ಬಾಗ 132
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೧೩೩ ಮಹಾಭಾರತ
ಹೀಗೆಯೇ ಅರ್ಜುನ ಮಣಿಪುರದಲ್ಲಿ ಕೆಲ ಸಮಯ ಕಳೆಯಲಾಗಿ ಚಿತ್ರಾಂಗದೆ ಗರ್ಭ ಧರಿಸಿದಳು. ಮಾಸಗಳು ತುಂಬುತ್ತಾ ಬಂದೊಂದು ಶುಭದಿನ ಚಿತ್ರಾಂಗದೆಗೆ ಪುತ್ರೋತ್ಸವವಾಯಿತು. ಚಿತ್ರವಾಹನನಿಗಂತೂ ಮಹದಾನಂದ. ರಾಜ್ಯಕ್ಕೆ ಉತ್ತರಾಧಿಕಾರಿ ಪೌತ್ರ – ಅದೂ ಮಹಾನ್ ವಿಕ್ರಮಿ ಅರ್ಜುನನ ಸಂತಾನ. ಇನ್ನೇನು ಬೇಕೆನಗೆ ಎಂಬಷ್ಟು ಪೂರ್ಣ ಸಂತೃಪ್ತಿ. ದಿನಗಳು ಕಳೆದು ವಿಧಿವತ್ತಾಗಿ ಜಾತಕರ್ಮಾದಿಗಳನ್ನು ಪೂರೈಸಿ ಮಗುವಿಗೆ ಬಬ್ರುವಾಹನ ಎಂದು ನಾಮಕರಣ ಮಾಡಲಾಯಿತು. ಅರ್ಜುನ ಮತ್ತೂ ಕೆಲ ದಿನ ಮಣಿಪುರದಲ್ಲೇ ಕಳೆದು ತನ್ನ ಯಾತ್ರೆಗೆ ಹೊರಡಲು ಸಿದ್ಧನಾದ. ದೌಹಿತ್ರಾ ಪದ್ದತಿಯಂತೆ ಹುಟ್ಟಿದ ಮಗುವನ್ನು ಮಾವ ಚಿತ್ರಸೇನನಿಗೆ ದತ್ತು ನೀಡಿ ಕನ್ಯಾ ಶುಲ್ಕದ ಋಣಭಾರವನ್ನು ಪರಿಹರಿಸಿದನು. ಚಿತ್ರಾಂಗದೆಯನ್ನು ಸಂತೈಸಿ, ಮಗುವನ್ನೊಮ್ಮೆ ಮುದ್ದಾಡಿದನು. ಬಳಿಕ ಮಹಾರಾಜನ ಅನುಮತಿ ಪಡೆದು ತನ್ನ ಯಾತ್ರೆ ಮುಂದುವರಿಸಲು ಹೊರಟನು.
ಪಶ್ಚಿಮ ಕಡಲ ತಡಿಯ ಪುಣ್ಯ – ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಅರ್ಜುನ ಪ್ರಭಾಸ ತೀರ್ಥಕ್ಕೆ ಬಂದು ತಲುಪಿದ. ಅಲ್ಲೂ ತೀರ್ಥ ಸ್ನಾನಾದಿಗಳನ್ನು ಪೂರೈಸಿ ಕೊಂಡನು. ಇಷ್ಟೆಲ್ಲಾ ಯಾತ್ರೆ ಸಾಗುತ್ತಿರಬೇಕಾದರೆ ಅರ್ಜುನನಿಗೆ ಶ್ರೀಕೃಷ್ಣನ ಸ್ಮರಣೆ, ಏನೋ ಒಂದು ಸೆಳೆತ ಉಂಟಾಗಿ ದ್ವಾರಕೆಗೆ ಹೋಗಬೇಕೆಂಬ ಮನಸ್ಸಾಯಿತು. ಹೀಗೆಯೇ ನಿಜರೂಪದಲ್ಲಿ ಬೇಡವೆಂದು ತೀರ್ಮಾನಿಸಿ, ವೇಷಾಂತರಗೊಳಿಸಿ, ಬೆಳೆದಿಳಿದಿದ್ದ ಗಡ್ಡಕ್ಕೆ ಪೂರಕವಾಗಿ ಜಟಾವಲ್ಕಲಗಳನ್ನು ಧರಿಸಿ, ದಂಡ ಕಮಂಡಲಾದಿಗಳನ್ನೂ ಕರದಲ್ಲಿ ಹಿಡಿದು, ರುದ್ರಾಕ್ಷಿ ಜಪ ಮಾಲೆಯನ್ನು ತಿರುವುತ್ತಾ ಭೈರಾಗಿ ಸಂನ್ಯಾಸಿಯಂತೆ ದ್ವಾರಕೆಯತ್ತ ಪಯಣ ಬೆಳೆಸಿದನು. ಯಾರೊಬ್ಬರೂ ಅರ್ಜುನನ್ನು ಗುರುತಿಸಲಾರರು ಆ ಮಟ್ಟಿಗೆ ಸಾಕ್ಷಾತ್ ಸಂನ್ಯಾಸಿಯಾಗಿ ರೂಪುಗೊಂಡಿದ್ದಾನೆ.
ಅರ್ಜುನನ ವೇಷಾಂತರದಿಂದ ದ್ವಾರಕಾಗಮನದ ಸುಳಿವು ಶ್ರೀಕೃಷ್ಣನಿಗೆ ತಿಳಿಯಿತು. ಅಂತೆಯೇ ಅವನನ್ನು ಇದಿರುಗೊಳ್ಳಲು ಹೊರಟನು. ದ್ವಾರಕೆಯ ತುಸು ಹೊರವಲಯದಲ್ಲೇ ಪರಸ್ಪರ ಭೇಟಿಯಾದ ಪಾರ್ಥ – ಮಾಧವರು ವಿನೋದದಿಂದಲೇ ಸಂಭ್ರಮಿಸಿದರು. ಅರ್ಜುನ ಕೃಷ್ಣರು ಸಂಭಾಷಣಾ ನಿರತರಾಗಿ – ಪೂರ್ಣ ತೀರ್ಥಯಾತ್ರಾ ಕಥನ ವಿನಿಮಯಗೊಳಿಸಿದರು. ಸುಪ್ರೀತನಾದ ಶ್ರೀ ಕೃಷ್ಣ – ಅರ್ಜುನನ್ನು ಕರೆದುಕೊಂಡು ರೈವತಕ ಪರ್ವತಕ್ಕೆ ಬಂದನು. ಶ್ರೀಕೃಷ್ಣನ ಆದೇಶದಂತೆ ಆ ಪ್ರಶಾಂತವಾದ ಪ್ರದೇಶದಲ್ಲಿ ಸಂಪೂರ್ಣ ವ್ಯವಸ್ಥೆ ಮೊದಲೆ ಸಿದ್ಧವಾಗಿತ್ತು. ವಿಶ್ರಾಂತಿ ಪಡೆದು, ಊಟೋಪಚಾರಗಳನ್ನು ಪೂರೈಸಿದರು. ಅಂತರಂಗದ ಭಾವ ಸಂಬಂಧದಲ್ಲಿ ಭಕ್ತ – ದೇವನೂ, ಬಾಹ್ಯ ಸಂಬಂಧದಲ್ಲಿ ಅತ್ತೆಯ ಮಕ್ಕಳಾಗಿ ಭಾವ – ಭಾವಂದಿರೂ ಆದ ಕೃಷ್ಣಾರ್ಜುನರು ಒಂದೆ ಶಯ್ಯೆಯಲ್ಲಿ ಪವಡಿಸಿ ಸುಖಸಂಕಥಾಪರರಾಗಿ ಕಾಲ ಕಳೆದರು. ರಾತ್ರಿ ಕಳೆದು ಬೆಳಗಾಯಿತು. ಶ್ರೀ ಕೃಷ್ಣ ಅರ್ಜುನನಿಗೆ ನೀಡಬೇಕಾದ ಸಲಹೆಗಳನ್ನು, ಹೇಳಬೇಕಾದ ವಿಚಾರಗಳನ್ನೆಲ್ಲಾ ಅರುಹಿದನು. ಅವನನ್ನು ಅಲ್ಲೇ ವಿರಮಿಸಲು ಹೇಳಿ ತಾನೊಬ್ಬನೇ ದ್ವಾರಕೆಗೆ ಹೊರಟು ಹೋದನು.
ಮುಂದುವರಿಯುವುದು…