಸ ಭಗವಾನರು ಬ್ರಹ್ಮತ್ವದಲ್ಲಿ ನಿಯುಕ್ತರಾದರು. ಅನೇಕ ಮಂದಿ ಪೂಜ್ಯರಾದ ಋಷಿಗಳು, ವೇದವಿದರು ಸದಸ್ಯರಾಗಿ, ಅರ್ಚಕರಾಗಿ, ಪೂಜಕರಾಗಿ ನಿಯುಕ್ತಗೊಂಡರು. ದ್ರೌಪದಿ ಸಹಿತ ಧರ್ಮರಾಯನು ಯಜಮಾನನಾದನು.
ವಿವಿಧ ದ್ರವ್ಯಗಳ ಹವಿಸ್ಸುಗಳು, ಸಮಿಧೆಗಳು, ಆಜ್ಯಾಹುತಿಗಳು ಕ್ರಮವಾಗಿ ಸಮರ್ಪಿಸಲ್ಪಡುತ್ತಿದ್ದಂತೆಯೆ ಸ್ವಾಹಗೊಂಡ ಯಜ್ಞಪುರುಷನು ಪ್ರಸನ್ನನಾಗುತ್ತಿದ್ದಂತೆ ಪ್ರಜ್ವಲಿಸತೊಡಗಿದನು. ಆ ಮಹತ್ತರವಾದ ವೇದಮಂತ್ರಗಳ ಸುಘೋಷವು ಎಂಟು ದಿಕ್ಕುಗಳಲ್ಲಿಯೂ ಪ್ರತಿಧ್ವನಿಸುತ್ತಿತ್ತು. ಅಗ್ನಿದೇವನು ಹವ್ಯವಾಹನನಾಗಿ ರಾರಾಜಿಸಿದನು. ಅಗ್ನಿಮುಖದಿಂದ ಸಮರ್ಪಿತವಾದ ಹವಿಸ್ಸುಗಳನ್ನುಂಡ ದೇವತೆಗಳು ಸಂತುಷ್ಟರಾಗಿ ಸುಪ್ರೀತರಾದರು. ಅಭೂತಪೂರ್ವವಾದ ರಾಜಸೂಯ ಯಾಗ ಧರ್ಮರಾಯನ ಯಜಮಾನಿಕೆಯಲ್ಲಿ ವೈಷಿಷ್ಟ್ಯಪೂರ್ಣವಾಗಿ ನಡೆಯುತ್ತಿತ್ತು.
ರಾಜಸೂಯ ಯಾಗವು ಸಂಪನ್ನಗೊಳ್ಳುತ್ತಾ ಬಂದು ಅದರ ಅಂಗವಾದ ಅಭಿಷೇಕನೀಯ ಎಂಬ ದಿನ ಬಂತು. ಆ ದಿನ ಭೀಷ್ಮಾಚಾರ್ಯರು ಧರ್ಮರಾಯನನ್ನು ಕರೆದು- ಎಲ್ಲರಿಗೂ ಅವರವರ ಯೋಗ್ಯತೆಯಂತೆ ಸನ್ಮಾನಿಸು ಎಂಬುವುದಾಗಿ ಮಾರ್ಗದರ್ಶನ ನೀಡುತ್ತಾ, ಆಚಾರ್ಯ, ಋತ್ವಿಕ್, ಸಂಬಂಧಿ, ಸ್ನಾತಕ, ಸ್ನೇಹಿತ, ರಾಜ ಈ ಆರೂ ಮಂದಿಯೂ ಪೂಜಾರ್ಹರು. ಎಲ್ಲಕ್ಕಿಂತ ಮೊದಲು ಇವರೊಳಗೆ ಶ್ರೇಷ್ಟನೂ, ಸಮರ್ಥನೂ ಆದವನಿಗೆ ಅಗ್ರಪೂಜೆ ಯನ್ನು ನಡೆಸಬೇಕು ಎಂದು ಸಲಹೆ ನೀಡಿದರು. ಆಗ ಧರ್ಮರಾಯನು ಅಜ್ಜಾ, ನಮ್ಮಲ್ಲಿ ಹಿರಿಯನೂ, ಶ್ರೇಷ್ಠನೂ, ವಿಶೇಷವಾದ ಲೋಕಾನುಭವ, ಶಾಸ್ತ್ರಜ್ಞಾನ ನಿಮ್ಮಲ್ಲಿದೆ. ಧರ್ಮವನ್ನು ಚೆನ್ನಾಗಿ ತಿಳಿದವರು, ನಮ್ಮೆಲ್ಲರ ಹಿತೈಷಿಯೂ ಆದ ನೀವು ಯಾರಿಗೆ ಅಗ್ರ ಪೂಜೆ ಸಲ್ಲಿಸಬೇಕೆಂದು ಸೂಚಿಸಬೇಕು ಎಂದು ಬೇಡಿಕೊಂಡನು.
ಭೀಷ್ಮಾಚಾರ್ಯರು ಧರ್ಮರಾಯನ ಪ್ರಾರ್ಥನೆಯಂತೆ ಆಲೋಚಿಸಿ ತನ್ನ ಮನದೊಳಗೆ ತರ್ಕಿಸಿ ನಿರ್ಣಯಿಸಿ, “ಧರ್ಮರಾಯಾ ನಿನ್ನ ಅಪೇಕ್ಷೆ ಸಾಧುವಾಗಿಯೆ ಇದೆ. ನಮ್ಮ ಈ ಸಭೆಯಲ್ಲಿ ಯೋಗ್ಯತೆಯುಳ್ಳ ಋಷಿ ಮುನಿಗಳು, ವೇದವಿದರು, ವೀರಪುರುಷರು ಬಹುಮಂದಿ ಇದ್ದಾರೆ. ಇವರೊಳಗೆ ಶ್ರೇಷ್ಠರು ಯಾರು ಎಂದು ಸೂಕ್ಷ್ಮವಾಗಿ ನಿರ್ಣಯಿಸುವುದು ಕಷ್ಟವೆ ಸರಿ. ನಿಷ್ಪಕ್ಷಪಾತವಾಗಿ ವಿಚಾರ ನಡೆಸಿದರೆ ನಮ್ಮ ಸುದೈವವೋ ಏನೋ ಅಂತಹ ಮಹಾಪುರುಷನೊಬ್ಬ ನಮ್ಮೊಂದಿಗೆ ಇದ್ದಾನೆ ಎಂದರು. ಧರ್ಮರಾಯ ಕುತೂಹಲದಿಂದ ಅವರ್ಯಾರೆಂದು ಕೇಳಿದನು.
ಮುಂದುವರಿಯುವುದು…




