30.3 C
Udupi
Sunday, April 12, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 117

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೧೮ ಮಹಾಭಾರತ

ದ್ರುಪದ ಮಹಾರಾಜ ಮಗಳ ಕಲ್ಯಾಣ ಮಹೋತ್ಸವ ತಯಾರಿಗೆ ಆದೇಶ ಹೊರಡಿಸಿದನು. ಪಾಂಚಾಲ ದೇಶ ಪಾಂಚಾಲಿಯ ವಿವಾಹ ಉತ್ಸವಕ್ಕೆ ಮದುಮಗಳಂತೆ ಶೃಂಗಾರಗೊಳ್ಳತೊಡಗಿತು. ಎಲ್ಲೆಲ್ಲಿ ನೋಡಿದರೂ ಸಂಭ್ರಮ ಸಡಗರ. ಇತ್ತ ಪುರೋಹಿತರು ಸುಮೂಹೂರ್ತ ನಿರ್ಣಯಿಸಿದರು. ವಧು – ವರರಿಗೆ ಪದ್ದತಿಯಂತೆ ಮಂಗಲಸ್ನಾನಗಳಾಗಿ, ಬಳಿಕ ಅಲಂಕಾರಗೊಳ್ಳತೊಡಗಿದರು.

ಪುಷ್ಯ ನಕ್ಷತ್ರದ ಶುಭಲಗ್ನದಲ್ಲಿ ಧರ್ಮರಾಯನು ತನ್ನ ಸಹೋದರರೊಂದಿಗೆ ಅಲಂಕೃತ ವಿಭೂಷಣ ಭೂಷಿತನಾಗಿ ರಾಜೋಚಿತ ಕ್ರಮದಿಂದ ವೇದವಿದರೂ ಮಂತ್ರಜ್ಞರೂ, ಪುರೋಹಿತರೂ ಆದ ಧೌಮ್ಯರನ್ನು ಮುಂದಿಟ್ಟುಕೊಂಡು ಸಿದ್ದಗೊಂಡಿದ್ದ ಕಲ್ಯಾಣ ಮಂಟಪ ಹೊಕ್ಕು ನಿಗದಿಯಾಗಿದ್ದ ಆಸನಗಳಲ್ಲಿ ಉಪಸ್ಥಿತರಾದರು. ಧೌಮ್ಯರು ಅಗ್ನಿಸಂಧಾನ ಮಾಡಿ ಪ್ರಜ್ವಲಿಸಿದ ಅಗ್ನಿಯಲ್ಲಿ ಮಂತ್ರಪೂರ್ವಕವಾಗಿ ಹೋಮವನ್ನು ಮಾಡುತ್ತಾ, ಧರ್ಮರಾಯ ಮತ್ತು ದ್ರೌಪದಿಯನ್ನು ವಧು ವರರ ಮಣೆಯಲ್ಲಿ ಕುಳ್ಳಿರಿಸಿದರು. ಪಾಣಿಗ್ರಹಣಪೂರ್ವಕ ಸಪ್ತಪದಿಯನ್ನು ವಿದ್ಯುಕ್ತವಾಗಿ ಪೂರೈಸಿದರು.

ಯಥಾಪ್ರಕಾರ ದ್ರೌಪದಿಯ ಜೊತೆ ವಿವಾಹವನ್ನು ಭೀಮ, ಅರ್ಜುನ, ನಕುಲ ಸಹದೇವರಿಗೆ ಬೇರೆ ಬೇರೆಯಾಗಿ ಸಂಭ್ರಮದಿಂದ ನೆರವೇರಿಸಿದರು. ಈ ಐದು ದಿನಗಳು ಕೂಡಾ ನಿತ್ಯ ನವವಧುವಿನಂತೆ ಶೃಂಗರಿಸಲ್ಪಟ್ಟು ನಿರಂತರವಾಗಿ ಐವರನ್ನು ಪತಿಯಾಗಿ ಸ್ವೀಕರಿಸಿದಳು.

ಮದುವೆಯ ಕೊನೆಯ ದಿನ ದ್ರುಪದರಾಜ ಪುರೋಹಿತರು ಹಾಗು ಪಾಂಡವರ ಪುರೋಹಿತರಾದ ಧೌಮ್ಯರು ಸೇರಿಕೊಂಡು ತುಂಬಿದ ಜನಸ್ತೋಮದ ಮುಂದೆ – “ಕೇವಲ ಮನುಷ್ಯ ಮಾತ್ರರ ಆಚಾರದಂತೆ ದ್ರೌಪದಿ ಮತ್ತು ಪಾಂಡವರ ವಿವಾಹ ನಡೆದುದಲ್ಲ. ಪಾಂಡವರು ದೇವಾಂಶ ಸಂಭೂತರು, ದ್ರೌಪದಿಯೂ ತಾಯಿಹೆತ್ತ ಮಗಳಲ್ಲ. ಯಜ್ಞ ಸಂಭವೆಯಾಗಿ ದೇವ – ದೇವಿಯರ ಅನುಗ್ರಹದಿಂದ ಯಾಗಾಗ್ನಿಯಿಂದ ಅವಿರ್ಭವಿಸಿದವಳು. ಹಾಗಾಗಿ ದೇವತೆಗಳಿಗೂ ಮಾನವರಿಗೂ ಹೊಂದಾಣಿಕೆಯಾಗುವ ಉಚಿತ ಕ್ರಮದಿಂದಲೇ ವಿವಾಹ ಸಂಸ್ಕಾರವು ನಡೆಯಿತು. ಹಾಗೆಂದು ಈ ರೀತಿಯ ವಿವಾಹವಾಗಲಿ, ಕ್ರಮವಾಗಲಿ, ಸಂಬಂಧವಾಗಲಿ ಸಾಮಾನ್ಯ ಮನುಷ್ಯರಿಗೆ ಅನುಕರಣೀಯವಲ್ಲ ಎಂದು ಘೋಷಿಸಿದನು.

