ಭಾಗ 142
ಭರತೇಶ್ ಶೆಟ್ಟಿ,ಎಕ್ಕಾರ್

ಖಾಂಡವ ವನ ಹೊತ್ತಿ ಉರಿಯುತ್ತಿದೆ. ಮೊಟ್ಟೆಯೊಡೆದು ಬಂದು ಗರಿ ಮೂಡದ ಮರಿ ಹಕ್ಕಿಗಳಿಗೆ ಹಾರಿ ಹೋಗುವ ಶಕ್ತಿಯಿಲ್ಲ. ತನಗೆ ಹಾರಿ ಹೋಗ ಬಹುದಾದರೂ, ಮರಿಗಳನ್ನು ಬಿಟ್ಟು ಹೋಗಲು ಮಾತೃ ಹೃದಯ ಒಪ್ಪುತ್ತಿಲ್ಲ. ರಕ್ಷಿಸಬೇಕಾದ ಅಪ್ಪ ಹೊರಗಿದ್ದಾರೆ. ಏನು ಮಾಡುವುದೆಂದು ತಾಯಿ ಯೋಚಿಸುತ್ತಿದ್ದಾಳೆ. ಆಗ ಮರಿಗಳು ತಾಯಿಯನ್ನು ಕರೆದು “ಅಮ್ಮಾ ನೀನು ಶಕ್ತಳಾಗಿದ್ದೂ ಬದುಕಲು ಪ್ರಯತ್ನಿಸದೆ ಉಳಿಯಬೇಡ. ನಮ್ಮೊಂದಿಗೆ ಹೀಗೆ ಉಳಿದೆಯಾದರೆ ನೀನು ಭಸ್ಮವಾಗಿ ಹೋಗುವೆ. ಏನೂ ಪ್ರಯೋಜನವಾಗದು. ಹಾಗಾಗಿ ನಮ್ಮ ಬಗ್ಗೆ ಯೋಚಿಸಿ ಕೂರದೆ ನಿನ್ನ ಪ್ರಾಣವನ್ನಾದರೂ ಉಳಿಸಿ ಕೊಳ್ಳುವವಳಾಗು. ನೀನು ಬದುಕುಳಿದರೆ ಅಪ್ಪನ ಜೊತೆ ಸೇರಿ ಮತ್ತೆ ನೀನು ಸಂತಾನ ಪಡೆಯಬಹುದು. ಇಲ್ಲಿಯೆ ಉಳಿದೆಯೆಂದಾದರೆ ನೀನೂ ಸಾಯುವೆ. ನಮ್ಮನ್ನು ಬಿಟ್ಟು ನೀನು ಹಾರಿ ಹೋಗಮ್ಮಾ” ಎಂದು ಬೇಡಿಕೊಂಡವು. ತುಸು ಹೊತ್ತು ಯೋಚಿಸಿದ ಜರಿತೆ ಮಕ್ಕಳ ಮಾತಿನಲ್ಲಿ ಸತ್ಯವಿದೆ ಎಂದು ತರ್ಕಿಸಿ ಬದುಕುಳಿಯುವ ಪ್ರಯತ್ನವಾಗಿ ಹಾರಿ ಹೋಗುವಾಗ ಅರ್ಜುನ ಶರಾಘಾತಕ್ಕೆ ತುತ್ತಾಗಿ ಅಗ್ನಿಗರ್ಪಿತವಾದಳು. ಇತ್ತ ಶಾರ್ಙ್ಗಕ ಪಕ್ಷಿಯಾಗಿ ಹುಟ್ಟಿದ್ದ ಋಷಿ ಮಂದಪಾಲನು ಖಾಂಡವ ವನದ ಹೊರಗೆ ನಿಂತು ಅಗ್ನಿದೇವನನ್ನು ಸ್ತೋತ್ರ ಮಾಡುತ್ತಿದ್ದಾನೆ. ಈ ಮೂರು ಮರಿಗಳೂ ಜನ್ಮವಿಶೇಷವಾಗಿ ಹುಟ್ಟಿನಲ್ಲೇ ಪಿತನ ಅನುಗ್ರಹದಿಂದ ಪ್ರಾಪ್ತಿಸಿಕೊಂಡ ಜ್ಞಾನವಿಶೇಷದಿಂದ ಅಗ್ನಿಯನ್ನು ಸ್ತುತಿಸಿ ಪ್ರಾರ್ಥಿಸತೊಡಗಿದವು. ಅತ್ತ ಮಂದಪಾಲ, ಇತ್ತ ಹಸುಳೆ ಮರಿಗಳ ಪ್ರಾರ್ಥನೆ ಅಗ್ನಿಯನ್ನು ಸಂತೈಸಿತೋ ಏನೋ..! ಕರುಣೆದೋರಿ ಮರಿಗಳನ್ನು ಅಭಯವಿತ್ತು ಸಂರಕ್ಷಿಸಿದನು.
