ಭಾಗ – 121
ಭರತೇಶ್ ಶೆಟ್ಟಿ,ಎಕ್ಕಾರ್

ವಿದುರನಿಗೆ ಧೃತರಾಷ್ಟ್ರನ ಮಾತುಗಳನ್ನು ಕೇಳಿ ಒಮ್ಮೆಗೆ ಆಶ್ಚರ್ಯವೂ ಮತ್ತೆ ಸಂತೋಷವೂ ಆಯಿತು. “ಮಕ್ಕಳೆಲ್ಲರೂ ನಮ್ಮವರೇ” ಎಂಬ ಸಮಾನ ಭಾವ ಬಂತಲ್ಲಾ. ಕೌರವರು ಪಾಂಡವರು ಎಂಬ ಭೇದ ದೂರವಾಗಿ, ಕಡೆಗಾದರೂ ಒಳ್ಳೆಯ ಒಂದು ತೀರ್ಮಾನ ಪ್ರಕಟವಾಯಿತಲ್ಲಾ ಎಂದು ವಿದುರ ಮಹದಾನಂದಗೊಂಡು ಬೇಕು ಬೇಕಾದ ಸುವಸ್ತು, ಉಡುಗೊರೆ, ವಸನ ಭೂಷಣ, ಬಂಡಿ, ರಥಗಳನ್ನೆಲ್ಲ ಸಿದ್ದಪಡಿಸಿ ಸುಮೂಹೂರ್ತ ನೋಡಿ ಪಾಂಚಾಲಕ್ಕೆ ಹೊರಟನು.
ವಿದುರ ಪಾಂಚಾಲಕ್ಕೆ ಬಂದ ಸುದ್ದಿ ಚಾರಕರಿಂದ ತಿಳಿದು ದ್ರುಪದ ಮಹಾರಾಜ ಸ್ವಾಗತಿಸಿದನು. ಆಸ್ಥಾನದಲ್ಲಿ ಸಕಲ ರಾಜೋಪಚಾರಗಳು ನಡೆದವು. ವಿದುರ ತನ್ನ ಆಗಮನದ ವಿಚಾರ ತಿಳಿಸಿದನು. ‘ ಪಾಂಡವರನ್ನು ಹಸ್ತಿನಾವತಿಗೆ ಕರೆದೊಯ್ಯಲು ಧೃತರಾಷ್ಟ್ರನ ಅಪ್ಪಣೆಯಂತೆ ಬಂದಿರುವ ಕಾರ್ಯಕಾರಣ ತಿಳಿಸಿದನು. ಹಸ್ತಿನೆಯಿಂದ ದ್ರುಪದನಿಗಾಗಿ ಕೊಡಲ್ಪಟ್ಟ ಸ್ನೇಹಪೂರ್ವಕ ಉಡುಗೊರೆಗಳನ್ನು ಸಮರ್ಪಿಸಿದನು. ಬಳಿಕ ಅನುಮತಿ ಪಡೆದು ಪಾಂಡವರನ್ನು ಕಂಡು ಕುಶಲೋಪರಿ ವಿಚಾರಿಸಿದನು. ಧರ್ಮರಾಯ, ಕುಂತಿ, ಪಾಂಡವರಿಗೆ ವಿದುರನನ್ನು ಕಂಡು ಹೃದಯ ತುಂಬಿ ಬಂತು. ಅವರ ಕ್ಷೇಮ ಸಮಾಚಾರ, ದ್ರೌಪದಿಯೊಂದಿಗಿನ ವಿವಾಹ ವೃತ್ತಾಂತ ಹೀಗೆ ಎಲ್ಲಾ ಸಂಗತಿಗಳನ್ನೂ ಪಾಂಡವರಿಂದ ಕೇಳಿಸಿಕೊಂಡನು ವಿದುರ. ಆನಂತರ ಮುಂದುವರಿಸಿ ತಾನು ಬಂದಿರುವ ಕಾರಣವನ್ನು ಪಾಂಡವರೊಂದಿಗೆ ಹೇಳತೊಡಗಿದನು- “ವಾರಣಾವತ ಪ್ರಕರಣಾದಿ ಕಹಿ ನೆನಪುಗಳನ್ನು ಮರೆತು ಮತ್ತೆ ನಮ್ಮ ಅರಮನೆಗೆ ಬರಬೇಕು. ಧೃತರಾಷ್ಟ್ರನ ಕೋರಿಕೆಯ ಹೇಳಿಕೆಯನ್ನೂ ಸವಿಸ್ತಾರವಾಗಿ ಪಸ್ತುತ ಪಡಿಸಿದನು. ನಿಮ್ಮ ವಿವಾಹದ ಸುದ್ದಿ ನಮ್ಮಲ್ಲಿಗೂ ತಲುಪಿತ್ತು. ಅರ್ಜುನನ ಸಾಧನೆಯಿಂದ ನಾವೆಲ್ಲರೂ ಆನಂದ ತುಂದಿಲರಾಗಿದ್ದೇವೆ. ಚಂದ್ರವಂಶದ ಯುವರಾಜರಾದ ಪಾಂಡವರು, ಮಾತೆ ಕುಂತಿ ಸಹಿತ ಹಸ್ತಿನೆಗೆ ಮರಳಿ ಬರುವಂತೆ ಮಹಾರಾಜ ಧೃತರಾಷ್ಟ್ರ ವಿನಂತಿ ಮಾಡಿದ್ದಾನೆ. ಸಹೃದಯರೂ, ಧರ್ಮಾತ್ಮರೂ ಆದ ನೀವು ನಮ್ಮ ವಿನಂತಿಯನ್ನು ಮನ್ನಿಸಿ ಮನಮಾಡಬೇಕು” ಎಂದು ಕೇಳಿಕೊಂಡನು. ಹಸ್ತಿನೆಯ ಕಾಣಿಕೆಗಳನ್ನೂ ಸಮರ್ಪಿಸಿ ಪ್ರೀತಿ ಗೌರವ ಆದರದ ಭಾವ ಪ್ರಕಟಿಸಿದನು. ಪಾಂಡವರೂ ಆಲೋಚಿಸಿ ಒಪ್ಪಿಕೊಂಡಂತೆ ಸೂಚನೆ ನೀಡಿದರು.
