ಭಾಗ 118
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೧೯ ಮಹಾಭಾರತ
ದುರ್ಯೋಧನನ ಸಮ್ಮುಖದಲ್ಲಿ ಅಸಮಾಧಾನದಿಂದ ದ್ರೌಪದಿಯ ವಿವಾಹ ಮಂಟಪದಲ್ಲಿ ಪರಾಜಿತರಾದ ರಾಜರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. “ಸ್ವಯಂವರ ಮಂಟಪದಲ್ಲಿ ಓರ್ವ ಬ್ರಾಹ್ಮಣ ಪಣಗೆದ್ದು ಕ್ಷತ್ರಿಯರಾದ ನಮಗೆಲ್ಲಾ ಅಸಹನೀಯ ಅವಮಾನವಾಗಿದೆ” ಎಂದು ಒಬ್ಬ ಹೇಳಿದರೆ, ಮತ್ತೊಬ್ಬ “ಛೇ ಅವ ಬ್ರಾಹ್ಮಣನಾಗಿರಲು ಸಾಧ್ಯವೇ ಇಲ್ಲ. ಬ್ರಾಹ್ಮಣರಿಗೆ ಶಸ್ತ್ರ ಜ್ಞಾನ ಇಲ್ಲವೆಂದಲ್ಲ. ಆದರೆ ಈ ಕಾಲದಲ್ಲಿ ಇಷ್ಟೊಂದು ಪ್ರಾವಿಣ್ಯತೆಯಿಂದ ಲಾಂಛನ ಭೇದಿಸುವ, ನಂತರದ ಹೋರಾಟದಲ್ಲಿ ಅಪ್ರತಿಮ ಬಿಲ್ಗಾರಿಕೆಯ ಚಳಕ! ಇದನ್ನೆಲ್ಲ ನೋಡಿದರೆ ಬ್ರಾಹ್ಮಣರಲ್ಲದವರು ಯಾರೋ ಮಾರುವೇಷದಲ್ಲಿ ಬಂದು ವಂಚಿಸಿದ್ದಾರೆ ಎಂಬ ಅನುಮಾನ ಮೂಡುತ್ತಿದೆ” ಎಂದನು. ಇನ್ನೋರ್ವ ಅಭಿಪ್ರಾಯ ಹೇಳುತ್ತಾ “ಗೋಪುರದ ಗಜಗಾತ್ರವುಳ್ಳ ಕಂಬವನ್ನೇ ಕಿತ್ತು ಗದೆಯಂತೆ ಬೀಸುತ್ತಾ ನಮ್ಮ ಮೇಲೇರಿ ಬಂದ ಆ ಮಹಾಬಲಾನ್ವಿತ ಬ್ರಾಹ್ಮಣನಾಗಿರಲು ಸಾಧ್ಯವೇ ಇಲ್ಲ.” ಹೀಗೆ ಅವರವರ ತರ್ಕ ಸಾಗುತ್ತಿತ್ತು. ಆಗ ಶಕುನಿ ಮಾಮನಿಗೆ ಯಾವ ಸಂದೇಹವೂ ಉಳಿದಿರಲಿಲ್ಲ. “ದುರ್ಯೋಧನಾ! ನಮ್ಮ ಸಂಚು ಈಗ ನಮಗೆ ಸಂಚಕಾರ ತಂದಿದೆ. ವಾರಣಾವತದಲ್ಲಿ ಪಾಂಡವರು ಸತ್ತಿಲ್ಲ. ಹೇಗೋ ತಪ್ಪಿಸಿಕೊಂಡಿದ್ದಾರೆ. ಸ್ವಯಂವರದಲ್ಲಿ ಪಣಗೆದ್ದವನು ಅರ್ಜುನ ಅಲ್ಲದೆ ಅನ್ಯರಿಗೆ ಅಸಾಧ್ಯ. ಕಂಬವನ್ನು ಗದೆಯಂತೆ ಬೀಸುತ್ತಾ ಅಟ್ಟಾಡಿಸಿ ಹೊಡೆದಾತ ಭೀಮನೇ ಅಹುದು.” ಹೀಗೆ ಶಕುನಿಯ ವಿಮರ್ಶಾ ದೃಷ್ಟಿಯ ಊಹೆಗೆ ಕರ್ಣನೂ ಸಹಮತ ಸೂಚಿಸುತ್ತಾ, “ಹೌದು, ಮಿತ್ರ ದುರ್ಯೋಧನಾ! ಪಣಕ್ಕಿರಿಸಿದ ಬಿಲ್ಲಿಗೆ ಹೆದೆಯೇರಿಸಿ ಧನುಷ್ಟೇಂಕಾರ ಮಾಡುವಲ್ಲಿಂದ ಶರ ಪ್ರಯೋಗಿಸುವವರೆಗೂ ನೋಡಿದ್ದೇನೆ. ಆ ವೀರನು ಬೇರಾರೂ ಅಲ್ಲ, ಅರ್ಜುನನೇ ಹೌದು. ನಮ್ಮೀರ್ವರ ಮಧ್ಯೆ ತುಸು ಹೊತ್ತಿನ ಕಾಳಗವೇರ್ಪಟ್ಟಾಗ ಅತೀ ನಾಜೂಕಿನಿಂದ ನನ್ನನ್ನು ಕಂಗೆಡಿಸಿ, ನನ್ನ ಧನುಸ್ಸನ್ನು ಮುರಿದು, ಕಿರೀಟ ಹಾರಿಸಿ, ಗಾಯಾಳಾಗಿಸಿ ಕಣ್ಮರೆಯಾದ ಆ ರಣ ಚಾತುರ್ಯ ಅರ್ಜುನನಿಗಲ್ಲದೆ ಅನ್ಯರಿಗೆ ಅಸಾಧ್ಯವೇ ಸರಿ. ಈಗ ನನ್ನ ಮನದ ಆಕ್ರೋಶ ಇಮ್ಮಡಿಯಾಗಿದೆ. ದ್ರೌಪದಿಯಿಂದಾದ ಸಾರ್ವಜನಿಕ ಅಪಮಾನ, ಮತ್ತೆ ನನ್ನ ಅಜನ್ಮ ಶತ್ರು ಅರ್ಜುನನ ಜೊತೆಗಾದ ಪರಾಭವ. ಪ್ರತಿಕಾರಕ್ಕಾಗಿ ಮನಸ್ಸು ತುಡಿಯುತ್ತಿದೆ” ಎಂದನು. ಕರ್ಣನ ಮಾತು ಕೇಳುತ್ತಿದ್ದಂತೆ ದುರ್ಯೋಧನನೂ ಕೆರಳಿದನು. “ಪಾಂಡವರು ಬದುಕಿದ್ದಾರೆ ಎಂಬ ಸಂದೇಹವೋ – ಸತ್ಯವೋ ಅದೇನೇ ಆಗಿದ್ದರೂ ಜೀರ್ಣಿಸಲಾಗದ ಸುದ್ದಿಯಂತಾಗಿದೆ. ಈಗಲೇ ಪಾಂಚಾಲಕ್ಕೆ ಆಕ್ರಮಣ ಮಾಡಿ, ಅವರನ್ನು ಹುಡುಕಿ ಕೊಂದು ಬಿಡಬೇಕು” ಎಂದು ರೋಷದಿಂದ ಉದ್ರಿಕ್ತನಾಗಿ ಅಬ್ಬರಿಸಿದನು.
ಹೀಗೆ ಇವರೊಳಗೆ ತರ್ಕ ಸಾಗುತ್ತಿರಬೇಕಾದರೆ ಬೇಹುಗಾರರು ಬಂದು “ಯುವರಾಜರಿಗೆ ಪ್ರಣಾಮಗಳು. ಪಾಂಡವರು ಬದುಕಿದ್ದಾರೆ. ಐವರು ಪಾಂಡವರು ಒಬ್ಬಾಕೆ ದ್ರೌಪದಿಯನ್ನು ಮದುವೆಯಾಗಿದ್ದಾರೆ. ಮಹಾರಾಜ ದ್ರುಪದನ ಅರಮನೆಯಲ್ಲಿ ವೈಭವದ ವಿವಾಹ ಮಹೋತ್ಸವ ಐದು ದಿನಗಳ ಕಾಲ ನೆರವೇರಿತು” ಎಂದು ಪಾಂಚಾಲದ ವೃತ್ತಾಂತ ಬಿತ್ತರಿಸಿದರು. ದುರ್ಯೋಧನ ಈಗ ಕನಲಿ ಕೆಂಡಾಮಂಡಲನಾದನು.”ಇನ್ನು ಪಾಂಡವರು ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಅದಿರಲಿ, ಅವರನ್ನು ಉಳಿಯಗೊಟ್ಟರಲ್ಲವೇ ಆರೋಪ? ಈಗ ಅವರು ಮಾಡುತ್ತಿರುವುದು ನ್ಯಾಯವೇ? ಒಬ್ಬಳನ್ನು ಐವರು ಮದುವೆಯಾಗುವುದು ಯಾವ ಧರ್ಮ? ಇಂತಹ ಅಧರ್ಮಿಗಳು ಬದುಕಿರಲೇಬಾರದು ತಲೆಗಡಿಯಬೇಕು. ನಮಗೇ ಈ ಕಾರಣವೇ ಸಾಕು. ಅವರನ್ನು ಕೊಲ್ಲಲು. ಈಗಲೇ ಹೊರಡೋಣ” ಎಂದನು. ಆಗ ಅವರೊಂದಿಗಿದ್ದ ಸೌಮದತ್ತಿ ಎಂಬ ರಣತಂತ್ರ ನಿಪುಣ ರಾಜ ತಡೆದು, ವಿನಯಪೂರ್ವಕವಾಗಿ ಪರಿಸ್ಥಿತಿ ಅವಲೋಕಿಸಿ ವಿವರಿಸಲು ತೊಡಗಿದನು. “ನೋಡು ದುರ್ಯೋಧನ, ಮೊದಲೇ ಪಾಂಡವರು ಅತುಲ ವಿಕ್ರಮಿಗಳು, ಅವಧ್ಯರು ಆಗಿದ್ದಾರೆ. ನಿರಾಯುಧರಾಗಿದ್ದ ಅವರನ್ನು ಪಾಂಚಾಲದ ಸ್ವಯಂವರ ಮಂಟಪದಲ್ಲಿ ನಾವೆಲ್ಲರು ಸೇರಿ ಆಕ್ರಮಿಸಿದರೂ ಸ್ವಯಂವರ ಪಣಕ್ಕಿಟ್ಟಿದ್ದ ಧನು ಶರಗಳಿಂದಲೇ ಅರ್ಜುನ ನಮ್ಮನ್ನೆಲ್ಲಾ ಕಂಗೆಡಿಸಿ ಓಡಿಸಿದ್ದಾನೆ. ಆ ಭೀಮ ಗೋಪುರ ಸ್ಥಂಭದಿಂದಲೇ ಬೀಸುತ್ತಾ, ಅಪ್ಪಳಿಸುತ್ತಾ ನಾವು ಹೆದರಿ ಓಡುವಂತೆ ಪರಾಕ್ರಮ ಮೆರೆದಿದ್ದಾನೆ. ಅವರು ಧರ್ಮಾತ್ಮರಾಗಿರುವುದರಿಂದ ನಮ್ಮನ್ನು ಕೊಲ್ಲದೆ, ಪ್ರಾಣ ಸಹಿತ ಬಿಟ್ಟು ಜೀವದಾನ ನೀಡಿದ್ದಾರೆ. ಅವರ ಉದಾರತೆಗೆ ನಾವು ಋಣಿಗಳಾಗಿದ್ದೇವೆ. ಇನ್ನೂ ಒಂದು ವಿಚಾರ ನಾವು ಅರ್ಥೈಸಬೇಕು. ದ್ವಾರಕೆಯಿಂದ ಬಂದ ಕೃಷ್ಣ ಬಲರಾಮರು ಸ್ವಯಂವರ ಪಣದಲ್ಲಿ ಸ್ಪರ್ಧಿಸಲಿಲ್ಲ. ವೀರರನ್ನೇ ಗುಂಪಾಗಿಸಿದ ಸೈನ್ಯ ಸಮೇತ ಬಂದಿದ್ದಾರೆ. ಆ ರಾಮಕೃಷ್ಣರು ನಮ್ಮ ವಿರುದ್ಧ ನಾರಾಯಣಿ ಸೇನೆಯನ್ನು ಕಾದಾಡುವಂತೆ ಮಾಡಿ ಪಾಂಡವರನ್ನು ರಕ್ಷಿಸಿದ್ದಾರೆ. ಇಷ್ಟೆಲ್ಲಾ ಆಗಿ ಈಗ ಸಂಬಂಧ ಬೆಳೆಸಿ ಮದುವೆಯಾದ ಪಾಂಡವರ ಶಕ್ತಿ ತ್ರಿಗುಣವಾಗಿದೆ. ಒಂದೆಡೆ ಬಲರಾಮ ಕೃಷ್ಣರು, ಮತ್ತೊಂದೆಡೆ ದ್ರುಪದ ದೃಷ್ಟದ್ಯುಮ್ನರು. ಮೊದಲೆ ಪ್ರಬಲರಾದ ಪಾಂಡವರ ಬಲ ಈಗ ಬಹು ಪಾಲು ವೃದ್ಧಿಯಾಗಿದೆ. ಆದರೆ ನಾವು ಸೋತು ಬಳಲಿ ಗಾಯಾಳುಗಳಾಗಿ ಪೂರ್ಣ ಚೇತರಿಕೆಯಾಗದೆ ಇರುವಾಗ ನಮ್ಮ ವಿಭಾಗದ ಬಲ ಕ್ಷಯವಾಗಿದೆ. ಹೀಗಿರುತ್ತಾ ಮುಂದಿನ ಯೋಜನೆ ರೂಪಿಸುವಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ” ಎಂದನು.
