ಭಾಗ 154
ಭರತೇಶ್ ಶೆಟ್ಟಿ ಎಕ್ಕಾರ್

ನಕುಲನ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದಿಗ್ವಿಜಯಗೈಯುತ್ತಾ ಎದುರಾದ ರಾಜ್ಯಗಳನ್ನೆಲ್ಲಾ ಗೆದ್ದು ಮುಂದುವರಿಯತೊಡಗಿದ. ರೋಹಿತಕ, ಮಯೂರೇಕ, ಬಹುಧಾನ್ಯಕ, ಮಹೇಂದ್ರರನ್ನೆಲ್ಲಾ ಗೆದ್ದು ಕಪ್ಪ ಸಂಗ್ರಹಿಸಿದ. ಅಲ್ಲಿಂದ ಮತ್ತೆ ಅಂಬಷ್ಟರು, ಮಾಲವರು, ಕರ್ಪಟರು, ಮಧ್ಯಮಕದೇಶೀಯರು, ವಾಟಧಾನರು, ಪುಷ್ಕರಾರಣ್ಯ, ಗ್ರಾಮಣೀಯರು, ಅಮರ ಪರ್ವತ ಪ್ರಾಂತ, ಉತ್ತರ ಜ್ಯೋತಿಷ, ದಿವ್ಯಕಟಕ ಪಟ್ಟಣ, ರಾಮಕರು, ಹಾರರು, ಹೂಣರಣ್ಣೆಲ್ಲಾ ಗೆದ್ದು ಅಮಿತ ಕಪ್ಪ ಕಾಣಿಕೆ ಸಂಗ್ರಹಿಸಿದನು. ನಂತರ ಮಾದ್ರ ದೇಶಕ್ಕೆ ಬಂದು ಮಾತುಳನಾದ ಶಲ್ಯನಿಂದ ಪುರಸ್ಕೃತನಾದನು. ಅಲ್ಲಿ ಆತಿಥ್ಯವನ್ನು ಸ್ವೀಕರಿಸಿ ವಿರಮಿಸಿ ಆಯಾಸ ಪರಿಹರಿಸಿ ಕಪ್ಪ ಕಾಣಿಕೆಯ ಮೆರವಣಿಗೆಯೊಂದಿಗೆ ಇಂದ್ರಪ್ರಸ್ಥವನ್ನು ಸೇರಿದನು.
ಪಾಂಡು ಪುತ್ರರು ನಾಲ್ಕೂ ದಿಕ್ಕುಗಳನ್ನು ಸಂಪೂರ್ಣವಾಗಿ ಗೆದ್ದು ಸಂಗ್ರಹಿಸಿದ ಕಪ್ಪ ಕಾಣಿಕೆ, ಆಭರಣಗಳು, ವಸ್ತು ವಾಹನಗಳು ಹೀಗೆ ಸಮೃದ್ಧವಾದ ಸಂಪತ್ತು ಇಂದ್ರಪ್ರಸ್ಥದಲ್ಲಿ ತುಂಬಿತು. ಈಗ ಇಂದ್ರಪ್ರಸ್ಥ ಶಕ್ತಿ ಸಾಮರ್ಥ್ಯದಲ್ಲಿ, ಐಶ್ವರ್ಯ ಸಂಪತ್ತಿನಲ್ಲಿ, ದವಸ ಧಾನ್ಯ, ವಸ್ತ್ರ ಭೂಷಣ ಹೀಗೆ ಸಮಗ್ರವಾಗಿ ಉನ್ನತ ಪ್ರಭುತ್ವ ಸಾಧಿಸಿ ಭೂಸ್ವರ್ಗ ಎಂದೆನಿಸಿಕೊಂಡಿತು. ಪಾಂಡವರ ಸಾಧನೆಯನ್ನು ಲೋಕ ಲೋಕಗಳು ಕೊಂಡಾಡುವಷ್ಟರ ಮಟ್ಟಿಗೆ ಜನಜನಿತವಾಗಿ ಬೆಳೆಯಿತು. ಹೀಗಿರಲು ಅಲ್ಲಿಗೆ ಶ್ರೀಕೃಷ್ಣನೂ ನಾನಾ ವಿಧದ ದ್ರವ್ಯ, ಮುತ್ತು ರತ್ನ, ವಜ್ರ ವೈಢೂರ್ಯ, ಧನಕನಕಾದಿ ಸಂಪತ್ತುಗಳೆಲ್ಲವನ್ನು ವಿಶೇಷವಾಗಿ ತುಂಬಿಕೊಂಡು ಇಂದ್ರಪ್ರಸ್ಥಕ್ಕೆ ಬಂದನು. ಧರ್ಮರಾಯನೆ ಮುಂದಾಗಿ ಪಾಂಡವರು ಭವ್ಯ ಸ್ವಾಗತದಿಂದ ಇದಿರ್ಗೊಂಡು ವಸುದೇವ ವಾಸುದೇವರನ್ನು ಬರಮಾಡಿಕೊಂಡರು. ಶ್ರೀ ಕೃಷ್ಣ ದಿಗ್ವಿಜಯದ ಸಂಪೂರ್ಣ ವಿಚಾರ ತಿಳಿದು ಸಂಪತ್ತುಗಳು ಕ್ರೋಢೀಕರಿಸಲ್ಪಟ್ಟದ್ದನ್ನು ನೋಡಿ ಸಂತುಷ್ಟನಾದನು.
ಇಂದ್ರಪ್ರಸ್ಥದಲ್ಲಿ ಎಲ್ಲಾ ವರ್ಣ, ವರ್ಗದ ಜನರಿಗೂ ಆದರ ಆತಿಥ್ಯದ ವ್ಯವಸ್ಥೆಗಾಗಿ ಅರಮನೆಗಳು ನಿರ್ಮಾಣವಾದವು. ಯಾವುದಕ್ಕೂ ಕೊರತೆಯಿಲ್ಲದ ರೀತಿ ಸುವ್ಯವಸ್ಥೆಯಾಯಿತು. ಋಷಿಮುನಿಗಳಿಗೆ, ಗೋತ್ರಜ ವಿಪ್ರೋತ್ತಮರಿಗೆ, ದೇಶ ವಿದೇಶದ ರಾಜರಿಗೆ, ಹಿತೈಷಿಗಳಿಗೆ, ಆಶ್ರಮ, ಕುಟೀರ, ಯಾತ್ರಿ ನಿವಾಸ, ಅರಮನೆ, ವಿಶ್ರಾಂತಿಗೃಹಗಳು ಸಿದ್ದವಾದವು. ಅಖಂಡ ಭೂಮಂಡಲವನ್ನೆ ಗೆದ್ದು ಮಾಡುವ ಪಾಂಡವರ ರಾಜಸೂಯ ಯಾಗವೆಂದರೆ ಸಾಮಾನ್ಯವೇ? ಕೃಷ್ಣ, ಧೌಮ್ಯ ಧರ್ಮರಾಯ ಸಮಾಲೋಚನೆ ನಡೆಸಿ ತೀರ್ಮಾನಿಸಿ ಭಗವಾನ್ ವೇದವ್ಯಾಸರನ್ನು ಸಂಪ್ರಾರ್ಥಿಸಿ ಪ್ರಸನ್ನೀಕರಿಸಿ ಪ್ರತ್ಯಕ್ಷಗೊಳಿಸಿದರು. ವೇದವ್ಯಾಸರ ಮಾರ್ಗದರ್ಶನದಲ್ಲಿ ಮಹಾನ್ ಋಷಿಗಳಿಗೂ, ಋತ್ವಿಜರಿಗೂ, ದೀಕ್ಷಿತರಿಗೂ, ಹೋತೃವರ್ಗಗಳಿಗೂ ಆಮಂತ್ರಣ ಕಳುಹಿಸಿ ಸತ್ಕರಿಸಿ ಬರಮಾಡಿಕೊಂಡರು. ಅವರೆಲ್ಲರ ಆಗಮನವಾಗುತ್ತಿದ್ದಂತೆ ವಿಹಿತ ರೀತಿಯಲ್ಲಿ ಎಲ್ಲ ಸಿದ್ಧತೆ, ವ್ಯವಸ್ಥೆಗಳಿಂದ ಸ್ವಾಗತಾದಿಗಳು ನಡೆದವು.
