ಭಾಗ 143
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೧೪೪ ಮಹಾಭಾರತ
ಹೀಗೆ ಕೃಷ್ಣಾರ್ಜುನರಿಂದ ರಕ್ಷಣೆ ಪಡೆದು ಅಗ್ನಿ ನಿರಂತರ ಹದಿನೈದು ದಿನಗಳ ಕಾಲ ಖಾಂಡವ ವನವನ್ನು ಭಕ್ಷಿಸಿದನು. ಈ ಪ್ರಕರಣದಲ್ಲಿ ಅರ್ಧ ಶರೀರದೊಂದಿಗೆ ಅಶ್ವಸೇನ, ಕೃಷ್ಣಾರ್ಜುನರ ಅಭಯದಿಂದ ಶರಣಾರ್ಥಿಯಾಗಿ ಬದುಕುಳಿದನು. ರಾಕ್ಷಸ ಶಿಲ್ಪಿ ಮಯಾಸುರ, ಸ್ವಯಂ ಹವ್ಯವಾಹನ ವೈಶ್ವಾನರ ಅಗ್ನಿದೇವನಿಂದಲೇ ಸಂರಕ್ಷಿಸಲ್ಪಟ್ಟ ಮಂದಪಾಲನ ಮಕ್ಕಳಾದ ಮರಿ ಹಕ್ಕಿಗಳು ಮಾತ್ರ ಬದುಕುಳಿದ ಇತರರು.
ಸಂಪ್ರೀತನಾಗಿ ತೇಜಃಪೂರ್ಣನಾಗಿ ಬಂದ ಯಜ್ಞೇಶ್ವರ ಪ್ರತ್ಯಕ್ಷನಾಗಿ ಕೃಷ್ಣನಿಗೆ ವಂದಿಸಿ, ಅರ್ಜುನನ ಸಾಹಸವನ್ನು ಮೆಚ್ಚಿ ಹರಸಿದನು. ಸತ್ಕೀರ್ತಿಯ ಉಡುಗೊರೆಯಾಗಿ ಅಗ್ನಿದೇವನು ತನ್ನೆಲ್ಲಾ ಹೆಸರುಗಳಿಂದ ಪಾರ್ಥನನ್ನು ಹೊಗಳಿ ವಿಖ್ಯಾತನಾಗಲಿ ಎಂದು ಅನುಗ್ರಹಿಸಿ ಅಂತರ್ಧಾನನಾದನು.
ಅಷ್ಟರಲ್ಲಿ ಶಿಲ್ಪಿಯಾದ ಮಯನು ಬಂದು ಕೃಷ್ಣಾರ್ಜುನರಿಗೆ ಕೃತಜ್ಞತಾಪೂರ್ವಕವಾಗಿ ಜೀವದಾನ ನೀಡಿದ್ದಕ್ಕಾಗಿ ಪ್ರಣಾಮಗಳನ್ನು ಸಲ್ಲಿಸಿದನು. ಪ್ರತಿಯಾಗಿ ಸದಾ ನಿಮ್ಮ ಸೇವಕನಾಗಿ ಸೇವೆಗೆ ಸಿದ್ಧನಿರುವುದಾಗಿ ಹೇಳಿ, ಈಗ ನನ್ನಿಂದ ನಿಮಗೇನಾಗಬೇಕು ಎಂದು ಬೇಡಿದನು. ಆಗ ಅರ್ಜುನನು “ಅಯ್ಯಾ! ನೀನು ನಮಗೆ ಶರಣು ಬಂದವನು. ನಿನಗೇನಾದರು ಬೇಕಿದ್ದರೆ ಕೇಳು. ಒದಗಿಸುತ್ತೇವೆ. ಬಳಿಕ ಸ್ವತಂತ್ರನಾಗಿ ನಿನ್ನ ಇಚ್ಚೆ ಪ್ರಕಾರ ನೀನು ಬಯಸಿದ್ದಲ್ಲಿಗೆ ಹೋಗಬಹುದು” ಎಂದನು. ಈ ಮಾತಿನಿಂದ ಅತಿ ದುಃಖಿತನಾದ ಮಯನು, ನನ್ನಿಂದೇನಾದರೂ ಸೇವೆ ಪಡೆದುಕೊಳ್ಳಬೇಕೆಂಬುವುದು ನನ್ನಾಸೆ ಎಂದು ಬೇಡುತ್ತಾ ಅಪ್ಪಣೆ ನೀಡುವಂತೆ ವಿನಂತಿಸಿದನು. ಆಗ ಕೃಷ್ಣನು- “ನೀನು ಅಪ್ರತಿಮ ಶಿಲ್ಪಿಯಾಗಿರುವೆ. ನಿನ್ನ ಜ್ಞಾನ ವಿಶೇಷ, ಕೌಶಲ್ಯಗಳೇನಿವೆಯೋ ಅದನ್ನೆಲ್ಲಾ ವಿನಿಯೋಗಿಸಿ ನಿನಗೆ ತೃಪ್ತಿಯಾಗುವ ರೀತಿ ಒಂದು ಸುಂದರ ಭವನವನ್ನು ಇಂದ್ರಪ್ರಸ್ಥದಲ್ಲಿ ನಿರ್ಮಿಸಿ ರಾಜನಾದ ಧರ್ಮರಾಯನಿಗೆ ಸಮರ್ಪಿಸು”. ಎಂದನು. ಶ್ರೀ ಕೃಷ್ಣನ ಆದೇಶದಂತೆ ಅವರಿಬ್ಬರಿಂದಲೂ ಅನುಮತಿ ಪಡೆದು, ವಂದಿಸಿ ಕೈಲಾಸದ ತಪ್ಪಲಿನತ್ತ ಹೊರಟನು.
ಕೈಲಾಸ ಪರ್ವತದ ತಪ್ಪಲನ್ನು ದಾಟಿ ಮೈನಾಕ ಪರ್ವತ, ಹಿರಣ್ಯಶೃಂಗ ಪರ್ವತದ ಬಳಿ ಬಂದನು. ಅಲ್ಲಿ ಬಿಂದು ಸರೋವರವಿದೆ. ಇದರ ತಡಿಯಲ್ಲೇ ಹಿಂದೆ ಭಗೀರಥನು ಗಂಗೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಪಸ್ಸು ಮಾಡಿದ್ದನು. ಮಹಾದೇವನಾದ ಶಂಕರನೂ, ಪುರಂದರ ನಾಮಕ ಇಂದ್ರನೂ ಈ ಕ್ಷೇತ್ರದಲ್ಲೇ ಯಾಗಗಳನ್ನು ಮಾಡಿದ್ದರು. ಇದಕ್ಕಿಂತಲೂ ಮಹತ್ತರವಾಗಿ ತ್ರಿಮೂರ್ತಿಗಳೇ ಇಲ್ಲಿ ತಪಸ್ಸು ಮಾಡಿದ್ದರು. ಅಂತಹ ಪರಮ ಪವಿತ್ರ ಮಹಿಮಾನ್ವಿತ ಪುಣ್ಯ ಸ್ಥಳವಿದು. ಮಯನು ಇಂತಹ ವೈಶಿಷ್ಟ್ಯ ಪೂರ್ಣ ಬಿಂದು ಸರೋವರದಲ್ಲಿ ಮುಳುಗಿ ಒಂದು ವಿಶೇಷ ಗದೆಯನ್ನೂ, ಐದು ಶಂಖಗಳನ್ನೂ ಹೊರತಂದನು. ಹಿಂದೆ ರಾಕ್ಷಸ ರಾಜನಾದ ವೃಷಪರ್ವನಿಗಾಗಿ ನಿರ್ಮಿಸಿದ್ದ ಒಂದು ಸುರಮ್ಯವಾದ ಮಂದಿರದ ಅವಶೇಷಗಳು ಅಲ್ಲೇ ಬಿದ್ದಿದ್ದವು. ಅವುಗಳಿಂದ ಮಯನು ತನಗೆ ಬೇಕಾದವುಗಳನ್ನು ಆರಿಸಿ ಸಂಗ್ರಹಿಸಿದನು. ನಂತರ ಅಲ್ಲೇ ಸಂರಕ್ಷಣಾ ನಿರತ ಮಾಯಾವಿ ರಾಕ್ಷಸ ಕಿಂಕರರನ್ನು ಕರೆದು ತಾನು ಆಯ್ದ ಸಾಮಾಗ್ರಿಗಳನ್ನೆಲ್ಲಾ ಅತ್ಯಂತ ಶೀಘ್ರವಾಗಿ ಇಂದ್ರಪ್ರಸ್ಥಕ್ಕೆ ಸಾಗಿಸುವಂತೆ ಆಜ್ಞೆ ಮಾಡಿದನು. ಹೀಗೆ ಸಾವಿರಾರು ರಾಕ್ಷಸ ಕಿಂಕರರನ್ನು ಕೂಡಿಕೊಂಡು ಇಂದ್ರಪ್ರಸ್ಥಕ್ಕೆ ಬಂದು ಸೇರಿದರು. ವಿನೂತನ ಶೈಲಿಯ ಸಭಾ ಭವನದ ನಿರ್ಮಾಣಕ್ಕಾಗಿ ಧರ್ಮರಾಯನಲ್ಲಿ ಅನುಮತಿ ಕೇಳಿ ಕೆಲಸ ಆರಂಭಿಸಿದರು.
ಮುಂದುವರಿಯುವುದು…