31.9 C
Udupi
Thursday, April 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 120

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೧೨೦ ಮಹಾಭಾರತ

ದುರ್ಯೋಧನ, ದುಶ್ಯಾಸನ, ಜಯದ್ರಥ, ಕರ್ಣ, ಶಕುನಿಯಾದಿಗಳ ನೇತೃತ್ವದಲ್ಲಿ ಇನ್ನೂ ಅನೇಕ ಮಿತ್ರ ರಾಜರು ಪಾಂಚಾಲದ ಗಡಿ ಭಾಗ ತಲುಪಿ ಗಂಗಾನದಿ ದಾಟುತ್ತಿದ್ದಂತೆ ದ್ರುಪದ ಮಹಾರಾಜನ ಗುಪ್ತಚರರು ಆಕ್ರಮಣದ ವಿಚಾರವನ್ನು ಪಾಂಚಾಲಕ್ಕೆ ಮುಟ್ಟಿಸಿದರು. ಪಾಂಡವರೂ ಪಾಂಚಾಲದಲ್ಲೇ ಇದ್ದದ್ದರಿಂದ ಅವರಿಗೂ ಸುದ್ದಿ ತಿಳಿಯಿತು. ತಕ್ಷಣ ರಣತಂತ್ರವಾಗಿ ದೃಷ್ಟದ್ಯುಮ್ನನು ನಿಯತವಾದ ಒಂದು ಸೈನ್ಯವನ್ನು ಗಿರಿ ತಪ್ಪಲುಗಳಲ್ಲಿ ಅವಿತು ಕುಳಿತು ಯುದ್ದಕ್ಕೆ ಸನ್ನದ್ಧಗೊಳಿಸಿ ನಿಯೋಜಿಸಿದನು. ಪಾಂಚಾಲದ ಗಡಿಯ ಗಂಗಾತೀರದ ಭಾಗದಲ್ಲಿ ಆ ಸೇನೆ ಸ್ಥಿತವಾಯಿತು. ಇತ್ತ ಭೀಮಾರ್ಜುನರು, ದೃಷ್ಟದ್ಯುಮ್ನ, ಶಿಖಂಡಿ, ದ್ರುಪದನೂ ಸಿದ್ಧರಾಗಿ ತಮ್ಮ ತಮ್ಮ ಜೊತೆ ನಿರ್ದಿಷ್ಟ ಸೈನ್ಯವನ್ನು ನಿಯೋಜಿಸಿಕೊಂಡು ನಾಲ್ಕೂ ದಿಕ್ಕುಗಳತ್ತ ಸಾಗಿ ನಿಯತ ಆಯಕಟ್ಟುಗಳಲ್ಲಿ ನೆಲೆಯಾದರು. ಅರ್ಜುನ ಸೈನ್ಯ ಸಹಿತನಾಗಿ ಕೋಟೆಯ ಬಾಗಿಲಿನಲ್ಲಿ ರಕ್ಷಣೆಗೆ ನಿಂತನು.

