30.1 C
Udupi
Monday, February 24, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 112

ಭರತೇಶ್ ಶೆಟ್ಟಿ,ಎಕ್ಕಾರ್

“ಮಗಳೇ ದ್ರೌಪದಿ” ಎಂದು ಮಮತೆಯಿಂದ ಕರೆದು ತಲೆ ನೇವರಿಸಿದಳು ಅತ್ತೆ ಕುಂತಿ. ಏನೋ ಮಹತ್ತರವಾದ ಗಹನ ವಿಚಾರ ತರ್ಕಿಸಿ ವಿಷದಪಡಿಸಲು ಆರಂಭಿಸುವೆ ಎಂಬ ರೀತಿ ನಿಟ್ಟುಸಿರು ಬಿಡುತ್ತಾ ಪ್ರಾರಂಭಿಸಿದಳು. “ದ್ರೌಪದೀ ! ಈ ವರೆಗಿನ ನಿನ್ನ ಬದುಕು ಸುಖದ ಸುಪ್ಪತ್ತಿಗೆಯಲ್ಲಿತ್ತು. ರಾಜಕುಮಾರಿಯಾಗಿ ಸೇವೆಗೆ ಪರಿಚಾರಕಿಯರಿದ್ದರು. ಒಂದು ಕರೆಗೆ ಓಡಿ ಬಂದು ನಿಂತು ಅಪ್ಪಣೆಗೆ ಕಾಯುವ ಸಖಿಯರು ನಿನಗಿದ್ದಿರಬಹುದು. ಆದರೆ ಈಗ ನೀನು ಬಂದು ಸೇರಿರುವುದು ಅಲೆಮಾರಿಗಳಾದ ನಮ್ಮ ಜೊತೆ. ಹಸ್ತಿನಾವತಿಯ ಚಂದ್ರವಂಶದ ಯುವರಾಜರಾದ ನನ್ನ ಮಕ್ಕಳಿಗೆ ಈಗ ಅರಮನೆ ಬಿಡು, ಸ್ವಂತ ಮನೆಯೂ ಇಲ್ಲದೆ ಕುಂಬಾರನ ಕರ್ಮಶಾಲೆಯಲ್ಲಿ ಆಶ್ರಿತರಾಗಿದ್ದೇವೆ. ಊಟೋಪಚಾರಕ್ಕೆ ಮೃಷ್ಟಾನ್ನದ ಬದಲು ಭಿಕ್ಷಾನ್ನವಿದೆ. ಹಾಗೆಂದು ಸೌಭಾಗ್ಯವಿಲ್ಲ, ಸಂಪತ್ತು ಇಲ್ಲ, ಅಧಿಕಾರ ಇಲ್ಲ ಎಂದ ಮಾತ್ರಕ್ಕೆ ಪತಿಗೃಹವನ್ನಾಗಲಿ, ಪತಿಯನ್ನಾಗಲಿ ಅಲಕ್ಷಿಸಿದರೆ ಅದು ಸತಿಧರ್ಮವಾಗದು. ಪತಿವೃತೆಯಾಗಿ ಜೀವನದ ಏಳುಬೀಳುಗಳಲ್ಲಿ ಸಹಭಾಗಿಯಾಗಿ ಸುಖಕಷ್ಟಗಳನ್ನು ಸ್ಥಿತ ಮನಸ್ಸಿನಿಂದ ಸ್ವೀಕರಿಸಿ ನಡೆಯುವುದು ವಿಹಿತ. ನನ್ನ ಮಕ್ಕಳು ಸದ್ಯ ಈ ಅವಸ್ಥೆಯಲ್ಲಿದ್ದರೂ ಅವರು ಸಾಮಾನ್ಯರಲ್ಲ, ದೈವಾಂಶ ಸಂಭೂತರು. ನೀನೂ ಅಸಾಮಾನ್ಯಳೇ ಆಗಿರುವೆ. ದ್ರುಪದ ರಾಜನ ಯಾಗ ಸಂಕಲ್ಪದಂತೆ ಯಾಗಾಗ್ನಿಯಿಂದ ಅವಿರ್ಭಾವಗೊಂಡವಳು. ಅತಿಮಾನುಷ ಹುಟ್ಟು ಪಡೆದವರಾದ ನೀವು ಆರು ಮಂದಿ ಸಂಬಂಧದಲ್ಲಿ ಸತಿಪತಿಗಳಾಗಿದ್ದೀರಿ. ಸಾಮಾನ್ಯ ಮನುಷ್ಯರಿಗೆ ಈ ರೀತಿ ಐವರಿಗೆ ಏಕ ಕಾಲದಲ್ಲಿ ಪತ್ನಿಯಾಗಿ ಒಂದೇ ಸಂಸಾರದಲ್ಲಿ ಬದುಕುವುದು ಸುಲಭ ಸಾಧ್ಯವಲ್ಲ. ದೈವೀ ಶಕ್ತಿ ನಿಮ್ಮ ಹುಟ್ಟಿನಿಂದಲೇ ಪಡೆದು ವೈಶಿಷ್ಟ್ಯತೆಯಿಂದ ಬೆಳೆದು ಬಂದಿರುವ ನಿಮಗಷ್ಟೇ ಈ ರೀತಿಯ ಸಂಬಂಧ ಸಂಭವನೀಯವಾಗಿದೆಯೇ ಹೊರತು, ಲೋಕದ ಜನಸಾಮಾನ್ಯರಿಗೆ ಈ ಬಂಧ ಅಸಹನೀಯವೇ ಆಗುವಂತಹದ್ದು. ಹೀಗಿದ್ದೂ ವಾಸ್ತವ ಸಂಬಂಧದಲ್ಲಿ ಅತ್ತೆಯಾಗಿ ನಿನಗೆ ಕೆಲ ಹಿತನುಡಿಗಳನ್ನು ಹೇಳುತ್ತಿದ್ದೇನೆ. ನಿನ್ನ ಪತಿಗಳಾದ ಐವರು ಪಾಂಡವರಲ್ಲಿ ಭೇದ ಕಲ್ಪಿಸದೆ, ಅನುಕೂಲೆಯಾಗಿ, ಸಹವರ್ತಿಯಾಗಿ ಬಡತನ, ದುಸ್ಥಿತಿ, ಅವಮಾನ ಹೀಗೆ ಏನೇ ನಿಕೃಷ್ಟ ಸ್ಥಿತಿ ಬಂದರೂ ಸೈರಿಸಿ ಜೊತೆಗಿದ್ದು ಸ್ಥೈರ್ಯ ತುಂಬಿ ಮುನ್ನಡೆಸುವ ಹೊಣೆಗಾರಿಕೆ ನಿನಗಿದೆ. ಸದ್ಯದ ಬದುಕು ಬಹು ಕಠಿಣವಾಗಿದ್ದು ಹೆಜ್ಜೆ ಹೆಜ್ಜೆಗೂ ಶತ್ರು ಭಯವಿದೆ. ಯಾವ ಕ್ಷಣದಲ್ಲೂ ಆಪತ್ತು ಒದಗಬಹುದು. ವೇಷಾಂತರದಿಂದಲೇ ನಿಜ ಮರೆಸಿ ಬದುಕುವ ಅನಿವಾರ್ಯತೆ ನಮಗಿದೆ. ಇಂತಹ ನಮ್ಮ ಬದುಕಿಗೆ ಜೀವನಾಧಾರ ಭಿಕ್ಷಾಟನೆ. ನನ್ನ ಮಕ್ಕಳು ಬೇಡಿ ತಂದುದರಲ್ಲಿ ಮೊದಲು ದೇವತಾ ಬಲಿ, ಬ್ರಾಹ್ಮಣ ಭಿಕ್ಷೆ, ಗೋಗ್ರಾಸ ನೀಡಿದ ಬಳಿಕ ಉಳಿದ ಶೇಷಾನ್ನವನ್ನು ಸಮನಾಗಿ ಎರಡು ಪಾಲು ಮಾಡಬೇಕು. ಹೀಗೆ ಮಾಡಿದ ಪಾಲಿನಲ್ಲಿ ಒಂದು ಭಾಗ ಭೀಮನಿಗೆ. ಮತ್ತೊಂದು ಭಾಗದಲ್ಲಿ ನಿನ್ನ ಉಳಿದ ನಾಲ್ವರು ಗಂಡಂದಿರಿಗೂ, ನನಗೂ ಉಣಬಡಿಸಿ ಮಿಕ್ಕುಳಿದದ್ದನ್ನು ನೀನು ಸೇವಿಸಬೇಕು. ನಮಗೆ ಗೃಹ ಇಲ್ಲದಿದ್ದರೂ ಗೃಹಿಣಿಯಾಗಿ ನೀನಿರುವಾಗ ಗೃಹಿಣೀ ಧರ್ಮ ಪಾಲಿತವಾಗಬೇಕು. ನಿನ್ನ ಕರ್ಮ – ಧರ್ಮ ನಿಷ್ಠೆಯಿಂದ ಪಾಲಿಸಬೇಕು. ಹೀಗೆ ಯಾವುದೇ ಲೋಪದೋಷವಿಲ್ಲದೆ ಸತಿ ಧರ್ಮ ಪಾಲಿಸಿದರೆ ಅದೇ ತಪಸ್ಸಿನಂತೆ ಪರಿವರ್ತನೆಯಾಗಿ ಭಗವತ್ಕೃಪೆ ಪ್ರಾಪ್ತಿಗೆ ಸಾಧನವಾಗುತ್ತದೆ. ಮಾತ್ರವಲ್ಲ ದೇವ ವಾಸುದೇವನ ಪೂರ್ಣಾನುಗ್ರಹಕ್ಕೂ ಭಾಜನಳಾಗುವೆ. ನಮ್ಮ ಸಂಸಾರಕ್ಕೆ ಈ ಧರ್ಮ ಪಾಲನೆಯೇ ಶ್ರೀರಕ್ಷೆಯಾಗಲಿದೆ. ನನಗಂತೂ ನಿನ್ನ ಬಗ್ಗೆ ಸಂದೇಹವಿಲ್ಲ. ಹೇಳದೆಯೇ ತಿಳಿದು ಮಾಡುವಷ್ಟು ಪ್ರಬುದ್ಧತೆ ನಿನ್ನಲ್ಲಿ ಕಾಣುತ್ತಿದೆ. ನಿನಗೆ ಸನ್ಮಂಗಲವಾಗಲಿ” ಎಂದು ಉಪದೇಶ ನೀಡಿ ಹರಸಿದಳು ಕುಂತಿ. ದ್ರೌಪದಿ ತನ್ಮಯತೆ ಏಕಾಗ್ರಚಿತ್ತದಿಂದ ಅತ್ತೆಯ ಮಾತುಗಳನ್ನು ಕೇಳಿ ಅರ್ಥೈಸಿಕೊಂಡಳು. “ಅತ್ತೇ, ನಿಮ್ಮಂತಹ ಸಂಸ್ಕಾರ, ಧರ್ಮಪಾಲಕ, ನ್ಯಾಯಯುತ, ನಿಸ್ವಾರ್ಥ, ದೈವಾನುಗ್ರಹಿತ ಸಂಸಾರ ನನಗೆ ಸಿಕ್ಕಿರುವುದೇ ಮಹಾಸೌಭಾಗ್ಯ. ಇದಕ್ಕಿಂತ ಮಿಗಿಲಾದ ಶ್ರೀಮಂತಿಕೆ ಸೌಭಾಗ್ಯ ಬೇರೆ ಏನಿದೆ ಈ ಜಗದಲ್ಲಿ. ಅರ್ಥ, ಸಾಮ್ರಾಜ್ಯ, ಧನ, ಕನಕಾದಿ ಸಂಪತ್ತು ಇಂದು ನಮ್ಮದಾಗಿದ್ದರೆ ನಾಳೆ ಇನ್ಯಾರದ್ದೋ ಆಗುವಂತಹುದು. ಆದರೆ ಈ ನಮ್ಮ ಸಂಸಾರದಲ್ಲಿರುವ ಮೌಲ್ಯ ಅಮೂಲ್ಯವಾಗಿದೆ. ನಾನು ಇಲ್ಲೂ ಯುವರಾಣಿಯಾಗಿಯೇ ಸಂತೃಪ್ತಳಾಗಿ ಇದ್ದೇನೆ. ನಿಮ್ಮ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವೆ” ಎಂದು ಹೇಳಿ ನಮಿಸಿದಳು.