ಸೌಮದತ್ತಿ ಮಾತು ಮುಂದುವರಿಸುತ್ತಾ “ಯುದ್ದಕ್ಕೆ ಸಿದ್ಧರಾಗುವ ಮೊದಲು ಕ್ಷಯ, ಸ್ಥಾನ, ವೃದ್ಧಿ ಗಳೆಂಬ ತ್ರಿವರ್ಗಗಳನ್ನು ಶತ್ರು ಮತ್ತು ನಮ್ಮ ಮಧ್ಯೆ ಹೋಲಿಕೆ ಮಾಡಿಕೊಳ್ಳಬೇಕು. ಶತ್ರು ಬಲದಲ್ಲಿ ಕ್ಷಯ ಸ್ಥಾನಿಯಾಗಿದ್ದರೆ ಹೊಸ ಶಕ್ತಿ ತುಂಬದೇ ಇದ್ದು, ನಾವು ವೃದ್ಧಿಯಾಗಿದ್ದರೆ ನಿಸ್ಸಂದೇಹವಾಗಿ ಆಕ್ರಮಣ ಮಾಡಬೇಕು. ಈಗ ಪರಿಸ್ಥಿತಿ ತದ್ವಿರುದ್ದವಾಗಿದೆ. ನಾವು ಕ್ಷಯ ಸ್ಥಾನದಲ್ಲಿರುವ ಕಾರಣ, ಪಾಂಡವರಿಗೆ ದ್ವಾರಕೆಯ ಕೃಷ್ಣ ಬಲರಾಮರ ಬಲ, ದೃಷ್ಟದ್ಯುಮ್ನನಿಗೆ ದ್ರುಪದ ನ ಸೇನಾಬಲವೂ ಸೇರಿ ಸಮೃದ್ಧಿ ಸ್ಥಾನದಲ್ಲಿದ್ದು ನಮ್ಮನ್ನು ಆರಾಮವಾಗಿ ಗೆಲ್ಲಬಲ್ಲ ಸಕಲ ವ್ಯವಸ್ಥೆಯೂ ಅವರ ಬಳಿಯಿದೆ. ನಾವು ಕ್ಷಯ ಸ್ಥಾನದಲ್ಲಿರುವ ಕಾರಣ ಹೀನಾಯ ಸೋಲಲ್ಲದೆ ಗೆಲುವಂತೂ ನಮಗಾಗದು. ಹಾಗಾಗಿ ಮಿತ್ರತ್ವದ ಸಂಧಿಯೇ ನಮಗೆ ಶ್ರೇಯಸ್ಕರ” ಎಂದು ಸ್ಪಷ್ಟ ಚಿತ್ರಣ ವಿವರಿಸಿ ಹೇಳಿದನು.
ರಣೋತ್ಸಾಹ, ಸೇಡಿನ ಕಿಚ್ಚು ಹೊತ್ತಿಸಿ ಉರಿಯುತ್ತಿದ್ದ ಕರ್ಣ, ದುರ್ಯೋಧನನತ್ತ ತಿರುಗಿ, “ಇಲ್ಲ ಮಿತ್ರ, ಮದುವೆಯ ಸಡಗರದಲ್ಲಿರುವ ಪಾಂಚಾಲ ದೇಶ ಈಗ ಶೃಂಗಾರ ಸಂಭ್ರಮಗಳಲ್ಲೇ ವ್ಯಸ್ಥವಾಗಿದೆ. ಅನಿರೀಕ್ಷಿತವಾದ ನಮ್ಮ ದಾಳಿಯಿಂದ ಅವರನ್ನು ಸುಲಭದಲ್ಲಿ ಸೆರೆಹಿಡಿದು ಬಂಧಿಸುವಲ್ಲಿ ನಾವು ಯಶಸ್ವಿಗಳಾಗುತ್ತೇವೆ. ಯುದ್ಧ ಸಿದ್ಧತೆ ಅವರದ್ದಾಗಿ ಇರದೆ ಇರುವ ಈ ಅವಕಾಶವೆ ನಮಗೆ ಅನುಕೂಲಕರ” ಎಂದನು.
ಶಕುನಿ, ದುಶ್ಯಾಸನ, ಜಯದ್ರಥಾದಿಗಳು ಕರ್ಣನ ಮಾತಿಗೆ ಬೆಂಬಲ ನೀಡಿದರು. ದುರ್ಯೋಧನನೂ ಉತ್ಸಾಹದಿಂದ ಒಪ್ಪಿ ಇದ್ದ ಸೈನ್ಯ ವೀರರನ್ನೆಲ್ಲಾ ಒಗ್ಗೂಡಿಸಿ ಪಾಂಚಾಲದತ್ತ ಆಕ್ರಮಣಕ್ಕೆ ಸೈನ್ಯ ಮುನ್ನಡೆಯಿತು.
ಮುಂದುವರಿಯುವುದು…








