ಭಾಗ – 130
ಭರತೇಶ್ ಶೆಟ್ಟಿ, ಏಕ್ಕರ್

ಸಂಚಿಕೆ ೧೩೧ ಮಹಾಭಾರತ
ಅರ್ಜುನ ಬ್ರಾಹ್ಮಣರ ಜೊತೆಗೂಡಿ ಹಿಮಾಲಯ ತಪ್ಪಲಿನ ಆಗಸ್ತ್ಯ, ವಟ, ವಸಿಷ್ಠ ಪರ್ವತಗಳನ್ನೇರಿ ಕ್ಷೇತ್ರ ಸಂದರ್ಶನ ಮಾಡುತ್ತಾ ಮುಂದುವರಿದು, ಹಿರಣ್ಯಬಿಂದು ತೀರ್ಥದಲ್ಲಿ ಸ್ನಾನ ಮಾಡಿದರು. ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ನೈಮಿಷಾರಣ್ಯ, ಉತ್ಪಲಿನಿ, ಅಲಕನಂದೆ, ಕೌತಿಕಿ, ಗಯಾ ಕ್ಷೇತ್ರ, ಗಂಗೆ, ಮಹಾನದಿ, ಋಷ್ಯಾಶ್ರಮಗಳು, ಅಂಗ, ವಂಗ, ಕಳಿಂಗ ಮುಂತಾದ ದೇಶಗಳಲ್ಲಿ ಪರ್ಯಟನೆ ಮಾಡುತ್ತಾ ಸಾಗುತ್ತಿದ್ದರು. ಇಷ್ಟೆಲ್ಲಾ ತಿರುಗಾಟದಲ್ಲಿ ಬ್ರಾಹ್ಮಣರಿಗೆ ಯಾತ್ರೆ ಸಾಕೆಣೆಸಿತೋ! ಇಲ್ಲಾ ಅರ್ಜುನನಿಗೆ ತಾನೊಬ್ಬನೇ ಮುಂದುವರಿಯುವುದು ಯುಕ್ತವೆಂದೆನಿಸಿತೋ… ಕಳಿಂಗ ದೇಶದಿಂದ ಬ್ರಾಹ್ಮಣರು ತಮ್ಮ ಊರಿನತ್ತ ಮರಳಿ ಹೋಗಲು ನಿರ್ಧರಿಸಿದರು. ಅರ್ಜುನ ಬ್ರಾಹ್ಮಣೋತ್ತಮರ ಆಶೀರ್ವಾದ ಪಡೆದು ಬೀಳ್ಕೊಟ್ಟು ತನ್ನ ಯಾತ್ರೆ ಮುಂದುವರಿಸುತ್ತಾ ಕಡಲ ತಡಿಯಲ್ಲೇ ಸಾಗತೊಡಗಿದ.
ಹೀಗೆ ಯಾತ್ರೆ ಮುಂದುವರಿಸುತ್ತಾ ಮಹೇಂದ್ರ ಪರ್ವತ, ಗೋದಾವರಿ ತೀರ್ಥ ಸ್ನಾನಾದಿ ಪೂರೈಸಿ, ಸಾಗಿದ ಅರ್ಜುನ ಮಣಿಪುರ ಬಂದು ಸೇರಿದನು. ಮಣಿಪುರ ಪಾಂಡ್ಯದೇಶದ ರಾಜಧಾನಿ – ಅಲ್ಲಿಯ ರಾಜ ಚಿತ್ರವಾಹನ. ತನ್ನ ದೇಶಕ್ಕೆ ಆಗಮಿಸಿದ ಯಾತ್ರಿಕ ಅರ್ಜುನನ್ನು ಸ್ವಾಗತಿಸಿ ಸತ್ಕರಿಸಿದನು. ಕೆಲ ದಿನಗಳ ಕಾಲ ಮಣಿಪುರದಲ್ಲೇ ವಿರಮಿಸುವಂತೆ ವಿನಂತಿಸಿದ. ಒಪ್ಪಿದ ಅರ್ಜುನನಿಗೂ ನಿರಂತರ ಯಾತ್ರೆಯಿಂದ ದಣಿವು ನಿವಾರಣೆಗೆ ವಿಶ್ರಾಂತಿಯ ಅಗತ್ಯವಿತ್ತು. ಹೀಗೆ ಮಣಿಪುರದಲ್ಲಿ ತಂಗಿದ್ದ ಅರ್ಜುನ ಉಪವನದಲ್ಲಿ ತಿರುಗಾಡುತ್ತಿದ್ದ ಮಹಾರಾಜನ ಮಗಳು ಚಿತ್ರಾಂಗದೆಯನ್ನು ನೋಡಿದನು. ಆಕೆಯೂ ಅರ್ಜುನನ್ನು ನೋಡಿದಳು. ಹೀಗೆ ನಿರಂತರ ಕಣ್ಣೋಟದಲ್ಲೇ ಬೆರೆತು ಅನುರಾಗ ಬೆಳೆಯಿತು. ಇನ್ನು ತಡ ಮಾಡುವುದು ಸರಿಯಲ್ಲ ಎಂದು ವಿವೇಚಿಸಿ ಅರ್ಜುನ ನೇರವಾಗಿ ಮಹಾರಾಜ ಚಿತ್ರವಾಹನನನ್ನು ಭೇಟಿಯಾಗಿ ಏಕಾಂತದಲ್ಲಿ ವೈಯಕ್ತಿಕ ಸಮಾಲೋಚನೆಗೆ ಅವಕಾಶ ಕೇಳಿದನು. ಸಮ್ಮತಿಸಿದ ರಾಜನ ಜೊತೆ “ನಾನು ಹಸ್ತಿನಾವತಿಯ ಚಂದ್ರವಂಶದ ಪಾಂಡು ಚಕ್ರವರ್ತಿಯ ಪುತ್ರ ಅರ್ಜುನ” ನೆಂಬ ಪರಿಚಯ, ತೀರ್ಥಯಾತ್ರೆಯ ವೃತ್ತಾಂತವನ್ನೆಲ್ಲಾ ವಿವರಿಸಿ ತಿಳಿಸಿದನು. ಕೇಳಿ ತಿಳಿದ ಮಹಾರಾಜ ಅರ್ಜುನನನ್ನು ಕೇವಲ ಯಾತ್ರಿಯೆಂದು ಪರಿಗಣಿಸಿ ವ್ಯವಹರಿಸಿದ ಕಾರಣಕ್ಕೆ ಪರಿತಪಿಸಿದ. ಅರ್ಜುನ, ತಾನು ಏಕಾಂತದಲ್ಲಿ ಕೇಳಲು ಬಂದಿದ್ದ ವಿಷಯ ರಾಜನ ಮಗಳು ಚಿತ್ರಾಂಗದೆಯನ್ನು ಮದುವೆಯಾಗಲು ಬಯಸಿ, ನೇರವಾಗಿ ವಿಷಯ ಪ್ರಸ್ತಾಪಿಸಿ ತನ್ನ ಮನದಿಂಗಿತ ಪ್ರಕಟಿಸಿದನು.
ಮಹದಾನಂದಭರಿತನಾದ ರಾಜ ಚಿತ್ರವಾಹನ “ಅಯ್ಯಾ ಮಹಾನುಭಾವ, ನಿಮ್ಮ ವಂಶದ ಘನ ಕೀರ್ತಿ, ನಿನ್ನ ವೈಯಕ್ತಿಕ ಶೌರ್ಯ, ಪರಾಕ್ರಮ, ಸಾಧನೆ, ಯಶೋಗಾಥೆಗಳನ್ನು ಬಲ್ಲವರು ಯಾವ ಹೆಣ್ಣಿನ ತಂದೆಯೇ ಆಗಿರಲಿ ತಕ್ಷಣ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸಲು ಸಿದ್ದನಾದಾನು. ನನಗೂ ನಿನ್ನ ಬೇಡಿಕೆ ಮಹಾ ಸೌಭಾಗ್ಯವಾಗಿಯೇ ಒದಗಿದೆ. ಆದರೆ ನಮ್ಮಲ್ಲಿ ವಿಶಿಷ್ಟವಾದ ಒಂದು ಪದ್ದತಿಯು ನಡೆದು ಬಂದಿದೆ. ಅದರಂತೆಯೇ ಮುಂದುವರಿಯಬೇಕಾದ ವಿವಶತೆಗೆ ನಾನು ಒಳಗಾಗಿದ್ದೇನೆ”. ಎಂದು ವಿವರಿಸತೊಡಗಿದ.