ನಂತರ ಭಿಕ್ಷಾಟನೆಯಿಂದ ಮರಳಿ ಬಂದ ಪಾಂಡವರು ತಂದ ಭಿಕ್ಷೆಯನ್ನು ಅತ್ತೆ ಕುಂತಿದೇವಿ ಹೇಳಿದ ಕ್ರಮದಂತೆ ಬಳಸಿಕೊಂಡು ಬಡಿಸಿ ತಾನೂ ಶೇಷ ಭಾಗವನ್ನು ಸೇವಿಸಿದಳು. ಮನೆಯನ್ನು ಶುಚಿಗೊಳಿಸಿದಳು. ಪಾಂಡವರು ಕುಳಿತು ಅವರ ಯೋಗ್ಯತೆಯಂತೆ ಪ್ರಜಾವರ್ಗದ ಸಂಕಷ್ಟ, ಪರಿಹಾರಗಳ ಕುರಿತು ಚರ್ಚಿಸುತ್ತಿದ್ದರು. ನೆರೆ ರಾಜ್ಯದ ನ್ಯಾಯ – ಅನ್ಯಾಯಗಳ ನಡೆಯ ಬಗ್ಗೆ ತರ್ಕಿಸುತ್ತಿದ್ದರು. ರಾಜ ವಂಶೀಯರಲ್ಲವೇ? ಪ್ರಜಾರಕ್ಷೆಯ ವ್ಯಾಪ್ತಿಯಿಂದ ಹೊರ ಬರುವವರೆ ಈ ಧರ್ಮನಿಷ್ಠರು? ಹೀಗೆ ನಿರತರಾಗಿದ್ದು ಹೊತ್ತು ಸಾಗುತ್ತಾ ಇಳಿಸಂಜೆಯಾಗುತ್ತಿದ್ದಂತೆ ದ್ರೌಪದಿ ಮನೆಯ ದೀಪ ಬೆಳಗಿದಳು. ಕುಂತಿಯ ಮನ ಮುದಗೊಂಡಿತು. ನಮ್ಮ ಮನೆ ಬೆಳಗಲು ಬಂದ ದೇವಿಯಂತೆ ದ್ರೌಪದಿಯನ್ನು ಕಂಡು ಗೌರವ ಭಾವ ತಳೆದಳು. ಎಲ್ಲರೂ ಸಂಧ್ಯಾ ವಿಧಿಗಳನ್ನೂ, ಭಗವದ್ ಧ್ಯಾನಾದಿಗಳನ್ನೂ ಪೂರೈಸಿದರು. ರಾತ್ರಿ ಮಲಗುವ ಹೊತ್ತು ಬಂದಾಗ ಸಹದೇವ ದರ್ಬೆಯನ್ನು ಹರಡಿ ಅದರ ಮೇಲೆ ತಮ್ಮ ಉತ್ತರೀಯಗಳನ್ನು ಹಾಸಿ ಶಯನದ ವ್ಯವಸ್ಥೆ ಮಾಡಿದನು. ಐವರು