ಭಾಗ 124
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೨೫ ಮಹಾಭಾರತ
ಮೌನವಾಗಿಯೇ ಯೋಚನೆಯೊಳಗೆ ಹೊಕ್ಕಿದ್ದಾನೆ ಧರ್ಮರಾಯ. ಕೆಲದಿನಗಳ ಹಿಂದೆ ಹಸ್ತಿನಾವತಿಗೆ ಬಂದಿದ್ದೇವೆ. ಮತ್ತೆ ಹೊರ ಹೋಗಲು ಆದೇಶ. ಹಾಗೆಂದು ನಾನು ಒಪ್ಪಿದ್ದರೆ ಅಖಂಡವಾದ ಹಸ್ತಿನಾವತಿಯ ಸಾಮ್ರಾಜ್ಯ ಇಬ್ಭಾಗವಾಗುತ್ತದೆ. ಒಂದಾಗಿಯೇ ಇರಬೇಕೆಂದು ಬಯಸುವ ನಾನೇ ಎರಡನೆಯ ಭಾಗವನ್ನು ಬಯಸಿ ಹೋದರೆ ಧರ್ಮವಾದೀತೇ? ಅಭಿಷಿಕ್ತ ಯುವರಾಜನಾಗಿ ಈ ಸಾಮ್ರಾಜ್ಯದ ವೃದ್ಧಿ, ಅಭಿವೃದ್ಧಿ, ಸಮೃದ್ಧಿಯ ಹೊಣೆಗಾರಿಕೆ ಹೊತ್ತಿರುವಾಗ ನಾನೇ ಈ ರಾಜ್ಯವನ್ನ ಛಿದ್ರಗೊಳಿಸುವ ವಿಚಿತ್ರ ಆಜ್ಞೆಯ ಚಿತ್ರಣ ಅರಿಯದೆ ಒಪ್ಪಿದರೆ, ನಾಳೆ ತಪ್ಪಿಗೆ ಹೊಣೆಗಾರನಾಗಲಾರೆನೇ? ಹಸ್ತಿನೆಯ ಸಾಮ್ರಾಜ್ಯದ ಪ್ರಜಾವರ್ಗವೆಲ್ಲಾ ನಮ್ಮವರೇ ಆಗಿದ್ದಾರೆ. ಈಗ ಪ್ರತ್ಯೇಕತೆಯ ಪರಿಧಿಯೊಳಗೆ ನಾನು ಪರದೇಶಿಯಾಗುವುದೇ? ಎಲ್ಲವೂ ಅಸ್ಪಷ್ಟವಾಗಿದೆ.
ಹಾಗೆಂದು ರಾಜ್ಯವೂ ಬೇಡ, ಅಧಿಕಾರವೂ ಬೇಡ ಎಂದು ತ್ಯಾಗಿಯಾಗಿ ಇಲ್ಲೇ ಉಳಿದರೆ ಸಾಮ್ರಾಜ್ಯವೇನೋ ಅಖಂಡವಾಗಿ ಉಳಿದೀತು ಆದರೆ ಕೌರವ ಪಾಂಡವ ಕೌರವರೆಂದು ಖಂಡ ತುಂಡವಾಗಿ ಕತ್ತರಿಸಲ್ಪಟ್ಟು ದಾಯಾದಿ ಕಲಹದಿಂದ ಮಸೆಯುತ್ತಿರುವ ಮನಗಳು ಇಬ್ಭಾಗವಾಗಿದೆಯಲ್ಲಾ! ಪ್ರತಿಕಾರದ ಪ್ರತಿಕ್ಷಣಗಳ ಪ್ರತೀಕ್ಷೆಯಲ್ಲೇ ಬದುಕಬೇಕಾದೀತು ಇಲ್ಲಿ. ಯಾರಿಗೂ ನೆಮ್ಮದಿ ಇಲ್ಲದ ಬವಣೆಯ ಬದುಕಾಗಿ ಹೋದೀತು. ಸರ್ವ ಸಂಗ ಪರಿತ್ಯಾಗ ಮಾಡಿ ಸನ್ಯಾಸತ್ವ ಸ್ವೀಕಾರ ಮಾಡಿ ತಪೋನಿರತನಾಗೋಣವೇ? ಋಣಮುಕ್ತಿಗಾಗಿ ವರ್ಣ ಧರ್ಮಪಾಲಿಸಿ ಪ್ರಜಾಪರಿಪಾಲನೆ, ದೇಶ, ಕೋಶ, ಗೋ, ಬ್ರಾಹ್ಮಣ, ಸ್ತ್ರೀ, ಋಷಿ, ಕೃಷಿ, ನ್ಯಾಯ, ಧರ್ಮ ಪರಿಪಾಲನೆ ಮಾಡಬೇಕಾದ ಜವಾಬ್ದಾರಿಯಿದೆಯಲ್ಲಾ ನಮಗೆ? ವೃದ್ಧರಾದ ಅಜ್ಜ, ಮಾತೆ, ದೊಡ್ಡಪ್ಪ, ಗುರುಗಳು ಹೀಗೆ ಸಂಸಾರದ ಬಂಧುಗಳು, ಅಬಾಲ ವೃದ್ಧಾದಿ ಪ್ರಜಾ ಬಾಂಧವರು ನಮ್ಮನ್ನೇ ನಂಬಿ ಅವಲಂಬಿತರಾಗಿದ್ದಾರೆ. ಅವರನ್ನು ಅಲಕ್ಷಿಸಿ ಹೋದರೆ ಕ್ಷಾತ್ರ ಧರ್ಮ ಪಾಲನೆಯಾಗದೆ ಉಳಿದೀತು. ಇಷ್ಟೆಲ್ಲಾ ಕರ್ತವ್ಯದಿಂದ ವಿಮುಖರಾದರೆ ಅಧರ್ಮವೇ ಆಗುತ್ತದೆ.
ಅನುಭವದಿಂದ ಪರಿಸ್ಥಿತಿಯನ್ನೊಮ್ಮೆ ಅವಲೋಕನೆ ಮಾಡಿ ವಿವೇಚಿಸಿದರೆ, ಕಾಡಾಡಿಗಳಾಗಿದ್ದ ನಾವು ಹಸ್ತಿನಾವತಿಗೆ ಬಂದೆವು. ಮತ್ತೆ ವಿದ್ಯಾಭ್ಯಾಸಕ್ಕಾಗಿ ಹೊರಹೋಗಿ ಮತ್ತೆ ಬಂದೆವು. ಯುವರಾಜ ಪಟ್ಟಾಭಿಷಿಕ್ತನಾಗಿ ಇಲ್ಲಿಂದ ರಾಜಕಾರ್ಯಕಾರಣ ನಿಮಿತ್ತ ವಾರಣಾವತಕ್ಕೆ ಕಳುಹಿಸಲ್ಪಟ್ಟೆವು. ಅಲ್ಲೂ ಅನಿರೀಕ್ಷಿತ ಆಕಸ್ಮಿಕ ಅವಘಡವೇ ನಡೆದು ಜೀವನದ ಬಹುಮೂಲ್ಯ ಪಾಠಗಳನ್ನು ಕಲಿಯುತ್ತಾ ಅಲೆಮಾರಿಗಳಾಗಿ, ದುಷ್ಟ ನಿಗ್ರಹ, ಆರ್ತ ರಕ್ಷಣೆ ಮಾಡುತ್ತಾ ಸಾಧಿಸಿಕೊಳ್ಳುವ ಅವಕಾಶಗಳೂ ಭಗವದ್ಕೃಪೆಯಿಂದ ಒದಗಿ ಬಂತು. ಸ್ವಯಂವರ ವಿಜೇತರಾಗಿ ಪಾಂಚಾಲದಲ್ಲಿದ್ದ ನಮ್ಮನ್ನು ಮತ್ತೆ ಹಸ್ತಿನೆ ಕರೆದರೂ ಈಗ ಮರಳಿ ಹೊರ ಹೋಗಬೇಕಾದ ಸಂದರ್ಭ ಸಿದ್ದಗೊಂಡಿದೆ. ಜೀವಮಾನವಿಡೀ ಇಲ್ಲಿಗೆ ಬಂದು ಹೋಗುವ ಘಟನೆಯೊಳಗೇ ಸುತ್ತುತ್ತಿರುವುದೇ ಕೌತುಕಪ್ರದವಾಗಿದೆ.
ಸಂಬಂಧದಲ್ಲಿ ದೊಡ್ಡಪ್ಪನಾಗಿ ನಮ್ಮ ಮೇಲೆ ಮಮತೆಯಿಂದ ಈ ನಿರ್ಣಯ ಕೈಗೊಂಡು, ತನ್ನ ತಮ್ಮ ಪಾಂಡುವಿನ ಮಕ್ಕಳ ಶ್ರೇಯೋಭಿಲಾಷಿಯಾಗಿ ಈ ತೀರ್ಮಾನ ಕೈಗೊಂಡಿರಲೂಬಹುದು. ಇಲ್ಲ ಅವರ ಮಕ್ಕಳ ಅಪ್ಪನಷ್ಟೇ ಆಗಿ ತನ್ನ ಸ್ವಂತ ಮಕ್ಕಳ ಜೀವನಕ್ಕಾಗಿ ದೊಡ್ಡದಾದ ಈ ತಿರುವನ್ನು ಸಂಕಲ್ಪ ಮಾಡಿರಲೂ ಬಹುದು. ಏನೇ ಇರಲಿ ನನ್ನ ಪಾಲಿಗೆ ಹಿರಿಯರೂ, ಮಹಾರಾಜರೂ ಆದ ಇವರ ವಾಕ್ಯ ಪರಿಪಾಲನೆ ಮಾಡುವುದೇ ಧರ್ಮ. ಧಿಕ್ಕರಿಸಿದರೇ ಅದೇ ಅಧರ್ಮವಾದೀತು. ಹಾಗಾಗಿ ಭಗವಂತನನ್ನು ಸರ್ವ ರಕ್ಷೆಗಾಗಿ ಧ್ಯಾನಿಸಿ ಒಪ್ಪಿಕೊಳ್ಳುತ್ತೇನೆ ಅದೇ ಸೂಕ್ತವೆಂದು ಸ್ಥಿತಪ್ರಜ್ಞನಾಗಿ ಧೃತರಾಷ್ಟ್ರನ ಆದೇಶವನ್ನು ಶಿರಸಾವಹಿಸಿ ಸಹಮತ ಸೂಚಿಸಿದನು.
ತನ್ನ ಸಹೋದರರು ಹಾಗು ಮಾತೆ ಕುಂತಿಯನ್ನು ಕರೆದು ರಾಜಾಜ್ಞೆಯನ್ನು ಯಥಾವತ್ತಾಗಿ ವಿವರಿಸಿದ. ನಾವಿನ್ನು ಹೊರಡಬೇಕೆಂದು ಹೇಳಿ ಸಿದ್ಧರಾಗಲು ವಿನಂತಿಸಿದ. ಹಾಗೆಯೇ ಸಿದ್ಧತೆಗಳೂ ನಡೆದವು. ಹಿರಿಯರಿಂದ ಬೀಳ್ಕೊಟ್ಟ ಪಾಂಡವರು ಆಶೀರ್ವಾದ ಪಡೆದು ಆಜ್ಞಾನುವರ್ತಿಗಳಾಗಿ, ಧರ್ಮಪಾಲಕರಾಗಿ ಮರು ಪ್ರಶ್ನಿಸದೆ ಹಸ್ತಿನಾವತಿ ತೊರೆದು ಖಾಂಡವ ಪ್ರಸ್ಥದತ್ತ ಹೊರಟು ಹೋದರು.