ಸುಮೂಹೂರ್ತ ನೋಡಿ ಸ್ವಯಂ ಭಗವಾನ್ ವೇದವ್ಯಾಸರೇ ಮುಂದೆನಿಂತು ಯಾಗಶಾಲೆಯೂ ನಿರ್ಮಾಣವಾಯಿತು. ಪರಿಣತರಾದ ಶಿಲ್ಪಿಗಳು, ಕುಶಲಿಗರು ಸೇರಿ ಕೆಲಸ ಪೂರ್ಣಗೊಂಡಿತು. ಧೌಮ್ಯರ ಪೌರೋಹಿತ್ಯದಲ್ಲಿ ಸ್ಥಳಶುದ್ದಿ, ಆವರಣ ಶುದ್ದಿ, ದ್ರವ್ಯ ಶುದ್ಧಿ ಕಾರ್ಯಗಳೆಲ್ಲವೂ ನಡೆದವು.
ಧರ್ಮರಾಯನ ಆಜ್ಞೆಯಂತೆ ನಕುಲನು ಹಸ್ತಿನಾವತಿಗೆ ಹೋಗಿ ಧೃತರಾಷ್ಟ್ರ, ಭೀಷ್ಮ, ವಿದುರ, ಕೌರವ, ದ್ರೋಣ, ಅಶ್ವತ್ಥಾಮ, ಕೃಪ, ಕರ್ಣ, ಶಕುನಿ, ಜಯದ್ರಥಾದಿ ಸಂಪೂರ್ಣ ಪರಿವಾರವನ್ನು ಇಂದ್ರಪ್ರಸ್ಥಕ್ಕೆ ಕರೆಸಿಕೊಳ್ಳಲಾಯಿತು. ಧರ್ಮರಾಯನೆ ಸ್ವತಃ ಬಂದು ಹಿರಿಯರು, ಬಂಧು ಬಾಂಧವರೆಲ್ಲರನ್ನೂ ಸತ್ಕರಿಸಿದನು. ಪಿತೃ ಸದ್ಗತಿಗಾಗಿ ನಡೆಯುವ ಯಾಗದ ಕುರಿತು ಸವಿವರ ವಿಚಾರ ತಿಳಿಸಿ, ಬಂಧುಜನರ ಸಹಕಾರ ವಿನಂತಿಸಿಕೊಂಡನು. ಭೀಷ್ಮಾಚಾರ್ಯರು ಸಂತುಷ್ಟರಾಗಿ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡರು. ಉಪ ಜವಾಬ್ದಾರಿಗಳನ್ನೂ ಬಳಗದೊಳಗೆ ಹಂಚಿಕೊಳ್ಳಲಾಯಿತು. ಊಟೋಪಚಾರದ ಸುಧಾರಿಕೆ ಯುಯುತ್ಸು, ಅಡಿಗೆ, ಭಕ್ಷ್ಯ ಭೋಜ್ಯಗಳು, ಪಾನೀಯಗಳ ನಿರ್ವಹಣೆ ದುಶ್ಯಾಸನ, ಸ್ತ್ರೀಯರ, ಮಾತೆಯರ ಕುರಿತು ಗಾಂಧಾರಿ, ಕುಂತಿಯರು, ಬ್ರಾಹ್ಮಣರ ಬಗ್ಗೆ ಅಶ್ವತ್ಥಾಮ, ರಾಜರುಗಳ ವ್ಯವಸ್ಥೆ ಸಂಜಯ, ದಾನ ದಕ್ಷಿಣೆಗಳ ಹೊಣೆ ಕೃಪಾಚಾರ್ಯರಿಗೆ, ಘಟೋತ್ಕಚ ಸರ್ವ ರೀತಿಯ ಸತ್ಕಾರಗಳ ವ್ಯವಸ್ಥೆ, ಭೀಮಸೇನ ಸಂಪೂರ್ಣ ಸಂರಕ್ಷಣೆಯ ಹೊಣೆಗಾರಿಕೆ ಹೀಗೆ ವ್ಯವಸ್ಥೆಗಳಾದವು. ಶ್ರೀಕೃಷ್ಣನ ಜೊತೆ ಸಹಚರನಾಗಿ ಅರ್ಜುನ, ಧರ್ಮರಾಜನ ಅನುಚರನಾಗಿ ನಕುಲನಿಗೆ ಜವಾಬ್ದಾರಿ ನೀಡಲಾಯಿತು. ಮುಖ್ಯಾಧಿಕಾರಿಗಳಾಗಿ ದೃಷ್ಟದ್ಯುಮ್ನ, ಅನಿರುದ್ಧ ಮತ್ತವರ ಸಂಗಡಿಗರು ನೇಮಿಸಲ್ಪಟ್ಟರು. ದುರ್ಯೋಧನ ಕೋಶಾಧಿಕಾರಿ, ಧೃತರಾಷ್ಟ್ರ ಭಂಡಾರದ ವಿನಿಯೋಗ, ವಿದುರ ಸಲಹೆಗಾರನಾಗಿ ನಿಯುಕ್ತರಾದರು. ಆದರೆ ಶ್ರೀಕೃಷ್ಣ ತನಗೆ ತಾನಾಗಿಯೇ ಒಂದು ವಿಶೇಷ ಜವಾಬ್ದಾರಿ ವಹಿಸಿಕೊಂಡನು- ಅದೇನೆಂದರೆ ಯಾಗಕ್ಕಾಗಿ ಬರುವ ವಿಪ್ರೋತ್ತಮ, ಋಷಿ ಮುನಿ, ತಪಸ್ವಿಗಳ ಪಾದಪೂಜೆ ಮಾಡಿ ಸತ್ಕರಿಸುವುದು.
ವೇದಜ್ಞರಾದ ಬ್ರಾಹ್ಮಣರು ಧೌಮ್ಯರ ನೇತೃತ್ವದಲ್ಲಿ ಧರ್ಮರಾಯನಿಗೆ ಯಾಗ ದೀಕ್ಷೆ ಯನ್ನಿತ್ತರು. ಜೇಷ್ಠಾ ಮತ್ತು ಮೂಲಾ ನಕ್ಷತ್ರ ಸಂಧಿಸಿದ ಅಮವಾಸ್ಯೆಯ ದಿನ ಧರ್ಮರಾಯ ಕೃಷ್ಣಾಜಿನವನ್ನು ಸುತ್ತಿಕೊಂಡು ಉತ್ತರೀಯ ಧರಿಸಿ, ಮೈಗೆ ಬೆಣ್ಣೆಯನ್ನು ಲೇಪನ ಮಾಡಿಸಿಕೊಂಡು ಯಾಗ ಶಾಲೆಗೆ ಬಂದು ಸೇರಿದನು. ನಾನಾ ವಿಧವಾದ ಪ್ರಾಯಶ್ಚಿತ್ತ ಹೋಮಗಳನ್ನು ಪೂರೈಸಿಕೊಂಡನು. ನಂತರ ಬೊಗಸೆ ಕೈಗಳಿಂದ ಮುತ್ತು ರತ್ನ ಧನಕನಕಗಳನ್ನು ದಾನ ಮಾಡಿದನು. ಹೀಗೆ ರಾಜಸೂಯ ಯಾಗ ಶುಭ ಆರಂಭಗೊಂಡಿತು.
ಮುಂದುವರಿಯುವುದು…