ಪಾಂಚಾಲದಲ್ಲೇ ಇದ್ದ ಕೃಷ್ಣನನ್ನೂ ಕಂಡು ವಿದುರ ನಮನಗಳನ್ನು ಸಲ್ಲಿಸಿದನು. ಮತ್ತೊಮ್ಮೆ ಗತ ಕಥನ, ವರ್ತಮಾನ ಕಾಲ ಸ್ಥಿತಿಗತಿ, ಈಗಿನ ವಿಚಾರ, ಪಾಂಡವರಿಗೆ ಮರಳಿ ಬರಲು ಮಹಾರಾಜನ ಆಹ್ವಾನ ಹೀಗೆ ಸಕಲ ವಿಚಾರಗಳೂ ಅವರೊಳಗೆ ವಿನಿಮಯವಾದವು.
ಪಾಂಡವರು ಮರಳಿ ಹಸ್ತಿನಾವತಿಗೆ ಬರಬೇಕೆಂಬ ಬೇಡಿಕೆಯ ವಿಚಾರ ಕೇಳಿದ ದೃಷ್ಟದ್ಯುಮ್ನನಿಗೇಕೋ ಸಿಟ್ಟು ಬಂತು. ವಿದುರನನ್ನು ಉದ್ದೇಶಿಸಿ ಹೇಳಿದ – “ಪಾಂಡವರು ಸರ್ವ ವಿಭಾಗದಲ್ಲೂ ಸಮರ್ಥರೇ ಆಗಿದ್ದಾರೆ. ಉದಾರ ಮನಸ್ಸಿನಿಂದ ನೀಡುವ ಹಸ್ತಿನೆಯ ಹಂಗಿನ ಕೊಡುಗೆ ಪಾಂಡವರ ಪಾಲಿಗೆ ಅಗತ್ಯವಿಲ್ಲ. ಅವರು ಸಾಮ್ರಾಜ್ಯಕ್ಕೆ ಪ್ರತಿ ಸಾಮ್ರಾಜ್ಯವನ್ನು ಪರಾಕ್ರಮದಿಂದ ಸಾಧಿಸಿಕೊಳ್ಳಬಲ್ಲರು. ಹೆಚ್ಚೇಕೆ ಆರ್ಯಾವರ್ತದ ಚಕ್ರವರ್ತಿಗಳಾಗುವ ಯೋಗ್ಯತಾವಂತರು. ಅಂತಹ ಮಹಾತ್ಮರಿಗೆ ಹಸ್ತಿನೆಯ ಭಿಕ್ಷೆಗೆ ಕೈಯೊಡ್ಡುವ ದುರ್ಗತಿ ಬಂದಿಲ್ಲ” ಎಂದು ನಿಷ್ಠುರ ವಾಗಿಯೇ ಹೇಳಿಬಿಟ್ಟನು. ದ್ರುಪದ ಮಹಾರಾಜ ದೃಷ್ಟದ್ಯುಮ್ನನ ಮಾತುಕೇಳಿ ಆತನನ್ನು ತಡೆದು ಸಂತೈಸುತ್ತಾ. “ದುಡುಕುವುದು ನಮಗೆ ಶೋಭೆಯಲ್ಲ. ಪಾಂಡವರು ಹಸ್ತಿನಾವತಿಯ ಚಂದ್ರವಂಶದ ಉತ್ತರಾಧಿಕಾರಿಗಳು. ಶ್ರೀಕೃಷ್ಣನೂ ಇಲ್ಲೇ ನಮ್ಮೊಡನಿದ್ದಾನೆ. ಆತನ ಅಭಿಪ್ರಾಯವನ್ನೂ ಕೇಳಿ ನೋಡೋಣ. ಪಾಂಡವರಿಗೂ ಕೃಷ್ಣನ ಅಭಿಪ್ರಾಯದ ಬಗ್ಗೆ ಸಂಪೂರ್ಣ ಸಹಮತ ಇದೆ ಎಂದೇ ನಾನೂ ನಂಬಿದ್ದೇನೆ. ಆ ಬಳಿಕ ಮುಂದಿನ ನಡೆಯ ತೀರ್ಮಾನವಾಗಲಿ” ಎಂದನು. ಶ್ರೀ ಕೃಷ್ಣ ನಸುನಗುತ್ತಾ ಹಿತೈಷಿಗಳಾದ ಇವರೆಲ್ಲರ ಭಾವನೆಗಳನ್ನು ಅರಿತು ತನ್ನ ಅಭಿಪ್ರಾಯ ಹೇಳಲಾರಂಭಿಸಿದ.
ಮುಂದುವರಿಯುವುದು…






















































