ಭಾಗ 129
ಭರತೇಶ್ ಶೆಟ್ಟಿ,ಎಕ್ಕರ್

ಸಂಚಿಕೆ ೧೩೦ ಮಹಾಭಾರತ
ಪರಮ ಪಾವನವಾದ ಗಂಗಾ ನದಿಯ ಉಗಮಸ್ಥಾನವೆನಿಸಿದ ಆ ಪ್ರದೇಶವು ಅತ್ಯಂತ ರಮಣೀಯವಾಗಿತ್ತು. ಗಿರಿಯ ಝರಿಯಲ್ಲಿಳಿದು ಮಂಜುಳ ನಿನಾದದಿಂದ ಹರಿಯುತ್ತಿದ್ದ ಆ ಪುಣ್ಯವಾಹಿನಿಯು ಅಮರಲೋಕದ ದಿವ್ಯಗಾನಕ್ಕೆ ಮೈತೆತ್ತು ನರ್ತಿಸುತ್ತಿದ್ದಂತೆ ರಂಜಿಸುತ್ತಿತ್ತು.
ಜಿನುಗಿ ಹಾಲ್ನೊರೆಯಾಗಿ ಹಾರಿ ಹನಿ ಮುತ್ತಾಗಿ ಹರಡಿ, ನೀರಾಗಿ ಹರಿಹರಿದು ತೊರೆಯಾಗಿ, ತೊರೆ ತೊರೆಗಳೊಂದಾಗಿ ಹೊಂದಿ ಹೊನಲಾಗಿ ಹಳ್ಳದಾಳವ ತುಂಬಿ ಹೊಳೆಯಾಗಿ, ಬೆಳೆ ಬೆಳೆದು ನದಿಯಾಗಿ ಪಾಪನಾಶಿನಿಯ ಪುಣ್ಯಜಲ ಪರಿಪೂರ್ಣೆಯಾಗಿ ಪ್ರವಹಿಸುತ್ತಿದ್ದಳು.
ಅರ್ಜುನನಿಗೂ ಅವನ ಜತೆಯ ಬ್ರಾಹ್ಮಣರಿಗೂ ಆ ಪ್ರದೇಶದ ದಿವ್ಯತೆಯೂ ಭವ್ಯತೆಯೂ ಮನಸ್ಸಿಗೆ ಆಹ್ಲಾದಕರವಾಗಿ ಪರಿಣಮಿಸಿದವು. ಅಲ್ಲೇ ಕೆಲವು ದಿನ ಉಳಿದುಕೊಳ್ಳುವುದೆಂದು ಅವರು ತೀರ್ಮಾನಿಸಿದರು. ಅದರಂತೆ ಬ್ರಾಹ್ಮಣರು ಹೋಮ ಕಾರ್ಯಗಳಿಗಾಗಿ ಮಂತ್ರಪೂರ್ವಕವಾದ ಅಗ್ನಿಯನ್ನು ಪ್ರತಿಷ್ಠಾಪನೆ ಮಾಡಿದರು. ಅಗ್ನಿಯಲ್ಲಿ ಹವಿಸ್ಸನ್ನರ್ಪಿಸಿ ಗಂಧ ಪುಷ್ಪಾಕ್ಷತೆಗಳಿಂದ ಯಜ್ಞೇಶ್ವರನನ್ನು ಪೂಜಿಸಿದರು. ಆಗ ಗಂಗಾತೀರದ ಆ ಪ್ರದೇಶಕ್ಕೆ ಅಪೂರ್ವವಾದ ಒಂದು ಶೋಭೆ ಉಂಟಾಯಿತು. ಅದರಿಂದ ಮತ್ತಷ್ಟು ಪುಳಕಿತರಾದ ಯಾತ್ರಿಕರು ಅಲ್ಲೇ ಕಲೆತು ಕುಳಿತು ವೇದಪಾರಾಯಣ, ಪುರಾಣ ಪ್ರವಚನ ಹಾಗೂ ಸತ್ಕಥಾಶ್ರವಣ ಮನನಾದಿಗಳಲ್ಲಿ ನಿರತರಾಗಿ ಪರಮಾನಂದವನ್ನು ಹೊಂದುತ್ತಿದ್ದರು.
ಒಂದು ದಿನ ಅಲ್ಲೇ ಸ್ವಲ್ಪ ಕೆಳಗೆ ನದಿಯು ಆಳವಿರುವೆಡೆಗೆ ನಡೆದು ಅರ್ಜುನನು ಸ್ನಾನ ಮಾಡಿ, ಪಿತೃತರ್ಪಣವನ್ನು ಕೊಟ್ಟು ಅಗ್ನಿ ಕಾರ್ಯಕ್ಕಾಗಿ ಮೇಲೇಳುವಷ್ಟರಲ್ಲಿ ಅದೇ ನೀರಿನ ಅಂತರಾಳದಿಂದ ಮೇಲೆ ಬಂದ ಉಲೂಪಿಯೆಂಬ ನಾಗಕನ್ನಿಕೆಯು ಇವನ ಅಸದೃಶವಾದ ರೂಪ ಸೌಂದರ್ಯಗಳಿಂದ ಮೋಹಿತಳಾದಳು. ಇವನನ್ನು ನೀರಿನೊಳಕ್ಕೆ ಸೆಳೆದುಕೊಂಡು ತನ್ನ ನಿವಾಸಕ್ಕೆ ಕೊಂಡೊಯ್ದಳು. ಅದು ನಾಗರಾಜನ ಮನೆ. ಅರ್ಜುನ ಅಪಹೃತನಾಗಿದ್ದರೂ ಅಂಜದೆ, ಕರ್ತವ್ಯ ಪ್ರಜ್ಞೆ ಮರೆಯದೆ ಅಲ್ಲಿ ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಮೊದಲಾಗಿ ತನ್ನ ನಿತ್ಯಪದ್ಧತಿಯ ಅಗ್ನಿ ಕಾರ್ಯವನ್ನು ಪೂರೈಸಿದನು. ಆ ಸಂದರ್ಭದಲ್ಲಿಯೂ ನಿಯಮನಿಷ್ಠೆಗಳನ್ನು ತಪ್ಪದ ಅರ್ಜುನನ ಕುರಿತು ಅಗ್ನಿದೇವನು ಅಧಿಕ ಸಂತುಷ್ಟನಾದನು. ನೈಮಿತ್ತಿಕ ಹೋಮ ಕಾರ್ಯವು ಮುಗಿಸಿದೊಡನೆ ಉಲೂಪಿಯು ಬಂದು ಅರ್ಜುನನ ಬಳಿ ನಿಂತುಕೊಂಡಳು. ಅರ್ಜುನನು ಅವಳನ್ನು ಕಂಡು “ಯಾಕೆ ಹೀಗೆ ಮಾಡಿದೆ? ಎಂದು ಕೇಳಿದನು. ಆಕೆಯು “ಓ ಮಹಾನುಭಾವನೇ, ಐರಾವತವೆಂಬ ಸರ್ಪ ಕುಲದಲ್ಲಿ ಜನಿಸಿರುವ, ಕೌರವ್ಯನೆಂಬ ನಾಗರಾಜನ ಮಗಳು ನಾನು. ಉಲೂಪಿಯೆಂದು ನನ್ನ ಹೆಸರು, ನೀನು ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನಿನ್ನನ್ನು
ನೋಡಿದೆ. ನಿನ್ನ ರೂಪಕ್ಕೂ ತೇಜಸ್ಸಿಗೂ ನಾನು ಮನಸೋತೆನು. ನನ್ನ ಮನಸ್ಸು ಅಂಕೆಯಲ್ಲಿ ನಿಲ್ಲದೆ, ನಿನ್ನ ಮೇಲೆಯೇ ನೆಟ್ಟು ಹೋಯಿತು. ಅಂತೆಯೇ ಏನನ್ನು ಹೇಳದೆ, ಯಾವುದನ್ನೂ ಕೇಳದೆ ನಿನ್ನನ್ನು ಸೆಳೆದು ಇಲ್ಲಿವರೆಗೆ ಕರೆದು ತಂದಿರುವೆನು. ನಿನ್ನಲ್ಲಿ ಅನುರಕ್ತಳಾಗಿರುವ ನನ್ನನ್ನು ವರಿಸಿ ಪ್ರಾಣದಾನವನ್ನು ಮಾಡಬೇಕು ಇದೇ ನನ್ನ ಪ್ರಾರ್ಥನೆ” ಎಂದು