ಅನ್ಯ ರಾಜ್ಯದಲ್ಲಿದ್ದ ಪಾಂಡವರನ್ನು ಹಸ್ತಿನೆಗೆ ಕರೆಸುವುದೆ ಸೂಕ್ತವೆಂದು ಕರೆಸಿಕೊಂಡ ರಾಜನೇ ಪ್ರತ್ಯೇಕ ಪ್ರದೇಶ ನೀಡಿ ಪ್ರಯಾಣಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ನಿಂತಿದ್ದಾನೆ. ಅಭಿಷಿಕ್ತ ಯುವರಾಜನನ್ನು ಈ ರೀತಿ ಹೊರಗಿಡುವುದು ಯುಕ್ತವೇ ಎಂದು ಪ್ರಶ್ನಿಸಬೇಕಾದ ಯೋಗ್ಯತಾವಂತ ಭೀಷ್ಮಾಚಾರ್ಯರು ಕಾಲೇ ತಸ್ಮೈ ನಮಃ – ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿ ಎಂದು ಮೌನಕ್ಕೆ ಶರಣಾಗಿರುವಂತಿದೆ. ಧರ್ಮಮೂರ್ತಿ ವಿದುರನಿಗೆ ಮನದಲ್ಲಿ ಅಸಹನೆ ಮೂಡಿ ಬಂದರೂ, ವರ್ತಮಾನ ವಿದ್ಯಮಾನಗಳು ಸಾಧುವಲ್ಲ ಎಂಬ ಪರಿಗಣನೆ ಇದ್ದರೂ.. ಇಲ್ಲಿರುವುದಕ್ಕಿಂತ ಪಾಂಡವರು ದೂರವಿದ್ದರೆ ಅವರಿಗೆ ನೆಮ್ಮದಿ, ಕ್ಷೇಮ ಒದಗೀತು ಎಂಬ ತರ್ಕಕ್ಕೆ ಮಣಿದು ಕುಳಿತಂತಿದೆ. ಯಾಕೆ ಹೋಗಬೇಕು ನಾವು ಎಂದು ಕಾರಣ ಕೇಳಬೇಕಾದ ಯುವರಾಜ ಧರ್ಮಾತ್ಮನೇ ಹೌದಾದ್ದರಿಂದ ರಾಜಾಜ್ಞೆಯನ್ನು ಕೆದಕದೆ, ಕೆಣಕದೆ ಅಂಗೀಕರಿಸಿದ್ದಾನೆ. ಕೇಳೋಣ ಎಂಬ ವ್ಯಗ್ರತೆ ಭೀಮನಲ್ಲಿ ಉತ್ಪತ್ತಿಯಾದರೂ ಅಣ್ಣನೆದುರು ತನ್ನ ಭಾವನೆಗಳನ್ನು ಅದುಮಿಟ್ಟು ತುಟಿ ಬಿಚ್ಚದೆ ಹಿಂಬಾಲಿಸುವ ಭ್ರಾತೃಪ್ರೇಮ ಆತನದ್ದಾಗಿದೆ. ಅರ್ಜುನ ತನ್ನ ವಿವೇಕದಿಂದ ಏನೋ ಅಂದಾಜಿಸಿರಲೂ ಬಹುದು, ಇಲ್ಲ ದೇವನೊಲುಮೆಯಿಂದ ಎದುರಿಸಿ ಬದುಕುವ ಸ್ಥೈರ್ಯವಿದ್ದರೂ ಇರಬಹುದು ಆತನೂ ಹೊರಟಿದ್ದಾನೆ. ನಕುಲನಿಗೆ ಅಣ್ಣ ಅಧರ್ಮ ಪಥ ಗಮಿಸಲಾರನೆಂಬ ನಂಬಿಕೆ, ಸಹದೇವನಿಗೋ ಏನಾದರೆ ಏನಾಗುತ್ತದೆ ಎಂಬ ಸಂಪೂರ್ಣ ಪೂರ್ವಾಭಾಸವಿದೆ. ಗೊಂದಲವೇ ಇಲ್ಲದೆ ಅನುಸರಿಸಿ ಹೊರಟಿದ್ದಾನೆ. ಮಕ್ಕಳೆಲ್ಲಾ ಹೊರಟಿದ್ದಾರೆ – ರಾಜಮಾತೆ ಕುಂತಿಗೆ ಮಕ್ಕಳೇ ಸಾಮ್ರಾಜ್ಯವಾಗಿ ಆಕೆಯೂ ಸಹಗಮನೆಯಾಗಿದ್ದಾಳೆ. ಅಂತೂ ಪಾಂಡವರು ಮತ್ತೆ ಹಸ್ತಿನೆಯಿಂದ ಖಾಂಡವ ಪ್ರಸ್ಥಕ್ಕೆ ನಿರ್ಗಮಿಸುತ್ತಿದ್ದಾರೆ.
ಮುಂದುವರಿಯುವುದು…






















