“ಹಿಂದೆ ನಮ್ಮ ವಂಶದಲ್ಲಿ ಪ್ರಭಂಜನನೆಂಬ ಒಬ್ಬ ರಾಜನಿದ್ದನು. ಉತ್ತರಾಧಿಕಾರಕ್ಕಾಗಿ ಸಂತತಿ ಇಲ್ಲದ ಕಾರಣ ಮಹಾದೇವ ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಒಲಿದು ಮೈದೋರಿದ ಭಗವಂತ ಅನುಗ್ರಹವನ್ನೂ ಮಾಡಿದ. ಅಲ್ಲಿಂದ ನಮ್ಮ ವಂಶಕ್ಕೆ ಸಂತತಿಯ ಸಮಸ್ಯೆ ಇಲ್ಲ. ಒಂದು ಮಗು ಹುಟ್ಟುವಂತೆ ವರದಾನವಿದೆ. ಗಂಡು ಮಗುವಾದರೆ ರಾಜ್ಯಾಧಿಕಾರಕ್ಕೆ ತೊಂದರೆಯಿಲ್ಲ. ಹೆಣ್ಣು ಮಗುವಾದರೆ ನಮ್ಮಲ್ಲಿ ಪುತ್ರಿಕಾ ಧರ್ಮ ಅನುಸರಣೆಯಾಗುತ್ತದೆ. ಅದರಂತೆ ದೌಹಿತ್ರ ಮೂಲಕ ಸಾಂಸಾರಿಕ ಜೀವನ ಮುಂದುವರೆಯುತ್ತದೆ. ಅಂದರೆ ಹೆಣ್ಣು ಮಗಳಿಗೆ ಪ್ರಾಪ್ತ ವಯಸ್ಸಿನಲ್ಲಿ ಸಂತಾನ ಪಡೆಯುವ ಉದ್ದೇಶವನ್ನು ಪ್ರಧಾನವಾಗಿರಿಸಿ ಸೂಕ್ತ ವರನನ್ನು ತಂದೆ ತಾಯಿಯಾದವರು ಆರಿಸಬೇಕು. ವರ ಯಾರು ಎಂಬುವುದು ಕನ್ಯೆಗಾಗಲಿ, ಉಳಿದವರಿಗಾಗಲಿ ತಿಳಿಸಬೇಕೆಂಬ ಅನಿವಾರ್ಯತೆ ನಮ್ಮಲ್ಲಿಲ್ಲ. ವರನ ಯೋಗ್ಯತೆ, ಕುಲ ಗೋತ್ರ, ವಿದ್ಯೆ, ಸಾಧನೆ ನೋಡಿ ನಿಗದಿ ಪಡಿಸುವ ಹೊಣೆಗಾರಿಕೆ ಮಾತಾಪಿತರದ್ದು. ಮದುವೆಯಾದ ಬಳಿಕ ಕನ್ಯೆ ಗಂಡನ ಮನೆಗೆ ಹೋಗುವಂತಿಲ್ಲ. ಗಂಡನಾದವ ಪತ್ನಿಗೆ ಸಂತಾನ ಪ್ರಾಪ್ತವಾದ ಬಳಿಕ ಇರುವುದಾದರೆ ಇಲ್ಲಿ ಇರಬಹುದು, ಇಲ್ಲಾ ಹೋಗುವುದಾದರೆ ಹೋಗಬಹುದು – ಆಯ್ಕೆ ಮುಕ್ತವಾಗಿರುತ್ತದೆ. ಹಾಗೆಂದು ಹುಟ್ಟಿದ ಮಗುವಿನ ಮೇಲಿನ ಅಧಿಕಾರ ಕನ್ಯಾಶುಲ್ಕ ರೂಪದಲ್ಲಿ ನಮ್ಮದೇ ಆಗಿ ಉಳಿಯುತ್ತದೆ. ಮುಂದಿನ ಅಧಿಕಾರಿಯಾಗಿ ಆ ಶಿಶು ಮಣಿಪುರದಲ್ಲೇ ಬೆಳೆಯುವಂತಾಗುತ್ತದೆ. ಈ ರೀತಿ ಪುತ್ರಿಕಾ ಧರ್ಮ ನಮ್ಮ ವಂಶಕ್ಕೆ ಅನ್ವಯಿಸಲ್ಪಟ್ಟಿದೆ. ಈ ರೀತಿಯ ಧರ್ಮ ಪಾಲನೆಗೆ ಸಹಮತವಿದ್ದರೆ ಮದುವೆಗೆ ಮುಂದುವರಿಯಬಹುದು” ಎಂಬುವುದಾಗಿ ಮಹಾರಾಜ ಅರ್ಜುನನಿಗೆ ಪದ್ದತಿಯನ್ನು ವಿವರಿಸಿದ.
ಅರ್ಜುನನಿಗೆ ಮಹಾರಾಜನ ಮಾತು ಹಾಗೂ ಮಣಿಪುರ ರಾಜವಂಶದ ಪದ್ದತಿ ವೈವಾಹಿಕ ಸಂಬಂಧಕ್ಕೆ ಬಾಧಕವಾಗಿ ಕಾಣಲಿಲ್ಲ. ಸಂತೋಷದಿಂದ ಒಪ್ಪಿಕೊಂಡ ಬಳಿಕ ಸುಮೂಹೂರ್ತದಲ್ಲಿ ರಾಜನ ಆಸ್ಥಾನ ಅಂತಃಪುರದಲ್ಲಿ ಅತಿ ಸರಳವಾಗಿ, ಅರಮನೆಯಾದರೂ ಪದ್ದತಿಯಂತೆ ಮನೆಯೊಳಗಿನ ಮದುವೆಯಾಗಿ ನೆರವೇರಿತು. ಅರ್ಜುನನೂ ಚಿತ್ರಾಂಗದೆಯೂ ಸುಖವಾಗಿ ಕಾಲ ಕಳೆಯತೊಡಗಿದರು.
ಮುಂದುವರಿಯುವುದು…






















