ಭಗವಾನ್ ವೇದವ್ಯಾಸರು ಬ್ರಹ್ಮ ಸ್ವರೂಪಿಗಳು, ವೇದವಿದರೂ, ಶಾಸ್ತ್ರವೇತ್ತರೂ ಆಗಿದ್ದು ಅಂತಹ ಮಹಾತ್ಮರು ಅನುಗ್ರಹಿಸಿ ಅಂಗೀಕರಿಸಿದ ನಂತರ ಇಂದಿನ ವಿವಾಹದ ವಿಚಾರದಲ್ಲಿ ಯಾರಿಗೂ ಗೊಂದಲ ಉಳಿದಿಲ್ಲ. ಸಮಸ್ತರಿಂದಲೂ ಪಾಂಡವರ ಪತ್ನಿ- ಪಂಚವಲ್ಲಭೆಯಾಗಿ ಗೌರವಿಸಲ್ಪಡುತ್ತಿದ್ದಾಳೆ. ಈ ಮಹೋತ್ಸವದಲ್ಲಿ ನೆರೆದ ವಿಪ್ರಸ್ತೋಮ, ಪ್ರಜಾವರ್ಗ, ಬಂಧು ಬಳಗ ಸನ್ಮಂಗಲವಾಗಲಿ ಎಂದು ನೂತನ ವಧು – ವರರಿಗೆ ಹರಸಿದರು.

ದ್ರುಪದರಾಜನು ಮಗಳಿಗೂ ಅಳಿಯಂದಿರಿಗೂ ಬೇಕು ಬೇಕಾದ ಉಡುಗೊರೆಗಳನ್ನಿತ್ತನು. ಅದೇ ಹೊತ್ತಿಗೆ ಶ್ರೀ ಕೃಷ್ಣನೂ ಪಟ್ಟೆಯ ಮಡಿಗಳು, ಬೆಳ್ಳಿ ಬಂಗಾರದ ಪಾತ್ರೆಗಳು, ರತ್ನಹಾರಗಳು, ಸ್ವರ್ಣಾಭರಣಗಳು ಇತ್ಯಾದಿ ಸುವಸ್ತುಗಳನ್ನು ಪ್ರೀತಿಯಿಂದ ದ್ವಾರಕೆಯ ಬಹುಮಾನಗಳಾಗಿ ನೀಡಿದನು. ಕೃಷ್ಣನು ಅನುಗ್ರಹ ಬೀರಿದುದನ್ನು ಅನುಭವಿಸಿ ಪಾಂಡವರು, ದ್ರುಪದ, ದ್ರೌಪದಿ ಪುನೀತ ಭಾವ ತಳೆದರು.

ಪಾಂಡವರು ಮಾತೆ ಕುಂತಿ, ಪತ್ನಿ ದ್ರೌಪದಿಯ ಜೊತೆ ದ್ರುಪದ ರಾಜನಿಂದ ಕೊಡಲ್ಪಟ್ಟ ಸುಂದರ ಭವನದಲ್ಲಿ ವಾಸಿಸತೊಡಗಿದರು. ವಸ್ತು, ರಥ, ಆಳು, ಪರಿಚಾರಕರು ಹೀಗೆ ಸರ್ವಾನುಕೂಲಗಳನ್ನು ದೃಷ್ಟದ್ಯುಮ್ನ ಮಾಡಿಕೊಟ್ಟಿದ್ದನು.

ಇತ್ತ ಸ್ವಯಂವರ ಮಂಟಪದಲ್ಲಿ ಭೀಮಾರ್ಜುನರ ಕೈಯಲ್ಲಿ ಪೆಟ್ಟು ತಿಂದು ನಿಲ್ಲಲಾಗದೆ ಓಡಿ ಹೋಗಿದ್ದ ಅರಸರಲ್ಲಿ ಕೆಲವರು ದುರ್ಯೋಧನನ ಜೊತೆಯಾಗಿ ಏಳೆಂಟು ದಿವಸಗಳ ಕಾಲ ರಾಜ್ಯದ ಹೊರವಲಯದಲ್ಲಿ ಬೀಡುಬಿಟ್ಟಿದ್ದರು. ತಮಗಾದ ಅವಮಾನಕ್ಕೆ ತಿರುಮಂತ್ರ ರೂಪಿಸಲು ಮಂತ್ರಲೋಚನೆಯಲ್ಲಿ ವ್ಯಸ್ಥರಾಗಿದ್ದರು.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page