ಖಾಂಡವ ವನವು ಶ್ರೀ ಕೃಷ್ಣಾರ್ಜುನರಿಂದ ರಕ್ಷಿತವಾಗಿ ಅಗ್ನಿಗೆ ಆಹುತಿಯಾಗುತ್ತಿರುವುದನ್ನು ತಿಳಿದು ಇಂದ್ರನು ಸ್ವಯಂ ತನ್ನ ಪ್ರತಿಷ್ಠೆಯೇ ಹೊತ್ತಿ ಉರಿಯುತ್ತಿದೆಯೋ ಎಂಬಂತೆ ಅನಿಸಿತು. ದಿಕ್ಪಾಲಕರನ್ನೂ, ದೇವಲೋಕದ ಸೇನೆಯನ್ನೂ ಸೇರಿಕೊಂಡು ಕೃಷ್ಣಾರ್ಜುನರನ್ನು ತಡೆಯಲು ಐರಾವತವನ್ನು ಏರಿ ಬಂದನು. ಅಮೋಘವಾದ ದಿವ್ಯಾಯುಧಗಳನ್ನು ಪ್ರಯೋಗಿಸುತ್ತಾ ಅಂತರಿಕ್ಷದಲ್ಲೇ ನಿಂತು ಯುದ್ದ ಮಾಡತೊಡಗಿದರು. ಅರ್ಜುನನೋ ಇಂದ್ರನಿಂದಲೇ ಅನುಗ್ರಹಿತ ಪುತ್ರ! ಈಗ ತಂದೆ ಮಗನ ಯುದ್ದ. ಇತ್ತ ಇಂದ್ರನಿಗೆ ಶ್ರೀಹರಿ ದೇವರು. ಅಂದರೆ ದೇವ -ಭಕ್ತರ ಯುದ್ದ. ಪರ್ಯಾಯ ರೂಪದಲ್ಲಿ ವಿಭಿನ್ನವಾಗಿ ಭೂ- ಸ್ವರ್ಗದ ಯುದ್ದವಾಗುತ್ತಿದೆ. ಅಗ್ನಿಗಿತ್ತ ವಚನ ಭ್ರಷ್ಟರಾಗಲು ಸಿದ್ಧರಿಲ್ಲದೆ ಕೃಷ್ಣಾರ್ಜುನರು ಕಾಳಗ ನೀಡುತ್ತಿದ್ದರೆ, ತಕ್ಷಕನಿಗಿತ್ತ ಅಭಯ ಪಾಲಿಸದೆ ಉಳಿದರೆ ಮಿತ್ರದ್ರೋಹವಾದೀತೆಂದು ಇಂದ್ರನ ಪಾಲಿನ ಅನಿವಾರ್ಯತೆ. ಹೀಗೆ ಸುದೀರ್ಘ ಕದನವಾದರೂ ಜಯಾಪಜಯ ನಿಶ್ಚಯವಾಗಲಿಲ್ಲ. ಘೋರ ರೂಪ ತಳೆದು ದಿವ್ಯಾಸ್ತ್ರಗಳು ಘರ್ಷಿಸುತ್ತಾ ವಿಪರೀತ ಸ್ಥಿತಿ ತಲುಪುತ್ತಿದ್ದಂತೆ ಅಶರೀರವಾಣಿಯಾಯಿತು. “ಇಂದ್ರ ನೀನು ತಕ್ಷಕನ ರಕ್ಷಣೆಗಾಗಿ ಹೋರಾಡುತ್ತಿರುವೆ. ಆದರೆ ತಕ್ಷಕ ಈ ವನದಲ್ಲಿಲ್ಲ. ಸುರಕ್ಷಿತನಾಗಿ ಕುರುಕ್ಷೇತ್ರದಲ್ಲಿದ್ದಾನೆ. ಹಾಗಾಗಿ ವಿಧ್ವಂಸಕವಾಗುವ ಮೊದಲು ಯುದ್ಧ ನಿಲ್ಲಿಸಿರಿ.” ಅಶರೀರವಾಣಿಗೆ ಗೌರವ ಸೂಚಕವಾಗಿ ಇತ್ತಂಡಗಳೂ ಯುದ್ಧ ನಿಲ್ಲಿಸಿದರು. ಇಂದ್ರನಿಗೂ ಯುದ್ಧ ಮಾಡುವ ಅಗತ್ಯವಿರದಿದ್ದರೂ ವಚನ ಪಾಲನೆಗಾಗಿ ಹೋರಾಡುತ್ತಿದ್ದನು. ಈ ಹೋರಾಟದಲ್ಲಿ ಅರ್ಜುನನ ಯುದ್ಧ ಕೌಶಲ ಇಂದ್ರನಿಗೆ ಮೆಚ್ಚುಗೆಯಾಯ್ತು. ಯುದ್ಧ ನಿಲ್ಲಿಸಿ ಇಂದ್ರಾದಿ ದೇವತೆಗಳು ಕೃಷ್ಣನಿಗೆ ವಂದಿಸಿದರು. ಅರ್ಜುನ ಎಲ್ಲರಿಗೂ ನಮಸ್ಕರಿಸಿ ನಿಂತನು.
ಇಂದ್ರ ಅರ್ಜುನನ ಪರಾಕ್ರಮ ಮೆಚ್ಚಿ ನಿನಗೇನು ಬೇಕು ಮಗನೇ ಎಂದು ಕೇಳಿದಾಗ, “ದೇವಾ.. ದಿವ್ಯಾಸ್ತ್ರಗಳನ್ನು ಅನುಗ್ರಹಿಸಿ” ಎಂದು ಬೇಡಿದನು. ಆಗ ಇಂದ್ರನು “ಅಯ್ಯಾ ಕುಮಾರ, ವಾಸುದೇವನ ಶ್ರೀರಕ್ಷೆ ನಿನ್ನನ್ನು ಸರ್ವಲೋಕ ವಿಜಯಿಯಾಗಿಸಬಲ್ಲುದು. ಮಾತ್ರವಲ್ಲ ನಿಸ್ತೇಜನಾಗಿದ್ದ ಅಗ್ನಿಯನ್ನು ಸತೇಜನನ್ನಾಗಿ ಮಾಡಿದ ನಿನ್ನ ಕಾರ್ಯ ಅದ್ಬುತ ಪುಣ್ಯಬಲ ಸಂಚಯಗೊಳಿಸಿದೆ. ಹಾಗಾಗಿ ಮುಂದೆ ಸಶರೀರಿಯಾಗಿ ಸ್ವರ್ಗಕ್ಕೆ ಬಂದು ಅಲ್ಲಿ ವಿಧ ವಿಧ ದಿವ್ಯಾಸ್ತ್ರಗಳನ್ನು ನೀನು ಪಡೆದುಕೊಳ್ಳಬಹುದು” ಎಂದು ಹೇಳಿ, ಮತ್ತೆ ಶ್ರೀ ಕೃಷ್ಣನಿಗೆ ವಂದಿಸಿ ಇಂದ್ರಾದಿ ದೇವತೆಗಳು ಅಂತರ್ಹಿತರಾದರು.
ಮುಂದುವರಿಯುವುದು…