ಗಂಗಾ ನದಿ ದಾಟಿ ಬಂದ ಕೌರವನ ಸೇನೆಗೆ ಮೊದಲಾಗಿ ಅವಿತು ಕುಳಿತಿದ್ದ ಸೇನೆ ಪ್ರತಿರೋಧ ನೀಡಿ ಅವ್ಯಕ್ತವಾಗಿ ಆಕ್ರಮಣಗೈಯುತ್ತಾ ತಡೆಯಾಗಿ ನಿಂತಿತು. ರಾಜ್ಯ ಪ್ರವೇಶಕ್ಕಾಗಿ ಕರ್ಣ, ಜಯದ್ರಥಾದಿಗಳೂ ಸೆಣಸಿ ಹೆಣಗಾಡಬೇಕಾಯಿತು. ರಾತ್ರಿಯ ಹೊತ್ತಲ್ಲಿ ದಾಳಿ ಮಾಡಿದ್ದರಿಂದಾಗಿ ದುರ್ಯೋಧನಾದಿಗಳಿಗೆ ಇದಿರಾಳಿಗಳ ಸೇನೆಯ ತಂತ್ರ ಭೇದಿಸುವಲ್ಲಿ ಬಹು ಸಮಯವೇ ಬೇಕಾಯಿತು. ಬೆಳಗಾಗುತ್ತಿದ್ದಂತೆ ಅವಿತಿದ್ದ ದ್ರುಪದ ಸೇನೆ ಕೋಟೆಯತ್ತ ಓಡಿಹೋಗತೊಡಗಿತು. ದಾಳಿ ಮಾಡಿದ ಕೌರವ ಸೇನೆಗೆ ವಿಜಯೋತ್ಸಾಹ. ರಾತ್ರಿ ಬೆಳಗಾಗಬೇಕಾದರೆ ಗೆದ್ದೇ ಬಿಟ್ಟೆವು ಎಂಬ ಹಾಗೆ ಸಂಭ್ರಮಿಸಿದರು. ಓಡುವ ಸೈನ್ಯವನ್ನು ಬೆಂಬತ್ತಿ ಕೋಟೆಯ ಬಳಿ ಸಾಗುತ್ತಿದ್ದಂತೆ ಪಶ್ಚಿಮದಿಂದ ಶಿಖಂಡಿಯ ನೇತೃತ್ವದಲ್ಲಿ, ಉತ್ತರದಿಂದ ಭೀಮನ ಸಾರಥ್ಯದಲ್ಲಿ, ಪೂರ್ವದಿಂದ ದೃಷ್ಟದ್ಯುಮ್ನನ ಮುಂದಾಳತ್ವದಲ್ಲಿ, ದಕ್ಷಿಣದಿಂದ ದ್ರುಪದನ ಸೇನಾಧಿಪತ್ಯದಲ್ಲಿ ಸೇನೆ ವ್ಯೂಹವಾಗಿ ಆವರಿಸಿ ನಿಂತಿತು. ಕಣ್ಣಮುಂದೆ ಪ್ರತ್ಯಕ್ಷ ಅರ್ಜುನ ದಿವ್ಯ ರಥವೇರಿ ಸರ್ವಾಲಂಕಾರದಲ್ಲಿ ವೀರಯೋಧನಾಗಿ ತನ್ನ ನಾಯಕತ್ವದ ಸೇನೆಯೊಂದಿಗೆ ಎದುರಾಗಿದ್ದಾನೆ. ಓಡಿ ಬಂದ ಮೃಗ ಬಲೆಯೊಳಗೆ ಬಿದ್ದ ಹಾಗೆ ದುರ್ಯೋಧನ ಮತ್ತಾತನ ಬಳಗದ ಗತಿಯಾಗಿದೆ. ಎತ್ತ ತಿರುಗುವುದು? ಯಾವ ದಿಕ್ಕಿನಿಂದ ಯುದ್ದ ಮಾಡುವುದೆಂದು ಅರಿಯದೆ ಚದುರಿ ಚಲ್ಲಾಪಿಲ್ಲಿಯಾದರು. ಕರ್ಣ ನೇರವಾಗಿ ಅರ್ಜುನನೊಡನೆ ಕದನ ಕಲಿಯಾಗಿ ಸೆಣಸಾಡ ತೊಡಗಿದರೆ, ದುರ್ಯೋಧನ – ದುಶ್ಯಾಸನರು ಭೀಮನೊಡನೆ ಗದಾಯುದ್ದ ನಿರತನಾದರು. ಶಕುನಿ- ಶಿಖಂಡಿ, ದ್ರುಪದ – ಜಯದ್ರಥ, ಇನ್ನುಳಿದ ಸೇನೆ, ರಾಜರನ್ನು ದೃಷ್ಟದ್ಯುಮ್ನ ತಡೆದು ದಂಡಿಸತೊಡಗಿದ.

ಭೀಮನಿಗೆ ವಾರಣಾವತದ ಅರಮನೆಯ ಪ್ರಕರಣ ನೆನಪಾಗಿ ಉಕ್ಕಿದ ಕೋಪ ತೋಳಿನ ಮೂಲಕ ಪ್ರವಹಿಸಿ ಬಿರುಸಿನ ಗದಾಪ್ರಹಾರಗಳಾಗಿ ದುರ್ಯೋಧನ – ದುಶ್ಯಾಸನ ರ ಮೂಳೆ ಮುರಿಯುವಂತೆ ಅಪ್ಪಳಿಸತೊಡಗಿದವು. ಪರಿಣಾಮ ನೆಲದಲ್ಲಿ ಬಿದ್ದು ಮಣ್ಣಲ್ಲಿ ಹೊರಳಾಡುತ್ತಿದ್ದಾರೆ ಸೋದರರು. ಅತ್ತ ಕರ್ಣನೂ ಅರ್ಜುನನ ಮುಂದೆ ವಿಕ್ರಮ ಮೆರೆದನಾದರೂ ಕೈಸಾಗದೆ ಮೈಯೆಲ್ಲಾ ರಕ್ತಸುರಿಸುತ್ತಾ ಬಿದ್ದು ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿದ್ದಾನೆ. ಜಯದ್ರಥ, ಶಕುನಿ ಹಾಗೂ ಜೊತೆ ಬಂದವರ ಕಥೆಯೂ ಹಾಗೆಯೇ ಆಗಿದೆ. ಮುಖ ಮೂತಿಗಳಲ್ಲಿ ನೆತ್ತರಿಳಿಸುತ್ತಾ ಶರಣಾಗತಿಯ ಸೂಚನೆ ಪ್ರಕಟಿಸುತ್ತಿದ್ದಾರೆ. ಸೈನಿಕನಿಂದ ಹಿಡಿದು ರಾಜ ಮಹಾರಾಜನವರೆಗೆ ಬಂದವರೆಲ್ಲರೂ ಸೋತು ಬಸವಳಿದಿದ್ದಾರೆ. ಯಾರೊಬ್ಬನಲ್ಲೂ ಪ್ರತಿಭಟಿಸಿ ಹೋರಾಡುವ ಕೆಚ್ಚು – ಕಿಚ್ಚು – ಹುಚ್ಚು ಯಾವುದೂ ಉಳಿದಿಲ್ಲ. ವೃತ್ತಾಕಾರದಲ್ಲಿ ವ್ಯೂಹದೊಳಗೆ ಬಂಧಿತರಾಗಿದ್ದ ದುರ್ಯೋಧನನಿಗೆ ಮುಗಿಯಿತು ನಮ್ಮ ಕಥೆ. ಇನ್ನೇನಿದ್ದರೂ ಈ ಪಾಂಡವರದ್ದೇ ರಾಜ್ಯಭಾರ ಎಂಬಷ್ಟರ ಮಟ್ಟಿಗೆ ಹೀನಾಯ ಸ್ಥಿತಿಗೆ ತಲುಪಿಯಾಗಿದೆ.