ನಿವೇದಿಸಿಕೊಂಡಳು. ಅವಳ ಅಪೇಕ್ಷೆಯನ್ನು ಕೇಳಿ ಅರ್ಜುನ ತಾನು ಯಾತ್ರೆ ಹೊರಡುವಲ್ಲಿ ಕಾರಣವಾದ ಕಥನ ವಿವರಿಸಿ “ನಾನೀಗ ತೀರ್ಥಯಾತ್ರೆಯ ವೃತಸ್ಥನಾಗಿರುವೆ. ಹಾಗಾಗಿ….” ಎನ್ನುತ್ತಿರುವಾಗಲೇ ತಡೆದು ಅರ್ಜುನನ ವಾದವರಿತ ಉಲೂಪಿ ತನ್ನ ಬಯಕೆ, ಅದಕ್ಕೆ ಪೂರಕ ಧರ್ಮ ಸಹಮತ ಕಾರಣ ವಿವರಿಸತೊಡಗಿದಳು. “ಅಯ್ಯಾ ಮಹಾನುಭಾವ! ನೀನು ತೀರ್ಥಯಾತ್ರೆ ಕೈಗೊಂಡಿರುವುದು ನಿಮ್ಮೊಳಗಿನ ಸಂಪ್ರದಾಯ. ನೀನು ಮೀರಿದ ತಪ್ಪಿಗಾಗಿ. ಈ ಒಪ್ಪಂದದ ವ್ಯಾಪ್ತಿ ನಿಮ್ಮ ಹಾಗು ದ್ರೌಪದಿಯ ಸಂಬಂಧದವರೆಗೆ ಮಾತ್ರವಿರುತ್ತದೆ. ನನ್ನ ಹಾಗೂ ನಿನ್ನ, ಅಥವಾ ದ್ರೌಪದಿ ಹಾಗು ಪಾಂಡವರನ್ನು ಹೊರತು ಅನ್ಯರ್ಯಾರು ಈ ನಿರ್ಬಂಧದಿಂದ ಬಂಧಿಸಲ್ಪಡಲಾರರು. ಈ ಪ್ರಕರಣ ನಿರ್ದೇಶಿತ ತೀರ್ಥಯಾತ್ರೆಯ ಕಾಲಾವಧಿವರೆಗೆ ಕ್ಷೇತ್ರ ಪರ್ಯಟನೆ ಮಾಡಿ ಪುಣ್ಯ ಸಂಪಾದನೆಗೆ ಬಳಸಿಕೊಳ್ಳುತ್ತಿರುವುದು ಅತೀ ಉತ್ತಮ. ಹಾಗೆಂದು ಒಲಿದು ಬಂದವರನ್ನು ತಿರಸ್ಕರಿಸಬೇಕು ಎಂಬ ಹಾಗೇನು ಇಲ್ಲವಲ್ಲ. ನಾನು ನಿನ್ನನ್ನೇ ಬಯಸಿದ್ದೇನೆ. ನಿನ್ನ ಹೊರತು ನನ್ನನ್ನು ಸಂತೈಸಲು ಯಾರಿಂದಲೂ ಸಾಧ್ಯವಿಲ್ಲ. ಒಂದೊಮ್ಮೆಗೆ ನೀನು ನನ್ನನ್ನು ಅಲಕ್ಷಿಸಿದರೆ ಮತ್ತೆ ನನಗೆ ಬದುಕು ಬೇಡವಾಗಿದ್ದು ನನ್ನ ಅಂತ್ಯವಾಗುತ್ತದೆ. ಆದ ಕಾರಣ ನನ್ನನ್ನು ರಕ್ಷಣೆ ಮಾಡಿ ಉದ್ದರಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ” ಎಂದಳು. ಅರ್ಜುನನು ಧರ್ಮ ಹಾಗು ಶಕ್ತಿಯ ಸಮ್ಮಿಳಿತ ಸ್ವರೂಪ. ಸ್ವಯಂ ಧರ್ಮ ಜಿಜ್ಞಾಸೆ ಮಾಡಿ ಉಲೂಪಿಯ ಒತ್ತಾಯ ಧರ್ಮಸಮ್ಮತವಾಗಿರುವುದನ್ನು ಮನಗಂಡು, ಒಪ್ಪದೇ ಉಳಿದರೆ ಆಕೆಯ ಪಾಲಿಗೆ ದುರಂತಮಯ ಆಗಬಹುದು. ಆದ್ದರಿಂದ ರಕ್ಷಕನಾಗಿ ಆಕೆಯ ಅಪೇಕ್ಷೆಯಂತೆ ನಾಗಲೋಕದಲ್ಲೊಂದು ದಿನ ಉಳಿಯಲು ಒಪ್ಪಿದ.