ಸಹೋದರರು ಸಾಲಿನಲ್ಲಿ ಪವಡಿಸಿದರೆ, ಕುಂತಿ ಇವರ ತಲೆಯ ಮೇಲ್ಭಾಗದಲ್ಲಿ ವಿಶ್ರಾಂತಳಾದಳು. ದ್ರೌಪದಿ ಕಾಲ ಕೆಳ ಭಾಗದಲ್ಲಿ ಕಳಚಿಟ್ಟ ಆಭರಣಗಳನ್ನು ವಸ್ತ್ರವೊಂದರಲ್ಲಿ ಗಂಟಾಗಿ ಕಟ್ಟು ಕಟ್ಟಿ ಬದಿಯಲ್ಲಿ ಇಟ್ಟು, ತನ್ನ ಸ್ವಯಂವರ ಸಮಯದ ಸಾಲಂಕೃತ ರೇಷ್ಮೆಯ ಉತ್ತರೀಯವನ್ನು ನೆಲಹಾಸಾಗಿ ಹಾಸಿ ಮಲಗಿದಳು. ಹೀಗೆ ಅವರೆಲ್ಲರೂ ಮಲಗಿದ ಬಳಿಕ ಪಾಂಡವ ಸಹೋದರರಿಗೆ ನಿದ್ದೆ ಬರಲಿಲ್ಲ. ಮಾತು ಮುಂದುವರಿಸುತ್ತಾ ಸಮರ ಸೂಕ್ಷ್ಮ ವಿಚಾರಗಳು, ಸ್ವಯಂ ವರ ಮಂಟಪದ ಪ್ರಕರಣ, ರಕ್ಷಣೆ, ಆಯುಧಗಳು, ಅವುಗಳ ಬಳಕೆ, ತಂತ್ರ, ಪ್ರಹಾರ, ಗ್ರಹಿಕೆ ಹೀಗೆ ಕ್ಷಾತ್ರ ಸಹಜ ಯುದ್ದದ ಆಸಕ್ತಿಯ ವಿಷಯಗಳನ್ನೇ ತರ್ಕಿಸುತ್ತಾ ತಡರಾತ್ರಿಯವರೆಗೂ ಸಂವಾದ ನಿರತರಾಗಿದ್ದರು. ರಾತ್ರಿಯ ಎರಡನೆಯ ಜಾವ ಕಳೆವವರೆಗೂ ಮಾತುಕತೆಯಲ್ಲೇ ವ್ಯಸ್ಥರಾಗಿದ್ದರು. ಹೀಗೆ ಪಾಂಡುವಿನ ಸಂಸಾರ ರಾಜವೈಭೋಗವಿಲ್ಲದಿದ್ದರೂ ಸಂತೃಪ್ತ ಸಂಸಾರವಾಗಿ ಒಮ್ಮತ ಒಗ್ಗಟ್ಟಿನಿಂದ ಬದುಕಿನ ಹೆಜ್ಜೆಗಳನ್ನು ಮುಂದುವರೆಸುತ್ತಾ ಸಾಧನಾ ಪಥದಲ್ಲಿದ್ದಾರೆ.