ಇವರ ಹೀನ ಕೃತ್ಯಗಳಿಗೆ ದಂಡನೆಯಾಗಿ ಇಲ್ಲೇ ಈ ಕ್ಷಣ ಕೊಲ್ಲುವುದೇ? ಇಲ್ಲಾ ವಿಚಾರಿಸಿ ಶಿಕ್ಷಿಸಲು ಬಂಧಿಸುವುದೇ? ಹೀಗೆ ದೃಷ್ಟದ್ಯುಮ್ನ ಗೊಂದಲಕ್ಕಿಡಾಗಿದ್ದನು. ಅರ್ಜುನ – ದ್ರುಪದನಿಗೆ ಸನ್ನೆಯಲ್ಲೇ ಹೋಗಿ ಬದುಕಿಕೊಳ್ಳಲಿ ಎಂಬಂತೆ ಸೂಚನೆ ನೀಡಿದ. ದ್ರುಪದನ ಆದೇಶದಂತೆ ವ್ಯೂಹ ತೆರೆದುಕೊಂಡಿತು. ಜೀವ ಒಂದುಳಿದರೆ ಮತ್ತೆ ಏನೆಂದು ನೋಡಿಕೊಳ್ಳೋಣವಂತೆ ಎಂದು ದಾರಿ ಕಂಡತ್ತ ಓಡಿ ಹೋಗತೊಡಗಿತು ಕೌರವನ ಬಳಗ.

ಹೀಗೆ ರಾತ್ರಿ ಬೆಳಗಾದ ದಿನವೊಂದರ ಒಳಗೆ ಸಮಸ್ತ ಸೇನೆಯೂ ಸೋತು ಓಡಿ ಹೋಗಿತ್ತು. ದೃಷ್ಟದ್ಯುಮ್ನನಿಗೆ ದಾಳಿ ಮಾಡಿದವರನ್ನು ಬಂಧಿಸಿ ಕಾರಾಗ್ರಹ ಸೇರಿಸುವ ಮನಸ್ಸಿತ್ತು. ಹಾಗೆ ಮಾಡಿದ್ದಲ್ಲಿ ಹಸ್ತಿನೆಯ ಸೇನಾಧಿಪತಿ ಭೀಷ್ಮಾಚಾರ್ಯರು ಅನಿವಾರ್ಯವಾಗಿ ಯುದ್ದ ಮುಖದಲ್ಲಿ ಕಾಣಿಸಿಕೊಳ್ಳುವವರೆಗೆ ಪ್ರಕರಣ ಬೆಳೆಯುತ್ತದೆ. ಅನಾವಶ್ಯಕವಾಗಿ ಈ ಅಲ್ಪರ ನೀಚಬುದ್ದಿಯ ವರ್ತನೆ ಕಾರಣವಾಗಿ ಮಹಾಸಂಗ್ರಾಮಕ್ಕೆ ಕಾರಣವಾಗುತ್ತದೆ. ದುರ್ಯೋಧನ, ಕರ್ಣ, ಶಕುನಿಯಾದಿಗಳ ಹುಚ್ಚು ಬುದ್ದಿಗೆ ಈಗಾಗಲೇ ತಕ್ಕಪಾಠವಾಗಿದೆ ಇಷ್ಟೇ ಸದ್ಯಕ್ಕೆ ಸಾಕು ಎಂಬಂತೆ ಅರ್ಜುನ ತರ್ಕಿಸಿ ಅವರಿಗೆ ಓಡಿಹೋಗಲು ಅವಕಾಶ ನೀಡಿದನೋ ಏನೋ!