ಉಲೂಪಿಯು ವಿಶೇಷ ಶಕ್ತಿ ಸಂಪನ್ನೆಯಾಗಿದ್ದು ಸದ್ಯೋಗರ್ಭಧಾರಣದ ಯೋಗಬಲ ಹೊಂದಿದ್ದರಿಂದ ಗರ್ಭಧರಿಸಿ ಸದ್ಯೋಜಾತತ್ವದ ಮೂಲಕ ಒಬ್ಬ ಮಗನನ್ನು ಪಡೆದಳು. ಅವನಿಗೆ ಮಹಿಮಾನ್ವಿತರಾದ ಮಾತಾಪಿತರು ಅವನ ರೂಪ, ಬಲ, ತೇಜಸ್ಸುಗಳನ್ನು ಗುರುತಿಸಿ ಇರಾವಂತ ಎಂದು ನಾಮಕರಣವನ್ನೂ ಮಾಡಿದರು. ಅರ್ಜುನ ಕರ್ತವ್ಯ, ದೀಕ್ಷೆ ಸ್ಮರಿಸಿ ತಾನು ಇಲ್ಲಿ ಉಳಿಯಲಾಗದು ಎಂದು ಸ್ಮರಿಸಿ ಹೇಳಿದನು. ಆಗ ಉಲೂಪಿಯು ನಾಗಲೋಕದಿಂದ ಅರ್ಜುನನ್ನು ಮರಳಿ ಗಂಗಾತೀರಕ್ಕೆ ಕರೆದುಕೊಂಡು ಬಂದು ಭೂಲೋಕಕ್ಕೆ ತಲುಪಿಸಿ ನಮಿಸಿ ನಿಂತಳು, “ಪ್ರಿಯವರ, ನನ್ನಿಂದ ಅತಿಕ್ರಮಣ, ಅಪಚಾರವಾಗಿದ್ದರೆ ಮನ್ನಿಸಬೇಕು. ನಾನು ನಿನ್ನಿಂದ ಅನುಗ್ರಹಿಸಲ್ಪಟ್ಟು ಪುನೀತಳಾಗಿದ್ದೇನೆ. ಸಂತೃಪ್ತಿಯೂ, ಜನ್ಮ ಸಾರ್ಥಕತೆಯೂ ನನಗಾಗಿದೆ. ಪ್ರತಿಯಾಗಿ ನನ್ನಲ್ಲಿ ಸಂಚಯವಾಗಿರುವ ದಿವ್ಯಶಕ್ತಿಗಳನ್ನು ವಿನಿಯೋಗಿಸಿ ನಿನಗೆ ವಿಶಿಷ್ಟವಾದ ಶಕ್ತಿಯಾಗಿ- ” ಇನ್ನು ಮುಂದೆ ನಿನಗೆ ಎಂತಹ ಜಲರಾಶಿಯಲ್ಲೂ, ಎಷ್ಟೇ ಬಲಿಷ್ಟ ಜಲಚರವೇ ಆಗಿರಲಿ, ಅವುಗಳಿಂದ ಅಪಾಯ ಮಾಡಲಾಗದಿರಲಿ. ಮಾತ್ರವಲ್ಲ ಅವುಗಳು ನಿನ್ನ ವಶವಾಗಿ ಹೋಗಲಿ. ಇದು ಒಂದು ರೀತಿಯಲ್ಲಿ ರಕ್ಷೆಯೇ ಆಗಿ ಪರಿಣಮಿಸಲಿ” ಎಂದು ಹಾರೈಸುತ್ತೇನೆ ಎಂಬುದಾಗಿ ವರ ರೂಪದ ಅನುಗ್ರಹವಿತ್ತು ಮತ್ತೆ ನಮಸ್ಕರಿಸಿದಳು. ಅರ್ಜುನನಿಗೆ ಬಯಸದೆ ದೊರೆತ ಅನುಗ್ರಹಬಲ ಇದಾಗಿತ್ತು. ಸುಪ್ರೀತನಾಗಿ ಅವಳನ್ನು ಬೀಳ್ಕೊಟ್ಟನು. ಉಲೂಪಿ ಮರಳಿ ತನ್ನ ಲೋಕ ಸೇರಿದರೆ, ಅರ್ಜುನ ತನ್ನೊಡನಿದ್ದ ಬ್ರಾಹ್ಮಣರತ್ತ ಬಂದು ಸೇರಿದನು. ನಿನ್ನೆಯಿಂದ ಅರ್ಜುನನ್ನು ಕಾಣದೆ ಆತಂಕಿತರಾಗಿದ್ದ ಬ್ರಾಹ್ಮಣರಿಗೆ ಈಗ ಪ್ರತ್ಯಕ್ಷ ಕಣ್ಣೆದುರು ಕಂಡು ಸಂತೋಷವಾಯಿತು. ಅರ್ಜುನನು ನಡೆದ ವೃತ್ತಾಂತವನ್ನೂ, ಕಡೆಗೆ ಉಲೂಪಿಯ ಹಾರೈಕೆಯನ್ನೂ ತಿಳಿಸಿದನು. ಕೇಳಿಸಿಕೊಂಡ ಬ್ರಾಹ್ಮಣೋತ್ತಮರು ಮಹದಾನಂದಭರಿತರಾದರು.
ಗಂಗಾತೀರದಲ್ಲಿ ಪೂಜೆ ಪುರಸ್ಕಾರಗಳನ್ನು ಪೂರೈಸಿ ಎಲ್ಲರೂ ಒಟ್ಟಾಗಿ ಹಿಮಾಲಯದ ತಪ್ಪಲಿಗೆ ಬಂದರು.
ಮುಂದುವರಿಯುವುದು…



