ಇದು ಈ ಕಡೆ ಪಾಂಡವರ ಬಿಡಾರ – ಕುಂಬಾರನ ಆಶ್ರಯದಲ್ಲಿರುವವರ ಕಥನವಾದರೆ, ಅತ್ತ ಪಾಂಚಾಲ ದೇಶದಲ್ಲಿ ಸ್ವಯಂವರ ಪಣ ಗೆದ್ದಾಗ ಓರ್ವ ಸಾಮಾನ್ಯ ವಿಪ್ರ ಪಣ ಭೇದಿಸಿ ರಾಜಕುಮಾರಿಯನ್ನು ವರಿಸಿದ ಪ್ರಕರಣ ಅಸಹನೀಯವೂ, ಅಪಮಾನವೂ ಆಗಿ ಸ್ಪರ್ಧಿಗಳಾಗಿ ಬಂದಿದ್ದ ರಾಜರೆಲ್ಲರೂ ಆಕ್ರೋಶ ಗೊಂಡು ಭುಗಿಲೆದ್ದು ಆರಂಭವಾದ ಹೊಡೆದಾಟ ಯುದ್ದವೇ ಆಗಿ ಭೀಮಾರ್ಜುನರಿಂದ ದಮನಿಸಲ್ಪಟ್ಟರೂ, ಸೋತ ರಾಜರು ಸಾಮ್ರಾಜ್ಯದೊಳಗೆಲ್ಲಾ ದಿಕ್ಕು ಪಾಲಾಗಿ ಓಡಿ ಹೋಗಿದ್ದರು. ಪರಿಣಾಮ ಪ್ರಜಾ ಜನರ ಮಧ್ಯೆ ರಾಜ್ಯದೆಲ್ಲೆಡೆ ಕೋಲಹಲವುಂಟಾಗಿತ್ತು. ದೃಷ್ಟದ್ಯುಮ್ನ – ಶಿಖಂಡಿ, ದ್ರುಪದಾದಿಗಳಿಗೆ ನಿಯಂತ್ರಿಸುವುದೇ ಒಂದು ಸವಾಲಾಗಿತ್ತು. ಆದರೂ ಸಮರ್ಥವಾಗಿ ನಿಭಾಯಿಸಿ ಅತಿಥೇಯರಾಗಿ ಬಂದಿದ್ದ ಆಹ್ವಾನಿತ ರಾಜರನ್ನು ರಾಜ್ಯದಿಂದ ಕ್ಷೇಮವಾಗಿ ಹೊರ ಕಳುಹಿಸುವಲ್ಲಿ ಯಶಸ್ವಿಯಾದರು. ಈ ಹೊತ್ತು ದ್ರುಪದನ ಮನದಲ್ಲಿ ಅತೃಪ್ತಿಯ ಸಂಗತಿಯೊಂದು ಸುಳಿಯುತ್ತಿತ್ತು. ಪಣ ಗೆದ್ದ ಬ್ರಾಹ್ಮಣ ಯಾರು? ನನ್ನ ಮಗಳು ಈಗ ಎಲ್ಲಿ ಹೇಗಿದ್ದಾಳೆ? ಓರ್ವ ಕೇವಲ ಬ್ರಾಹ್ಮಣನ ಪತ್ನಿಯಾದಳೇ? ಹಾಗಾಗಿರಲು ಸಾಧ್ಯವೇ? ಸ್ವಯಂವರ ಸಂದರ್ಭದಲ್ಲಾದ ಗೊಂದಲದಿಂದಾಗಿ ಈ ಕುರಿತು ಸ್ಪಷ್ಟ ತಿಳಿಯಲಾಗಲಿಲ್ಲ. ಆ ಬಳಿಕವೂ ಸರಿಯಾದ ಸುದ್ದಿ ಸಿಕ್ಕಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಯನ್ನು ಸುಧಾರಿಸಿಯಾಗುವಾಗ ರಾತ್ರಿಯಾಗಿದೆ. ಹೀಗಿರಲು ದೃಷ್ಟದ್ಯುಮ್ನ ಸುಸ್ತಾಗಿದ್ದರೂ ತನ್ನವರನ್ನು ಕೂಡಿಕೊಂಡು ತಂಗಿ ದ್ರೌಪದಿ ಎಲ್ಲಿದ್ದಾಳೆ ಎಂಬ ಹಾಗೆ ಮಾಹಿತಿ ಸಂಗ್ರಹದಲ್ಲಿ ತೊಡಗಿ ಕತ್ತಲೆಯಾದಾಗ ಅರಮನೆ ಸೇರಿ ಪಿತ ದ್ರುಪದನ ಬಳಿ ಬಂದು ಈ ದಿನದ ಘಟನೆಯ ವಿಮರ್ಷೆಯಲ್ಲಿ ನಿರತನಾಗಿದ್ದನು. ಗೆದ್ದವ ವಿಪ್ರನಿದ್ದಾನೆ. ಹಾಗಾಗಿ ನಮ್ಮ ಪಾಂಚಾಲಕ್ಕೆ ಬಂದಿರುವ ಹೊರಪ್ರದೇಶದ ಬ್ರಾಹ್ಮಣರು ಎಲ್ಲೆಲ್ಲಾ ವಾಸ್ತವ್ಯ ಹೂಡಿದ್ದಾರೆ ಎಂದು ಹುಡುಕಿದರೆ ಸುಲಭವಾಗಿ ಪತ್ತೆ ಹಚ್ಚಬಹುದು. ಗೆದ್ದ ತೇಜಸ್ವೀ ಬ್ರಾಹ್ಮಣ ನಮ್ಮ ಪ್ರಜೆಯಲ್ಲ ಎಂಬ ದ್ರುಪದನ ಅಭಿಪ್ರಾಯ ದೃಷ್ಟದ್ಯುಮ್ನನಿಗೂ ಸರಿಯೆನಿಸಿತು.

ಹಾಗೇ ಮುಂದುವರಿದು ಆಪ್ತವರ್ಗದ ಕೆಲವರ ಜೊತೆ ಸೇರಿ ಬ್ರಾಹ್ಮಣ ವಸತಿಗಳೆಲ್ಲೆಲ್ಲಿ ಇದೆ ಎಂಬ ಮಾಹಿತಿ ಸಂಗ್ರಹಿಸಿ ರಾತ್ರೋ ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದರು. ಹೀಗೆ ಸುತ್ತಾಡುತ್ತಾ ಕುಂಬಾರನ ಕರ್ಮಶಾಲೆಯತ್ತ ಬಂದಾಗ ಅಲ್ಲಿ ಸ್ಪಷ್ಟ ಸ್ವರದಲ್ಲಿ ಮಾತಾಡುತ್ತಿರುವ ಪುರುಷ ಧ್ವನಿಗಳನ್ನು ಕೇಳಿದರು. ಈ ತಡರಾತ್ರಿ ಏನಿದು ಚರ್ಚೆ? ಯಾರಿರಬಹುದು ಎಂಬ ಕುತೂಹಲದಿಂದ ಕಿವಿಗೊಟ್ಟು ನಿಂತ. ಯುದ್ದ ಕೌಶಲ್ಯ, ಸ್ವಯಂವರ ಮಂಟಪದಲ್ಲಿದ್ದ ವೀರರು, ಅವರ ಆಯುಧಗಳು, ಯುದ್ದ ಪರಿಕ್ರಮ, ನಿಯಂತ್ರಿಸುವ ಕ್ರಮ, ಆಯುಧಗಳ ವಿಶೇಷತೆ, ಸಾಧಕ ರೀತಿ, ಪ್ರತಿತಂತ್ರ ಹೀಗೆಲ್ಲಾ ಶುದ್ಧ ಕ್ಷತ್ರಿಯ ವೀರರಂತೆ ಚರ್ಚಿಸುತ್ತಿದ್ದಾರೆ. ಸಮಗ್ರ ಸಂವಾದವನ್ನು ತಾಳ್ಮೆಯಿಂದ ಕಿವಿಗೊಟ್ಟು ಕೇಳಿ ತಿಳಿದುಕೊಳ್ಳತೊಡಗಿದ್ದಾನೆ ದೃಷ್ಟದ್ಯುಮ್ನ.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page