ಹೀಗೆ ಪ್ರಕರಣ ಸುಖಾಂತ್ಯವಾಗಿ ಅನಿರೀಕ್ಷಿತವಾಗಿ ತಲೆದೋರಿದ ಸಮಸ್ಯೆ ಉಪಶಮನವಾದದ್ದು ಧರ್ಮರಾಯ ದ್ರುಪದಾದಿಗಳೆಲ್ಲರಿಗೂ ಸಮಾಧಾನಕರ ವಿಚಾರವಾಯಿತು. ಪಾಂಚಾಲಕ್ಕೆ ಆಕ್ರಮಣವಾದ ಸುದ್ದಿ ತಿಳಿದು ಕೃಷ್ಣ ಬಲರಾಮರು ನಾರಾಯಣಿ ಸೇನಾಸಹಿತ ಪಾಂಚಾಲಕ್ಕೆ ಬಂದು ತಲುಪಿದರು. ಅಷ್ಟರಲ್ಲಾಗಲೇ ಎಲ್ಲಾ ತಿಳಿಯಾಗಿದ್ದ ಕಾರಣ ಬಲರಾಮನು ಆತಿಥ್ಯ ಸ್ವೀಕರಿಸಿ ಒಂದೆರಡು ದಿವಸ ಕಳೆದು ಮರಳಿ ದ್ವಾರಕೆಗೆ ಹೊರಟನು. ಕೃಷ್ಣ ಕುಂತಿ ಹಾಗು ಅರ್ಜುನರ ಪ್ರಾರ್ಥನೆ, ದ್ರುಪದನ ವಿನಂತಿಯಂತೆ ಪಾಂಚಾಲದಲ್ಲೇ ಕೆಲ ದಿನ ಕಳೆಯಲು ವಿರಮಿಸಿದ.

ಪಾಂಚಾಲದಲ್ಲಿ ನಡೆದ ಯುದ್ದದಲ್ಲಿ ಸೋತು ಓಡಿ ಹೋದವರು ಅವರವರ ರಾಜ್ಯ ಸೇರಿಕೊಂಡರು. ಕೌರವ, ಕರ್ಣ, ಶಕುನಿಯಾದಿ ಎಲ್ಲರಿಗೂ ಪಾಂಡವರ ಉಳಿವು, ಪ್ರಗತಿ, ಸಾಧನೆ ಕಂಡು ತಡೆಯಲಾಗದ ಸಂಕಟ, ಬೇಗುದಿ, ಉರಿ ಒಟ್ಟಾಗಿ ವಿಚಿತ್ರ ವೇದನೆಯಾಗುತ್ತಿದೆ. ಮುಂದೇನು? ಹೇಗೆ? ಎಂಬ ದಾರಿ ಕಾಣದಾಗಿದೆ. ಎರಡೆರಡು ಭಾರಿ ಸೋತು ಪೆಟ್ಟು ತಿನ್ನುತ್ತಾ ಪಾಂಚಾಲದಲ್ಲಿ ಅವಮಾನಿತರಾಗಿ ಓಡಿ ಹೋದ ಅವಮಾನ ಹೊತ್ತು ಬದುಕುವುದು ಹೇಗೆ? ಹಗೆ ತೀರಿಸಲೇಬೇಕು, ಬಿಡಬಾರದು ಎಂದು ರೋಷಾವೇಶಕ್ಕೊಳಗಾಗಿದ್ದಾನೆ ದುರ್ಯೋಧನ! ಶಕುನಿ ಅವರೆಲ್ಲರನ್ನೂ ಸಂತೈಸಿ ಸಮಾಧಾನಿಸಿದನು. ಶಕ್ತಿ ಯುಕ್ತಿಗಳೆರಡಕ್ಕೂ ಬಗ್ಗಲಿಲ್ಲ ಪಾಂಡವರು. ಹಾಗೆಂದು ಇಲ್ಲಿಗೆ ಎಲ್ಲವೂ ಮುಗಿಯದು. ಸದ್ಯಕ್ಕೆ ವಿಶ್ರಾಂತಿ ಪಡೆದುಕೊಳ್ಳಿ. ಇನ್ನೇನಿದ್ದರೂ ಮಹತ್ತರವಾದ ತೀರ್ಮಾನ ಕೈಗೊಂಡು ಸೂಕ್ತ ದಾರಿ ನೋಡಿಕೊಳ್ಳೋಣ. ಈಗ ನಿಶ್ಚಿಂತೆಯಿಂದ ವಿರಮಿಸಿಕೊಳ್ಳಿ ಎಂದು ಧೈರ್ಯ ತುಂಬಿದ ಶಕುನಿ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page